Tuesday, August 19, 2025

ಸತ್ಯ | ನ್ಯಾಯ |ಧರ್ಮ

14 ಸಾವಿರ ಬುಡಕಟ್ಟು ಕುಟುಂಬಗಳನ್ನು ಸ್ಥಳಾಂತರಿಸಿ ಅದಾನಿ ಗ್ರೂಪ್‌ಗೆ 1860 ಎಕರೆ ಭೂಮಿ ನೀಡಿದ ಅಸ್ಸಾಂ ಬಿಜೆಪಿ ಸರ್ಕಾರ

ಒಂದು ಜಿಲ್ಲೆಯ‌ಷ್ಟು ಅಳತೆಯ ಭೂಮಿಯನ್ನು ಅದಾನಿಗೆ ಕೊಟ್ಟ ಸರ್ಕಾರದ ನಡೆಗೆ ಆಘಾತ ವ್ಯಕ್ತಪಡಿಸಿದ ಕೋರ್ಟ್

ಗುವಾಹಟಿ: ಅಸ್ಸಾಂ ರಾಜ್ಯ ಸರ್ಕಾರದ ಧೋರಣೆಯ ಬಗ್ಗೆ ಗುವಾಹಟಿ ಹೈಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ. ಸಿಮೆಂಟ್ ಕಾರ್ಖಾನೆಗಾಗಿ ಅದಾನಿ ಗ್ರೂಪ್‌ಗೆ 1860 ಎಕರೆ ಭೂಮಿಯನ್ನು (3000 ಬಿಘಾ) ಹಸ್ತಾಂತರಿಸುವ ಬಿಜೆಪಿ ಸರ್ಕಾರದ ನಿರ್ಧಾರದಿಂದ ನ್ಯಾಯಾಲಯಕ್ಕೆ ಆಘಾತವಾಗಿದೆ. 14 ಸಾವಿರ ಬುಡಕಟ್ಟು ಕುಟುಂಬಗಳನ್ನು ಸ್ಥಳಾಂತರಿಸಿ, ಇಷ್ಟು ದೊಡ್ಡ ಪ್ರಮಾಣದ ಭೂಮಿ ನೀಡಿರುವುದರ ಬಗ್ಗೆ ವಿಚಾರಣೆಯ ಸಮಯದಲ್ಲಿ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಸಂಜಯ್ ಕುಮಾರ್ ಮೆಧಿ ದಿಗ್ಭ್ರಮೆಗೊಂಡರು. ಈ ವಿಷಯವನ್ನು ಆ ನ್ಯಾಯಾಧೀಶರೂ ನಂಬಲು ಸಾಧ್ಯವಾಗಲಿಲ್ಲ. “ತಮಾಷೆ ಮಾಡುತ್ತಿದ್ದೀರಾ? ನೀವು ಇಡೀ ಜಿಲ್ಲೆಯನ್ನೇ ಕೊಡುತ್ತಿದ್ದೀರಾ?” ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಈ ಬಗ್ಗೆ ಸಿಮೆಂಟ್ ಕಂಪನಿ ಪರ ವಾದಿಸಿದ ವಕೀಲರನ್ನು ಗುವಾಹತಿ ಹೈಕೋರ್ಟ್ ತೀವ್ರವಾಗಿ ಟೀಕಿಸಿದೆ. ಸಿಮೆಂಟ್ ಕಾರ್ಖಾನೆ ಸ್ಥಾಪನೆಗಾಗಿ ಇಡೀ ದಿಮಾ ಹಸಾವೊ ಜಿಲ್ಲೆಯನ್ನು ಹಂಚಿರುವುದು ನ್ಯಾಯಾಧೀಶರಿಗೆ ಆಘಾತ ಉಂಟುಮಾಡಿದೆ. ಈ ಜಿಲ್ಲೆಯು ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ಸ್ಥಳೀಯ ಬುಡಕಟ್ಟುಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಅದಾನಿ ಗ್ರೂಪ್‌ಗೆ ಹಂಚಿದ ಭೂಮಿ ಉಮ್ರಾಂಗ್ಸೋದಲ್ಲಿದೆ, ಇದು ಬಿಸಿನೀರಿನ ಬುಗ್ಗೆಗಳು, ವಲಸೆ ಹಕ್ಕಿಗಳು ಮತ್ತು ವನ್ಯಜೀವಿಗಳಿಗೆ ಪ್ರಸಿದ್ಧವಾಗಿದೆ. ಆ ಭೂಮಿ ಕಾರ್ಖಾನೆಗೆ ಅಗತ್ಯವಿದೆ ಎಂದು ವಕೀಲರು ವಾದಿಸಿದರು. ಅದನ್ನು ಪಾಳುಭೂಮಿ ಎಂದು ಹೇಳಿದ್ದರು. ಆದರೆ, ನ್ಯಾಯಾಧೀಶರು ಮಧ್ಯಪ್ರವೇಶಿಸಿ, “ಅದು ಪಾಳುಭೂಮಿ ಎಂದು ನಮಗೆ ಗೊತ್ತು. 3000 ಬಿಘಾ. ಇದು ಯಾವ ರೀತಿಯ ನಿರ್ಧಾರ? ಇದು ತಮಾಷೆಯೇ?” ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಇಷ್ಟು ದೊಡ್ಡ ಪ್ರಮಾಣದ ಭೂಮಿಯನ್ನು ಒಂದು ಕಂಪನಿಗೆ ನೀಡಿರುವುದನ್ನು ಅವರು ತಪ್ಪೆಂದು ಹೇಳಿದರು. ಸಾರ್ವಜನಿಕ ಹಿತಾಸಕ್ತಿಗಳಿಗೆ ಎಲ್ಲದಕ್ಕಿಂತಲೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ತಾವು ಯಾರ ಭೂಮಿಯನ್ನು ತೆಗೆದುಕೊಳ್ಳುತ್ತಿಲ್ಲ, ಟೆಂಡರ್ ಮೂಲಕ ಗುತ್ತಿಗೆ ಪಡೆದಿದ್ದೇವೆ ಎಂದು ವಕೀಲರು ವಾದಿಸಿದರು. ಸಿಮೆಂಟ್ ಕಾರ್ಖಾನೆಗೆ ಭೂಮಿ ಹಂಚಿಕೆಯ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ನಾರ್ಥ್ ಕಾಚರ್ ಹಿಲ್ಸ್ ಆಟೋನೊಮಸ್ ಕೌನ್ಸಿಲ್ (NCHAC) ಗೆ ಹೈಕೋರ್ಟ್ ನ್ಯಾಯಾಧೀಶರು ಆದೇಶಿಸಿದರು. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿದರು.

ಹೈಕೋರ್ಟ್‌ನಲ್ಲಿ ನಡೆದ ಈ ವಿಚಾರಣೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನ್ಯಾಯಾಧೀಶರು ಸಿಮೆಂಟ್ ಕಾರ್ಖಾನೆಯ ಹೆಸರನ್ನು ಕೇಳಿ, ಅದಕ್ಕೆ ಹಂಚಿದ 3000 ಬಿಘಾ ಭೂಮಿ ಬಗ್ಗೆ ತಿಳಿದು “ಇಡೀ ಜಿಲ್ಲೆ…”, “3000 ಬಿಘಾ…” ಎಂದು ಹಲವು ಬಾರಿ ಆಶ್ಚರ್ಯ ವ್ಯಕ್ತಪಡಿಸಿರುವುದು ಕಾಣುತ್ತದೆ. ಈ ವಿಡಿಯೋವನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

14 ಸಾವಿರ ಬುಡಕಟ್ಟು ಕುಟುಂಬಗಳನ್ನು ಸ್ಥಳಾಂತರಿಸಿ, ಅದಾನಿಗೆ ಭೂಮಿ ನೀಡಿದ ಬಿಜೆಪಿ ಸರ್ಕಾರದ ಧೋರಣೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಪಸಂಖ್ಯಾತರು, ಬುಡಕಟ್ಟುಗಳು ಮತ್ತು ದಲಿತರ ಹಕ್ಕುಗಳನ್ನು ಕಡೆಗಣಿಸುವ ಹಿಮಂತ ಸರ್ಕಾರ, ದೊಡ್ಡ ಉದ್ಯಮಿಗಳಿಗೆ ಲಕ್ಷಗಟ್ಟಲೆ ಚದರ ಅಡಿ ಭೂಮಿ ನೀಡುತ್ತಿದೆ ಎಂದು ನೆಟಿಜನ್‌ಗಳು ತೀವ್ರವಾಗಿ ಟೀಕಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page