Saturday, January 4, 2025

ಸತ್ಯ | ನ್ಯಾಯ |ಧರ್ಮ

ಹೊಸ ವರ್ಷದ ಹೊಸಿಲಲ್ಲಿ… ಹೊಸ ವರ್ಷದ ಆಸುಪಾಸಿನಲ್ಲಿ ಕಣ್ಣಿಗೆ ಬಿದ್ದಿದ್ದು, ಕಾಡಿದ್ದು ಒಂದಿಷ್ಟು ಸುದ್ದಿಗಳು

“..ಪುರುಷ ಪ್ರಧಾನ ವ್ಯವಸ್ಥೆಯ ಅನುಸಾರ ಮಹಿಳೆ ಮದ್ಯ ಸೇವಿಸುತ್ತಾಳೆ ಎನ್ನುವುದು ಸಮಾಜದ ದೃಷ್ಟಿಯಲ್ಲಿ ಒಂದು ನೈತಿಕ ಅಧ:ಪತನದ ಸ್ಥಿತಿ. ಇಂತಹ ಚಿತ್ರಗಳ ಪ್ರಸಾರದ ಮೂಲಕ ಹೆಣ್ಣಿಗೆ ಸಭ್ಯತೆ, ಶೀಲ ಮುಂತಾದ ಮಾನದಂಡಗಳನ್ನು ಹೇರಲಾಗುತ್ತದೆ..” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಹೆಣ್ಣು ಮಕ್ಕಳು ಕುಡಿದು ತೂರಾಡಿದ್ದು ಮಾಧ್ಯಮಗಳಿಗೆ ಜಗಿದು ಚಪ್ಪರಿಸುವ ಕವಳವಾಗಿತ್ತು. ಕುಡಿದ ಮತ್ತಿನಲ್ಲಿನ ಹೆಣ್ಣುಮಕ್ಕಳು ತೂರಾಡಿದ್ದು, ಮಾತಾಡಿದ್ದನ್ನು ಚಿತ್ರೀಕರಿಸಿದಲ್ಲದೇ ಪದೇ ಪದೇ ಬಿತ್ತರಿಸುವ ಮೂಲಕ ಮಾಧ್ಯಮಗಳು ಮತ್ತೊಮ್ಮೆ ತಮ್ಮನ್ನು ತಾವು ರಣಹದ್ದುಗಳು ಎಂದು ಸಾಬೀತುಪಡಿಸಿಕೊಂಡಿವೆ. ಮತ್ತೊಬ್ಬರ ಬದುಕನ್ನು ತಮಗಿಷ್ಟ ಬಂದ ಹಾಗೆ ರೆಕಾರ್ಡ್‌ ಮಾಡಿ ಜಗಜ್ಜಾಹೀರು ಮಾಡಬಾರದು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದೇ, ಮುಂದೆ ಆ ಹೆಣ್ಣುಮಗಳಿಗೆ ಅದು ಎಷ್ಟರ ಮಟ್ಟಿಗಿನ ಮುಜುಗರ, ಅಪಾಯ ತಂದೊಡ್ಡಬಹುದು ಎನ್ನುವ ಕಾಳಜಿಯೂ ಇಲ್ಲದೇ ಜಗತ್ತಿನ ಅತಿ ಮುಖ್ಯ ಸುದ್ದಿ ಇದು ಎನ್ನುವಂತೆ ಬಿತ್ತರಿಸಿ ಇನ್ನಷ್ಟು ಕೀಳುಮಟ್ಟಕ್ಕಿಳಿದಿವೆ. 

ಇಲ್ಲಿ ಮಾಧ್ಯಮಗಳ ನೀಚತನ ಅಷ್ಟೇ ಅಲ್ಲದೇ ಇದರ ಹಿಂದಿನ ಪುರುಷ ಪ್ರದಾನ ಚಿಂತನೆಗಳು ರಾಚುತ್ತಿವೆ. ಮಹಿಳೆ ಏನು ಮಾಡಬೇಕು, ಏನು ಮಾಡಬಾರದು, ಹೇಗಿರಬೇಕು, ಹೇಗಿರಬಾರದು ಎಲ್ಲವನ್ನೂ ನಿರ್ಧರಿಸುವ ಹಪಾಹಪಿ ಪುರುಷ ಪ್ರಧಾನ ವ್ಯವಸ್ಥೆಗಿದೆ. ಕುಡಿತ ಒಂದು ಸಾಮಾಜಿಕ ಸಮಸ್ಯೆ. ಕುಡಿತದಿಂದ ಮಹಿಳೆಗೆ ಮಾತ್ರವಲ್ಲ, ಪುರುಷನಿಗೂ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಬರೀ ಹೆಣ್ಣುಮಕ್ಕಳನ್ನೇ ಯಾಕೆ ಚಿತ್ರೀಕರಿಸಿ, ಅವರನ್ನು ಜಗತ್ತಿನ ಪರಮಪಾಪಿಗಳು ಎನ್ನುವ ಹಾಗೆ ತೋರಿಸಲಾಯಿತು, ಎನ್ನುವುದಕ್ಕೆ ಪುರುಷ ಪ್ರಧಾನ ವ್ಯವಸ್ಥೆ ಉತ್ತರವಾಗಿ ನಿಲ್ಲುತ್ತದೆ. 

ಇದೇ ಸಂಭ್ರಮಾಚರಣೆಗಳಲ್ಲಿ ಪುರುಷರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರೂ ಇಲ್ಲಿ ಟೀಕೆಗೆ ಒಳಗಾಗುವುದು ಮಹಿಳೆ. ತನ್ನ ದೇಹ, ಆಯ್ಕೆಗಳು ಮತ್ತು ಸಾಮಾಜಿಕ ಸ್ಥಾನ ಮಾನದ ವಿಷಯಕ್ಕೆ ಬಂದಾಗ ಮಹಿಳೆಯನ್ನು ಪುರುಷ ಪ್ರಧಾನ ವ್ಯವಸ್ಥೆ ತನಗೆ ಬೇಕಾದ ಹಾಗೆ ಆಕೆಯನ್ನು ನಿಯಂತ್ರಿಸುವ, ಟೀಕಿಸುವ ಅಧಿಕಾರವನ್ನು ತನಗೆ ತಾನೇ ತೆಗೆದುಕೊಳ್ಳುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯ ಅನುಸಾರ ಮಹಿಳೆ ಮದ್ಯ ಸೇವಿಸುತ್ತಾಳೆ ಎನ್ನುವುದು ಸಮಾಜದ ದೃಷ್ಟಿಯಲ್ಲಿ ಒಂದು ನೈತಿಕ ಅಧ:ಪತನದ ಸ್ಥಿತಿ. ಇಂತಹ ಚಿತ್ರಗಳ ಪ್ರಸಾರದ ಮೂಲಕ ಹೆಣ್ಣಿಗೆ ಸಭ್ಯತೆ, ಶೀಲ ಮುಂತಾದ ಮಾನದಂಡಗಳನ್ನು ಹೇರಲಾಗುತ್ತದೆ. ಟೀಕೆ ಗುರಿಪಡಿಸುವುದರ ಮೂಲಕ ಸಮಾಜ ಏನೆನ್ನುತ್ತದೆ ಎಂಬ ಭಯವಿಲ್ಲದೇ ಗಂಡು ತನಗೆ ಇಷ್ಟ ಬಂದ ರೀತಿಯಲ್ಲಿ ವರ್ತಿಸಬಹುದು, ಆದರೆ ಹೆಣ್ಣು ಮಾತ್ರ ಯಾರು ಏನೆನ್ನುತ್ತಾರೆ, ತಾನು ಹೇಗಿರಬೇಕು, ಹೇಗಿರಬಾರದು ಎನ್ನುವುದನ್ನು ಪುರುಷ ಪ್ರಧಾನ ವ್ಯವಸ್ಥೆಯ ನಿಯಮಗಳಿಗೆ ತಕ್ಕಂತೆ ಬದುಕಬೇಕಾಗುತ್ತದೆ. 

ಗಂಡು ಹೆಣ್ಣು ಜೊತೆಯಾಗಿ ಭಾಗವಹಿಸಿದ್ದರೂ ಇಲ್ಲಿ ಸಾರ್ವಜನಿಕವಾಗಿ ಅವಮಾನಕ್ಕೆ, ಮುಜುಗರಕ್ಕೊಳಗಾಗಿದ್ದು ಮಹಿಳೆ. ಆಕೆಯ ಒಪ್ಪಿಗೆ ಇಲ್ಲದೆ ಆಕೆಯನ್ನು ಚಿತ್ರೀಕರಿಸಿದ್ದು, ಅದು ಎಲ್ಲೆಂದರಲ್ಲಿ ಹರಿದಾಡಿದ್ದು, ಸಾರ್ವಜನಿಕವಾಗಿ ಬಿತ್ತರಿಸಿದ್ದು ಆಕೆಗೆ ನೀಡುವ ಮಾನಸಿಕ ಒತ್ತಡದ ಜೊತೆಗೆ ಸಮಾಜದಲ್ಲಿ ಆಕೆಯ ಘನತೆಗೂ ಧಕ್ಕೆ ಉಂಟು ಮಾಡುತ್ತದೆ. ಮದ್ಯಪಾನದಿಂದಾಗಿ ಮಹಿಳೆಯನ್ನು ಚಾರಿತ್ರ್ಯಹೀನರೆಂದು ಹಣೆಪಟ್ಟಿ ಕಟ್ಟಿ ಸಮಾಜದ ಎದುರು ನಿಲ್ಲಿಸಿದಾಗ ಆಳಿಗೊಂದು ಕಲ್ಲು ಎನ್ನುವಂತೆ ಮಹಿಳೆಯ ಮೇಲಾಗುವ ಎಲ್ಲಾ ಅಪರಾಧ ದೌರ್ಜನ್ಯಗಳಿಗೂ ಮಹಿಳೆಯೇ ಕಾರಣ ಎನ್ನುವಂತೆ ಆಕೆಯನ್ನು ದೋಷಿಸಲಾಗುತ್ತದೆ. ಮದ್ಯಪಾನ ಮಾಡುವ ಮಹಿಳೆಗೆ ಸ್ವೇಚ್ಛಾಚಾರಿ, ಬೋಲ್ಡ್‌, ಎಲ್ಲದಕ್ಕೂ ಸಿದ್ಧವಿರುವವಳು, ಕರೆದರೆ ಬರುವವಳು ಹೀಗೆ ನಾನಾ ರೀತಿಯ ಹೆಸರಿಟ್ಟು ನೈತಿಕತೆಯ ಹೆಸರಲ್ಲಿ ಆಕೆಯ ಮೇಲೆ ಇನ್ನಷ್ಟು ದೌರ್ಜನ್ಯ ನಡೆಸಲಾಗುತ್ತದೆ. 

ಗಂಡು ಕಣ್ಣಿಗೇ ಬೀಳಲಿಲ್ಲವೆನ್ನುವ ರೀತಿಯಲ್ಲಿ ಹೆಣ್ಣಿನ ಮೇಲೆ ಮಾಧ್ಯಮದವರ ದೌರ್ಜನ್ಯ ಒಂದು ಕಡೆಯಾದರೆ ಸಮುದಾಯದ ಉಳಿವಿಗಾಗಿ ಹೆಣ್ಣು ಮಕ್ಕಳು ಹದಿನೆಂಟಕ್ಕೇ ಮದುವೆಯಾಗಿ ಮೂರಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೆರಬೇಕೆನ್ನುವ ಕರೆ ಇನ್ನೊಂದು ಕಡೆ. 

ಹೈಟೆಕ್‌ ಆದರೂ ಮಾಡರ್ನ್ ಆದರೂ, ಧಾರ್ಮಿಕವೇ ಆದರೂ ಇಲ್ಲಿ ಟಾರ್ಗೆಟ್‌ ಆಗುವವರು ಹೆಣ್ಣುಮಕ್ಕಳು. ಹೆಣ್ಣುಮಕ್ಕಳ ಮೇಲೆ ಪ್ರತಿ ದಿನ ಪ್ರತಿ ಗಂಟೆಗೆ ನೂರಾರು ದೌರ್ಜನ್ಯ, ಅಪರಾಧಗಳು ನಡೆಯುತ್ತಿದ್ದರೂ ಹೆಣ್ಣು ಮಕ್ಕಳ ಸಬಲೀಕರಣಕ್ಕಿಂದ ಹೆಚ್ಚಾಗಿ ಹೆಣ್ಣು ಮಕ್ಕಳ ಮೇಲೆ ಇನ್ನಷ್ಟು ಒತ್ತಡ ಹೇರುತ್ತಿರುವುದೇ ಇಷ್ಟು ವರ್ಷಗಳಾದರೂ ಪುರುಷ ಪ್ರಧಾನ ವ್ಯವಸ್ಥೆಯ ಹೇರಿಕೆಗಳಿಂದ ಬಿಡಿಸಿಕೊಳ್ಳಲಾಗಿಲ್ಲವೆನ್ನುವುದಕ್ಕೆ ಸಾಕ್ಷಿ. ಹೆಣ್ಣುಮಕ್ಕಳನ್ನು ಓದಿಸಬೇಕು, ಅವರ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕೆ ಬೆಂಬಲವಾಗಿ ನಿಲ್ಲಬೇಕು ಅಥವಾ ಅವರ ಸುರಕ್ಷತೆ, ಆರೋಗ್ಯಕ್ಕೆ ಸಂಬಂಧಿಸಿದ ಕುರಿತಾಗಿಯೋ, ವಿದ್ಯಾಭ್ಯಾಸದ ಕಡೆಗೋ ಪ್ರೋತ್ಸಾಹ ನೀಡುವ ಕುರಿತು ಮಾತೇ ಆಡದೇ ಹೆಣ್ಣು ಮಕ್ಕಳು ಹದಿನೆಂಟಕ್ಕೇ ಮದುವೆ ಆಗಬೇಕು, ಮೂರಕ್ಕಿಂತ ಹೆಚ್ಚು ಮಕ್ಕಳಾದರೆ ನಾವು ನೋಡಿಕೊಳ್ಳುತ್ತೇವೆ ಎನ್ನುವುದು ಎಷ್ಟು ಅಸೂಕ್ಷ್ಮದ ಹೇಳಿಕೆ. 

ಮದುವೆ, ತಾಯ್ತನ ಎನ್ನುವುದು ಹುಡುಗ ಹುಡುಗಿಯ ವೈಯಕ್ತಿಕ ಆಯ್ಕೆ. ಅದರಲ್ಲೂ ತಾಯ್ತನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮಹಿಳೆಗೆ ಸ್ವಲ್ಪ ಹೆಚ್ಚಿನ ಅಧಿಕಾರವಿದೆ. ಆಕೆ ದೈಹಿಕವಾಗಿ, ಮಾನಸಿಕವಾಗಿ ಸಿದ್ಧಳಾಗದೇ ಇದ್ದಲ್ಲಿ ಅಷ್ಟು ದೊಡ್ಡ ಜವಾಬ್ದಾರಿಯನ್ನು ಹೊರಲು ಸಾಧ್ಯವಿಲ್ಲ. ಆಕೆಯ ಸ್ವಂತ ಆಸೆ, ಆಕಾಂಕ್ಷೆ, ಕನಸು, ಗುರಿಗಳನ್ನು ಮರೆತು ಹದಿನೆಂಟಕ್ಕೆ ಮದುವೆಯಾಗಿ ಮಕ್ಕಳನ್ನು ಹೆರುವ ಯಂತ್ರವಾಗಲು ಧಾರ್ಮಿಕ ವ್ಯಕ್ತಿಗಳು ಕರೆನೀಡುವುದು ಮತ್ತು ಅದನ್ನು ಚಾಚೂ ತಪ್ಪದೇ ಪಾಲಿಸುತ್ತೇವೆ ಎನ್ನುವ ಭಕ್ತಾದಿಗಳು, ಎರಡು ತರದ ಮನಸ್ಥಿತಿಯೂ ಅಪಾಯಕಾರಿ. ಮಹಿಳೆಯರ ಆರೋಗ್ಯದ ಕುರಿತು, ಸ್ವಚ್ಛತೆ, ಸುರಕ್ಷತೆ ಕುರಿತಾಗಿ ಎಷ್ಟೆಲ್ಲ ಸಮಸ್ಯೆಗಳಿದ್ದರೂ ಧಾರ್ಮಿಕ ಗುರುಗಳಿಗೆ, ಸಮುದಾಯದ ಉಳಿವಿಗೆ ಶ್ರಮಿಸುತ್ತೇವೆ ಎನ್ನುವವರಿಗೆ ಮಹಿಳೆ ಕೇವಲ ಸಮುದಾಯದ ಜನಸಂಖ್ಯೆ ಹೆಚ್ಚಿಸುವ ಯಂತ್ರವಷ್ಟೇ. 

ಮೊನ್ನೆ ಮೊನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ಮೂವರೂ ಹೆಣ್ಣು ಮಕ್ಕಳಾದ ಕಾರಣಕ್ಕೆ ಹೆಂಡತಿಗೆ ಬೆಂಕಿ ಹಚ್ಚಿ ಕೊಂದ ಉದಾಹರಣೆಯಿದೆ. ಈ ಯಾವ ಕ್ರಿಮಿಗಳನ್ನೂ, ಕೊಲೆಗಾರರನ್ನೂ ಮಾಧ್ಯಮದವರು ಈ ಮಟ್ಟಿಗೆ ಟೀಕಿಸುವುದಿಲ್ಲ.ಈ ಸುದ್ದಿಗಳು ಎಲ್ಲೋ ಮೂಲೆಯಲ್ಲಿ ಉಳಿದುಹೋಗುತ್ತವೆ. ಆದರೆ ಯಾರೋ ಹೆಣ್ಣುಮಕ್ಕಳು ಕುಡಿದು ತೂರಾಡಿದ್ದು ರಾಷ್ಟ್ರೀಯ ಮನ್ನಣೆ ಕೊಡಬೇಕಾದ ರೀತಿಯಲ್ಲಿ ಸುದ್ದಿಯಾಗುತ್ತದೆ. 

ವರ್ಷ ಹೊಸದಾದರೂ, ಹಳೆಯದಾದರೂ ಮಹಿಳೆಯನ್ನು ಪುರುಷ ಪ್ರಧಾನ ವ್ಯವಸ್ಥೆ ನಡೆಸಿಕೊಳ್ಳುವ ರೀತಿ ಬದಲಾಗುವುದಿಲ್ಲ ಇದಕ್ಕೆ ಸೂಕ್ಷ್ಮ, ಸಮಾನ ಮನಸ್ಸಿನವರು ಸಂಕಲ್ಪ ಮಾಡಬೇಕಿದೆ. ಜವಾಬ್ದಾರಿಯುತ ಮಾಧ್ಯಮಗಳು, ಜನ ಜಾಗೃತಿ, ಕಾನೂನಿನ ಮೂಲಕ ರಕ್ಷಣೆ, ಸೂಕ್ತ ಕ್ರಮಗಳು ಎಲ್ಲವೂ ಅಗತ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ನಮಗೆ ಸಮತಾ ಸಮಾಜದ ಅಗತ್ಯವಿದೆ, ನಾವು ಒಬ್ಬರಿಗೊಬ್ಬರು ತುಳಿದು ಬದುಕುವ ಅಗತ್ಯವಿಲ್ಲ ಎನ್ನುವುದನ್ನು ಮತ್ತೆ ಮತ್ತೆ ತಿಳಿಸಬೇಕಿದೆ. 

Related Articles

ಇತ್ತೀಚಿನ ಸುದ್ದಿಗಳು

You cannot copy content of this page