Sunday, June 16, 2024

ಸತ್ಯ | ನ್ಯಾಯ |ಧರ್ಮ

ಉತ್ತರ ಕನ್ನಡ ಜಿಲ್ಲೆಯ ಅಪ್ರತಿಮ ಹೋರಾಟಗಾರ ʼಚೌಡಾ ನಾಯ್ಕ ಬೇಡ್ಕಣಿʼ

ಉತ್ತರ ಕನ್ನಡ ಜಿಲ್ಲೆಯ ಹೋರಾಟಗಾರರಲ್ಲಿ ಮುಖ್ಯವಾಗಿ ಗುರುತಿಸಲ್ಪಡುವ ಹೆಸರು ಚೌಡಾ ನಾಯ್ಕ ಬೇಡ್ಕಣಿ. ಕರ್ನಾಟಕದ ಮೈಲಾರ ಮಹದೇವಪ್ಪನಂಥ ಕ್ರಾಂತಿಕಾರಿಯನ್ನು ನೆನಪಿಸುವಂತಹ ಹೋರಾಟವನ್ನು ಮಾಡಿದ್ದ ಇವರು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ಸಾಹಸಮಯ ಮತ್ತು ತ್ಯಾಗಮಯ ಬದುಕನ್ನು ದಾಖಲಿಸಿದವರು. ತಂದೆ ಕನ್ನಾ ನಾಯ್ಕ ಬೇಡ್ಕಣಿ ಇವರು ಆ ಕಾಲದಲ್ಲಿಯೆ ವರ್ಷಕ್ಕೆ ೮೦೦ ರೂಪಾಯಿ ತೀರ್ವೆ ತುಂಬುವ ಶ್ರೀಮಂತ ಜಮೀನ್ದಾರರಾಗಿದ್ದರು ಮತ್ತು ಬ್ರಿಟೀಷರಿಗೆ ನಿಷ್ಠರಾಗಿದ್ದ ಕಾರಣದಿಂದ ರಾವಬಹುದ್ದೂರ ಪದವಿ ಕೂಡ ಪಡೆದವರಾಗಿದ್ದರು. ವಿಶೇಷವೆಂದರೆ ಬ್ರಿಟೀಷರಿಗೆ ನಿಷ್ಠರಾಗಿದ್ದ ತಂದೆಗೆ ಕ್ರಾಂತಿಕಾರಿ ಮಗನಾಗಿ ಚೌಡಾ ನಾಯ್ಕ ೧೮೯೮ ರಲ್ಲಿ ಜನಿಸುತ್ತಾರೆ. ಹಳೆಪೈಕ ಸಮಾಜದ ಪ್ರಪ್ರಥಮ ಮೆಟ್ರಿಕ್ಯುಲೇಶನ್ ಪಾಸಾದ ವ್ಯಕ್ತಿಯಾಗಿ ಗುರುತಿಸಲ್ಪಟ್ಟವರಾದರೂ ಕಾಲೇಜು ಶಿಕ್ಷಣ ಮುಗಿಸುವ ಮನಸ್ಸು ಮಾಡದೆ ದೇಶ ಸೇವೆಗೆ ತೊಡಗಿಸಿಕೊಳ್ಳುವ ಗಟ್ಟಿ ನಿರ್ಧಾರಕ್ಕೆ ಬರುತ್ತಾರೆ.

೧೯೨೦ ರಲ್ಲಿ ಗಾಂಧಿಜಿಯವರು ಭಾರತಕ್ಕೆ ಮರಳಿ, ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡ ನಂತರದ ಬೆಳವಣಿಗೆಯಲ್ಲಿ, ಅವರ ಅಸಹಕಾರ ಚಳುವಳಿಯ ಕರೆಗೆ ಓಗೊಟ್ಟು ಚೌಡಾ ನಾಯ್ಕ ಕಾಲೇಜು ಶಿಕ್ಷಣಕ್ಕೆ ಪೂರ್ಣವಿರಾಮ ಇಡುತ್ತಾರೆ. ತಂದೆಯ ಪ್ರಭಾವದಿಂದ ದೊರಕಿದ ಮಾಮಲೇದಾರ ಹುದ್ದೆಯನ್ನೂ ತಿರಸ್ಕರಿಸುತ್ತಾರೆ. ಮುಂದೆ ಜಲಿಯನ್ ವಾಲಾಬಾಗ ಹತ್ಯಾಕಾಂಡದಿAದ ರೋಶಗೊಂಡು ತಂದೆಯ ಬ್ರಿಟೀಷ ಪರ ನಿಷ್ಠೆಯನ್ನು ವಿರೋಧಿಸಿ ನೇರವಾಗಿ ಮತ್ತು ಚಳುವಳಿಯನ್ನು ಇನ್ನಷ್ಟು ಗಂಭೀರವಾಗಿಯೂ, ಬಿರುಸಾಗಿಯೂ ಸ್ವೀಕರಿಸುತ್ತಾರೆ. ಇದರ ಪರಿಣಾಮ ತಂದೆ ಕೋಪಗೊಂಡು ಮಗನನ್ನು ಮನೆಯಿಂದ ಹೊರದಬ್ಬುತ್ತಾರೆ. ಆ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ರಾಜದ್ರೋಹದ ಅಪರಾಧಕ್ಕೆ ಒಳಗಾದ ಪ್ರಪ್ರಥಮ ವ್ಯೆಕ್ತಿಯಾಗಿ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ.

ನಾ.ಸು ಹರ್ಡೀಕರರು ಸಿದ್ಧಾಪುರದಲ್ಲಿ ಸೇವಾದಲ ಆರಂಭಿಸಿದಾಗ ಆ ಶಿಭಿರಕ್ಕೆ ಸೇರಿದ ಇವರು ೧೯೨೪ ರಲ್ಲಿ ಬೆಳಗಾವಿಯಲ್ಲಿ ಸೇರಿದ ಅಖಿಲ ಭಾರತ ಕಾಂಗ್ರೆಸ್ಸ ಅಧಿವೇಶನದಲ್ಲಿ ಭಾಗಿಯಾಗಿದ್ದರು ಮತ್ತು ಮಹಾತ್ಮಾ ಗಾಂಧಿಜಿಯವರು ಸಿದ್ದಾಪುರದ ಇವರ ನೇತ್ರತ್ವದ ಸ್ವಯಂ ಸೇವಕರ ಕಾರ್ಯವನ್ನು ಹೊಗಳಿದ್ದರು ಕೂಡ. ಸತತ ಹೋರಾಟವನ್ನೆ ಉಸಿರಾಗಿಸಿಕೊಂಡಿದ್ದ ಇವರು ಅಂಕೋಲೆಯಲ್ಲಿ ನಡೆದ ೧೯೩೦ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಾರೆ. ಇದರ ಪರಿಣಾಮ ಅಲ್ಲಿ ಬಂಧಿತರಾಗಿ ಎರಡನೇ ಬಾರಿ ಜೈಲು ಸೇರಬೇಕಾಗುತ್ತದೆ. ಮುಂದೆ ಜೈಲಿನಿಂದ ಹೊರಬಂದ ನಂತರವೂ ಜಂಗಲ್ ಸತ್ಯಾಗ್ರಹ, ಕರ ನಿರಾಕರಣೆ ಚಳುವಳಿಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಚೌಡಾ ನಾಯ್ಕ ಜೀವದ ಹಂಗು ತೊರೆದು ನಡೆಸಿದ ಹೋರಾಟಗಳಿಗೆ ಲೆಕ್ಕವಿಲ್ಲ. ಕ್ರಾಂತಿಕಾರಿ ಹೋರಾಟಗಾರನಾಗಿ ಬ್ರಿಟೀಷರ ಕಣ್ಗಾವಲಿಂದ ತಪ್ಪಿಸಿಕೊಂಡು ಬ್ರಿಟೀಷ ಸರಕಾರವನ್ನು ಬೆಂಬಿಡದೆ ಕಾಡುವುದರ ಮೂಲಕ ಸಿದ್ದಾಪುರದ ಸ್ವಾತಂತ್ರ್ಯ ಹೋರಾಟದ ಸುದ್ದಿ ಪ್ರಖ್ಯಾತವಾಗುತ್ತದೆ. ೧೯೩೨ರ ಒಂದು ಘಟನೆ ಹೀಗಿದೆ: ಆಗ ಸಿದ್ಧಾಪುರದಲ್ಲಿ ಕರ ನಿರಾಕರಣೆ ಚಳುವಳಿ ತೀವೃ ಸ್ವರೂಪ ಪಡೆದಿತ್ತು. ಅಧಿಕಾರಿಗಳಿಂದ ಜಪ್ತಿ ಮತ್ತು ಬಲತ್ಕಾರಯುತ ಹರಾಜು ಪ್ರಕ್ರಿಯೆಗಳು ನಡೆದಿದ್ದವು. ಅದೇ ಸಂದರ್ಭದಲ್ಲಿ ಗುಂಜಗೋಡಿನ ಸೂರ್ಯ ನಾರಾಯಣ ಭಟ್ಟರು ಕರ ನಿರಾಕರಣೆ ಮಾಡಿದ್ದರಿಂದ ಅವರ ಮನೆ ಮತ್ತು ಅಡಿಕೆ ತೋಟದ ಫಸಲನ್ನು ಹರಾಜಿಗಿಟ್ಟಿದ್ದರು. ಅದನ್ನು ಹರಾಜಿನಲ್ಲಿ ಶಿರಶಿಯ ಶುಂಠಿ ಸಾಹೇಬರು ಪಡೆದಾಗಿತ್ತು. ಅಡಿಕೆ ತುಂಬಿದ ಎತ್ತಿನ ಗಾಡಿಗಳು ಬೇಡ್ಕಣಿಯ ಪೋಲಿಸ್‌ಪಾಟೀಲ್ ಚೆನ್ನಬಸವ ಗೌಡರ ಮನೆ ಅಂಗಳದಲ್ಲಿ ಪೋಲಿಸ್ ಕಾವಲಿನಲ್ಲಿ ಇಡಲಾಗಿತ್ತು. ಆದರೆ ಆಕಸ್ಮಿಕವಾಗಿ ಜೈಲಿನಿಂದ ಹೊರಬಂದಿದ್ದ ಚೌಡಾ ನಾಯ್ಕರು ಮನೆಗೆ ಬರುತ್ತಲೇ ಎಲ್ಲ ವಿಷಯ ತಿಳಿದುಕೊಳ್ಳುತ್ತಾರೆ. ಊಟಮಾಡಿ ಮಲಗಿದವರು ಮಧ್ಯರಾತ್ರಿ ಎದ್ದು ಒಂದು ಬಾಟಲಿ ಚಿಮಣೆ ಹಿಡಿದು ಇಲ್ಲೇ ಹೊರಗೆ ಹೋಗಿ ಬರುವೆ; ಬಾಗಿಲು ಹಾಕಿಕೊಂಡು ಮಲಗು ಎಂದು ಮಡದಿಗೆ ಹೇಳಿ ಹೊರಡುತ್ತಾರೆ. ಕಂಬಳಿ ಮುಸುಕು ಹಾಕಿಕೊಂಡು ತೆರಳಿದ ಚೌಡಾ ನಾಯ್ಕ ಅಡಿಕೆ ತುಂಬಿದ ಗಾಡಿಗೆ ಬೆಂಕಿ ಪರಾರಿಯಾಗುತ್ತಾರೆ. ಪೋಲೀಸರು ಬೆಂಕಿ ಹಚ್ಚಿದವರ ಶೋಧನೆಗೆ ಇಳಿಯುತ್ತಾರೆ. ಆದರೆ ಸುಳಿವು ಸಿಗದಂತೆ ನಾಪತ್ತೆಯಾಗಿ, ಕೆಲದಿನ ನೆಂಟರ ಮನೆಯಲ್ಲಿ ಅಡಗಿಕೊಂಡುಳಿದು ಮತ್ತೆ ಮನೆಗೆ ಮರಳುತ್ತಾರೆ. ಇದು ಮುಂದೆ ೧೯೩೫ ರಲ್ಲಿ ನಡೆದ ಅಹಮದಾಬಾದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರ ಮುಂದೆ ಸಿದ್ದಾಪುರದ ಈ ಮಹತ್ವದ, ಸಾಹಸಮಯ ಹೋರಾಟದ ವರದಿಯು ಅಲ್ಲಿ ಉಪಸ್ಥಿತರಿದ್ದ ಪ್ರಮುಖ ನಾಯಕರುಗಳಿಂದ ಪ್ರಸ್ತಾಪಿಸಲ್ಪಡುತ್ತದೆ.

ಸುಖದ ಸುಪ್ಪತ್ತಿಗೆಯಲ್ಲಿದ್ದು ಬದುಕನ್ನು ಅನುಭವಿಸುವ ಎಲ್ಲ ಅವಕಾಶವಿದ್ದಾಗಿಯೂ ಚೌಡಾ ನಾಯ್ಕ ದೇಶಸೇವೆಗೆ ಅರ್ಪಿಸಿಕೊಂಡ ರೀತಿ ಅಪರೂಪದ್ದಾಗಿದೆ. ಒಬ್ಬ ರಾವಬಹದ್ದೂರರ ಮಗನಾಗಿಯೂ ತಂದೆಯಿಂದ ತಿರಸ್ಕೃತಗೊಂಡು ಕೂಲಿಯಾಳಿನ ಬದುಕು ನಡೆಸುವಂತಾಗುತ್ತದೆ. ಆದರೂ ನಂಬಿದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿ ಬದುಕಿದ ಇವರನ್ನು ೧೯೩೭ ರಲ್ಲಿ ಜವಾಹರಲಾಲ ನೆಹರುರವರು ಸಿದ್ಧಾಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸನ್ಮಾನಿಸುತ್ತಾರೆ. ಆಗ ಅದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ಮಡದಿ ಮಲ್ಲಮ್ಮ ಸ್ವಯಂ ಸ್ಪೂರ್ತಿಯಿಂದ ತನ್ನ ಕೊರಳಲ್ಲಿದ್ದ ಪವನ ಸರವನ್ನು ನೆಹರೂರವರಿಗೆ ನೀಡಿ ಇದು ದೇಶಕ್ಕೆ ನೀಡಿದ ಕಾಣಿಕೆ ಎನ್ನುತ್ತ ಅಭಿಮಾನದಿಂದ ಗದ್ಗದಿತಳಾಗುತ್ತಾಳೆ. ನೆಹರೂರವರು ಭಾವತುಂಬಿ ಅದಕ್ಕೆ ಪ್ರತಿಯಾಗಿ ವಂದಿಸುತ್ತಾರೆ. ಇದೆಲ್ಲಕ್ಕೂ ಸಾಕ್ಷಿಯಾದ ಜನರಿಗೆ ಮತ್ತಷ್ಟು ಶಕ್ತಿಯಿಂದ ಹೋರಾಟದಲ್ಲಿ ತೊಡಗಿಕೊಳ್ಳುವುದಕ್ಕೆ ಸ್ಫೂರ್ತಿಯಾಗುತ್ತದೆ.

ಕರ್ನಾಟಕದ ಪ್ರಮುಖ ಧುರೀಣರಲ್ಲದೆ ದೇಶದ ಆ ದಿನದ ಪ್ರಮುಖ ನಾಯಕರಾಗಿದ್ದ ಗಾಂಧೀಜಿ, ನೆಹರುರವರನ್ನೂ ಒಳಗೊಂಡಂತೆ ಎಲ್ಲರ ಗೌರವ ಮತ್ತು ಪ್ರಶಂಸೆಗೆ ಪಾತ್ರರಾಗಿದ್ದ ಚೌಡಾ ನಾಯ ಮನೆಯವರ ಪಾಲಿಗೆ ಕೇಡಾಗಿ ಕಂಡದ್ದು ವಿಚಿತ್ರ. ಮನೆಯವರ ಪ್ರೀತಿ- ಗೌರವ ಸಿಗದೆಹೋದ ನೋವು ಕೊನೆತನಕವೂ ಅವರನ್ನು ಕಾಡಿತ್ತು. ತನ್ನ ತಂದೆಯೇ ತನ್ನನ್ನು ಮನೆಯಿಂದ ದೂರಮಾಡಿದ ಸಂಗತಿ ಅವರನ್ನು ಘಾಸಿಗೊಳಿಸಿತ್ತು. ಈ ಎಲ್ಲದರ ಪರಿಣಾಮವಾಗಿ ಅವರು ದೈಹಿಕವಾಗಿ, ಮಾನಸಿಕವಾಗಿ ಸೊರಗಿಹೋಗಿದ್ದರು. ಅಂತೂ ದೇಶಕ್ಕೆ ಸ್ವಾತಂತ್ರö್ಯ ದೊರಕಿ ನಮ್ಮದೇ ಸರಕಾರ, ನಮ್ಮದೇ ಸಂವಿಧಾನ ಎಲ್ಲವೂ ಸಿಕ್ಕ ಖುಷಿಯ ಗಳಿಗೆಯಲ್ಲಿ ತೇಲುತ್ತಿರುವಾಗ ತನ್ನ ಬದುಕನ್ನೆ ದೇಶಸೇವೆಗೆ ಅರ್ಪಿಸಿಕೊಂಡಿದ್ದ ಚೌಡಾ ನಾಯ್ಕ ೧೯೫೨ ರ ಹೊತ್ತಿಗೆ ಮನೋರೋಗಿಯಾಗುತ್ತಾರೆ. ಧಾರವಾಡದ ಆಸ್ಪತ್ರೆಯಲ್ಲಿ ತಮ್ಮವರೆನ್ನುವವರು ಯಾರೂ ಇಲ್ಲದ ಅನಾಥ ಸ್ಥಿತಿಯಲ್ಲಿ ದಿನಾಂಕ ೨/೭/೧೯೫೨ ರಂದು ಪ್ರಾಣಬಿಡುತ್ತಾರೆ.

ಖೇದದ ಸಂಗತಿಯೆಂದರೆ, ಇಂತಹ ಕ್ರಾಂತಿಕಾರಿ ವ್ಯಕ್ತಿಯ ಕೊನೆಯ ದಿನಗಳು ಎಷ್ಟೆಲ್ಲ ಕಠಿಣ ಮತ್ತು ಕರುಣಾಜನಕವಾಗಿತ್ತು ಎನ್ನುವುದು. ಅವರ ಕುಟುಂಬ ಅತ್ಯಂತ ಬಡತನ ಎದುರಿಸಬೇಕಾಗಿ ಬಂದದ್ದು, ಮರಣದ ಸಂದರ್ಭದಲ್ಲಿ ಅವರ ಬಳಿ ಹೆಂಡತಿ, ಮಕ್ಕಳು, ಬಂಧು ಬಳಗ ಯಾರೂ ಇರದೆ ಅನಾಥ ಸ್ಥಿತಿಗೆ ತಲುಪಿದ್ದು, ಇತ್ತ ಮಡದಿ ಮಕ್ಕಳು ಯಾವುದೇ ನೆರವಿಲ್ಲದೆ ಕಡುಬಡತನದ ಬದುಕು ನಡೆಸುವಂತಾಯಿತು. ದುರಾದೃಷ್ಟವೆಂದರೆ ಅವರ ಮರಣದ ವಾರ್ತೆ ಬಂದಾಗ ಸ್ವಾತಂತ್ರ್ಯದ ಸುಖ ಅನುಭವಿಸುತ್ತಿದ್ದ ಅನೇಕ ಸ್ನೇಹಿತರು-ಬಂಧುಗಳು ಮತ್ತು ದೊಡ್ಡ ಸಮಾಜ ಇದ್ದಾಗಿಯೂ ಈ ಕುಟುಂದ ಸಹಾಯಕ್ಕೆ ಯಾರೊಬ್ಬರೂ ನಿಲ್ಲದೇ ಹೋದರಲ್ಲ! ಆ ಸಂದರ್ಭದಲ್ಲಿ ಹಿರಿಯ ಮಗ ರತ್ನ ನಾಯ್ಕ ಮನೆಯ ಪಕಾಶೆಗಳನ್ನು ಮಾರಿ ೫೦ ರೂಪಾಯಿಯನ್ನು ತನ್ನ ತಮ್ಮನಿಗೆ ಕೊಟ್ಟು ತಾಯಿ ಮೈಲಮ್ಮನನ್ನು ಧಾರವಾಡಕ್ಕೆ ಕಳುಹಿಸ ಬೇಕಾಯಿತಲ್ಲ. ಇವೆಲ್ಲ ದೇಶಕ್ಕಾಗಿ ಅವರು ದುಡಿದುದಕ್ಕಾಗಿ ಸಿಕ್ಕ ಪ್ರತಿಫಲಗಳಾದವೆ?

ಕೊನೆಗೂ ಮಹಾನ ಹೋರಾಟಗಾರ ಚೌಡಾ ನಾಯ್ಕ ರವರ ಪಾರ್ಥಿವ ಶರೀರವನ್ನು ಹಣದ ತೊಂದರೆಯ ಕಾರಣ ಊರಿಗೆ ತರಲಾಗದೆ ಆಸ್ಪತ್ರೆಯಲ್ಲಿಯೇ ಅಂತ್ಯಕ್ರಿಯೆ ಮಾಡಲಾಗುತ್ತದೆ. ಅಷ್ಟರ ಮಟ್ಟಿಗೆ ಈ ನಾಗರಿಕ ಸಮಾಜ ಅವರನ್ನು-ಅವರ ಕಟುಂ¨ವನ್ನು ಮರೆತದ್ದು ಖೇದಕರ. ಆದರೆ ಅವರ ಜೊತೆಗೆ ಕೊನೆಯವರೆಗೆ ಇದ್ದವರೆಂದರೆ ಅವರ ಆಪ್ತಮಿತ್ರರಾದ ಶಂಕರರಾವ್ ಗುಲ್ವಾಡಿ ಮತ್ತು ಮುಂಬಯಿ ಶಾಸನ ಸಭೆಯ ಸಭಾಪತಿಗಳಾದ ರಾಮರಾವ್ ಹುಕ್ಕೇರಿಯವರುಗಳು ಮಾತ್ರ.

ಚೌಡಾ ನಾಯ್ಕರ ಕುರಿತಾಗಿ ಮೊದಲ ಸಾಹಿತ್ಯಿಕ ದಾಖಲೆಯಾಗಿದ್ದು ೧೯೯೮ ರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದವರಾದ ವಕೀಲ ಆರ್. ಎಸ್. ಭಟ್ಟ ಶಿರಳಗಿ ಇವರಿಂದ. ಇವರು ಚೌಡಾ ನಾಯ್ಕ ರವರ ಜೀವನ ವಿವರವನ್ನು ಕಲೆಹಾಕಿ ಒಂದು ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸುತ್ತಾರೆ.
(ಉಲ್ಲೇಖ: ಸಾಹಿತಿ ಸುಭ್ರಾಯ ಮತ್ತಿಹಳ್ಳಿಯವರ ಅಧ್ಯಕ್ಷತೆಯ ೨೦೧೪ ರ ಸಿದ್ಧಾಪುರ ತಾಲೂಕಾ ಸಾಹಿತ್ಯ ಸಮ್ಮೇಳನದ ಮುದ್ರಿತ ಭಾಷಣ ಮತ್ತು ಶಾಂತಾರಾಮಾ ನಾಯಕ ಹಿಚ್ಕಡರವರ ‘ಸ್ವಾತಂತ್ರ್ಯ ಹೋರಾಟದ ಹೊರಳು ನೋಟ’)

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಉಮೇಶ ನಾಯ್ಕ
ಶಿರಸಿ ( ಉತ್ತರ ಕನ್ನಡ ಜಿಲ್ಲೆ)

Related Articles

ಇತ್ತೀಚಿನ ಸುದ್ದಿಗಳು