Monday, July 28, 2025

ಸತ್ಯ | ನ್ಯಾಯ |ಧರ್ಮ

ಧಾರವಾಡದಿಂದ ಹೊರಟ ಕರವೇ ಸೈನ್ಯ, ಎಲ್ಲರ ಕಣ್ಣು ಹಿರೇಬಾಗೇವಾಡಿಯತ್ತ

ಧಾರವಾಡ: ಬೆಳಗಾವಿಯಲ್ಲಿ ಕನ್ನಡಿಗರು-ಮರಾಠಿಗರ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಎಂಇಎಸ್ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ, ಮಹಾರಾಷ್ಟ್ರ ರಾಜಕಾರಣಿಗಳ ಪ್ರಚೋದನೆಗಳನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ `ಬೆಳಗಾವಿಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಸಾವಿರಾರು ಕಾರ್ಯಕರ್ತರು ಧಾರವಾಡದಿಂದ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದಾರೆ.

ನಿನ್ನೆ ರಾತ್ರಿ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಕರವೇ ಕಾರ್ಯಕರ್ತರು ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಧಾರವಾಡದಲ್ಲಿ ಸಮಾವೇಶಗೊಂಡಿದ್ದರು. ನೂರಾರು ವಾಹನಗಳ ಮೂಲಕ ಧಾರವಾಡ ತಲುಪಿರುವ ಕಾರ್ಯಕರ್ತರು ಈಗ ಬೆಳಗಾವಿಯೆಡೆಗೆ ಸಾಗುತ್ತಿದ್ದು, ಹಿರೇಬಾಗೇವಾಡಿ ಟೋಲ್ ಬಳಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

ಕರವೇ ಕಾರ್ಯಕರ್ತರನ್ನು ಹಿರೇಬಾಗೇವಾಡಿ ಟೋಲ್ ಬಳಿ ತಡೆಯಲು ಸಾವಿರಾರು ಪೊಲೀಸರು ನೆರೆದಿದ್ದು, ಎಷ್ಟೇ ಪ್ರತಿರೋಧ ಬಂದರೂ ಬೆಳಗಾವಿ ಪ್ರವೇಶಿಸುತ್ತೇವೆ ಎಂಬ ಹುಮ್ಮಸ್ಸಿನಲ್ಲಿ ಕರವೇ ಕಾರ್ಯಕರ್ತರು ಇದ್ದಾರೆ.

ಬೆಳಗಾವಿಗೆ ಮಹಾರಾಷ್ಟ್ರ ಸರ್ಕಾರದ ಇಬ್ಬರು ಸಚಿವರು ಭೇಟಿ ನೀಡುವ ಕಾರ್ಯಕ್ರಮ ಘೋಷಣೆಯಾದಾಗಿನಿಂದ ಅಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗು ಉಪಮುಖ್ಯಮಂತ್ರಿ  ನಿನ್ನೆ ಜಂಟಿ ಹೇಳಿಕೆ ನೀಡಿ, ಉಭಯ ಸಚಿವರ ಕಾರ್ಯಕ್ರಮ ರದ್ದುಪಡಿಸಿರುವುದಾಗಿ ಹೇಳಿದ್ದರೂ, ಈ ಹೇಳಿಕೆಯನ್ನು ನಂಬಲು ಕನ್ನಡ ಪರ ಹೋರಾಟಗಾರರು ಸಿದ್ಧರಾಗಿಲ್ಲ. ಈ ನಡುವೆ ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿಗೆ ಅವಕಾಶ ನೀಡುವುದಿಲ್ಲ ಎಂದು ಬೆಳಗಾವಿ ಜಿಲ್ಲಾಧಿಕಾರಿ ಘೋಷಿಸಿದ್ದು, ಒಂದು ವೇಳೆ ಬೆಳಗಾವಿಗೆ ಬಂದಲ್ಲಿ ಅವರನ್ನು ಬಂಧಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಬೆಳಗಾವಿಯಲ್ಲಿ ಮಹಾರಾಷ್ಟ್ರದ ರಾಜಕಾರಣಿಗಳು ಬಂದು ಪ್ರಚೋದನಾಕಾರಿ ಭಾಷಣಗಳನ್ನು ಮಾಡಿ ಸದಾ ಒಂದಿಲ್ಲೊಂದು ಗಲಭೆ, ಸಂಘರ್ಷಕ್ಕೆ ಕಾರಣವಾಗುತ್ತಾ ಬಂದಿದ್ದಾರೆ. ಮಹಾರಾಷ್ಟ್ರದ ಶಿವಸೇನೆ, ಎನ್ ಸಿಪಿ ಪಕ್ಷಗಳು ಬೆಳಗಾವಿಯಲ್ಲಿ ಕಾರ್ಯಚಟುವಟಿಕೆ ನಡೆಸುತ್ತ ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಎಲ್ಲ ಬಗೆಯಲ್ಲೂ ಸಹಾಯ ನೀಡುತ್ತ ಬಂದಿವೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡೂ ಕಡೆ ತಮ್ಮದೇ ಪಕ್ಷ ನಡೆಸುತ್ತಿರುವ ಸರ್ಕಾರವಿರುವುದರಿಂದ ಬೆಳಗಾವಿ  ವಿಷಯದಲ್ಲಿ ಭಾರತೀಯ ಜನತಾ ಪಕ್ಷ ಉಭಯಸಂಕಟಕ್ಕೆ ಸಿಲುಕಿದ್ದು, ಸ್ಪಷ್ಟ ನಿಲುವು ತಳೆಯಲು ಹಿಂಜರಿಯುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page