Monday, June 17, 2024

ಸತ್ಯ | ನ್ಯಾಯ |ಧರ್ಮ

ದ್ರಾವಿಡರ ಮೇಲೆ ಆರ್ಯರ ಆಕ್ರಮಣ ಅಂದರೆ ಹೀಗೆ!

‘ಕಟ್ಟಿಂಗರು’ 2000ನೇ ಇಸವಿಯಲ್ಲೂ ಜಾತ್ರೆಯ ದಿನಗಳಲ್ಲಿ ಬಂದಿದ್ದರು. ಆಗ ಜಾತ್ರೆಗೆ ಬಂದಿದ್ದ ‘ತಂತ್ರಿ’ಯವರು ಕಟ್ಟಿಂಗರನ್ನು ಕಂಡವರೇ ದಬಾಯಿಸಿದರು. ಮತ್ತೆಂದೂ ಇತ್ತ ಬರಬಾರದೆಂದು ಅಪ್ಪಣೆ ಇತ್ತರು. ದ್ರಾವಿಡರ ಮೇಲೆ ಆರ್ಯರ ಆಕ್ರಮಣ ಅಂದರೆ ಹೀಗೆ…ಎಂದು ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ  ನೋವಿನಿಂದ ಹೇಳುತ್ತಾರೆ.

ಸರಸ್ವತಿ, ಕಸ್ತೂರಿ ನಾನು ಅ ದಿನ  ಹೊರಟಿದ್ದು ಶಿರ್ವ ಕಟ್ಟಿಂಗೇರಿ ಎಂಬಲ್ಲಿಗೆ. ಉಡುಪಿಯ ಪ್ರೇಮಕ್ಕ ಎಂದಿನಂತೆ ಹೊಟ್ಟೆ ತುಂಬಾ ತಿನ್ನಿಸಿ ನಮ್ಮನ್ನು ಬೀಳ್ಕೊಟ್ಟರು. ಉಡುಪಿ ಪರಿಸರದಲ್ಲಿ ಯಾವ ಮನೆಗೆ ಅಧ್ಯಯನಕ್ಕಾಗಿ ಹೋಗಬಹುದು ಎಂಬ ಬಗ್ಗೆ ನಮಗೆ ಅರಿವು ನೀಡಿದ್ದು ಸರಸ್ವತಿ ಹೆಗ್ಗಡಿತಿ. ಆ ದಿನ ನಾವು ಶಿರ್ವ ಕಟ್ಟಿಂಗೇರ್ ಆಲಡೆಗೇ ನೇರವಾಗಿ ಹೋದೆವು. ದಂತ ಕಥೆಯ ಪ್ರಕಾರ ‘ಬಾಲು ಮಾಡೆದಿ’  ಹೆಸರಿನ ಮಹಿಳೆ ಇಲ್ಲಿಯ ಕಟ್ಟೆಯಲ್ಲಿ ಕುಳಿತು ಪಂಚಾಯಿತಿ ಮಾಡುತ್ತಿದ್ದರಂತೆ. ಬಾಲು ಮಾಡೆದಿಯ ವಂಶಕ್ಕೆ ಸೇರಿದವರು ಸರಸ್ವತಿ. ಬಾಲು ಮಾಡೆದಿಯ ಸುಳಿವು ಸಿಗಬಹುದೇನೋ ಎಂಬ ಕುತೂಹಲ ಆಕೆಗೆ.

“ಈರ್ ಇಂದ್ರಕ್ಯ ಅತ್ತೆ?”

ಈಗ ಇದು ಸಿರಿ ಆಲಡೆಯಾಗಿ ಉಳಿದಿಲ್ಲ. ಬ್ರಹ್ಮಸ್ಥಾನವಾಗಿ ಮಾತ್ರ ಇದೆ. ಆದರೆ ಸಿರಿ ಆಲಡೆಯ ಕುರುಹುಗಳು ಇವೆ. ನಾವು ಬ್ರಹ್ಮಸ್ಥಾನದ ಒಳಗೆ ಹೋದೆವು. ಅಲ್ಲಿ ಮಾಹಿತಿದಾರರು ಇರಲಿಲ್ಲ. ಮಾಹಿತಿದಾರರನ್ನು ಕೇಳಿದಾಗ ಬ್ರಹ್ಮಸ್ಥಾನದ ಹಿಂಭಾಗದ ಮನೆಯನ್ನು ತೋರಿಸಿದರು. ಅಲ್ಲಿ ಬೆರ್ಮೆರ ಉಯ್ಯಾಲೆ ಇದೆಯೆಂದರು. ಬ್ರಹ್ಮಸ್ಥಾನದ ಸೇವಾ ಕರ್ತರು!  ಬೆರ್ಮರ ಉಯ್ಯಾಲೆ ಅಲ್ಲಿದ್ದರೆ ಅದು ಆಲಡೆ ಮನೆ. ನಾವು ಆ ಮನೆಗೆ ಹೋದೆವು. ಒಂದು ಗದ್ದೆಯಾಚೆ ಆ ಮನೆ ಇತ್ತು. ಚಾವಡಿಯ ಮೆಟ್ಟಲ ಬಳಿ ಎದುರಾದ ಹರೆಯದ ಹೆಣ್ಣು ಮಗಳು, “ಈರ್ ಇಂದ್ರಕ್ಯ ಅತ್ತೆ?” (ನೀವು ಇಂದ್ರಕ್ಕ ಅಲ್ಲವೆ?) ಎಂದು ಮುಗುಳ್ನಗುತ್ತಾ ಕೇಳಿದಳು. ನಾನು ಅಚ್ಚರಿಯಿಂದ ಕಣ್ಣಗಲಿಸಿ ನಿಂತೆ.

ನಮ್ಮೂರ ಜಾತಿ ರಹಿತ ಬಾಂಧವ್ಯ ಹೀಗಿತ್ತು…

“ಇದು ನನ್ನ ಗಂಡನ ಮನೆ. ನೀವು ಫೋನ್ ಮಾಡಿ ಬಂದಿದ್ದರೆ ನಾನು ಹೆಬ್ಬಾರ್ (ಇಲ್ಲಿಯ ಈಗಿನ ಆಡಳಿತ ಮೊಕ್ತೇಸರ)  ಅವರನ್ನು ಇವತ್ತು ಇರಿ ಎನ್ನುತ್ತಿದ್ದೆ” ಎಂದ  ಆಕೆ ಅಷ್ಟಕ್ಕೆ ಮುಗಿಸದೆ, ಕೂಡಲೇ ದೂರವಾಣಿ ಕರೆ ಮಾಡಿ ಮುಗಿಸಿ, ʼಈಗ ಬರುತ್ತಾರಂತೆ’ ಎಂದಾಗ ನಾವು ಸಂತೋಷಪಟ್ಟೆವು. ಆಗಲೇ ಶರಬತ್ ಕುಡಿಸಿ ನಮ್ಮ ಅಸರ್ ತಣಿಸಿದರು.

ಲೋಟ ಕವಚಿ ಹಾಕಿಡಿ!

ಈಗ ಆಕೆಯ ಗಂಡನೂ ಬಂದರು. ಅವರಿಗೂ ಈ ಹುಡುಗಿಯ ಕರೆ ಹೋಗಿರಬೇಕು. ಅವರೂ ಸಡಗರಪಟ್ಟರು. ಆಕೆಗೆ ತವರೂರ ಮೋಹ! ಆದರೆ ಆಕೆಯ ಗಂಡ ಮತ್ತು ಅತ್ತೆಯ ಸಡಗರ? ನನಗೆ ನನ್ನ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಬ್ರಾಹ್ಮಣ ಕುಟುಂಬದ ಮನೆಗೆ ಮಲಗಲೆಂದು ಹೋಗಿ ಅವರು ಬೆಳಿಗ್ಗೆ ಚಾಪೆ ಒಗೆದು ಹಾಕಿ ಹೋಗಲು ಹೇಳಿದ್ದು ನೆನಪಾಯಿತು. ನಾನು ಅಂದು ದುರು ದುರು ಎಂದು ಆ ಕತ್ತಲೆಯಲ್ಲಿ ನನ್ನ ಹಳ್ಳಿ ಮನೆಯತ್ತ ಹೆಜ್ಜೆ ಹಾಕಿದ್ದೂ ನೆನಪಾಯಿತು. ನಾವು ಅವರ ಮನೆಯಲ್ಲಿ ಕುಡಿದ ನೀರಿನ ಲೋಟವನ್ನು ‘ಕವಚಿ’ ಹಾಕಿಡಿ ಎಂದುದು ನೆನಪಾಯಿತು. ಮತ್ತೊಂದು ಮನೆಯ ಬ್ರಾಹ್ಮಣರು, ‘ಅವರು ಕವಚಿ ಹಾಕಲು ಹೇಳಿದ್ದಾರ? ಅದು ಅವಲಕ್ಷಣ! ಎಂದುದೂ ನೆನಪಾಯಿತು. ಒಟ್ಟಿನಲ್ಲಿ ಈ ಮನೆಯ ಸತ್ಕಾರ ಹಳೆಯದನ್ನು ನೆನಪಿಸಿತು.

‘ಬೆರ್ಮರೆ ಉಜ್ಜಾಲ್’

ಮನೆಯ ಪ್ರವೇಶ ದ್ವಾರದ ಎಡಭಾಗದಲ್ಲಿ ವಿಶಾಲ ಚಾವಡಿ ಇತ್ತು. ಆ ಚಾವಡಿಯಲ್ಲಿ ಒಂದು ತೂಗು ಉಯ್ಯಾಲೆ ಇತ್ತು. ಉಯ್ಯಾಲೆಯಲ್ಲಿ ಯಾವ ವಸ್ತುವೂ ಇರಲಿಲ್ಲ. ಆದರೆ ಅದನ್ನು ‘ಬೆರ್ಮರೆ ಉಜ್ಜಾಲ್’ ಎಂದು ಪರಿಚಯಿಸಿದರು. ಬೆರ್ಮೆರೆ ನಿರಾಕಾರ ರೂಪ ಇಲ್ಲಿಯೂ ಇತ್ತು. ಸಾಮಾನ್ಯವಾಗಿ ಬ್ರಾಹ್ಮಣರು ಆರಾಧನೆ, ಉಪಾಸನೆಯ ವಿಷಯದಲ್ಲಿ ಆಡಂಬರ ಮಾಡರು.

ಕಟ್ಟಿಂಗೇರಿ…

ಕಟ್ಟಿಂಗೇರಿ ಬ್ರಹ್ಮಸ್ಥಾನ ಸಿರಿ ಆಲಡೆ ಆಗಿದ್ದರೂ ಇತ್ತೀಚೆಗೆ ಸಿರಿ ಆಲಡೆಯ ರೀತಿ ನಡೆಯುತ್ತಿಲ್ಲ ಎಂದಳು ವಾಣಿ.

ಎಲ್ಲಾ ಬ್ರಹ್ಮಸ್ಥಾನಗಳು, ಸಿರಿ ಆಲಡೆಗಳು ಕಾಡಿನ ನಡುವೆಯೇ ಇದ್ದವುಗಳು. ಹಾಗೆಯೇ ಈ ಊರು ಕೂಡಾ ಕಾಡಾಗಿತ್ತು. ಈಗಲೂ ಹೆಚ್ಚಿನ ಭಾಗ ಕಾಡು ಆಗಿ ಉಳಿದಿದೆ. ಇಲ್ಲಿ ರಸ್ತೆ ಅಗಲೀಕರಣ ಆದಾಗ ಈ ಕಾಡಲ್ಲಿ ಬದುಕು ಕಟ್ಟಿರುವ ಜನರ ಅವಶೇಷಗಳು ದೊರಕಿವೆ ಎಂದವರು ಮೊಕ್ತೇಸರರಾದ ಹೆಬ್ಬಾರರು. ಆ ಜನರು ‘ಕಟ್ಟಿಂಗ’ ಎಂಬ ದಲಿತ ಜನಾಂಗದವರು ಎಂದರು. ಇವರ ಜನಾಂಗದ ಗುರಿಕಾರನನ್ನು ‘ಕಟ್ಟಿಂಗ’ ಎಂದು ಗುರುತಿಸುತ್ತಾರೆ ಎಂದು ವಿವರಿಸಿದರು. ಕಟ್ಟಿಂಗರ ಕೇರಿ ‘ಕಟ್ಟಿಂಗೇರಿ’ ಎಂದಾಗಿದೆ. ಕಟ್ಟಿಂಗರ ಆಲಡೆ ಕಟ್ಟಿಂಗೇರಿ ಆಲಡೆ ಎಂದರು. ಕಟ್ಟಿಂಗರ ಬಾಕುಡರು ಎಂದೂ ಗುರುತಿಸುತ್ತಾರಂತೆ.  ಇಲ್ಲಿ ‘ಕಟ್ಟಿಂಗ ಕೆರೆ’ ಕೂಡಾ ಇದೆಯೆಂದರು. ಅದು ಈಗ ದೇವಸ್ಥಾನದ ಕೆರೆ ಆಗಿದೆ. ಈ ದೇವರ ಕೆರೆಯೇ ಆರು ಎಕ್ರೆ ಇದೆಯಂತೆ. ಈ ಕೆರೆಯನ್ನು ಮರು ನಿರ್ಮಾಣ ಮಾಡುವಾಗ ಕಟ್ಟಿಂಗರ ಸಮುದಾಯಕ್ಕೆ ಸೇರಿರಬಹುದಾದ ತಾಮ್ರದ ಪಾಪೆ-ಮುಂತಾದ ಪಳೆಯುಳಿಕೆಗಳು ದೊರೆತಿವೆ ಎಂದವರು ಹೆಬ್ಬಾರರು.

ಕಟ್ಟಿಂಗರ ಮೂಲದ ಬನ

ಅಷ್ಟಮಂಗಳ ಪ್ರಶ್ನೆಯಲ್ಲಿ ಕೂಡಾ ಕಟ್ಟಿಂಗರ ವಿಷಯ ತೇಲಿ ಬಂತು ಎಂದರು ಹೆಬ್ಬಾರರು. “ಓ ಅಲ್ಲಿ ಕಟ್ಟಿಂಗರ ಬನ ಇದೆ” ಕೈಚಾಚಿ ಹೇಳಿದರು. ಅವರು ಕೈನೀಡಿ ತೋರಿಸಿದ ಬನ ಆಕೆಯ ಮನೆಯ ಹಿಂಭಾಗದ ಗದ್ದೆಯ ಹಿಂದೆ ಸ್ವಲ್ಪ ಎತ್ತರದ ಜಾಗದಲ್ಲಿತ್ತು. ಬನದ ಪೊದೆ, ಗಿಡ, ಮರ ಕಡಿಯಲಾಗಿದೆ. ಕೆಲವು ಮುರಕಲ್ಲುಗಳನ್ನು ಸಾಲಾಗಿ ಇಡಲಾಗಿದೆ. ಅಲ್ಲಿಗೇ ನಡೆದೆವು ನಾವು. “ ಇದು ಕಟ್ಟಿಂಗರ ಮೂಲದ ಬನ. ಈ ಕಲ ಅವರ ಮೂಲಸ್ಥಾನವಂತೆ. ಅವರೆಲ್ಲ ಇಲ್ಲಿಗೆ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತಾರೆ. ಇಲ್ಲಿ ಜಾತ್ರೆ ನಡೆಯುವ ದಿನಗಳವು. ಹೀಗೆ ತುಳುನಾಡಿನ ನೆಲಮೂಲದ ಆಚರಣೆಯಂತೆ ಬೇಸಗೆಯಲ್ಲಿ ವರ್ಷಕ್ಕೆ ಒಮ್ಮೆ ಇವರ ಬನದಲ್ಲಿ ತನು ಸೇವೆ ಮುಗಿಸಿ ಮರಳುತ್ತಾರೆ.’

ದ್ರಾವಿಡರನ್ನು ಆರ್ಯರು ದಬ್ಬಿದರು ಎನ್ನುವುದಕ್ಕೆ ಉದಾಹರಣೆ!

ನಮ್ಮ ಜೊತೆ ಇದ್ದ ಸ್ಥಳೀಯರು ಮಾತು ಮುಂದುವರಿಸಿದರು. 2000 ನೇ ಇಸವಿಯಲ್ಲೂ ಜಾತ್ರೆಯ ದಿನಗಳಲ್ಲಿ ಕಟ್ಟಿಂಗರು ಬಂದಿದ್ದರು. ಬಂದವರು ಇಲ್ಲೇ (ಬನದ ನೆಲದಲ್ಲಿ) ಮಾಮೂಲಿಯಂತೆ ತನು ಹುಯ್ಯಲು/ಎರೆಯಲು ಮುಂದಾದರು. ಆಗ ಜಾತ್ರೆಗೆ ಬಂದಿದ್ದ ‘ತಂತ್ರಿ’ಯವರು ಇದ್ದರು. ಆತ ಕಟ್ಟಿಂಗರನ್ನು ಕಂಡವರೇ ದಬಾಯಿಸಿದರು. ಮತ್ತೆಂದೂ ಇತ್ತ ಬರಬಾರದೆಂದು ಅಪ್ಪಣೆ ಇತ್ತರು ಎಂದಳು! ಇದು ದ್ರಾವಿಡರನ್ನು ಆರ್ಯರು ದಬ್ಬಿದರು ಎನ್ನುವುದಕ್ಕೆ ಉದಾಹರಣೆಯಾಗಬಲ್ಲುದು. ಆ ದಬ್ಬಾಳಿಕೆಯ ಮಾಹಿತಿ ಪಡೆದ ನನಗೆ ನನ್ನ ಮನೆಯಿಂದ ನನ್ನನ್ನು ಹೊರಗೆ ತಳ್ಳಿದಂತೆ ನೋವಾಯಿತು. ನಾವು ಇಲ್ಲಿಗೆ ಹೋದುದು 2000ಕ್ಕೆ. ಆಗ ಜಾತ್ರೆ ಮುಗಿದಿತ್ತು.

ದಲಿತರ ಇಂತಹ ಮೂಲಸ್ಥಾನಗಳನ್ನು ನವೀಕರಣದ ಹೆಸರಲ್ಲಿ ಸಂಸ್ಕೃತೀಕರಣಗೊಳಿಸಿ ದಲಿತರನ್ನು ಕೆಳವರ್ಗದವರನ್ನು ಅವರದೇ ಮೂಲತಾನಗಳಿಂದ, ಅವರದೇ ಕುಲದೇವರುಗಳಿಂದ ದೂರೀಕರಿಸುವುದು ತುಳುನಾಡಿನಲ್ಲಿ ನನ್ನ ಅಧ್ಯಯನ ಕಂಡ ವಿಷಯ. ಉತ್ತರ ಭಾರತ ಮೂಲದವರ ಅಷ್ಟಮಂಗಳದವರ ಬೆಂಬಲವೂ ಇಲ್ಲಿ ಕಾಣಬರುತ್ತದೆ. ಆದರೂ ಇದು ಬ್ರಾಹ್ಮಣರ ಅಥವಾ ಅಷ್ಟಮಂಗಳದವರ ತಪ್ಪಲ್ಲ. ತುಳುನಾಡಿನ ಇತರ ಮೇಲ್ವರ್ಗದವರ ಪಾಲು ಇದರಲ್ಲಿ ಹೆಚ್ಚಿದೆ. ಜೀರ್ಣೋದ್ಧಾರಕ್ಕೆ ರೂಪು ರೇಷೆ ಹಾಕಿ ಅಷ್ಟಮಂಗಳದವರನ್ನು ಕರೆಸುವುದು ಹೆಚ್ಚಾಗಿ ಬಂಟರು.

ಈ ಕಟ್ಟಿಂಗರ ಮೂಲತಾನದ ಆಡಳಿತ, ಹೆಬ್ಬಾರ ಕುಟುಂಬಕ್ಕೆ ಹಸ್ತಾಂತರ ಆದುದು ಜೈನ ಕುಟುಂಬದಿಂದ. ಇಲ್ಲಿ ಇದ್ದ ಜೈನ ಕುಟುಂಬದವರು 1957ರಲ್ಲಿ ಆಸ್ತಿ, ಪಟೇಲ ಹುದ್ದೆ ಹಾಗೂ ಈ ಬ್ರಹ್ಮಸ್ತಾನದ ಒಡೆತನವನ್ನು ಈಗಿನ ಹೆಬ್ಬಾರ ಕುಟುಂಬಕ್ಕೆ ದಾನ ನೀಡಿದ್ದರಂತೆ. ಸಾಮಾನ್ಯವಾಗಿ ಜೈನರ ಕುಟುಂಬ ಸಂಸ್ಥೆ ಚಿಕ್ಕದಿದ್ದರೆ ಅಲ್ಲಿ ಮುಂದೆ ಸಂತಾನ ನಶಿಸುತ್ತದೆ. ಅಂತಹ ಸಂದರ್ಭದಲ್ಲಿ ಇಂತಹ ಕ್ಷೇತ್ರಗಳನ್ನು ಬ್ರಾಹ್ಮಣರಿಗೆ ದಾನ ನೀಡಿ ಪೂಜಾ ವ್ಯವಸ್ಥೆಯನ್ನು ಮಾಡಲು ಕರಾರು ಮಾಡಿರುವುದು ನನ್ನ ಅಧ್ಯಯನ ಕಾಲದಲ್ಲಿ ದೊರಕಿದೆ.

ಬ್ರಹ್ಮನಿಗೆ ಮೂರ್ತರೂಪ ಕೊಟ್ಟಿದ್ದು ಹೀಗೆ…

ಇತ್ತೀಚಿನ ವರ್ಷಗಳಲ್ಲಿ ಬ್ರಹ್ಮಸ್ಥಾನ ಎಂದು ಗುರುತಿಸಿಕೊಳ್ಳುವ ಈ ದೇವಸ್ಥಾನದಲ್ಲಿ ಚತುರ್ಮುಖ ಬ್ರಹ್ಮ ಶಿಲ್ಪ ಇದೆ. ತುಳುವರ ನಿರಾಕಾರ ಬ್ರಹ್ಮನಿಗೆ ಮೂರ್ತರೂಪ ಕೊಟ್ಟಿದ್ದು ಹೀಗೆ. ಡಾ. ಗುರುರಾಜ ಭಟ್ಟರ ಸಂಗ್ರಹದಲ್ಲಿ ಈ ಶಿಲ್ಪದ ಚಿತ್ರ ಇದೆ. ನಾಲ್ಕು ತಲೆ ಒಂದು ಕಿರೀಟ, ನಾಲ್ಕು ಕೈಗಳ ಹತ್ತು ಅಡಿ ಎತ್ತರದ ಶಿಲ್ಪ ಎಂದು ಬರೆಯುತ್ತಾರೆ ಅವರು. ಈ ಶಿಲ್ಪದ ಮೇಲ್ಭಾಗದ ಒಂದೊಂದು ಕೈಗಳಲ್ಲಿ ಜಪಸರ ಮತ್ತು ಕುಂಡಲಗಳಿವೆ. ಇದು ಪದ್ಮಾಸನದಲ್ಲಿ ಇದ್ದು ಧ್ಯಾನ ಮುದ್ರೆಯಲ್ಲಿರುವ ವೇದ ಬ್ರಹ್ಮ ಎಂದು ಗುರುರಾಜ ಭಟ್ಟರು ಬರೆಯುತ್ತಾರೆ. ಪದ್ಮಾಸನ ಭಂಗಿಯಲ್ಲಿ ಇರುವ ಈ ಚತುರ್ಮುಖ ಶಿಲ್ಪದ ಪೀಠದಲ್ಲಿ ಕೋಳಿಯ ಚಿತ್ರ ಇದೆ. ಕೋಳಿ (ಮಯೂರ) ಕುಮಾರನ ಸಂಕೇತ. ಸಿರಿಯ ಮಗ ಕುಮಾರನ ಸಂಕೇತವೂ ಕೋಳಿ. ತುಳುವರ ಆರಾಧನಾ ಕ್ಷೇತ್ರಗಳಲ್ಲಿ ಕೋಳಿಯ ಪ್ರತಿಮೆಗಳಿವೆ.

ಸಿರಿಯ ಕುಟುಂಬ ಇಲ್ಲಿಲ್ಲ…

ಸಿರಿಯ ಕುಟುಂಬದ ಅಬ್ಬಗ, ದಾರಗ, ಸೊನ್ನೆ, ಗಿಂಡೆ ಮಾತ್ರ ಇಲ್ಲಿ ಇಲ್ಲ. ಆದರೆ ಕುಮಾರ, ನಂದಿಗೋನ, ರೆಕ್ಕೆಸಿರಿ, ಚವುಂಡಿ -ಹೀಗೆ ಪರಿವಾರ ದೈವಗಳಿವೆ. ಕುಮಾರ ಶಿಲ್ಪ ಇದ್ದರೂ ಕುಮಾರ ದರ್ಶನ ಇಲ್ಲ. ಆದರೆ ಕೆಲವು ಕಾಲದ ಹಿಂದೆ ಬ್ರಹ್ಮದರ್ಶನ ಇತ್ತು ಇತ್ತೀಚೆಗೆ ಅದೂ ನಿಂತಿದೆ. ಇಲ್ಲಿ ಹಿಂದೆ ದೆಯ್ಯೊಲೆ ನಲಿಕೆ ಆಗುತ್ತಿತ್ತು ಎನ್ನುತ್ತಾರೆ. ಹೀಗಾಗಿ ಇಲ್ಲಿ ಅತಿಕಾರೆ ಭತ್ತದ ಪ್ರಾತಿನಿಧಿಕ ಸಿರಿಗಳು ಇದ್ದಿರಬಹುದು. ದೆಯ್ಯೊಲೆ ನಲಿಕೆ ನಡೆಯುತ್ತಿದ್ದ ಗದ್ದೆಯನ್ನು ‘ಜಕ್ಕೆದ ಬಾಕ್ಯಾರ್’ ಎಂದು ಇಂದಿಗೂ ಕರೆಯಲಾಗುತ್ತದೆ. ‘ಜಕ್ಕೆದ ಬಳಿ’ ಅಂದರೆ  ಢಕ್ಕೆ ಬಳಿ. ದೆಯ್ಯೊಲಿ ನಲಿಕೆ ಆಗುತ್ತಿದ್ದಲ್ಲಿ ಬೀಜದ ಜೊತೆ ಬಂದಿರುವ (ಕುಂಭ) ಕಡ್ಯ ಸಿರಿಯ ಜಕ್ಕೆದ ನಲ್ಕೆ, ದೆಯ್ಯೊಲೆ ನಲ್ಕೆ ನಡೆಯುತ್ತಿದ್ದಿರಬೇಕು.

ಸಂಸ್ಕೃತೀಕರಣ ಮತ್ತು ಮೂಲ ಅಸ್ಮಿತೆ…

ಸಾಮಾನ್ಯವಾಗಿ ಪಾಳೆಯಗಾರರ ಆಲಡೆ ಕ್ಷೇತ್ರಗಳಲ್ಲಿ ಅಂಬೊಡಿ ನಡೆಯುವ ಗದ್ದೆ, ಅಂಕದ ಗದ್ದೆ ಇತ್ಯಾದಿ ಇರುತ್ತವೆ. ಇಲ್ಲಿಯೂ ಇತ್ತು. ಈಗ ಇಲ್ಲಿಯ ಅಂಕ ಅಂಬೊಡಿಯ ಆಚರಣೆ ನಿಂತಿದೆ. ಆದರೂ ‘ಅಂಕದ ಗದ್ದೆ, ಅಂಬೊಡಿ ಗದ್ದೆ, ಚೆಂಡಿನ ಗದ್ದೆ’ ಎಂಬ ಹೆಸರುಗಳು ನೆಲಮೂಲದ ಕ್ಷೇತ್ರವೊಂದು ವೈದಿಕೀಕರಣ ಗೊಂಡುದಕ್ಕೆ ಸಾಕ್ಷಿ ನೀಡುತ್ತವೆ. ಹೀಗೆ ತುಳು ಜನಪದರ ಉಪಾಸನಾ ಕಲಗಳು ಸಂಸ್ಕೃತೀಕರಣ ಗೊಂಡರೂ ತಮ್ಮ ಮೂಲ ಅಸ್ಮಿತೆಯ ಚಿತ್ರಣವನ್ನು ಕಳೆದುಕೊಳ್ಳುವುದಿಲ್ಲ.

ಸರಸ್ವತಿ ಹೆಗ್ಗಡಿತಿ ಇಲ್ಲಿಗೆ  ಬಂದುದರ ಕಾರಣ ನಾನು ಆರಂಭದಲ್ಲೇ ಹೇಳಿರುವೆನು.  ಅವರ ನಂಬಿಕೆಯ ‘ಬಾಲು ಮಾಡೆದಿ’ ಕಟ್ಟೆಯನ್ನು ವಾಣಿ ತೋರಿಸಿದಾಗ ಸರಸ್ವತಿಯ ಸಂತಸಕ್ಕೆ ಪಾರವೇ ಇಲ್ಲ. ಆಲಡೆಯ ಜಾತ್ರೆಯ ದಿನಗಳಲ್ಲಿ ಆ ಕಟ್ಟೆಯಲ್ಲಿ ದೀಪ ಹೊತ್ತಿಸಲಾಗುತ್ತದೆಯೆಂದರು. ಐತಿಹ್ಯ ತಲೆಮಾರಿನಿಂದ ತಲೆಮಾರಿಗೆ ಹೀಗೇ ಮುಂದುವರಿಯುತ್ತದೆ.

ಡಾ. ಇಂದಿರಾ ಹೆಗ್ಗಡೆ

ಕನ್ನಡ ಮತ್ತು ತುಳು ಭಾಷಾ ಸಾಹಿತಿ, ಉಪನ್ಯಾಸ, ಸಂಶೋಧನೆ ಹಾಗೂ ಸಮಾಜ ಸೇವೆಗಳಲ್ಲಿ ಸದಾ ಸಕ್ರಿಯರು.

Related Articles

ಇತ್ತೀಚಿನ ಸುದ್ದಿಗಳು