Monday, June 17, 2024

ಸತ್ಯ | ನ್ಯಾಯ |ಧರ್ಮ

ಆರಗ ಜ್ಞಾನೇಂದ್ರ, ಗುಳಿಗ ಭೂತ ಮತ್ತು ಆರ್‌ ಎಸ್‌ ಎಸ್‌‌

ವೈದಿಕ ಚಿಂತನಾ ಕ್ರಮಗಳ ಮೇಲೆ ಕಟ್ಟಲಾದ ಹಿಂದುತ್ವವನ್ನು ಒಪ್ಪಿಕೊಂಡು ಪ್ರಚಾರ ಮಾಡುವ ಆರ್‌ ಎಸ್‌ ಎಸ್‌ ನಲ್ಲಿ ವೈದಿಕೇತರ ಸಂಪ್ರದಾಯಗಳಿಗೆ ಯಾವುದೇ ಜಾಗವಿಲ್ಲ. ಇದ್ದರೂ ಅವನ್ನು ʼಶುದ್ಧʼ ಗೊಳಿಸಿಯೇ ಒಳಗೊಳ್ಳಲಾಗುತ್ತದೆ. ಈ ಬಗೆಯ ಸೈದ್ಧಾಂತಿಕ ಚೌಕಟ್ಟಿನಲ್ಲಿ ಬೆಳೆದ ಜ್ಞಾನೇಂದ್ರರಿಗೆ ಗುಳಿಗನ ಬಗ್ಗೆ ಏನೇನೂ ತಿಳಿಯದಿರುವುದು ಆಕಸ್ಮಿಕವೇನೂ ಅಲ್ಲ. ಆರ್‌ ಎಸ್‌ ಎಸ್‌ ತರಬೇತಿಯೇ ಹಾಗಿರುತ್ತದೆ….ಹೀಗೊಂದು ವಿಶ್ಲೇಷಣೆ ಪುರುಷೋತ್ತಮ ಬಿಳಿಮಲೆ ಇವರಿಂದ.

ಈ ಬಿಜೆಪಿಯವರು ಬುದ್ಧಿವಂತರನ್ನು ತಮ್ಮ ಜೊತೆ ಇರಿಸಿಕೊಳ್ಳುವುದಿಲ್ಲವೋ ಅಥವಾ ಅವರಲ್ಲಿ ಬುದ್ಧಿವಂತರೇ ಇಲ್ಲವೋ ಎಂಬುದು ಸ್ಪಷ್ಟವಿಲ್ಲ. ಸ್ವಲ್ಪ ಸಮಯದ ಹಿಂದೆ ಪ್ರಾಥಮಿಕ ಶಿಕ್ಷಣ ಸಚಿವರು ʼಸಿ ಇ ಟಿ ಪ್ರೊಫೆಸರ್‌ʼ ಎಂಬ ಪದವನ್ನು ಬಳಸಿ ನಗೆ ಪಾಟಲಿಗೆ ಗುರಿಯಾದರು. ಸಂಸ್ಕೃತಿ ಸಚಿವರು ತಮ್ಮ ಊರಿನಲ್ಲಿಯೇ ಪರಶರಾಮನ ಕಾಲ ಕೆಳಗೆ ಊರಿನ ದೈವಗಳನ್ನು ಪ್ರತಿಷ್ಠಾಪಿಸಿದರು. ಈಗ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರು ತುಳುನಾಡಿನ ಜನಪದ ದೈವವಾದ ಗುಳಿಗನನ್ನು ಯಾವುದೋ ಗುಳಿಗೆ ಎಂದು ಭಾವಿಸಿ ಸಂಸ್ಕೃತಿಯ ಕುರಿತಾದ ತನ್ನ ತಿಳಿವಳಿಕೆಗಳ ಮಿತಿಯನ್ನು ಪ್ರದರ್ಶಿಸಿದ್ದಾರೆ. ಪತ್ರಿಕೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಗುಳಿಗೆಗಳ ಬಗ್ಗೆ ಗೃಹ ಸಚಿವರಿಗೆ ಗೊತ್ತು. ಜಾಹೀರಾತುಗಳಾಚೆಗಣ ಜನ ಸಂಸ್ಕೃತಿಗಳ ಬಗ್ಗೆ ಅವರಿಗೆ ಗೊತ್ತಿಲ್ಲ. ಇದು ಮೂಲತ: ಅವರಿಗೆ ಸಿಕ್ಕ ತರಬೇತಿಯ ಸಮಸ್ಯೆ.

ಶ್ರೀ ಆರಗ ಅವರು ಯಾವುದೋ ಬೃಹತ್‌ ನಗರದಲ್ಲಿ ಹುಟ್ಟಿ ಬೆಳೆದವರಾಗಿದ್ದರೆ ಅವರಿಗೆ ಗುಳಿಗನ ಬಗ್ಗೆ ತಿಳಿವಳಿಕೆ ಇಲ್ಲದಿರುವುದು ಸಹಜವೆಂದು ನಾವು ಬಾವಿಸಬಹುದಿತ್ತು. ಆದರೆ ಜ್ಞಾನೇಂದ್ರರು ಹುಟ್ಟಿ ಬೆಳೆದದ್ದು ಸಮಾಜವಾದಕ್ಕೆ ಹೆಸರಾದ ಶಿವಮೊಗ್ಗ ಪರಿಸರದಲ್ಲಿ. ತಾನು ಹುಟ್ಟಿ ಬೆಳದ ಪರಿಸರದ ಸೂಕ್ಷ್ಮಗಳಿಗೆ ಕಿವಿಗೊಡಲಾರದ ಅವರು ಮುಂದೆ ಸೇರಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿಗೆ.   ಆ ಮೂಲಕ ಅವರಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಆರ್‌ ಎಸ್‌ ಎಸ್‌ ಸಂಪರ್ಕ ಒದಗಿತು. ತನ್ನ ಪರಿಸರದ ಲೇಖಕರಾದ ಕುವೆಂಪು, ಲಂಕೇಶ್‌, ಎಸ್‌.ವಿ.ಪರಮೇಶ್ವರ ಭಟ್ಟ, ಜಿ.ಎಸ್‌.ಶಿವರುದ್ರಪ್ಪ, ಹಾ.ಮಾ.ನಾಯಕ, ಅ.ಸುಂದರ, ಯು.ಆರ್‌.ಅನಂತಮೂರ್ತಿ, ಪಿ.ಲಂಕೇಶ್‌, ನಾ.ಡಿಸೋಜಾ, ಪೂರ್ಣಚಂದ್ರ ತೇಜಸ್ವಿ, ಕೆ.ವಿ.ಸುಬ್ಬಣ್ಣ, ಮೊದಲಾದವರನ್ನು ಓದಿಕೊಂಡು ಸಂಪನ್ನವಾಗಿ ಬೆಳೆಯಬೇಕಾಗಿದ್ದ ಆರಗರು ಮುಂದೆ ಆರ್‌ ಎಸ್‌ ಎಸ್‌ ನ ಸಂಕುಚಿತ ದೃಷ್ಟಿಕೋನಕ್ಕೆ ಬಲಿಯಾದರು. ಒಮ್ಮೆ ಆರ್‌ ಎಸ್‌ ಎಸ್‌ ನ ಒಳಕ್ಕೆ ಹೋದರೆ ಮತ್ತೆ ಬೌದ್ಧಿಕವಾಗಿ ಬೆಳೆಯುವುದು ಸಾಧ್ಯವಿಲ್ಲ ಎಂಬುದಕ್ಕೆ ಅದರ ನೂರು ವರ್ಷದ ಚರಿತ್ರೆಯೇ ಸಾಕ್ಷಿ. ಅದು ಸಮಾಜವು ಮುಂದಕ್ಕೆ ಚಲಿಸುತ್ತಿರುವಾಗ ಜನರನ್ನು ಹಿಂದಕ್ಕೆ ನೂಕುವ ಕೆಲಸವನ್ನು ಮಾಡುತ್ತದೆ. ನಾವ್ಯಾರೂ ಬದುಕಿರದ ಒಂದು ಕಾಲದ ಬಗ್ಗೆ ಅದಕ್ಕೆ ಅದಮ್ಯ ವ್ಯಾಮೋಹ. ವರ್ತಮಾನದ ಚೌಕಟ್ಟಿನಲ್ಲಿ ಕಲ್ಪಿಸಿಕೊಂಡ ಇತಿಹಾಸ ಮತ್ತು ಕವಿಗಳು ಕಟ್ಟಿದ ಕಾಲಾತೀತ ಪುರಾಣಗಳ ಬಲೆಯಲ್ಲಿ ಸಿಲುಕಿಕೊಂಡ ಆರ್‌ ಎಸ್‌ ಎಸ್‌ ಗೆ ಸಮಕಾಲೀನ ಸಮಾಜದಲ್ಲಿರುವ ಜಾತೀಯತೆ, ದಲಿತರ ಸಮಸ್ಯೆಗಳು, ಸರ್ವಾಧಿಕಾರ, ಮಹಿಳಾ ಶೋಷಣೆ, ಧಾರ್ಮಿಕ ಡಂಭಾಚಾರ, ಮತಾಂಧತೆ, ಮಾಧ್ಯಮಗಳ ಅಟ್ಟಹಾಸ, ಮೂಢ ನಂಬಿಕೆ ಇತ್ಯಾದಿಗಳೆಲ್ಲ ತಿಳಿಯದೇ ಹೋಗುತ್ತದೆ. ಯಾರಾದರೂ ಗೊತ್ತಿದ್ದವರು ಇವುಗಳ ಬಗೆಗೆ  ಮಾತಾಡಿದರೆ ಅದು ತನ್ನ ಅಸಹನೆಯನ್ನು ಪ್ರಕಟ ಪಡಿಸುತ್ತದೆ, ದ್ವೇಷಿಸುತ್ತದೆ ಮಾತ್ರವಲ್ಲ ಅಂತ ಧ್ವನಿಗಳನ್ನು ಮಟ್ಟ ಹಾಕಲೂ ಪ್ರಯತ್ನಿಸುತ್ತದೆ. ಹಿಂದುತ್ವವನ್ನು ಪ್ರಚುರ ಪಡಿಸುವ ತನ್ನ ಕೆಲಸಗಳನ್ನು ಹೊರತು ಪಡಿಸಿ, ಉಳಿದ ಯಾವುದೇ ಸಾಮಾಜಿಕ ಆಂದೋಲನಗಳನ್ನೂ ಅದು ಒಪ್ಪುವುದಿಲ್ಲ. ಜೊತೆಗೆ ಸಾರ್ವಜನಿಕರ ಜೊತೆಗೆ ಅದಕ್ಕೆ ಸಂವಾದ ಎಂಬುದಿಲ್ಲ. ವೈದಿಕ ಚಿಂತನಾ ಕ್ರಮಗಳ ಮೇಲೆ ಕಟ್ಟಲಾದ ಹಿಂದುತ್ವವನ್ನು ಒಪ್ಪಿಕೊಂಡು ಪ್ರಚಾರ ಮಾಡುವ ಆರ್‌ ಎಸ್‌ ಎಸ್‌ ನಲ್ಲಿ ವೈದಿಕೇತರ ಸಂಪ್ರದಾಯಗಳಿಗೆ ಯಾವುದೇ ಜಾಗವಿಲ್ಲ. ಇದ್ದರೂ ಅವನ್ನು ʼಶುದ್ಧʼ ಗೊಳಿಸಿಯೇ ಒಳಗೊಳ್ಳಲಾಗುತ್ತದೆ. ಈ ಬಗೆಯ ಸೈದ್ಧಾಂತಿಕ ಚೌಕಟ್ಟಿನಲ್ಲಿ ಬೆಳೆದ ಜ್ಞಾನೇಂದ್ರರಿಗೆ  ಗುಳಿಗನ ಬಗ್ಗೆ ಏನೇನೂ ತಿಳಿಯದಿರುವುದು ಆಕಸ್ಮಿಕವೇನೂ ಅಲ್ಲ. ಆರ್‌ ಎಸ್‌ ಎಸ್‌ ತರಬೇತಿಯೇ ಹಾಗಿರುತ್ತದೆ.

ಈ ಹಿಂದೆಯೂ ಆರಗರು ಸಾಕಷ್ಟು ಎಡವಟ್ಟುಗಳನ್ನು ಮಾಡಿಕೊಂಡಿದ್ದಾರೆ. ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಅವರು ಆರ್‌ ಎಸ್‌ ಎಸ್‌ ನ ಪಿತೃಪ್ರಧಾನ ಚೌಕಟ್ಟಿನಲ್ಲಿಯೇ ಪ್ರತಿಕ್ರಿಯಿಸಿ, ಸಾಯಂಕಾಲ ೭.೩೦ರ ಆನಂತರ ಹುಡುಗಿಯರು ಅಲ್ಲಿಗೆ ಯಾಕೆ ಹೋಗಬೇಕಿತ್ತು ಎಂದು ಕೇಳಿದರು.  ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಬಂದೂಕಿನಿಂದ ಗುಂಡು ಹಾರಿಸಿ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರ  ವರ್ತನೆಯನ್ನು ಅವರು ಸಮರ್ಥಿಸಿಕೊಂಡಿದ್ದರು.  ಇವತ್ತು ʼಗೃಹ ಸಚಿವರು ತಮ್ಮ ಸ್ಥಾನಕ್ಕೆ ತಕ್ಕುದಾಗಿ ಮಾತನಾಡುತ್ತಿಲ್ಲʼ ಎಂಬ ಅಂಶವನ್ನು ನಾಡಿನ ಬಹುತೇಕ ಎಲ್ಲರೂ ಒಪ್ಪಿಕೊಂಡಿದ್ದಾರೆ.

ಗುಳಿಗನ ಘಟನೆ:

ತೀರ್ಥಹಳ್ಳಿಯಲ್ಲಿ ಕಳೆದ ಮಾರ್ಚ್‌ ೧೪ರಂದು  ʼಶಿವದೂತೆ ಗುಳಿಗೆʼ ಎಂಬ ತುಳು ನಾಟಕವನ್ನು ಆಯೋಜಿಸಲಾಗಿತ್ತು. ನಾಟಕದ ಪೋಸ್ಟರ್‌ಗಳನ್ನು ಗಮನಿಸಿದ ಗೃಹಸಚಿವರು, ನಾಟಕದ ಬಗ್ಗೆ ತಿಳಿದು ಕೊಳ್ಳಲು ಹೋಗದೆ, ಅತ್ಯಂತ ಬೇಜವಾಬ್ದಾರಿಯಿಂದ ʼನಿನ್ನೆಯಿಂದ ಎಂತದೋ ಗುಳಿಗೆ – ಗುಳಿಗೆ ಅಂತ ಹಾಕಿದ್ದಾರೆ. ಬಹಳ ಅಪಾಯ ಇದು..! ಯಾವ ಗುಳಿಗೆ ಇವರು ಕೊಡ್ತಾರೆ ಅಂತ ಗೊತ್ತಿಲ್ಲ..! ಎಂದು ʼ ವ್ಯಂಗ್ಯವಾಗಿ ಘೋಷಿಸಿದರು. ಪಾಪ! ಆರ್‌ ಎಸ್‌ ಎಸ್‌ ಶಾಖೆಯಲ್ಲಿ ಅವರಿಗೆ ಗುಳಿಗ ದೈವದ ಬಗ್ಗೆ ಯಾರೂ ಹೇಳಿರಲಿಕ್ಕಿಲ್ಲ.

ಕರಾವಳಿಯಲ್ಲಿರುವ ಸಾವಿರಾರು ದೈವಗಳಲ್ಲಿ ಬಹಳ ಪ್ರಮುಖವಾದ ಒಂದು ದೈವವೆಂದರೆ ಗುಳಿಗ. ಜಾನಪದ ವಿದ್ವಾಂಸರು ಗುಳಿಗನನ್ನು ʼಕ್ಷೇತ್ರ ರಕ್ಷಕ ದೈವʼ ಎಂದು ವಿವರಿಸಿದ್ದಾರೆ. ಮತ್ತೆ ಕೆಲವರ ಪ್ರಕಾರ ಇದು ಗಾಳಿಯಂತೆ ಸಂಚರಿಸುವ  ಶಕ್ತಿ ಶಾಲೀ ದೈವವೂ ಹೌದು. ಈ ದೈವಕ್ಕೆ ಮಾರಣ ಗುಳಿಗ, ಆಕಾಶ ಗುಳಿಗ, ಮುಕಾಂಬಿ ಗುಳಿಗ, ನೆತ್ತರು ಗುಳಿಗ ಮೊದಲಾದ ೧೫ಕ್ಕೂ ಹೆಚ್ಚು ಪ್ರಾದೇಶಿಕ ಪ್ರಬೇಧಗಳಿವೆ. ಹರಕೆಯ ಕೋಳಿಗಳನ್ನು ಬಾಯಲ್ಲಿ ಕಚ್ಚಿ ಹಿಡಿದು ರಕ್ತ ಚಿಮ್ಮಿಸುವ ಈ ದೈವಕ್ಕೆ ಜನರು ತುಂಬಾ ಹೆದರುತ್ತಾರೆ. ಪಾಡ್ದನದ ಪ್ರಕಾರ ಈ ದೈವವು ತಾಯಿಯ ಬಲದ ಮೊಲೆಯೊಡೆದು ಭೂಮಿಗೆ ಬರುತ್ತದೆ.

ಬಿಜೆಪಿ ಮಾಡುತ್ತಿರುವ ಹಾನಿಗಳಲ್ಲಿ ಸ್ಥಳೀಯ ಸಂಸ್ಕೃತಿಯ ನಾಶ ಬಹಳ ಪ್ರಮುಖವಾದುದು. ಆರಗ ಜ್ಞಾನೇಂದ್ರರ ಮಾತುಗಳು ಅಂತ ನಾಶದ ಸಂಕೇತ.

Related Articles

ಇತ್ತೀಚಿನ ಸುದ್ದಿಗಳು