Monday, June 17, 2024

ಸತ್ಯ | ನ್ಯಾಯ |ಧರ್ಮ

ಸಾಹಿತಿ ಬರಗೂರು ಮೇಲಿನ ದೂರನ್ನು ಅಪ್ರಸ್ತುತ ಎಂದು ಕೈಬಿಡುವಂತೆ ಮನವಿ

ಸುಮಾರು 40 ವರ್ಷಗಳ ಹಿಂದೆ ಬರೆದ ಕಾದಂಬರಿಯೊಂದರಲ್ಲಿ ಹಿರಿಯ ಸಾಹಿತಿ, ಕಾದಂಬರಿಕಾರರಾದ ಬರಗೂರು ರಾಮಚಂದ್ರಪ್ಪನವರು ರಾಷ್ಟ್ರಗೀತೆಯನ್ನು ಅವಮಾನಿಸಿದ್ದಾರೆ ಎಂಬ ದೂರು ದಾಖಲಾಗಿತ್ತು. ಸದರಿ ಈ ದೂರನ್ನು ಅಪ್ರಸ್ತುತ ಮತ್ತು ದುರುದ್ದೇಶಪೂರ್ವಕ ಎಂದು ಪರಿಗಣಿಸಬೇಕು ಎಂದು ಹಿರಿಯ ಸಾಹಿತಿಗಳು ಮತ್ತು ಚಿಂತಕರ ನಿಯೋಗವೊಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ನಂತರ ಬಲಪಂಥೀಯ ಗುಂಪಿನ ರೋಹಿತ್ ಚಕ್ರತೀರ್ಥ ನಾಡಕವಿ ಕುವೆಂಪು ರಚಿಸಿದ ನಾಡಗೀತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿರುಚಿ ಬರೆದದ್ದು ಎಲ್ಲೆಡೆ ವೈರಲ್ ಆಗಿ ಆ ವ್ಯಕ್ತಿಯ ಮೇಲೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ದೂರೂ ದಾಖಲಾಗಿತ್ತು. ಬಿಜೆಪಿ ಪಕ್ಷ ಇದನ್ನು ಮರೆಮಾಚಲು 40 ವರ್ಷ ಹಳೆಯ ರಾಜಕೀಯ ವಿಡಂಬನಾತ್ಮಕ ಕಾದಂಬರಿಯನ್ನು ಹಿಡಿದು ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರಿಂದ ರಾಜಕೀಯಪ್ರೇರಿತ ದೂರು ದಾಖಲು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಧ್ಯ ಈ ಬಗ್ಗೆ ಪೊಲೀಸ್ ಆಯುಕ್ತರಲ್ಲಿ ದೂರು ದಾಖಲಾಗಿದ್ದು, ಪೊಲೀಸ್ ಆಯುಕ್ತರು ಕಾನೂನು ತಜ್ಞರು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೊತೆಗೆ ಚರ್ಚಿಸಿ ಪ್ರಕರಣ ದಾಖಲು ಮಾಡುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಸುಮಾರು 26 ಮಂದಿ ಹಿರಿಯ ಸಾಹಿತಿಗಳ ಸಹಿ ಸಂಗ್ರಹಿಸಿದ ಪತ್ರವನ್ನು ‌ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ತಲುಪಿಸಲಾಗಿದೆ. ಮತ್ತು ಈ ಪತ್ರದಲ್ಲಿ 25 ಮಂದಿ ಹಿರಿಯ ಸಾಹಿತಿಗಳು, ಚಿಂತಕರು ಒಪ್ಪಿಗೆ ಸೂಚಿಸಲಾಗಿದೆ.

ಸಂಗ್ರಹಿಸಿದ ಸಹಿಯಲ್ಲಿ ಪ್ರಮುಖವಾಗಿ ಡಾ.ಕರಿಗೌಡ ಬೀಚನಹಳ್ಳಿ, ಡಾ.ಎಲ್.ಹನುಮಂತಯ್ಯ, ಎಲ್.ಎನ್.ಮುಕುಂದರಾಜ್, ಕೆ.ವೈ.ನಾರಾಯಣಸ್ವಾಮಿ, ಮೂಡ್ನಾಕೋಡು ಚಿನ್ನಸ್ವಾಮಿ, ಬಿ.ಎಂ.ಹನೀಫ್, ವಸುಂಧರಾ ಭೂಪತಿ, ಪ್ರೊ.ಕೆ.ಮರುಳಸಿದ್ದಪ್ಪ, ಭಕ್ತರಹಳ್ಳಿ ಕಾಮರಾಜ್, ಶ್ರೀನಿವಾಸ ಜಿ ಕಪ್ಪಣ್ಣ, ದೊಡ್ಡಹುಲ್ಲೂರು ರುಕ್ಕೋಜಿ, ಹಂ.ಪ.ನಾಗರಾಜಯ್ಯ, ಕಮಲಾ ಹಂಪನಾ ಸೇರಿದಂತೆ ಕನ್ನಡದ ಪ್ರಮುಖ ಮುಂಚೂಣಿ ಸಾಹಿತಿಗಳು, ಕವಿಗಳು, ಚಿಂತಕರು ಈ ದೂರನ್ನು ಅಪ್ರಸ್ತುತ ಎಂದು ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.

ಇದರ ಜೊತೆಗೆ 40 ವರ್ಷಗಳ ಹಿಂದಿನ ರಾಜಕೀಯ ವಿಡಂಬನೆಯ ಪಾತ್ರಗಳ ಮಾತನ್ನು ಈ ರೀತಿಯಾಗಿ ಋಣಾತ್ಮಕ ಅಭಿಪ್ರಾಯ ಬರುವಂತೆ ಚಿತ್ರಿಸಿ, ಅದರ ಬಗ್ಗೆ ದೂರು ದಾಖಲಿಸಿರುವುದು ದುರುದ್ದೇಶಪೂರಿತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು