ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿನಿ ಆತ್ಮ*ತ್ಯೆ : ವೈದ್ಯಕೀಯ ಶಿಕ್ಷಣದ ಕನಸು ಕಂಡಿದ್ದ ಭಾಗ್ಯಶ್ರೀ ಸಾವಿಗೆ ಶರಣು

ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಕಲಬುರಗಿಯಲ್ಲಿ ನಡೆದಿದೆ. ಭಾಗ್ಯಶ್ರೀ (18) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.

ನಗರದ ಕೋರ್ಟ್ ವೃತ್ತದ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬ ಸದಸ್ಯರು ಹಾಗೂ ಸ್ಥಳೀಯರು ಆತಂಕಕ್ಕೆ ಒಳಗಾದರು. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭಾಗ್ಯಶ್ರೀ ಮೇ 3ರಂದು ನಡೆದ ನೀಟ್ ಪರೀಕ್ಷೆ ಬರೆದಿದ್ದರು. ವೈದ್ಯಕೀಯ ಶಿಕ್ಷಣ ಪಡೆಯಬೇಕೆಂಬ ಅಪಾರ ಆಸೆ ಹೊಂದಿದ್ದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 92 ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ್ದರು ಎನ್ನಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಕುಟುಂಬ ಸದಸ್ಯರೊಂದಿಗೆ ಸಹಜವಾಗಿಯೇ ಇದ್ದ ಭಾಗ್ಯಶ್ರೀ ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದು ಆಘಾತ ಮೂಡಿಸಿದೆ.

“ಭಾಗ್ಯಶ್ರೀ ನಮ್ಮ ಜೊತೆ ಬಹಳ ಚೆನ್ನಾಗಿಯೇ ಇದ್ದಳು. ಈಗ ಆಕೆಯೇ ನಮ್ಮನ್ನು ಬಿಟ್ಟು ಹೋಗಿದ್ದಾಳೆ. ನಾವು ಯಾರ ಮೇಲೆ ದೂರೋಣ” ಎಂದು ಮೃತಳ ತಂದೆ ರಾಜಶೇಖರ ಕಣ್ಣೀರಿಟ್ಟಿದ್ದಾರೆ.

ಘಟನೆ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು