Friday, May 16, 2025

ಸತ್ಯ | ನ್ಯಾಯ |ಧರ್ಮ

ಅರ್ಷದ್ ನದೀಮ್ ನನ್ನ ಆತ್ಮೀಯ ಸ್ನೇಹಿತನಲ್ಲ: ನೀರಜ್ ಚೋಪ್ರಾ

ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಜೊತೆ ಆತ್ಮೀಯ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾವಿಬ್ಬರೂ ಎಂದಿಗೂ ಆಪ್ತ ಸ್ನೇಹಿತರಾಗಿರಲಿಲ್ಲ ಎಂದು ಅವರು ಹೇಳಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನೀರಜ್ ಚೋಪ್ರಾ (ಎನ್‌ಸಿ) ಕ್ಲಾಸಿಕ್ ಜಾವೆಲಿನ್ ಟೂರ್ನಮೆಂಟನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಈ ಪಂದ್ಯಾವಳಿಗೆ ಅರ್ಷದ್ ನದೀಮ್ ಅವರನ್ನು ಆಹ್ವಾನಿಸಿದ್ದರ ಬಗ್ಗೆ ವಿವಾದವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಎರಡು ದಿನಗಳ ಮೊದಲು ನದೀಮ್‌ಗೆ ಆಹ್ವಾನ ಕಳುಹಿಸಿದ್ದೆ ಎಂದು ಚೋಪ್ರಾ ಈಗಾಗಲೇ ವಿವರಿಸಿದ್ದಾರೆ, ಆದರೆ ಪ್ರಸ್ತುತ ಸಂದರ್ಭಗಳಲ್ಲಿ ಅವರು ಸ್ಪರ್ಧಿಸುವ ಯಾವುದೇ ಅವಕಾಶವಿಲ್ಲ. ಮೇ 16 ರಂದು ದೋಹಾ ಡೈಮಂಡ್ ಲೀಗ್ ಆರಂಭವಾಗುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ನೀರಜ್ ಮಾತನಾಡುತ್ತಿದ್ದರು. ಅರ್ಷದ್ ಜೊತೆಗಿನ ಸ್ನೇಹದ ಬಗ್ಗೆ ವರದಿಗಾರರು ಚೋಪ್ರಾ ಅವರನ್ನು ಕೇಳಿದಾಗ, ಅವರು ಈ ರೀತಿ ಉತ್ತರಿಸಿದರು.

“ನದೀಮ್ ಜೊತೆ ನನಗೆ ಯಾವುದೇ ರೀತಿಯ ಆತ್ಮೀಯವಾದ ಸಂಬಂಧವಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾವು ಎಂದೂ ಆತ್ಮೀಯ ಸ್ನೇಹಿತರಾಗಿರಲಿಲ್ಲ. ಹಾಗೆಂದು ನಾವು ಮಾತನಾಡುವುದಿಲ್ಲ ಎಂದಲ್ಲ. ಕ್ರೀಡಾಪಟುಗಳಾಗಿ ಮಾತನಾಡುತ್ತೇವೆ. ನನಗೆ ಪ್ರಪಂಚದಾದ್ಯಂತದ ಅಥ್ಲೆಟಿಕ್ಸ್ ಸಮುದಾಯದಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ.

ಯಾರಾದರೂ ನನ್ನೊಂದಿಗೆ ಸೌಜನ್ಯದಿಂದ ಮಾತನಾಡಿದರೆ, ನಾನು ಅವರೊಂದಿಗೆ ಗೌರವದಿಂದ ಮಾತನಾಡಲು ಇಷ್ಟಪಡುತ್ತೇನೆ. ಈ ರೀತಿ ಸ್ನೇಹಪರವಾಗಿರುವುದು ಎಲ್ಲಾ ಜಾವೆಲಿನ್ ಎಸೆತಗಾರರಿಗೆ ಒಳ್ಳೆಯದು. ಏಕೆಂದರೆ ನಾವು ಸಂಖ್ಯೆಯಲ್ಲಿ ಬಹಳ ಕಡಿಮೆ ಇದ್ದೇವೆ. ಪ್ರತಿಯೊಬ್ಬರೂ ತಮ್ಮ ದೇಶಕ್ಕಾಗಿ ಸ್ಪರ್ಧಿಸಿ ಶ್ರೇಷ್ಠತೆಯನ್ನು ಸಾಧಿಸಲು ಬಯಸುತ್ತಾರೆ” ಎಂದು ನೀರಜ್ ಹೇಳಿದರು.

ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅರ್ಷದ್ ನದೀಮ್ ಚಿನ್ನ ಗೆದ್ದರೆ, ನೀರಜ್ ಬೆಳ್ಳಿ ಗೆದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page