Home ಬ್ರೇಕಿಂಗ್ ಸುದ್ದಿ ಹೆಚ್.ಐ.ವಿ ಸೋಂಕಿತರು ಸಮಾಜದ ಭಾಗ, ಮಾನವೀಯತೆಯಿಂದ ನಾವು ನಡೆದುಕೊಳ್ಳಬೇಕು – ಜಿ.ಕೆ. ದಾಕ್ಷಾಯಿಣಿ

ಹೆಚ್.ಐ.ವಿ ಸೋಂಕಿತರು ಸಮಾಜದ ಭಾಗ, ಮಾನವೀಯತೆಯಿಂದ ನಾವು ನಡೆದುಕೊಳ್ಳಬೇಕು – ಜಿ.ಕೆ. ದಾಕ್ಷಾಯಿಣಿ

ಹಾಸನ: ಹೆಚ್.ಐ.ವಿ ಸೋಂಕಿತರು ಸಮಾಜದ ಭಾಗ. ಅವರನ್ನ ನಿರ್ಲಕ್ಷಿಸಿ, ತುಚ್ಛವಾಗಿ ನೋಡುವ ಬದಲು, ಮಾನವೀಯ ಧೋರಣೆಯೊಂದಿಗೆ ವರ್ತಿಸಿ, ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ಪಡೆಯುವಂತೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ ತಿಳಿಸಿದರು. ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಹಿಮ್ಸ್) ಸಭಾಂಗಣದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ೧೯೮೮ ರಿಂದ ವಿಶ್ವ ಆರೋಗ್ಯ ಸಂಸ್ಥೆಯ ಮುಂದಾಳತ್ವದಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದ್ದು, ಇದರ ಪ್ರಧಾನ ಉದ್ದೇಶ ಜನರಿಗೆ ಜಾಗೃತಿ ಮೂಡಿಸುವುದು, ತಪ್ಪು ಭಾವನೆ?ಮೂಢ ನಂಬಿಕೆಗಳನ್ನು ದೂರ ಮಾಡುವುದು ಎಂದು ವಿವರಿಸಿದರು. ಏಡ್ಸ್ ಕುರಿತು ಸಮಾಜದಲ್ಲಿ ಹಲವು ತಾರತಮ್ಯಗಳು, ತಪ್ಪು ಕಲ್ಪನೆಗಳು ಇನ್ನೂ ಬೇರೂರಿವೆ. ಆದರೆ ವಿವಿಧ ಸಂಘ-ಸಂಸ್ಥೆಗಳು, ಆರೋಗ್ಯ ಇಲಾಖೆ, ಸ್ವಯಂಸೇವಾ ಸಂಸ್ಥೆಗಳು ಹೆಚ್.ಐ.ವಿ ಪೀಡಿತರನ್ನು ಭೇಟಿ ಮಾಡಿ ಅವರಿಗೆ ಸಮಾಧಾನ ನೀಡಿ ವೈದ್ಯಕೀಯ ನೆರವು ಒದಗಿಸುವಲ್ಲಿ ಶ್ಲಾಘನೀಯ ಸೇವೆ ಮಾಡುತ್ತಿವೆ ಎಂದರು. ಹೊಸ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವುದರ ಮೂಲಕವೇ ಏಡ್ಸ್ ಮುಕ್ತ ಸಮಾಜ ಸಾಧ್ಯ. ಸರ್ಕಾರ ತನ್ನ ಮಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಮಾಹಿತಿ ಯುವಕರು ಹಾಗೂ ಸಾರ್ವಜನಿಕರು ಪೀಡಿತರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

You cannot copy content of this page

Exit mobile version