Tuesday, November 19, 2024

ಸತ್ಯ | ನ್ಯಾಯ |ಧರ್ಮ

ದಲಿತ ಸಾಹಿತಿಗಳಿಗೆ ಅವಮಾನ ಆದ ಪರಿಣಾಮ, “ಶ್ರಮಣಧಾರೆಗಳ ಸಂಸ್ಕೃತಿ ಉತ್ಸವ”ದಿಂದ ಹೊರಗುಳಿಯಲು ಆರಡಿ ಮಲ್ಲಯ್ಯ ಅವರು ನಿರ್ಧಾರ

ಕನಕದಾಸರ ಜನ್ಮದಿನದ ಪ್ರಯುಕ್ತ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ‘ಕರ್ನಾಟಕ ತತ್ವಪದಕಾರರ ಹದಿನೆಂಟು ಸಂಪುಟಗಳ ಬಿಡುಗಡೆ ಸಮಾರಂಭʼದಲ್ಲಿ ದಲಿತ ಸಾಹಿತಿ ಗಂಗಪ್ಪ ತಳವಾರ ಅವರ ಹೆಸರನ್ನು ಸೌಜನ್ಯಕ್ಕೂ ಕರೆಯದೇ ಇರುವುದರ ಪರಿಣಾಮ ಈಗ ಶ್ರಮಣಧಾರೆಗಳ ಸಾಂಸ್ಕೃತಿಕ ಉತ್ಸವದಲ್ಲಿ‌ ವಿಷಯ ಮಂಡಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಯ್ಕೆಯಾಗಿದ್ದ ಶ್ರಿ ಆರಡಿ ಮಲ್ಲಯ್ಯ ಅವರು ಹೊರಗುಳಿಯುವುದಾಗಿ ಘೋಷಿಸಿದ್ದಾರೆ.

ರಾಜ್ಯ ಸರ್ಕಾರದ ಅಡಿಯಲ್ಲಿ ಮಂಡ್ಯ ಕರ್ನಾಟಕ ಸಂಘ ಮತ್ತು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನಕಾರರ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮ ಇದಾಗಿತ್ತು. ಸಧ್ಯ ಈ ಕಾರ್ಯಕ್ರಮದಿಂದ ಹೊರಗುಳಿಯಲು ಚಿಂತಕರಾದ ಆರಡಿ ಮಲ್ಲಯ್ಯ ಅವರು ಹೊರಗುಳಿಯುವುದಾಗಿ ಘೋಷಿಸಿದ್ದಾರೆ.

ಭಾರತದ ಜಾತಿ ಮನಸು ಬಹಳ ಸೂಕ್ಷ್ಮವಾಗಿರುತ್ತದೆ. ಮಾತು, ಮಾತಿನ ಟೋನ್, ಆಂಗಿಕತೆ, ಸನ್ನೆ, ಹಾಸ್ಯದ ಮೂಲಕವೂ ಅದು ಹೊರಬೀಳುತ್ತದೆ.‌ ವ್ಯಕ್ತಿಯೊಬ್ಬನ ಅರ್ಹತೆಯನ್ನು ನಿರ್ಲಕ್ಷ್ಯ ಮಾಡುವುದು ಕೂಡ ಜಾತಿಗ್ರಸ್ಥ ಮನಸೆಂಬುದು ಹೊಸ ವ್ಯಾಖ್ಯಾನವೇನಲ್ಲ. ಭಾರತದ ಚರಿತ್ರೆಯ ಸಾಮಾನ್ಯ ತಿಳಿವಳಿಕೆಯುಳ್ಳ ಯಾರಿಗಾದರೂ ಇದು ಅರ್ಥವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮುಂದುವರೆದು ‘ಕರುಳಬಂಧು ಗಂಗಪ್ಪ ತಳವಾರ್ ಅವರಿಗೆ ಆದ ಅವಮಾನವು ಗಂಭೀರವಾದುದು. ಗಂಗಪ್ಪ ಅವರನ್ನು ನಾನು ನೋಡಿಲ್ಲ, ಮಾತಾಡಿಲ್ಲ. ಆದರೆ ಕಣ್ಣರಿಯದಿರ್ದೊಡಂ ಕರುಳರಿಯದೇ? ಧಾವತಿ ಕಾದಂಬರಿಯ ಮೂಲಕ ಭರವಸೆ ಮೂಡಿಸಿ, ಇನ್ನೊಂದು‌ಕೃತಿಯ ನೀರೀಕ್ಷೆ ಹುಟ್ಟಿಸಿದ ಬರೆಹಗಾರನಾತ.‌ ಇವೊತ್ತು ಗಂಗಪ್ಪನಿಗೆ ಆದದ್ದೇ ನಾಳೆ ನನಗೂ ಆಗುತ್ತದೆ. ನನಗೆ ಆಗಲಿ ನೋಡೋಣ ಎಂದು ದ್ವೀಪಗಳಂತಾಗುವ ಕಾಲವಿದಲ್ಲ. ಇದಷ್ಟೇ ಅಲ್ಲ. ಜಾತಸ್ಥ ಮನಸ್ಥಿತಿಯ ಯಾವುದೇ ವ್ಯಕ್ತಿ ಆಯೋಜಿಸುವ ಯಾವ ಕಾರ್ಯಕ್ರಮಕ್ಕೂ ನಾನು ಹಾಜರಾಗುವುದಿಲ್ಲ. ಅಂಥ ಪ್ರಕಾಶನಗಳಲ್ಲಿ‌ ಪುಸ್ತಕ ಪ್ರಕಟಿಸುವುದಿಲ್ಲ. ಅಂಥವರೊಂದಿಗಿನ ಯಾವ ಸಂಬಂಧವೂ ಬೇಡ. ಅದು ಯಾರಿಗಾದರೂ ಯಾರಾದರೂ ಇಂಥ ನಿಂದನೆ, ನಿರ್ಲಕ್ಷ್ಯ ಮಾಡಿದರೆ, ಅದನ್ನು ಖಂಡಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಗಳಿಗಿಂತ ಶೋಷಣೆಯ ವಿರುದ್ದ ನಿಲ್ಲುವುದು ಮುಖ್ಯ” ಎಂದು ಹೇಳಿದ್ದಾರೆ.

“ನೀನಿನ್ನೂ ಬೆಳೆಯಬೇಕಾದವನು, ಅವಕಾಶಗಳು ತಪ್ಪಿಹೋಗ್ತವೆ , ಅನುಸರಿಸಿಕೊಂಡು ಹೋಗುವುದು ಸೂಕ್ತ ಎಂಬ ಹಿರಿಯರ ಉಪದೇಶ ಕೇಳಿ ಕೇಳಿ ಸಾಕಾಗಿದೆ. ಬರುವ ಅವಕಾಶಗಳನ್ನೆಲ್ಲಾ ಬಳಸಿಕೊಂಡರೆ, ತಿಂಗಳಲ್ಲಿ ಇಪ್ಪತ್ತು ದಿನ ಮನೆಯ ಹೊರಗೇ ಇರಬೇಕಾದೀತು. ಅದು ಇವರಿಗೆ ಸಾರುವ ಅಗತ್ಯವೇನಿಲ್ಲ. ಪ್ರಶಸ್ತಿ, ಜನಪ್ರಿಯತೆ ಮತ್ತು ಯಾವುದೋ ಅಧಿಕಾರಕ್ಕಾಗಿ ಬರವಣಿಗೆ ಶುರು ಮಾಡಿದ್ದರೆ ಬಹುಶಃ ಈ ಅಂಜಿಕೆಯಿರುತ್ತಿತ್ತು. ಪ್ರಶಸ್ತಿ, ಸ್ಥಾನಮಾನಕ್ಕಿಂತ ನನ್ನ ಸಮಕಾಲೀನ ಕಳ್ಳುಬಳ್ಳಿಯ ವ್ಯಕಿಯೊಬ್ಬನಿಗಾದ ಅವಮಾನವನ್ನು ಖಂಡಿಸುವುದೇ ನನಗೆ ಮುಖ್ಯ. ಕೊನೇ ಪಕ್ಷ ಆದ ಪ್ರಮಾದಕ್ಕೆ ಕ್ಷಮೆಯನ್ನೂ ಕೇಳಲಿಲ್ಲವಾದರೆ ಅನಿವಾರ್ಯವಾಗಿ ವರ್ತಮಾನದಲ್ಲಿ ನಾವು ನಿಷ್ಟುರವಾದಿಗಳಾಗಬೇಕಿದೆ..” ಎಂದು ಆರಡಿ ಮಲ್ಲಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page