Tuesday, July 29, 2025

ಸತ್ಯ | ನ್ಯಾಯ |ಧರ್ಮ

ಫ್ರೀ ಬಸ್ಸಿನ ಸುತ್ತಾ..

“ತಿಂಗಳಿಗೆ ಎಲ್ಡ್ ಸಾವ್ರ ರೂಪಾಯಿ ಬಂದ್ರೆ, ನನ್ ಮಗಳನ್ನು ಪ್ಯಾಟೆ ಶಾಲಿಗೆ ಸೇರ್ಸಿ ಬರ್ತೀನಿ, 8 ನೇ ಕಲಾಸ್ ಓದ್ತಾ ಐತಿ.  ಅವ್ವ, ಪ್ಯಾಟೆ ಶಾಲಿಗ್ ಸೇರ್ಸು ನನ್ನ, ಇಂಗ್ಲಿಸ್ ಕಲ್ತು ಬೇಗ ಕೆಲ್ಸ ತಗೋತೀನಿ ಅಂತೈತಿ”  ಅಂತ ಪಕ್ಕದ ಮನೆ ಅತ್ತೆ ಹೇಳಿದಾಗ, ಒಂದ್ ಸಾರಿ ಮೈಯೆಲ್ಲಾ ಜುಮ್ ಅಂತು. ಹೆಣ್ಮಕ್ಕಳಿಗೆ ಶಕ್ತಿ ಮತ್ತು ಗೃಹಲಕ್ಷ್ಮಿಯಂತಹ ಯೋಜನೆಗಳು ಅವರ ಬಾಳಿಗೆ ಬೆಳಕಾಗುತ್ತವೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ – ದಿವ್ಯಶ್ರೀ ಅದರಂತೆ, ವಿದ್ಯಾರ್ಥಿನಿ

ಮೊನ್ನೆ ನಮ್ ಊರಲ್ಲಿ ಒಂದ್ ಮದ್ವೆಗೆ ಹೋಗಿದ್ದೆ. ಮರ್ಯಾದಸ್ಥರು ಅನ್ನಿಸಿಕೊಂಡ ಗಂಡಸರ ಗುಂಪೊಂದು ಫ್ರೀ ಬಸ್ ಚರ್ಚೆಗೆ ಇಳಿದಿತ್ತು. ಕುತೂಹಲದಿಂದ ನಾನೂ ಆ ಕಡೆಗೆ ಕಿವಿ ಹಾಕಿದೆ. ಅದರಲ್ಲಿ ಒಬ್ಬ “ಅಲ್ಲೋ ಮಾರಾಯ, ಫ್ರೀ ಬಸ್ ಹತ್ತಿ, ಅದೆಷ್ಟ್ ಹೆಂಗಸರು ಗಂಡನ್ನ ಬಿಟ್ಟು ಓಡಿ ಹೋಗ್ತಾರೋ”  ಅಂದ. ಅದಿಕೆ ಇನ್ನೊಬ್ಬ “ನಿನ್ ಹೆಂಡ್ತಿ ಸ್ವಲ್ಪ ಓದ್ಕೊಂಡಿರೋಳು, ಹುಷಾರೋ ಮಾರಾಯ, ಅಂತ ಬಿಟ್ಟಿ ಸಲಹೆ ಕೊಟ್ಟ. ಅದಿಕೆ ಉತ್ತರವಾಗಿ ಇನ್ನೊಬ್ಬ ” ನನ್ ಹೆಂಡ್ತಿ ಬಸ್ ಹತ್ತಿದ್ರೆ, ಅವಳ್ ಕೈ ಕಾಲ್ ಮುರುದು ಮನೇಲಿ ಕೂರಿಸ್ತೀನಿ ಅಂದ”. ಒಂದ್ ಕ್ಷಣ ನಾನೆಲ್ಲಿದಿನಿ ಅನ್ನೋದೇ ಮರೆತು ಹೋಗಿತ್ತು. ನಾನ್ ಸಣ್ಣವಳಿದ್ದಾಗ ಕತೆಗಳನ್ನ ಓದಿದ್ರಲ್ಲಿ ಇದ್ದ ರಾಕ್ಷಸರು ಇವರೇನಾ ಅನ್ನಿಸಿಬಿಡ್ತು.

ಫ್ರೀ ಬಸ್ ಅಂದ್ರೆ ಮಹಿಳಾ ಸಬಲೀಕರಣಕ್ಕೆ ಇಟ್ಟ ದೊಡ್ಡ ಹೆಜ್ಜೆ  ಅನ್ನೋ ಮಾತುಗಳನ್ನ ಕೇಳಿದ್ದ ನಂಗೆ, ಇವರ ಮಾತುಗಳು ಅಕ್ಷರಷಃ ಮುಳ್ಳಾಗಿದ್ದವು.

ಬೆಳಿಗ್ಗೆಯಿಂದ ಸಂಜೆವರೆಗೂ ಹೆಂಡತಿಯನ್ನ ಮನೆಕೆಲಸದವಳಾಗಿ, ತನ್ನ ಸೇವಕಿಯಾಗಿ ನೋಡೋ ಈ ಗಂಡಸರಿಗೆ, ಅವಳು ಹೊರಗೆ ಇಡೋ ಒಂದು ಹೆಜ್ಜೆ ಬಗ್ಗೆ ಅದೆಷ್ಟು ಅಸಹನೆ, ಭಯ ಇದೆ ಅನ್ನೋದು ಅವತ್ತಿಗೆ ತಿಳಿಯಿತು. ನಮ್ಮ ಹಳ್ಳಿ ಹೆಣ್ಮಕ್ಕಳು ದಿನದ ಬಹುಪಾಲನ್ನ ಅಡಿಗೆ ಮಾಡಿ, ಬಟ್ಟೆ ಪಾತ್ರೆ ತೊಳೆದು, ಗಂಡ ಮಕ್ಕಳ ಸೇವೆ ಮಾಡೋದ್ರಲ್ಲಿ ಕಳೆದರೆ, ಇನ್ನೂ ಸ್ವಲ್ಪ ಸಮಯವನ್ನ ಹೊಲದಲ್ಲೋ ಅಥವಾ ಕೂಲಿ ಕೆಲ್ಸ ಮಾಡಿನೋ ಕಳೀತಾರೆ. ಈ ಶ್ರಮಿಕ ವರ್ಗದ ಮಹಿಳೆಯರಿಗೆ  ಪ್ರವಾಸ ಅನ್ನೋ ಪರಿಕಲ್ಪನೆನೇ ಇಲ್ಲಾ. ಸಂಬಂಧಿಕರ ಮದುವೆನೋ, ತಿಥಿಗೋ ಹೋಗ್ಬೇಕು ಅಂದ್ರೆ ಗಂಡನನ್ನೇ ಕಾಯಬೇಕು. ಗಂಡನ ನಿಯಂತ್ರಣ ಒಂದು ಕಡೆ ಇದ್ರೆ, ಇನ್ನೊಂದ್ ಕಡೆ ಅವಳ ಆರ್ಥಿಕ ಪರಿಸ್ಥಿತಿ, ಅವಳ್ ಕೈ ಕಾಲನ್ನ ಕಟ್ಟಿ ಕೂರಿಸಿರತ್ತೆ. ಪೇಟೇಲಿ ಕೆಲಸ ಮಾಡೊ ಹೆಣ್ಮಕ್ಕಳ ಕೈಯಲ್ಲಿ ಸ್ವಲ್ಪ ಮಟ್ಟಿಗಾದ್ರೂ ಹಣ ಇರತ್ತೆ. ಆದ್ರೆ ನಮ್ ಹಳ್ಳಿ ಹೆಣ್ಮಕ್ಕಳು ಪ್ರತಿಯೊಂದಕ್ಕೂ ಅಪ್ಪನನ್ನೋ ಇಲ್ಲಾ ಗಂಡನನ್ನೋ ಅಂಗಲಾಚಬೇಕು.

ಇಂತಹ ಸಂದರ್ಭದಲ್ಲಿ, ಫ್ರೀ ಬಸ್( ಶಕ್ತಿ ) ಯೋಜನೆ ನಾಡಿನ ಹೆಣ್ಣುಮಕ್ಕಳಿಗೆ, ಈ ಪಿತೃಪ್ರಧಾನ ವ್ಯವಸ್ಥೆಯಲ್ಲಿನ ಅನಿಷ್ಟ ಸಂಕೋಲೆ ಮತ್ತು ಕಪಿಮುಷ್ಟಿಯಿಂದ ಹೊರಗೆ ಬಂದು, ತುಸು ನೆಮ್ಮದಿಯಿಂದ ಉಸಿರಾಡಲು ಅವಕಾಶ ಮಾಡಿಕೊಟ್ಟಂತಿದೆ. ಬಾವಿಯೊಳಗಿನ ಕಪ್ಪೆಯಾಗಿರುವ ಹಳ್ಳಿ ಹೆಣ್ಮಕ್ಕಳು, ಇನ್ನಾದರೂ ಪೇಟೆ ಸುತ್ತಿ, ಹೊಸ ಜಗತ್ತನ್ನ ನೋಡಲಿ. ಸಿಟಿಗಳಲ್ಲಿ ಗಂಡನ, ಅಪ್ಪನ ಹಂಗಿಲ್ಲದೆ ಸ್ವಾಭಿಮಾನಿಯಾಗಿ ದುಡಿದು ಆರ್ಥಿಕವಾಗಿ ಸಬಲರಾಗುತ್ತಿರುವ ಆ ಹೆಣ್ಮಕ್ಕಳನ್ನ ನೋಡಿ, ಇವರಿಗೂ ಎದೆಯಲ್ಲಿ ಕಿಚ್ಚು ಹುಟ್ಟಬೇಕು. ಸಾರ್ವಜನಿಕರೆದುರು ಅವಳು ಬಸ್ ಹತ್ತಿದ್ರೆ ಕಾಲು ಮುರೀತೀನಿ ಅಂತ ಹೇಳಿ ತನ್ನ ಹೆಂಡತಿಯನ್ನೇ ಅವಮಾನ ಮಾಡುವ ಗಂಡಿನ ಅಹಂಗೆ ಇಂದಲ್ಲ ನಾಳೆ ತಣ್ಣೀರು ಎರಚುವಂತಾಗಬೇಕು.

 ಈ ಹಳ್ಳಿಕಡೆ, ಗುಲಾಮರಿಗೂ, ಹೆಣ್ಮಕ್ಕಳಿಗೂ ಯಾವುದೇ ವ್ಯತ್ಯಾಸ ಇಲ್ಲ. ಬಹುಪಾಲು ಅನಕ್ಷರಸ್ತರಿರುವ ಕಾರಣಕ್ಕೆ ಇಲ್ಲಿ ಸಮಾನತೆಗೆ ಜಾಗನೇ ಇಲ್ಲದಂತಾಗಿದೆ. The great Indian kitchen ಮೂವಿಲಿ,  ಆಕೆ ಒಂದ್ ನಿಮಿಷನೂ ಪುರುಸೊತ್ತಿಲ್ಲದ ಹಾಗೇ ಮನೆ ಕೆಲಸ ಮಾಡ್ತಾಳಲ್ಲ ಹಾಗೇ ಮಾಡ್ಬೇಕು. ಅದ್ರು ಜೊತೆಗೆ ಅವನ್ ಜೊತೆಗೆ ಹೊಲಕ್ಕೆ ಹೋಗಿ, ಅವನಷ್ಟೇ ಕೆಲಸ ಮಾಡ್ಬೇಕು. ಅಲ್ಲೂ ಅವನ ಆದೇಶಗಳು ತಪ್ಪಿದ್ದಲ್ಲ.

ಚೌತಿ ಹಬ್ಬಕ್ಕೋ, ದೀಪಾವಳಿಗೋ, ವರ್ಷಕ್ಕೆ ಒಂದ್ ಸಾರಿನೋ ತವರುಮನೆಗೆ ಹೊರಟ್ಕೊಂಡು, ಗಂಡ ಕರ್ಕೊಂಡು ಹೋಗ್ತಾನಂತಾನೋ ಅಥವಾ ಅಪ್ಪ, ಅಣ್ಣ, ತಮ್ಮ ಯಾರಾದ್ರೂ ಬರ್ತಾರಂತನೋ ದಿನಾ ಪೂರ್ತಿ ಕಾದು ಕೂರೊ ಹೆಣ್ಮಕ್ಕಳ ಅಸಹಾಯಕ ಸ್ಥಿತಿ, ಗಂಡಾಳ್ವಿಕೆಗೆ ಹಿಡಿದಿಟ್ಟ ಕನ್ನಡಿ ಅನ್ನೋದ್ರಲ್ಲಿ ತಪ್ಪಿಲ್ಲ. ಈಗ ಈ ಫ್ರೀ ಬಸ್ನಿಂದ ಇದಕ್ಕೆಲ್ಲಾ ಸ್ವಲ್ಪವಾದ್ರೂ ಬ್ರೇಕ್ ಬೀಳತ್ತಲ್ಲ ಅದೇ ಖುಷಿ. 

ಹಳ್ಳಿಗಳಲ್ಲಿ ಬಡತನ ಮತ್ತು ಕುಡುಕ ಗಂಡಂದಿರ ಕಿರುಕುಳದಿಂದ ಬೇಸತ್ತ ಹೆಣ್ಮಕ್ಕಳಿಗೆ ಶಕ್ತಿ ಮತ್ತು ಗೃಹಲಕ್ಷ್ಮಿಯಂತಹ ಯೋಜನೆಗಳು ಅವರ ಬಾಳಿಗೆ ಬೆಳಕಾಗುತ್ತವೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

“ತಿಂಗಳಿಗೆ ಎಲ್ಡ್ ಸಾವ್ರ ರೂಪಾಯಿ ಬಂದ್ರೆ, ನನ್ ಮಗಳನ್ನು ಪ್ಯಾಟೆ ಶಾಲಿಗೆ ಸೇರ್ಸಿ ಬರ್ತೀನಿ, 8 ನೇ ಕಲಾಸ್ ಓದ್ತಾ ಐತಿ.  ಅವ್ವ, ಪ್ಯಾಟೆ ಶಾಲಿಗ್ ಸೇರ್ಸು ನನ್ನ, ಇಂಗ್ಲಿಸ್ ಕಲ್ತು ಬೇಗ ಕೆಲ್ಸ ತಗೋತೀನಿ ಅಂತೈತಿ”  ಅಂತ ಪಕ್ಕದ ಮನೆ ಅತ್ತೆ ಹೇಳಿದಾಗ, ಒಂದ್ ಸಾರಿ ಮೈಯೆಲ್ಲಾ ಜುಮ್ ಅಂತು. 

ಇತ್ತೀಚೆಗೆ ಅದ್ಯಾರೋ ಕವಯಿತ್ರಿ ಅನ್ನಿಸಿಕೊಂಡೋರು, ಒಬ್ಬ ಶ್ರಮಿಕ ವರ್ಗದ ಮಹಿಳೆಯ ಮೈಯ ವಾಸನೆ ಮತ್ತು ಅವಳ ಹಾವಭಾವದ ಕುರಿತು ಅಸಹ್ಯವಾಗಿ ಬರೆದು ಪೋಸ್ಟ್ ಮಾಡಿ ತನ್ನನ್ನೇ ತಾನು ನಾಚಿಕೆಗೀಡು ಮಾಡಿಕೊಂಡಿದ್ದನ್ನ ನೋಡಿದ್ರೆ, ಎಲ್ಲೋ ಒಂದ್ ಕಡೆ ಹೆಣ್ಮಕ್ಕಳಿಗೆ, ಹೆಣ್ಮಕ್ಕಳೆ ಶತ್ರು ಅನ್ನೋ ಮಾತನ್ನ ನಂಬೋ ಹಾಗೆ ವಾತಾವರಣವನ್ನ ರೂಪಿಸ್ತಿದಾರೇನೋ ಅನ್ನೋ ಆತಂಕ ಶುರು ಆಗ್ತಿದೆ.

ಆದ್ರೂ ಈ ಎಲ್ಲಾ ಕುಹಕ ಮಾತು, ಟೀಕೆಗಳ ನಡುವೆಯೂ ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳು ಎದ್ದು ನಿಲ್ಲಲಿ. ಶ್ರಮಿಕ ವರ್ಗದ ಮಹಿಳೆಯರ ಜೀವನ ತುಸು ಸುಧಾರಿಸಲು, ಸ್ವಲ್ಪ ನೆಮ್ಮದಿಯಾಗಿ ಬದುಕಲು ಆಸರೆಯಾಗಲಿ.

ದಿವ್ಯಶ್ರೀ ಅದರಂತೆ

ಬೆಂಗಳೂರಿನ ಸೈಂಟ್‌ ಜೋಸೆಫ್‌ ಕಾಲೇಜಿನ ಇಂಗ್ಲಿಷ್‌ ಸಾಹಿತ್ಯದ ವಿದ್ಯಾರ್ಥಿನಿ

ಇದನ್ನೂ ಓದಿ- ಬಿಟ್ಟಿ ಭಾಗ್ಯಗಳಲ್ಲ.. ಜನಸಾಮಾನ್ಯರ ಶ್ರಮ ನುಂಗಿದ್ದಕ್ಕೆ ಪರಿಹಾರ

Related Articles

ಇತ್ತೀಚಿನ ಸುದ್ದಿಗಳು

You cannot copy content of this page