Friday, September 27, 2024

ಸತ್ಯ | ನ್ಯಾಯ |ಧರ್ಮ

ನಮ್ಮನೆಯೋರನ್ನ ಕೇಳಿ ಹೇಳ್ತೀನಿ…

ಮನೆಯಲ್ಲಿ ತಿಂಡಿಗೇನು ಮಾಡಲಿ ಎನ್ನುವುದನ್ನು ಕೇಳುವುದರಿಂದ ಹಿಡಿದು, ಮಕ್ಕಳು, ಸ್ವಂತ ಆರೋಗ್ಯ, ತನ್ನ ಕರಿಯರ್‌, ತಾನು ಹೋಗಬೇಕಾದ ಜಾಗ, ಹಾಕೋ ಬಟ್ಟೆ, ತಮ್ಮ ಜೀವನ ಸಂಗಾತಿ, ಮಾತನಾಡುವ, ಸ್ನೇಹ ಬೆಳೆಸುವ ಜನರು ಪ್ರತಿಯೊಂದು ವಿಷಯವನ್ನೂ ಇತರರ ಅಭಿಪ್ರಾಯವನ್ನು ತಿಳಿದೇ ಹೆಜ್ಜೆಯಿಡಬೇಕಾದ ಅಸಹಾಯಕತೆ ಇಂದಿಗೂ ಇದೆ.


ಮನೆ ನೋಡೋಕೆ ಬಂದವರು, “ಮೇಡಂ ಅಡ್ವಾನ್ಸ್‌, ಬಾಡಿಗೆ ಕಡಿಮೆ ಮಾಡೋಕಾಗತ್ತಾ” ಅಂದ ಕೂಡಲೇ ಮನೆಯಾಕೆ ಹೇಳಿದ್ದು “ನಮ್ಮನೆಯವರ ಜೊತೆ ಮಾತಾಡಿ ನೋಡಿ”.


“ನಿನ್ನ ಪ್ರೊಫೈಲಿಗೆ ಸೂಟಾಗೋ ಒಂದು ಕೆಲಸ ಇದೆ ಕಣೆ, ಅಪ್ಲೈ ಮಾಡ್ತೀಯ, ಲಿಂಕ್‌ ಕಳಿಸ್ತೀನಿ” ಎಂದ ಗೆಳತಿಗೆ ಈಕೆ ಉತ್ತರಿಸಿದ್ದು “ಕಳಿಸು, ಆದ್ರೂ ಒಮ್ಮೆ ಮನೆಲಿ ಮಾತಾಡಿ ನೋಡ್ತೀನಿ ಕಣೆ”


ಮೇಡಂ, ಒಮ್ಮೆ ಸ್ಕ್ಯಾನ್‌ ಮಾಡಿಸ್ಬೇಕಾಗತ್ತೆ, ನೀವು ಬೇಗ ನಿರ್ಧರಿಸಿದ್ರೆ ಒಳ್ಳೆದು. “ಸರಿ, ಮನೆಯವರ ಜೊತೆ ಮಾತಾಡಿ ಹೇಳ್ತೀನಿ”


ಕಛೇರಿಯ ಕಂಪ್ಯೂಟರ್‌ ನಲ್ಲಿ ಗ್ರಾಫಿಕ್‌ ಕಾರ್ಡ್‌ ಚೆಕ್‌ ಮಾಡಹೋದವಳಿಗೆ ಆತ ಹೇಳಿದ್ದು, “ಮೇಡಂ ಈ ಕಡೆ ಬನ್ನಿ, ನಾನು ನೋಡ್ತೀನಿ, ಅದು ಅಷ್ಟು ಸುಲಭವಾಗಿ ಗೊತ್ತಾಗೋದಿಲ್ಲ.”


ಆರೋಗ್ಯ, ಮನೆ, ಊಟ, ಬಟ್ಟೆ, ಬದುಕು ಸಾವು ಎಲ್ಲವೂ ಒಮ್ಮೊಮ್ಮೆ ಇತರರ ನಿರ್ಧಾರದ ಮೇಲೇ ಸಾಗುವ ಅಸಹಾಯಕತೆ ಮಹಿಳೆಯದ್ದು. ಅಮ್ಮಾವ್ರ ಗಂಡ, ಹೆಂಡತಿಯ ಗುಲಾಮ, ಹೋಂ ಮಿನಿಸ್ಟರ್‌ ಮುಂತಾದ ಎಷ್ಟೋ ಹೀಯಾಳಿಕೆಗಳ ನಡುವೆಯೂ ನಿರ್ಧಾರಿತ ಸ್ಥಾನದಲ್ಲಿ ಮಹಿಳೆಯ ಪಾತ್ರ ಕಡಿಮೆಯೇ. ಯಾವುದಾದರೂ ನಿರ್ಧಾರ ತೊಗೊಳೋ ಮೊದಲು ನಮ್ಮನೆಯವಳನ್ನ ಕೇಳ್ತೀನಿ ಅಥವಾ ಒಟ್ಟಿಗೇ ಚರ್ಚಿಸಿ ನಿರ್ಧರಿಸ್ತೀವಿ ಅನ್ನೋ ಉದಾಹರಣೆಗಳು ಬೆರಳೆಣಿಕೆಯಷ್ಟೇ.

ಸಣ್ಣ ವಯಸ್ಸಿಗೆ ಶಾಲೆ ಬಿಟ್ಟು ಮನೆ ಕೆಲಸದಲ್ಲಿ ತೊಡಗಿದವರಿಗೆ ಅಥವಾ ತಮಗಿಂತ ಹೆಚ್ಚು ಓದಿದವರನ್ನು, ವಯಸ್ಸಿನಲ್ಲಿ ಹಿರಿಯರನ್ನು ಮದುವೆಯಾದಾಗ ಇದು ಸಾಮಾನ್ಯ. ನಿನಗೇನೂ ಗೊತ್ತಾಗೋದಿಲ್ಲ, ನೀನು ದಡ್ಡಿ, ನೀನು ಪೆದ್ದಿ, ಸುಮ್ನಿರು ನಾ ಮಾಡ್ತೀನಿ, ನೀನೊಬ್ಖೇ ನಿರ್ಧಾರ ತೊಗೊಳೋ ಶಕ್ತಿ ಇಲ್ಲ ನಿಂಗೆ ಎಲ್ಲವೂ ಶುರುವಾಗೋದು ಹೀಗೆ. ತನ್ನಷ್ಟೇ ಅಥವಾ ತನಗಿಂತ ಹೆಚ್ಚಿನ ಶಿಕ್ಷಣ ಹೊಂದಿದ ಹುಡುಗಿಯರಿಗೂ ಇದು ತಪ್ಪಿದ್ದಲ್ಲ.

ನೀನು ಓದಿರೋದೆಲ್ಲ ಪುಸ್ತಕದ ಬದನೆಕಾಯಿ, ನಿನಗೆ ವ್ಯವಹಾರ ಜ್ಞಾನ ಇಲ್ಲ ಎನ್ನುವುದು ಒಂದು ಆಯಾಮವಾದರೆ ನಾನಿದೀನಲ್ಲ ನಿನಗ್ಯಾಕೆ ಈ ಶ್ರಮ ಅನ್ನೋದು ಇದರ ಇನ್ನೊಂದು ಆಯಾಮ. ಒಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಎಲ್ಲ ಸ್ಥಾನಗಳಿಂದ ಮಹಿಳೆಯನ್ನು ದೂರವೇ ಇರಿಸಲಾಗುತ್ತದೆ ಎನ್ನುವುದು ವಾಸ್ತವ.

ಇದು ಕೇವಲ ಓದದ ಅಥವಾ ಅನಕ್ಷರಸ್ಥ ಮಹಿಳೆಯರಿಗಾಗುವ ಅನುಭವ ಮಾತ್ರ ಅಲ್ಲ. ಉತ್ತಮ ಶಿಕ್ಷಣ ಪಡೆದ, ಮಕ್ಕಳನ್ನು ಬೆಳೆಸಿಯೋ, ಸಂಸ್ಥೆಗಳನ್ನು ಮುನ್ನಡೆಸಿಯೋ, ಒಂದಿಷ್ಟು ಮಕ್ಕಳಿಗೆ ಪಾಠಮಾಡಿಯಾದರೂ ತಮ್ಮ ಅನುಭವದ ವಿಸ್ತಾರವನ್ನು ಹೆಚ್ಚಿಸಿಕೊಂಡಿರುವ ಹಿರಿಯ ಮಹಿಳೆಯರಿಗೂ ಅನುಭವಕ್ಕೆ ಬರುವುದೇನೇ. ನಿನಗೇನೂ ಗೊತ್ತಾಗೋದಿಲ್ಲ, ಅಥವಾ ನೀನು ತೆಗೆದುಕೊಂಡ ನಿರ್ಧಾರ ಸರಿ ಇಲ್ಲ ಎನ್ನುವುದು ಅವರಿಗಿಂತ ಸಣ್ಣ ವಯಸ್ಸಿನವರು ಕೂಡ ಮಾತನಾಡಿರುತ್ತಾರೆ.

ಹಲವಷ್ಟು ಕಚೇರಿಗಳಲ್ಲಿ ಈ ಕೆಲಸ ಯಾರಿಗೆ ಗೊತ್ತು ಅಥವಾ ನೀವು ಮಾಡ್ತೀರಾ ಅನ್ನೋದು ಬಹಳ ಅಪರೂಪ. ಇದ್ದಕ್ಕಿದ್ದ ಹಾಗೆ ಒಂದು ಕೆಲಸ ವಹಿಸಬೇಕಾದಾಗ, ಅದರಲ್ಲೂ ಅದು ತಾಂತ್ರಿಕವಾಗಿದ್ದರೆ ಅಥವಾ ಇನ್ನೇನೋ ನಿರ್ಧಾರ ತೆಗೆದುಕೊಳ್ಳುವಂಥದ್ದಾದರೆ, ಹಣಕಾಸಿಗೆ ಸಂಬಂಧಿಸಿದ್ದಾದರೆ ಮೊದಲು ಮಾತನಾಡುವುದು ಗಂಡಸರ ಜೊತೆಗೇನೇ. ಹೆಂಗಸರು ಹಲವಾರು ಬಾರಿ ಒಂದು ಕಾರ್ಯಕ್ರಮ ಆಯೋಜನೆ ಮಾಡೋದು, ಅಥವಾ ಇನ್ನೇನೋ ಅಲಂಕಾರಿಕ ಕೆಲಸಗಳಿಗೆ ಮಾತ್ರ ಸೀಮಿತ ಆಗ್ತಾರೆ.

ಭಾರತದ ಒಕ್ಕೂಟ ಸರ್ಕಾರದ ಲೋಕಸಭೆಯಲ್ಲಿ ಮಹಿಳೆಯರ ಸ್ಥಾನ ಕೇವಲ 14.7% ಮಾತ್ರವಿದೆ. ಜಗತ್ತಿನ ಕೇವಲ 27 ದೇಶಗಳಲ್ಲಿ ಮಾತ್ರ ಮಹಿಳಾ ಪ್ರಧಾನಿ / ಅಧ್ಯಕ್ಷರಿರುವುದು ಕೂಡ ಜಾಗತಿಕವಾಗಿ ಮಹಿಳೆಯರ ಸ್ಥಾನಮಾನಕ್ಕೆ ಹಿಡಿದ ಕನ್ನಡಿ.

ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಸಾಂವಿಧಾನಿಕ ಹಕ್ಕಾಗಿರದಿದ್ದರೆ ಮಹಿಳೆಯರನ್ನು ಪಂಚಾಯತಿಗಳಲ್ಲಿ ಸಹ ಅವರ ಸಂಖ್ಯೆ ಕಡಿಮೆಯೇ ಇರುತ್ತಿತ್ತು. ವಿಷಾದನೀಯವೆಂದರೆ ಇಂದಿಗೂ ಎಷ್ಟೋ ಪಂಚಾಯಿತಿಗಳಲ್ಲಿ ಅಧ್ಯಕ್ಷೆ / ಉಪಾಧ್ಯಕ್ಷೆಯರ ಗಂಡಂದಿರೇ ಸಂಪೂರ್ಣ ಅಧಿಕಾರ ಚಲಾಯಿಸುವುದು ಹೊಸತಲ್ಲ.

ಮಹಿಳೆಯರಿಗೆ ಸ್ವಂತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇಲ್ಲ, ಅವರಿಗೆ ಯಾವಾಗಲೂ ನೆರವು ಬೇಕು ಅನ್ನೋದರ ಹಿಂದೆ ಪುರುಷ ಪ್ರಧಾನ ಸಮಾಜಕ್ಕೆ ತನ್ನದೇ ಆದ ಅಭದ್ರತೆ ಇದೆ. ಮಹಿಳೆಯ ಕೈಗೆ ಚುಕ್ಕಾಣಿ ಕೊಟ್ಟ ಕೂಡಲೇ ಒಂದು ವ್ಯವಸ್ಥೆಯನ್ನು ರೂಪಿಸುವ ದೃಷ್ಟಿಕೋನ ಬದಲಾಗ್ತಾ ಹೋಗೋದು, ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸುವಂಥಾದ್ದಾದಾಗ ಅದರ ವಿರೋಧ ಹುಟ್ಟಿಕೊಳ್ಳತ್ತೆ. ಇದು ಒಂದು ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲ. ಪ್ರತಿ ಕ್ಷೇತ್ರದಲ್ಲಿಯೂ ಹೆಣ್ಣುಮಕ್ಕಳು ಮುಂದುವರಿದಾಗ ಅವಳ ಸಾಮರ್ಥ್ಯ ಅಲ್ಲ ಅದು, ಅಲ್ಲೇನೋ ಬೇರೆ ಸಮಸ್ಯೆ ಇದೆ, ಅನುಕಂಪದ ಮೂಲಕ ಅಥವಾ ಸೌಂದರ್ಯವನ್ನು ಮುಂದಿಟ್ಟುಕೊಂಡು ಈ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎನ್ನುವ ಎಲ್ಲ ರೀತಿಯ ಮಾತುಗಳೂ ಕೇಳಿಬರುತ್ತವೆ.

ನಿರ್ಧಾರ ತೆಗೆದುಕೊಳ್ಳುವ ಸ್ಥಾನಕ್ಕೆ ಮಹಿಳೆ ತಲುಪೋ ಮೊದಲು ಅದಕ್ಕೆ ಬೇಕಾದ ಸಮಾನ ಅವಕಾಶಗಳನ್ನು ಸಹ ನೋಡಬೇಕಾಗಿದೆ. ಮನೆಯಿಂದ ಹಿಡಿದು ರಾಷ್ಟ್ರದವರೆಗೆ ತನ್ನ ಮಾತಿಗೆ ಮನ್ನಣೆಯೇ ಇಲ್ಲದ, ಹಾಗೂ ಹಲವಾರು ಕಡೆ ಮಾತನಾಡಲು ಆಯ್ಕೆಯೇ ಇಲ್ಲದ ವಾತಾವರಣ ಸೃಷ್ಟಿಯಾಗಿರುತ್ತದೆ.

ಮನೆಯಲ್ಲಿ ತಿಂಡಿಗೇನು ಮಾಡಲಿ ಎನ್ನುವುದನ್ನು ಕೇಳುವುದರಿಂದ ಹಿಡಿದು, ಮಕ್ಕಳು, ಸ್ವಂತ ಆರೋಗ್ಯ, ತನ್ನ ಕರಿಯರ್‌, ತಾನು ಹೋಗಬೇಕಾದ ಜಾಗ, ಹಾಕೋ ಬಟ್ಟೆ, ತಮ್ಮ ಜೀವನ ಸಂಗಾತಿ, ಮಾತನಾಡುವ, ಸ್ನೇಹ ಬೆಳೆಸುವ ಜನರು ಪ್ರತಿಯೊಂದು ವಿಷಯವನ್ನೂ ಇತರರ ಅಭಿಪ್ರಾಯವನ್ನು ತಿಳಿದೇ ಹೆಜ್ಜೆಯಿಡಬೇಕಾದ ಅಸಹಾಯಕತೆ ಇಂದಿಗೂ ಇದೆ. ಮಹಿಳೆಯರು ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ವಿರೋಧಿಸುವಲ್ಲಿ ಪುರುಷ ಪ್ರದಾನ ವ್ಯವಸ್ಥೆಯ ಗಂಡಸರಷ್ಟೇ ವ್ಯವಸ್ಥೆಯೊಳಗಿರುವ ಮಹಿಳೆಯರು ಕೂಡ ಭಾಗಿಯಾಗುವುದು ವಿಷಾದನೀಯ. ಅವಳಿಗ್ಯಾಕೆ ಗಂಡಸರ ಕೆಲಸ, ಹೆಣ್ಣು ಹೆಣ್ಣಾಗಿದ್ದರೇ ಚಂದ, ಗಂಡಸರೂ ಹಾಗೆ ಮಾತಾಡೋದಿಲ್ಲ ಹಾಗೆ ಮಾತಾಡ್ತಾಳೆ ಎನ್ನುವ ಎಷ್ಟೋ ಮಾತುಗಳು ಮಹಿಳೆಯರಿಂದಲೇ ಕೇಳಿಬರುವುದು ಮಹಿಳೆಯರ ಮುನ್ನಡೆಗೆ ಸವಾಲು.

ಮಹಿಳೆಯಾಗಿರಲಿ, ಪುರುಷರಾಗಲೀ, ಬೌದ್ಧಿಕ ಮಟ್ಟದಲ್ಲಿ ಇಬ್ಬರಿಗೂ ನಿರ್ಧಾರಗಳನ್ನು ತೆಗೆದುಕೊಳ್ಳುವ, ಆಯ್ಕೆ ಮಾಡುವ ಅಧಿಕಾರ, ಅರ್ಹತೆ, ಹಕ್ಕು ಪ್ರತಿಯೊಂದೂ ಸಮಾನವೇ. ಪುರುಷರ ದೃಷ್ಟಿಕೋನದ ಜೊತೆಗೆ ಮಹಿಳೆಯರ ದೃಷ್ಟಿಕೋನವೂ ಸಮಾನವಾಗಿ ಬೆರೆತಾಗ, ಚರ್ಚಿಸಿ ನಿರ್ಧರಿಸಿದಾಗ ಸಮಗ್ರ ಅಭಿವೃದ್ಧಿಯ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ಮಹಿಳೆ ಹಾಗೂ ಪುರುಷರ ದೈಹಿಕ, ಮಾನಸಿಕ ಸಾಮರ್ಥ್ಯ, ಬೌದ್ಧಿಕ ಮಟ್ಟ, ಅರ್ಥೈಸಿಕೊಳ್ಳುವಿಕೆ ಪ್ರತಿಯೊಂದರಲ್ಲಿಯೂ ಇರುವ ಹೋಲಿಕೆ, ವ್ಯತ್ಯಾಸವನ್ನು ಗುರುತಿಸಿ ಒಪ್ಪಿಕೊಂಡು, ಪರಸ್ಪರ ಗೌರವಿಸಿ ಸಮಾನ ಅವಕಾಶ ಕಲ್ಪಿಸುವುದು ನಮ್ಮೆಲ್ಲರ ಆದ್ಯತೆಯಾಗಬೇಕಿದೆ. ಇದಕ್ಕೆ ಪುರುಷರ ಸಹಕಾರದಷ್ಟೇ ಮತ್ತು ಅದಕ್ಕಿಂತ ಹೆಚ್ಚಾಗಿ ಮಹಿಳೆಯರಾಗಿ ಇನ್ನಿತರ ಮಹಿಳೆಯರನ್ನು ಬೆಂಬಲಿಸುವುದು, ಜೊತೆನಿಲ್ಲುವುದು, ಪ್ರೋತ್ಸಾಹಿಸುವುದು, ಒಗ್ಗಟ್ಟಾಗುವುದು ಅಗತ್ಯ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page