Saturday, November 22, 2025

ಸತ್ಯ | ನ್ಯಾಯ |ಧರ್ಮ

ನೈಜೀರಿಯಾದ ಸೇಂಟ್ ಮೇರಿ ಶಾಲೆಯ ಮೇಲೆ ಶಸ್ತ್ರಧಾರಿಗಳ ದಾಳಿ – 280 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರು ಅಪಹರಣ

ಅಬುಜಾ (ನೈಜೀರಿಯಾ), ನವೆಂಬರ್ 22: ನೈಜೀರಿಯಾದ ನೈಜರ್ ರಾಜ್ಯದ ಅಗ್ವಾರಾ ಪ್ರದೇಶದ ಪಾಪಿರಿ ಸಮುದಾಯದಲ್ಲಿರುವ ಸೇಂಟ್ ಮೇರಿ ಕ್ಯಾಥೋಲಿಕ್ ಶಾಲೆಗೆ ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪು ನುಗ್ಗಿ 280 ಕ್ಕೂ ವಿದ್ಯಾರ್ಥಿಗಳು ಹಾಗೂ 12 ಶಿಕ್ಷಕರನ್ನು ಅಪಹರಿಸಿರುವ ಘಟನೆ ರಾಷ್ಟ್ರ ಮಟ್ಟದಲ್ಲಿ ಆತಂಕ ಮೂಡಿಸಿದೆ.

ನೈಜೀರಿಯಾದ ಕ್ರಿಶ್ಚಿಯನ್ ಅಸೋಸಿಯೇಷನ್ ಪ್ರಕಾರ, ಬಂದೂಕುಧಾರಿಗಳು ರಾತ್ರಿ ವೇಳೆ ಶಾಲೆಯನ್ನು ಆಕ್ರಮಿಸಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸದಸ್ಯರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದಾರೆ. ಈ ಘಟನೆಯ ನಂತರ ಪ್ರದೇಶದಲ್ಲಿ ಭೀಕರ ಭಯದ ವಾತಾವರಣ ನಿರ್ಮಾಣವಾಗಿದೆ.

ನೈಜರ್ ರಾಜ್ಯ ಸರ್ಕಾರದ ವಕ್ತಾರ ಡೇನಿಯಲ್ ಅಟೋರಿ ಅವರು, “ಘಟನೆಯ ನಂತರ ಶಾಲೆ ಮತ್ತು ಪೋಷಕರನ್ನು ಭೇಟಿ ಮಾಡಿ ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳು ಮಕ್ಕಳ ಸುರಕ್ಷಿತ ಹಿಂತಿರುಗುವಿಕೆಗೆ ಶ್ರಮಿಸುತ್ತಿವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಥಳೀಯ ಆಡಳಿತ ಮತ್ತು ಭದ್ರತಾ ಪಡೆಗಳು ತುರ್ತು ಕ್ರಮಗಳನ್ನು ಕೈಗೊಂಡಿದ್ದು, ದಾಳಿಕೋರರ ಪತ್ತೆಗೆ ಶೋಧ ಮುಂದುವರಿಸಿದೆ ಎಂದೂ ಅವರು ತಿಳಿಸಿದ್ದಾರೆ.

ದಾಳಿಕೋರರ ಗುರುತು ಅಥವಾ ಅಪಹೃತರನ್ನು ಎಲ್ಲಿ ಕರೆದೊಯ್ಯಲಾಗಿದೆ ಎಂಬ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಕಳೆದ ಕೆಲವು ವರ್ಷಗಳಿಂದ ನೈಜೀರಿಯಾದ ಉತ್ತರ ಮತ್ತು ವಾಯುವ್ಯ ಭಾಗಗಳಲ್ಲಿ ಶಾಲಾ ವಿದ್ಯಾರ್ಥಿಗಳ ಸಾಮೂಹಿಕ ಅಪಹರಣಗಳು ಹೆಚ್ಚಾಗುತ್ತಿರುವುದರಿಂದ ಮಕ್ಕಳ ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಇತ್ತೀಚೆಗಷ್ಟೇ ವಾಯುವ್ಯ ನೈಜೀರಿಯಾದ ಕೆಬ್ಬಿ ರಾಜ್ಯದ ಮಾಗಾದಲ್ಲಿರುವ ಬೋರ್ಡಿಂಗ್ ಶಾಲೆಯ ಮೇಲೂ ದಾಳಿ ನಡೆದಿತ್ತು. ಅದರಲ್ಲಿ 25 ವಿದ್ಯಾರ್ಥಿನಿಯರನ್ನು ಅಪಹರಿಸಲಾಗಿದ್ದು, ಒಬ್ಬ ಶಾಲಾ ಸಿಬ್ಬಂದಿ ಸಾವನ್ನಪ್ಪಿ ಮತ್ತೊಬ್ಬರು ಗಾಯಗೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page