Thursday, August 15, 2024

ಸತ್ಯ | ನ್ಯಾಯ |ಧರ್ಮ

ಪಲ್ಟುಕುಮಾರ, ತೆಲುಗು ಬಾಬು ಹೊತ್ತ ಪಲ್ಲಕ್ಕಿಯಲ್ಲಿ ಅತಂತ್ರ ನಮೋ 3.0

ಮೂರನೇ ಬಾರಿ ಪಟ್ಟಾಭಿಷಕ್ತನಾದ ಸಾಮ್ರಾಟ ನಮೋ, ಪಲ್ಲಕ್ಕಿಯಲ್ಲಿ ವಿರಾಜಮಾನನಾಗಿ ಮೆರವಣಿಗೆ ಹೊರಟಾಗ ಎಂದಿನ ಆತ್ಮವಿಶ್ವಾಸ ಇರಲಿಲ್ಲ. ಪಲ್ಲಕ್ಕಿ ಹೊತ್ತವರು ಯಾವ ಹೊತ್ತಿಗೆ ಹೆಗಲು ಸರಿಸಿ ನೆಲಕ್ಕೆ ಬೀಳಿಸಿ ಓಡುವರೋ ಎಂದು ಆಗಾಗ್ಗೆ ಪರದೆ ಸರಿಸಿ ಹೊರಗಡೆ ಇಣುಕು ಹಾಕುತ್ತಿದ್ದ. ಹೊರಗಡೆಯ ದೃಶ್ಯ ಅವನನ್ನು ಖಿನ್ನತೆಗೆ ತಳ್ಳುವಂತಿತ್ತು. ರಾಜಬೀದಿಯ ಎರಡೂ ಬದಿಯಲ್ಲಿ ಕಿಕ್ಕಿರಿದು ನಿಂತು ಜೈಕಾರ ಹಾಕಿ ಹೂಮಳೆಗೆರೆಯುತ್ತಿದ್ದ ಭಕ್ತಗಣ ಕರಗಿ ಹೋಗಿ, ಹತಾಶೆ ಆವರಿಸಿ ಪಲ್ಲಕ್ಕಿಯಾಚೆ ಮತ್ತೆ ತಲೆ ಹಾಕುವ ಧೈರ್ಯ ಮಾಡಲಿಲ್ಲ. ಮೆರವಣಿಗೆ ಮುಂದೆ ಸರಿದಂತೆ ನೆರೆದಿದ್ದ ಕೆಲವೇ ಮಂದಿ ʼಹೋʼ ಎಂದು ಕೂಗಿದ ಶಬ್ಧ ಕೇಳಿಸಿತು. ನಂತರ, ರಾಜಭಟರು ʼಯಾರದು ಪಲ್ಲಕ್ಕಿ ಮೇಲೆ ಚಪ್ಪಲಿ ಎಸೆದದ್ದು?ʼ ಎಂದು ಅಬ್ಬರಿಸುವುದು ಕೇಳಿಸಿ ನಮೋ ಬೆವತು ಹೋದ.

ಕಳೆದ ಹತ್ತು ವರುಷಗಳಲ್ಲಿ ಮತಾಂಧತೆಯ ವಿಷ ಬೀಜ ಬಿತ್ತಿ ಜನರ ನಡುವೆ ಗೋಡೆಗಳನ್ನು ಕಟ್ಟಿ, ಸುಳ್ಳು ಹೊಸೆಯುವ ಐಟಿ ಸೆಲ್ ಕಾರ್ಖಾನೆಯಿಂದ ಭಕ್ತಗಣಗಳನ್ನು ಸೃಷ್ಟಿಸಿ, ದಂಗೆ ಎದ್ದ ಸಾಮಂತರಾಜರನ್ನು ಜೈಲಿಗೆ ಅಟ್ಟಿ, ದಿನನಿತ್ಯ ತರಾವರಿ ದಿರಿಸು ಧರಿಸಿ ಫೋಟೊ ಸೆಷೆನ್ನಿನಲ್ಲಿ ಮಜವಾಗಿದ್ದ ಸಾಮ್ರಾಟ ನಮೋನ ಸಿಂಹಾಸನದ ಬುಡ ಕಳೆದ ಕೆಲವೇ ತಿಂಗಳಲ್ಲಿ ಅಲುಗಾಡಿ ಹೋಗಿತ್ತು. ಪ್ರಜಾತಂತ್ರವನ್ನು ಹೊಸಕಿ ಹಾಕಲು ಸಾಧ್ಯವಾಗದೆ ಚುನಾವಣೆಯನ್ನು ಎದುರಿಸಲೇ ಬೇಕಾಗಿ ಬಂದ ಸನ್ನಿವೇಶವನ್ನು ಜೀರ್ಣಿಸಿಕೊಳ್ಳುವುದು ಕಷ್ಟಸಾಧ್ಯವಾಗಿತ್ತು.

ಸುದ್ದಿಭಟರು ದೇಶದೆಲ್ಲೆಡೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿ, ಅರಮನೆಗೆ ವರ್ತಮಾನವನ್ನು ತಂದು ಸುರಿಯುತ್ತಿದ್ದರು. ಒಂದೊಂದು ದಿಕ್ಕಿನಿಂದ ಬರುತ್ತಿದ್ದ ಪ್ರತಿಯೊಂದು ಜನರ ಮಾತುಗಳು, ಸಾಮ್ರಾಟ ನೆಚ್ಚಿದಂತೆ ಅವನನ್ನು ಹಾಡಿ ಹೊಗಳದೆ, ಬೈಗುಳಗಳ ಮೂಟೆಯನ್ನೇ ಹೊತ್ತು ಬರುತ್ತಿದ್ದವು.

“ಬಡತನವನ್ನು ಅಣಗಿಸುವ ಇವನ್ಯಾವ ದರವೇಶಿ ಸಾಮ್ರಾಟ, ಮೂವತ್ತು ವರ್ಷ ಭಿಕ್ಷೆ ಬೇಡಿ ಬದುಕಿದವನಂತೆ! ಸಿಂಹಾಸನ ಏರಿದವನೇ ಸೂಟುಬೂಟು ಹಾಕ್ಕೊಂಡು ಮೆರೀತ್ತಿದ್ದಾನೆ. ಹಸಿದ ಬಡವರ ಹೊಟ್ಟೆಗೆ ಬರೆ ಹಾಕುವ ಅವನನ್ನು ಮೊದಲು ಅರಮನೆಯಿಂದ ಹೊರ ಹಾಕಿ!”

“ಕಾಳಧನಿಕರನ್ನು ಬಲಿಯಾಕಿ, ತಲೆಗೆ ಹದಿನೈದು ಲಕ್ಷ ವರಹ ಕೊಡುತ್ತೇನೆಂದು ಬೊಗಳೆ ಹೊಡೆಯುತ್ತಿದ್ದವನು ಈಗ ಕಳ್ಳ ವ್ಯಾಪಾರಿಗಳಿಗೆ ಬಂದರು, ರಸ್ತೆ, ರೈಲು ಎಲ್ಲವನ್ನೂ ಮಾರುತ್ತ, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾನೆ. ಸಾಮಾನ್ಯ ಜನರ ತೆರಿಗೆ ಹೆಚ್ಚಿಸಿ, ಶ್ರೀಮಂತರ ಸಾಲ ಮನ್ನಾ ಮಾಡುತ್ತಿರುವ ಜನದ್ರೋಹಿ…ಈ ಸಾಮ್ರಾಟ…”

“ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಂದವನ ಮನೆಹಾಳಾಗಲಿ…ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಹಗಲುರಾತ್ರಿ ಕಷ್ಟಪಟ್ಟು ಓದಿದರೆ ಪ್ರಶ್ನೆಪತ್ರಿಕೆಗಳು ಸಿರಿವಂತ ಮಕ್ಕಳಿಗೆ ಬಿಕರಿಯಾಗಿ ಪರೀಕ್ಷೆ ರದ್ದಾಗುತ್ತಿವೆ. ಯುವಕರಿಗೆ ಕೆಲಸವಿಲ್ಲ. ಕೇಳಿದರೆ ಪುಟ್ ಪಾತಿನಲ್ಲಿ ತಳ್ಳುಗಾಡಿಯಲ್ಲಿ ಬೊಂಡಬಜ್ಜಿ ಮಾರಿ, ಹಣ ಮಾಡಿ ಅನ್ನುತ್ತಿದ್ದಾನೆ…ಕಿರಾತಕ”

ಹೀಗೆ ಯುವಕರು, ಮಹಿಳೆಯರು, ಬಡವರು, ಸಮಾಜದ ಅಂಚಿಗೆ ತಳ್ಳಿದ ಅವಕಾಶ ವಂಚಿತ ದುರ್ಬಲರು – ಎಲ್ಲರ ಹೊಟ್ಟೆಯ ಸಿಟ್ಟು ಮಾತಿಗೆ ಬಂದು ಕೆಂಡ ಕಾರುತ್ತಿದ್ದವು. ಆ ಆಕ್ರೋಶ, ನೋವಿನ ಮಾತುಗಳ ಸುರಿಮಳೆಯಲ್ಲಿ ನಮೋ ಭಕ್ತರ ಉಧೋ ಉಧೋ ಭಜನೆಯು ಮಂಕಾಗಿ ಹೋಗಿತ್ತು.

ಮನುವಿಕೃತಿ ಸಿದ್ಧಾಂತವನ್ನು ಆರಾಧಿಸುವ, ಬೂಟ್ ನೆಕ್ಕಿಂಗ್ ಕುಖ್ಯಾತಿಯ ಸಾರಿವರ್ಕರ್ ಮನೋಧೋರಣೆಗೆ ಒಗ್ಗದ ಪ್ರಜಾಪ್ರಭುತ್ವ…ಸ್ವಾತಂತ್ರ್ಯ …ಸಮಾನತೆ…ಸೋದರತೆಗಳನ್ನು ಕಾಪಾಡುವ ಸಂವಿಧಾನವನ್ನು ಎತ್ತಂಗಡಿ ಮಾಡಲು ಹರಸಾಹಸ ಪಟ್ಟು ಸಾಧ್ಯವಾಗದೆ, ಆಳಕ್ಕೆ ಬೇರು ಬಿಟ್ಟ ಅದರ ಬುಡಕ್ಕೆ ಕೇಸರಿ ಗೆದ್ದಲುಗಳನ್ನು ಬಿಟ್ಟು, ಐವತ್ತಾರು ಇಂಚಿನೆದೆಯನ್ನು ತಟ್ಟುತ್ತ “ ಏಕ್ ಅಖೇಲ ಸಬ್ ಪಾರ್ ಬಾರಿ” ಎಂದು ಸಾಮ್ರಾಟ ನಮೋ ಹೂಂಕರಿಸುತ್ತಲ್ಲಿದ್ದ.

ದೇಶದಲ್ಲಿ ಚುನಾವಣೆಗಳನ್ನೇ ರದ್ದು ಮಾಡಿ ತಾನೇ ಏಕಾಧಿಪತ್ಯ ಸ್ಥಾಪಿಸಬೇಕೆಂದು ಒಂದು ದಿನ ನಿಶ್ಚಯಿಸಿದ್ದ ಕೂಡ. ಆದರೆ, ಚಡ್ಡಿಗೆಳೆಯ ಅಪರಿಮಿತ ಕುತಂತ್ರಿ “ಮಹಾಸ್ವಾಮಿಗಳು ಮನ್ನಿಸಬೇಕು. ಸಂವಿಧಾನಕ್ಕೆ ಕೇಸರಿ ಗೆದ್ದಲುಗಳನ್ನು ಈಗಷ್ಟೇ ಬಿಟ್ಟಿದ್ದೇವೆ. ಬುಡವನ್ನು ತಿನ್ನಲು ಸಮಯ ಕೊಡಬೇಕು. ಆಗ ಸಂವಿಧಾನ ತಾನಾಗೇ ಉರುಳಿ ಬೀಳುತ್ತದೆ. ಅಲ್ಲದೆ ತಮ್ಮ ಭಕ್ತಗಣಗಳ ಸಂಖ್ಯೆ ಸಾಕಷ್ಟಿಲ್ಲ. ಕಾಲ ಪಕ್ವವಾಗದೆ ಸಂವಿಧಾನಕ್ಕೆ ಕೈ ಹಾಕಿದರೆ ಜನ ದಂಗೆ ಎದ್ದಾರು! ಹೇಗೂ ಚುನಾವಣಾ ಪ್ರಧಾನರನ್ನಾಗಿ ನಮ್ಮ ಮಾ.ಕೃ.ಕುಟೀರ – ಪೂರ್ವಾಶ್ರಮದ ಚಡ್ಡಿ ಬಂಧುಗಳನ್ನೇ ನೇಮಿಸಿದ್ದೀರ. ಮತಗಳನ್ನು ಎಗರಿಸುವುದರಲ್ಲಿ ಅವರು ಮಹಾ ನಿಪುಣರು. ಅಂಥದ್ದರಲ್ಲಿ ಹಿಂಜರಿಕೆ ಯಾಕೆ? ಧೈರ್ಯದಿಂದ ಜನರ ಅಭಿಪ್ರಾಯ ಕೇಳಿ. ಅಯಾಗಾತೊ ನಮೋ ಸಾಮ್ರಾಟ್ ಹೇ” ಎಂದು ಅಪರಿಮಿತ ಕುತಂತ್ರಿ ಗಹಿಗಹಿಸಿ ನಕ್ಕ.

ʼಜನರಿಂದ ದಂಗೆಯೇ!ʼ ಕುತಂತ್ರಿಯ ವಿನೋದದ ಮಾತಿಗೆ ನಖಶಿಖಾಂತ ಉರಿ ಹತ್ತಿಸಿಕೊಂಡ ಸಾಮ್ರಾಟ ನಮೋನ ಕೆಕ್ಕರಿಸಿದ ನೋಟಕ್ಕೆ ಕುತಂತ್ರಿ ಹೆದರಿ ಬಾಯಿಗೆ ಬೀಗ ಜಡಿದ. “ಪದೇ ಪದೇ ಜನರಲ್ಲಿ ಮತಭಿಕ್ಷೆ ಮಾಡಿ ಸಾಕಾಗಿದೆ. ಇನ್ನೆಷ್ಟು ವರ್ಷ ಬೀದಿ, ಗಲ್ಲಿಗಳಲ್ಲಿ ರೋಡ್ ಶೊ ಮಾಡ್ತಾ ಜನರನ್ನು ಎಂಟರ್ ಟೈನ್ ಮಾಡ್ಬೇಕು? ಸಾಧ್ಯವಿಲ್ಲ…ಈ ಬಾರಿ ಸಂವಿಧಾನ ಖತಮ್ ಮಾಡ್ಲೇ ಬೇಕು. ಅದಕ್ಕೆ ಫೋರ್ ಟ್ವೆಂಟಿಗಳ ಸೀಟು ಬೇಕೇ ಬೇಕು” ಎಂದು ಹಲ್ಲು ಕಡಿದು “ಅಬ್ ಕಿ ಬಾರ್ 420 ಪಾರ್” ಎಂದು ಜೋರಾಗಿ ಕೂಗಿದ. ಅದು ದೇಶದೆಲ್ಲೆಡೆ ಪ್ರತಿಧ್ವನಿಸಿ – ಚಡ್ಡಿ ಕೊಡವಿ ಕೊಂಡು ಎದ್ದ ಕೇಸರಿಗ್ಯಾಂಗ್ ಕಾರ್ಯಕರ್ತರು, ಕಮಲೀ ಮಂತ್ರಿಗಳು, ಸಾಮಂತರು “ಸಂವಿಧಾನ ಖತಮ್ ಮಾಡಿ…ಸನಾತನ ಧರ್ಮ ಕಾಪಾಡಿ” ಎಂದು ಬೊಬ್ಬೆ ಹೊಡೆಯಲು ಪ್ರಾರಂಭಿಸಿದರು.

ಸಾಮ್ರಾಟ ನಮೋ ಮತ್ತವನ ಕೇಸರಿಗ್ಯಾಂಗ್ ನ ಅಂತಿಮ ಗುರಿಯನ್ನು ಮೊದಲೇ ಅರಿತಿದ್ದ ನಮೋ ವಿರೋಧಿಗಳು “ಸಂವಿಧಾನ ಉಳಿಸಿ …ದೇಶವನ್ನು ಕಾಪಾಡಿ” ಎಂದು ದೇಶಾದ್ಯಂತ ಬಿರುಸು ಪ್ರಚಾರ ಮಾಡಿದರು. ಬಡವರು, ದೀನದಲಿತರು, ಕಾರ್ಮಿಕರು, ಯುವಕರು, ಮಹಿಳೆಯರು – ಈ ಮೊದಲು ನಮೋವನ್ನು ದೇವರ ಅವತಾರ ಎಂದು ನಂಬಿ, ಭಜಿಸುತ್ತಿದ್ದವರು ಈಗ ಸಾಮ್ರಾಟನ ವಿರುದ್ಧ ತಿರುಗಿ ಬಿದ್ದರು. ಜನರ ಆಕ್ರೋಶ ಸಾಮ್ರಾಟನಿಗೆ ಅನಿರೀಕ್ಷಿತವಾಗಿತ್ತು. ಅದು ಹೆಚ್ಚಾದರೆ ಸಿಂಹಾಸನ ಕೈ ತಪ್ಪಿದಂತೆ! ಎಡವಟ್ಟಾಯಿತು ಎಂದು ಪರಿತಪಿಸಿದ ನಮೋ, ಸುಳ್ಳು ಟಂಕಿಸುವ ಕೇಸರಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮನೆಹಾಳನನ್ನು ಕರೆಸಿ ಸಲಹೆ ಕೇಳಿದ.

“ಮಹಾಸ್ವಾಮಿಗಳಿಗಿಂತ ನಮಗೇನು ತಿಳಿದಿದೆ! ದಶಕದಿಂದ ನಾವು ಜಪಿಸುತ್ತ ಬಂದ ಮಂದಿರ್, ಮಸ್ಜಿದ್ ಮಂತ್ರವನ್ನೇ ಸ್ವಲ್ಪ ಬದಲಾಯಿಸಿ ಹೇಳಿದರಾಯಿತು. ಜನರು ಸಂಪ್ರೀತರಾಗಿ ತಮ್ಮ ಪಾದಕ್ಕೆ ಎರಗುತ್ತಾರೆ” ಎಂದು ʼಮʼ ಅಕ್ಷರದ ಕೇಸರಿ ಪಂಚಾಕ್ಷರಿ ಮಂತ್ರವನ್ನು ಕಿವಿಯಲ್ಲಿ ಉಸುರಿದ.

ಕಾಲಿಗೆ ಚಕ್ರ ಕಟ್ಟಿಕೊಂಡ ಸಾಮ್ರಾಟ್ ನಮೋ “ಮೊಗಲ್, ಮುಸ್ಲಿಮ್, ಮಟನ್, ಮಚ್ಲಿ, ಮಂಗಲ್ ಸೂತ್ರ” ಎಂದು ಮನೆಹಾಳನ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತ ದೇಶಾದ್ಯಂತ ಸಂಚರಿಸಿದ. ಆದರೆ – ಬೆಲೆ ಏರಿಕೆ, ನಿರುದ್ಯೋಗ, ಧರ್ಮಾಂಧತೆಯಿಂದ ತತ್ತರಿಸಿದ್ದ ದೇಶವಾಸಿಗಳು, ಅದಕ್ಕೆ ಪರಿಹಾರ ಹೇಳದ ಸಾಮ್ರಾಟನ ವಿರುದ್ಧ ಮತ್ತಷ್ಟು ರೊಚ್ಚಿಗೆದ್ದರು. ಜನಾಭಿಪ್ರಾಯದ ಚುನಾವಣೆಲೀ ʼಬಡವರ ದ್ರೋಹಿ ಸಾಮ್ರಾಟ ನಮೋ ನಮಗೆ ಬೇಡʼ ಎಂದು ತೀರ್ಪಿತ್ತರು. ಆದರೆ, ಚಡ್ಡಿ ಚುನಾವಣಾಪ್ರಧಾನರು ಗೋಲ್ ಮಾಲ್ ಮಾಡಿ ಮತಗಳನ್ನು ಎಗರಿಸಿದ್ದರಿಂದ ನಮೋ ಸಿಂಹಾಸನದಲ್ಲೇ ಉಳಿದ.

ಪಟ್ಟಾಭಿಷೇಕವಾಗಿ ಮೆರವಣಿಗೆ ಸಾಗಿದಾಗ ಸಾಮಂತರಾದ ತೆಲುಗುಬಾಬು ಮತ್ತು ಪಲ್ಟುಕುಮಾರ ಪಲ್ಲಕ್ಕಿಗೆ ಹೆಗಲು ಕೊಟ್ಟರು. ಆದರೆ, ಯಾವ ಹೊತ್ತಿಗಾದರೂ ಪಲ್ಲಕ್ಕಿಯನ್ನು ಬೀಳಿಸಿ ಓಡುವ ಪ್ರವೃತ್ತಿಯ ಅವರಿಬ್ಬರಲ್ಲಿ, ವಿಧಿ ಇಲ್ಲದೆ ವಿಶ್ವಾಸ ಇಡುವ ದುರ್ಗತಿ ಬಂದದ್ದಕ್ಕಾಗಿ ನಮೋ ಪರಿತಪಿಸಿದ.

ಚಂದ್ರಪ್ರಭ ಕಠಾರಿ
cpkatari@yahoo.com

Related Articles

ಇತ್ತೀಚಿನ ಸುದ್ದಿಗಳು

You cannot copy content of this page