Saturday, June 15, 2024

ಸತ್ಯ | ನ್ಯಾಯ |ಧರ್ಮ

ಭಾರತ ಸಂವಿಧಾನವೆಂಬ ಶ್ರೀ ಸಾಮಾನ್ಯನ ಜೀವಂತ ಗ್ರಂಥ!

ಭಾರತದ ಸಂವಿಧಾನದ ಬಗ್ಗೆ ಬೇಕಾಬಿಟ್ಟಿ ಮಾತಾಡುವ ಜನರ ಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಸಂವಿಧಾನದ ಆಶೋತ್ತರಗಳನ್ನು ಯುವ ಸಮುದಾಯ ಹೆಚ್ಚು ಹೆಚ್ಚಾಗಿ ಅಂತರ್ಗತಗೊಳಿಸಿ ಕೊಳ್ಳಬೇಕಾದ ತುರ್ತು ದೇಶದ ಮುಂದಿದೆ. ಈ ಸಂದರ್ಭದಲ್ಲಿ ತಿಪಟೂರಿನ ಯುವಕ ವಿನಯ್ ಎಸ್ ಕೆ  ಅವರು ಸಂವಿಧಾನದ ಉದಾತ್ತ ಆದರ್ಶಗಳ ಮೇಲೆ ತಮ್ಮ ಲೇಖನಿ ಹರಿಸಿದ್ದಾರೆ

ನವೆಂಬರ್ 26, 1949 ಭಾರತದ ಸಂವಿಧಾನ ಸಭೆಯಲ್ಲಿ ಭಾರತಕ್ಕೆ ಹೊಸದಾದ ಒಂದು ಸಂವಿಧಾನ ಅಂಗೀಕಾರಗೊಂಡ ದಿನ. ಅಂದಿಗೆ ಶತಮಾನಗಳ ಕಾಲ ಇದ್ದ ಧರ್ಮ ಶಾಸ್ತ್ರಗಳು, ಪುರಾಣಗಳು ಬದಿಗೆ ಸರಿದು ಮಾನವೀಯ ಮುಖದ  ಸಮತೆಯ  ಗ್ರಂಥ ಅಂಗೀಕಾರಗೊಂಡಿತು. ಅ ದಿನವನ್ನು ಸರ್ಕಾರ  ಸಂವಿಧಾನ ದಿನವಾಗಿ ಆಚರಿಸುತ್ತದೆ. ಸಂವಿಧಾನ ಸಭೆಯ 284 ಜನ ಸದಸ್ಯರ  ಸಹಿ ಮೂಲಕ ನಮ್ಮ ಹೆಮ್ಮೆಯ ಸಂವಿಧಾನವು ಅಂಗೀಕಾರಗೊಂಡಿತು. ಆ ಮೂಲಕ ಡಾ ಅಂಬೇಡ್ಕರ್ ನೇತೃತ್ವದ ಸಂವಿಧಾನ ಕರಡು ಸಮಿತಿಯ ಸುದೀರ್ಘ 2 ವರ್ಷ 11ತಿಂಗಳು 18 ದಿನಗಳ ಶ್ರಮ ಫಲಪ್ರದವಾಯಿತು. ಇದುವರೆಗೂ 468 ಅನುಚ್ಛೇದಗಳು,  12 ಪರಿಚ್ಛೇದಗಳು, 105 ತಿದ್ದುಪಡಿಗಳನ್ನು ಕಂಡ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಲಿಖಿತ ಸಂವಿಧಾನ ಎಂಬಾ ಹೆಗ್ಗಳಿಕೆಯನ್ನು ನಮ್ಮ ಭಾರತ ಸಂವಿಧಾನ ಪಡೆದುಕೊಂಡಿತು.

ಸಂವಿಧಾನದ ಪ್ರಾಮುಖ್ಯತೆ

ಭಾರತ ಒಂದು ಒಕ್ಕೂಟ 

ಐತಿಹಾಸಿಕವಾಗಿ 550 ಕ್ಕು ಹೆಚ್ಚು ಪ್ರಾಂತಗಳಾಗಿದ್ದ ಭಾರತ  ಒಂದೇ ಕಾನೂನಿನ ವ್ಯಾಪ್ತಿಗೆ ಒಳಪಟ್ಟಿದ್ದು  ಸಂವಿಧಾನದಿಂದ. ಭಾರತ ರಾಜ್ಯಗಳ ಒಕ್ಕೂಟ ಎಂದು ಸಂವಿಧಾನದ 1ನೇ ಅನುಚ್ಛೇದ ಹೇಳುತ್ತದೆ. ಅಂದಿನಿಂದ ಭಾರತ ಒಕ್ಕೂಟ ಮಾದರಿಯ ದೇಶವಾಯಿತು.

ಸಾಮಾಜಿಕ ಸ್ವಾತಂತ್ರ್ಯ

ಐತಿಹಾಸಿಕವಾಗಿ ಚಾತುರ್ವರ್ಣ ಮನುಧರ್ಮ ಶಾಸ್ತ್ರದಿಂದ  ಭಾರತೀಯರು ಜಾತಿಗಳಾಗಿ ಒಡೆದು ಹೋಗಿ ಹಲವಾರು ಅಸಮಾನತೆಗಳನ್ನು ಅನುಭವಿಸಿ  ವಿದ್ಯೆ, ಆಸ್ತಿ, ಅಧಿಕಾರ, ಇಷ್ಟದ ವೃತ್ತಿ ಇಲ್ಲದೇ ನೋವುಂಡಿದ್ದರು. ಅಂತಹ ಜನರಿಗೆ ಓದುವ ಬರೆಯುವ, ದೇಶದ ಯಾವುದೇ ಭಾಗದಲ್ಲಿ ಸಂಚರಿಸುವ, ಇಷ್ಟಪಟ್ಪ ಬಟ್ಟೆ ತೊಡುವ, ಇಷ್ಟ ಪಟ್ಟ ಆಹಾರ ಸೇವನೆ ಮಾಡುವ ಸ್ವಾತಂತ್ರ್ಯ ಕೊಟ್ಟಿದ್ದು ಸಂವಿಧಾನ. ಈ ಎಲ್ಲದರ ಮೇಲೆ ನಿಷೇಧ ಹೇರಿದ್ದು ಶಾಸ್ತ್ರ ಪುರಾಣಗಳು. ಎಲ್ಲಕ್ಕೂ ಮಿಗಿಲಾಗಿ ಶ್ರೇಣೀಕೃತ ಸಮಾಜದಿಂದ ಸಮತೆಯ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದ್ದೇ ಸಂವಿಧಾನ.

ರಾಜಕೀಯ ಸಮಾನತೆ ಮತ್ತು ಸಮಾನ ಅವಕಾಶ

ರಾಷ್ಟ್ರದ ರಾಷ್ಟ್ರಪತಿಯವರಿಂದ ಹಿಡಿದು ಕಟ್ಟಕಡೆಯ ವ್ಯಕ್ತಿಗೂ ಒಂದೇ ಮತ ಒಂದೇ ಮೌಲ್ಯ. 25 ವರ್ಷ ವಯಸ್ಸಿನ ಮೇಲ್ಪಟ್ಟ ಯಾವುದೇ ಜಾತಿ, ಧರ್ಮ, ಅಂತಸ್ತು, ಲಿಂಗ, ಪ್ರದೇಶ, ತಾರತಮ್ಯವಿಲ್ಲದೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರೆತಿದ್ದು ಸಂವಿಧಾನದಿಂದ. ಬಹುಸಂಖ್ಯಾತ ವರ್ಗಕ್ಕೆ ಐತಿಹಾಸಿಕವಾಗಿ ರಾಜ್ಯ ಆಳುವ ಹಕ್ಕನ್ನು ಧರ್ಮಶಾಸ್ತ್ರಗಳು ನಿಷೇಧ ಹೇರಿದ್ದವು.

ಅವಕಾಶಗಳ ಸಮಾನತೆ

ಐತಿಹಾಸಿಕ ಅನ್ಯಾಯದ ಪರಿಣಾಮವಾಗಿ ಮತ್ತು ಅನ್ಯಾಯಕ್ಕೆ ಒಳಗಾದ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸಲು  ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ದೊರಕಿರುವುದು ಸಂವಿಧಾನದಿಂದ.

ಅಸ್ಪೃಶ್ಯತೆ ನಿಷೇಧ

ಶತಮಾನಗಳ ಕಾಲ  ಅನುಭವಿಸಿದ ಶೋಷಣೆ  ಮತ್ತು ಕ್ರೌರ್ಯದಿಂದ  ಮುಕ್ತಿಗೆ ಕಾನೂನಿನ ಬಲ ತಂದಿದ್ದು ಸಂವಿಧಾನ.

ನಮ್ಮ ದೇಶದ ವೈವಿಧ್ಯತೆಯನ್ನು ಗುರುತಿಸಿದ್ದು ಸಂವಿಧಾನ. ಭಾಷಾವಾರು ರಾಜ್ಯಗಳ  ರಚನೆ, ಯಾವುದೇ ಭಾಷೆಗೆ ದೇವ ಭಾಷೆ,  ರಾಷ್ಟ್ರೀಯ ಭಾಷೆ ಸ್ಥಾನಮಾನ ನೀಡದೆ ಬಹುಮುಖ್ಯವಾಗಿ ಮಾತನಾಡುವ 22 ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಗುರುತಿಸಿರುವುದು ಸಂವಿಧಾನ. ಯಾವುದೇ ನುಡಿ, ಭಾಷೆ, ಸಂಸ್ಕೃತಿ ರಕ್ಷಣೆ ಸಂವಿಧಾನ ನೀಡಿದ ಮೂಲಭೂತ ಹಕ್ಕು.

ಧಾರ್ಮಿಕ ಸ್ವಾತಂತ್ರ್ಯ

ಭಾರತವು ಐತಿಹಾಸಿಕವಾಗಿ ಜಾತ್ಯತೀತ ರಾಷ್ಟ್ರ. ಇಲ್ಲಿ ಹಲವಾರು ಧರ್ಮಗಳಿವೆ. ಹಾಗಾಗಿ ಧರ್ಮ ಧರ್ಮಗಳ ನಡುವೆ ಸಮಾನತೆ, ಧರ್ಮದ ಒಳಗೂ ಸ್ವಾತಂತ್ರ್ಯ ಮತ್ತು ಸಮಾನತೆ ನೀಡುವ ಮೂಲಕ ಧಾರ್ಮಿಕ ದಬ್ಬಾಳಿಕೆಗೆ ಆಸ್ಪದ ನೀಡದೆ ಧಾರ್ಮಿಕ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ.

ಪ್ರಜೆಗಳು ತಮ್ಮ ಹಕ್ಕುಗಳಿಂದ ವಂಚಿತರಾದಾಗ ಸಂವಿಧಾನದ ಪರಿಹಾರದ ಹಕ್ಕುಗಳ ಮೂಲಕ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನಲ್ಲಿ ತಮ್ಮ ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸುವ ಹಕ್ಕನ್ನು ಸಹ ಇದು ನೀಡಿದೆ.

ʼಸಂವಿಧಾನವನ್ನು ರಕ್ಷಿಸಿದರೆ ನಮ್ಮನ್ನು ಸಂವಿಧಾನ ರಕ್ಷಿಸುತ್ತದೆʼ

ಭಾರತದ ಪ್ರಜೆಗಳು ತಮಗೆ ತಾವೇ ಅರ್ಪಿಸಿಕೊಂಡ ಸಂವಿಧಾನ ಇದಾಗಿದೆ. ಅದನ್ನು ಪಾಲಿಸಿ ಎತ್ತಿಹಿಡಿದು ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ನಮಗೆ ಸಂವಿಧಾನ ಕರ್ತೃಗಳು ನೀಡಿದ್ದಾರೆ. ಅದನ್ನು ನಮ್ಮ ಪ್ರತಿ ನಡೆಗಳಲ್ಲಿ ಕಾಪಾಡೋಣ, ಎತ್ತಿಹಿಡಿಯೋಣ. ನಾವು ಸಂವಿಧಾನವನ್ನು ರಕ್ಷಿಸಿದರೆ ನಮ್ಮನ್ನು ಸಂವಿಧಾನ ರಕ್ಷಿಸುತ್ತದೆ ಎಂಬ ದೇವನೂರು ಮಹಾದೇವ ಅವರ ಮಾತುಗಳು ಸದಾ ಮನನೀಯ.

ವಿನಯ್ ಎಸ್ ಕೆ 

ತಿಪಟೂರು

Related Articles

ಇತ್ತೀಚಿನ ಸುದ್ದಿಗಳು