ಶ್ರೀನಗರ: ಸೇನಾ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಓರ್ವ ಸೇನಾಧಿಕಾರಿ ಸಾವನ್ನಪ್ಪಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಈ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.
ದೂರದ ಅರಣ್ಯ ಪ್ರದೇಶದಲ್ಲಿ ಉಗ್ರರು ಮತ್ತು ಸೇನಾ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಎನ್‌ಕೌಂಟರ್‌ನಲ್ಲಿ 2 ಪ್ಯಾರಾ (ವಿಶೇಷ ಪಡೆ)ಯ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ನಾಯಬ್ ಸುಬೇದಾರ್ ರಾಕೇಶ್ ಕುಮಾರ್ ಮರಣ ಹೊಂದಿದ್ದಾರೆ ಎಂದು ಆರ್ಮಿ ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ. ಜೊತೆಗೆ ಇನ್ನೂ ಮೂವರು ಕಮಾಂಡೋಗಳು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ. ಕಿಶ್ತ್ವಾರ್‌ನಲ್ಲಿ ಸೇನಾ ಕಾರ್ಯಾಚರಣೆಯ ಭಾಗವಾಗಿದ್ದ ನಾಯಬ್ ಸುಬೇದಾರ್ ರಾಕೇಶ್ ಕುಮಾರ್ ಅವರು ಭಯೋತ್ಪಾದಕರ ವಿರುದ್ಧ ಅತ್ಯಂತ ಧೈರ್ಯದಿಂದ ಹೋರಾಡಿ ಹುತಾತ್ಮರಾಗಿದ್ದಾರೆ ಎಂದು ವೈಟ್ ನೈಟ್ ಕಾರ್ಪ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಹೇಳಿದ್ದಾರೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬದ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿಗಳಾದ ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನೆ ಜಂಟಿಯಾಗಿ ಕಿಶ್ತ್ವಾರ್ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಅಲ್ಲಿ ಅಡಗಿಕೊಂಡಿದ್ದ ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿ ಪ್ರತಿದಾಳಿ ನಡೆಸಿದರು. ಈ ಎನ್‌ಕೌಂಟರ್ ಇನ್ನೂ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.