Thursday, February 12, 2026

ಸತ್ಯ | ನ್ಯಾಯ |ಧರ್ಮ

ಸಾಲ ಬಾಕಿ ಪ್ರಕರಣ: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಕೊನೆ ಎಚ್ಚರಿಕೆ: ಭಾರತಕ್ಕೆ ಬಂದರೆ ಮಾತ್ರ ಅರ್ಜಿ ವಿಚಾರಣೆ

ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು ಭಾರತಕ್ಕೆ ಮರಳಿದರೆ ಮಾತ್ರ ಅವರ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ. ಇಲ್ಲವಾದಲ್ಲಿ ಅವರ ಅರ್ಜಿಯನ್ನು ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಕೊನೆ ಎಚ್ಚರಿಕೆ ನೀಡಿದೆ.

ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿದ್ದ ವಿಭಾಗೀಯ ಪೀಠ, ಆರ್ಥಿಕ ಅಪರಾಧಿಗಳ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಹಾಗೂ ಮಲ್ಯರನ್ನು ‘ಪರಾರಿಯಾಗಿರುವ ಆರ್ಥಿಕ ಅಪರಾಧಿ’ ಎಂದು ಘೋಷಿಸುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.

ಪ್ರಕರಣದ ಹಿನ್ನೆಲೆ
ವಿಜಯ್ ಮಲ್ಯ ಅವರು ಕಿಂಗ್‌ಫಿಷರ್ ಏರ್‌ಲೈನ್ಸ್ ಮೂಲಕ ವಿವಿಧ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳಿಂದ ಸುಮಾರು ₹9,000 ಕೋಟಿಗೂ ಅಧಿಕ ಸಾಲ ಪಡೆದುಕೊಂಡಿದ್ದರು. ಆದರೆ ಸಾಲವನ್ನು ಮರುಪಾವತಿಸದೇ 2016ರಲ್ಲಿ ಭಾರತ ತೊರೆದು ಯುನೈಟೆಡ್ ಕಿಂಗ್‌ಡಮ್‌ಗೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಹಾಗೂ ಸಿಬಿಐ (CBI) ಅವರು ವಿರುದ್ಧ ಹಣ ಅಕ್ರಮ ವರ್ಗಾವಣೆ ಮತ್ತು ಬ್ಯಾಂಕ್‌ಗಳಿಗೆ ವಂಚನೆ ಪ್ರಕರಣಗಳನ್ನು ದಾಖಲಿಸಿವೆ.

ಇದರಿಂದಾಗಿ ಕೇಂದ್ರ ಸರ್ಕಾರವು 2018ರಲ್ಲಿ ಜಾರಿಗೆ ತಂದ ಆರ್ಥಿಕ ಅಪರಾಧಿಗಳ ಕಾಯ್ದೆ (Fugitive Economic Offenders Act) ಅಡಿಯಲ್ಲಿ, ಮಲ್ಯರನ್ನು ‘ಪರಾರಿಯಾಗಿರುವ ಆರ್ಥಿಕ ಅಪರಾಧಿ’ ಎಂದು ಘೋಷಿಸುವ ಪ್ರಕ್ರಿಯೆ ಆರಂಭಿಸಲಾಯಿತು. ಈ ಕ್ರಮದ ಮೂಲಕ ಮಲ್ಯ ಅವರ ದೇಶದಲ್ಲಿನ ಆಸ್ತಿಗಳನ್ನು ಜಪ್ತಿ ಮಾಡುವ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ಕಾನೂನು ಹಾಗೂ ತಮಗೆ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂಬ ಘೋಷಣೆ ಸಾಂವಿಧಾನಿಕವಾಗಿಲ್ಲ ಎಂದು ಪ್ರಶ್ನಿಸಿ ಮಲ್ಯ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯದ ಕಟ್ಟುನಿಟ್ಟಿನ ನಿಲುವು
ಈ ವಿಚಾರಣೆ ವೇಳೆ, ವಿಜಯ್ ಮಲ್ಯ ಅವರು ಭಾರತಕ್ಕೆ ಮರಳುವ ಉದ್ದೇಶ ಹೊಂದಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಲು ನ್ಯಾಯಾಲಯ ಕೊನೆಯ ಅವಕಾಶ ನೀಡಿತು. ಅವರು ಭಾರತಕ್ಕೆ ಬಂದರೆ ಮಾತ್ರ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಪೀಠ ಸ್ಪಷ್ಟಪಡಿಸಿದೆ.

“ಮಲ್ಯ ನ್ಯಾಯಾಲಯದ ಪ್ರಕ್ರಿಯೆಯನ್ನು ತಪ್ಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯದ ವಿಚಾರಣೆಯ ಲಾಭ ಪಡೆಯಲು ಸಾಧ್ಯವಿಲ್ಲ. ನಾವು ಈಗಲೇ ಅರ್ಜಿಯನ್ನು ವಜಾಗೊಳಿಸುತ್ತಿಲ್ಲ. ಆದರೆ ನಿಮಗೆ ಮತ್ತೊಂದು ಅವಕಾಶ ನೀಡುತ್ತಿದ್ದೇವೆ. ಮಲ್ಯ ಭಾರತಕ್ಕೆ ಹಿಂತಿರುಗಬೇಕು. ಭಾರತಕ್ಕೆ ಬಾರದಿದ್ದರೆ ಅರ್ಜಿ ವಿಚಾರಣೆ ನಡೆಸಲಾಗುವುದಿಲ್ಲ,” ಎಂದು ನ್ಯಾಯಪೀಠ ಕಟ್ಟುನಿಟ್ಟಾಗಿ ಎಚ್ಚರಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page