Monday, July 28, 2025

ಸತ್ಯ | ನ್ಯಾಯ |ಧರ್ಮ

ಏಷ್ಯಾ ಕಪ್‌: ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ʼಸೂಪರ್‌ 4ʼ ಹಂತಕ್ಕೆ ಲಗ್ಗೆ ಇಟ್ಟ ಭಾರತ

ದುಬೈ: ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ರ್ಟೂನಿಯಲ್ಲಿ ಬುಧವಾರ ಹಾಂಗ್‌ಕಾಂಗ್‌ ವಿರುದ್ಧ 40 ರನ್‌ಗಳ ಅಂತರದಲ್ಲಿ ಗೆದ್ದ ಟೀಮ್‌ ಇಂಡಿಯಾ ʼಸೂಪರ್‌ ಫೋರ್‌ʼ ಹಂತಕ್ಕೆ ತಲುಪಿದೆ.

ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದ ಹಾಂಗ್‌ಕಾಂಗ್‌ ಬೌಲಿಂಗ್‌ ಆಯ್ದುಕೊಂಡಿತು. ಅದರಂತೆ ಇನ್ನಿಂಗ್ಸ್‌ ಆರಂಭಿಸಿದ ಭಾರತ ತಂಡ 20 ಓವರ್‌ ಗಳಲ್ಲಿ 2 ವಿಕೆಟ್‌ಗಳಿಗೆ 192 ರನ್‌ ಗಳಿಸಿತು.

ಭಾರತ ನೀಡಿದ 193 ರನ್‌ ಗಳ ಗುರಿ ಬೆನ್ನಟ್ಟಿದ ಹಾಂಗ್‌ಕಾಂಗ್ ಐದು ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಗೆ ಶಕ್ತವಾಯಿತು. ಭಾರತದ ಪರ ಔಟಾಗದೆ ವಿರಾಟ್‌ ಕೋಹ್ಲಿ (59) ಮತ್ತು ಸೂರ್ಯಕುಮಾರ್‌ ಯಾದವ್‌ ಗಳಿಸಿದ ಅರ್ಧ ಶತಕದ ಬಲದಿಂದ (68) ತಂಡದ ಗೆಲುವಿನ ರೂವಾರಿಯಾದರು.

ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡದ ನಾಯಕ ರೋಹಿತ್‌ ಶರ್ಮ 21 ಮತ್ತು ಉಪನಾಯಕ ರಾಹುಲ್‌ 36 ರನ್‌ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಫೀಲ್ಡಿಗಿಳಿದ ವಿರಾಟ್‌ ಕೋಹ್ಲಿ ಹಾಗೂ ರಾಹುಲ್‌ ಜೊತೆಯಾಟದಲ್ಲಿ 56 ರನ್‌ಗಳನ್ನು ಕಲೆಹಾಕಿದರು.

ಬಳಿಕ ಸೂರ್ಯಕುಮಾರ್‌ ಯಾದವ್‌ ಕ್ರೀಸಿಗಿಳಿದು ವಿರಾಟ್‌ ಕೋಹ್ಲಿ ಜೊತೆ ಇನ್ನಿಂಗ್ಸ್‌ ಕಟ್ಟಿದರು. ಇವರಿಬ್ಬರ 98 ರನ್‌ ಗಳ ಜೊತೆಯಾಟ ತಂಡದ ಗೆಲುವಿಗೆ ಕಾರಣವಾಯಿತು.

44 ಬಾಲ್‌ಗಳನ್ನು ಎದುರಿಸಿದ ವಿರಾಟ್‌ ಕೋಹ್ಲಿ ಔಟಾಗದೆ ಒಂದು ಬೌಂಡರಿ ಮೂರು ಸಿಕ್ಸರ್‌ ಸಿಡಿಸುವ ಮೂಲಕ 59 ರನ್‌ ಗಳಿಸಿದರು.

ನಂತರದಲ್ಲಿ ಬಿರುಸಿನ ಆಟವಾಡಿದ ಸೂರ್ಯಕುಮಾರ್‌ ಯಾದವ್‌ ಕೇವಲ 26 ಎಸೆತಗಳಲ್ಲಿ ಆರು ಬೌಂಡರಿ ಆರು ಸಿಕ್ಸರ್‌ ಗಳಿಸಿ 68 ರನ್‌ ಮೂಲಕ ಕ್ರೀಡಾಂಗಣದಲ್ಲಿ ಅಬ್ಬರಿಸಿದರು. ಕೊನೆಯ ಇಪ್ಪತ್ತನೇ ಓವರ್‌ ಒಂದರಲ್ಲೇ ಸೂರ್ಯಕುಮಾರ್‌ ಯಾದವ್‌ ನಾಲ್ಕು ಭರ್ಜರಿ ಸಿಕ್ಸರ್‌ ಸಹಿತ 26 ರನ್‌ ಕೊಳ್ಳೆ ಹೊಡೆದರು.

ಹಾಂಗ್‌ಕಾಂಗ್‌ ಪರ ಬಾಬರ್‌ ಹಯಾತ್‌ ಗರಿಷ್ಠ 41, ಕಿಂಚಿತ್ ಶಾ 30 ರನ್‌ ಗಳಿಸಿದರೆ ಹಾಗೂ ಜೀಶನ್‌ ಅಲಿ 26 ರನ್‌ ಗಳಿಸುವ ಮೂಲಕ ಅಜೇಯರಾದರು.

ಭಾರತದ ಪರ ಭುವನೇಶ್ವರ್‌ ಕುಮಾರ್‌, ಹರ್ಷದೀಪ್‌ ಸಿಂಗ್‌, ರವೀಂದ್ರ ಜಡೇಜಾ, ಅವೇಶ್‌ ಖಾನ್‌ ತಲಾ ಒಂದು ವಿಕೆಟ್‌ ಪಡೆದರು.

2022 ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ ಎರಡು ಪಂದ್ಯದಲ್ಲಿ (ಪಾಕಿಸ್ತಾನ ಮತ್ತು ಹಾಂಗ್‌ಕಾಂಗ್‌ ವಿರುದ್ಧ) ಟೀಮ್‌ ಇಂಡಿಯಾ ಜಯಭೇರಿ ಬಾರಿಸಿ ʼಸೂಪರ್‌ 4ʼ ಹಂತಕ್ಕೆ ಲಗ್ಗೆ ಇಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page