Tuesday, August 20, 2024

ಸತ್ಯ | ನ್ಯಾಯ |ಧರ್ಮ

ರಾಜ್ಯಪಾಲರನ್ನು ನಿಂದಿಸಿದ ಸಚಿವರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಬೇಕು: ಕಾರಜೋಳ

ಬೆಂಗಳೂರು: ರಾಜ್ಯಪಾಲರ ವಿರುದ್ಧ ಅವಾಚ್ಯವಾಗಿ ನಿಂದಿಸಿದ, ಅವರ ಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಮೇಲೆ ಜಾತಿ ನಿಂದನೆ ಮಾಡಿದವರ ಮೇಲೆ ಪೊಲೀಸರು ಅಟ್ರಾಸಿಟಿ ಕೇಸ್‌ ಪ್ರಕರಣ ದಾಖಲಿಸಬೇಕು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ.

ಜಂಟಿ ಸುದ್ದಿಗೋಷ್ಠಿ ನಡೆಸಿದ ಈ ಮುಖಂಡರು. ಕಾಂಗ್ರೆಸ್‌ ಪ್ರತಿಭಟನೆ ವೇಳೆ ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜ, ಸಚಿವರಾದ ಕೃಷ್ಣಬೈರೇಗೌಡ, ಜಮೀರ್ ಅಹಮದ್, ದಿನೇಶ್ ಗುಂಡೂರಾವ್‌ ಅವರು ಪರಿಶಿಷ್ಟ ಜಾತಿಗೆ ಸೇರಿದ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿದ್ದಾರೆ. ಬೆಂಕಿಯಿಟ್ಟು ಸುಟ್ಟಿದ್ದಾರೆ. ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತರಾಗಿ ಜಾತಿ ನಿಂದನೆ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಪೊಲೀಸರು ಸ್ವಯಂಪ್ರೇರಿತರಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸದಿದ್ದರೆ ರಾಷ್ಟ್ರಪತಿಯವರಿಗೆ ದೂರು ನೀಡಲಾಗುವುದು. ಆದ್ದರಿಂದ ಇವೆಲ್ಲರ ಮೇಲೂ ತಕ್ಷಣ ಎಫ್ಐಆರ್‌ ದಾಖಲಿಸಬೇಕು ಎಂದು ಕಾರಜೋಳ ಆಗ್ರಹಿಸಿದರು.

ರಾಜ್ಯಪಾಲ ಹುದ್ದೆ ಸಾಂವಿಧಾನಿಕ ಹುದ್ದೆ. ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು. ಅವರ ವಿರುದ್ಧ ಏಕ ವಚನ ಪ್ರಯೋಗ ಮಾಡಿದ್ದೂ ಅಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಪರಿಶಿಷ್ಟರು ಎಂಬ ಕಾರಣಕ್ಕೇ ಕಾಂಗ್ರೆಸ್‌ನವರು ಈ ರೀತಿ ವರ್ತಿಸಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಓಡಿಸಿದಂತೆ ರಾಜಭವನದಿಂದ ಗೆಹಲೋತ್ ಅವರನ್ನು ಓಡಿಸುವುದಾಗಿ ಹೇಳಿದ್ದಾರೆ. ಇಷ್ಟೆಲ್ಲ ಪೊಲೀಸರ ಮುಂದೆ ನಡೆದರೂ ಪೊಲೀಸರು ಮೌನ ವಹಿಸಿದ್ದಾರೆ. ತಕ್ಷಣವೇ ಅವರನ್ನೆಲ್ಲ ಬಂಧಿಸಬೇಕಿತ್ತು ಎಂದು ನಾರಾಯಣ ಸ್ವಾಮಿ ಆಗ್ರಹಿಸಿದರು.

ಐವನ್‌ ಡಿಸೋಜ ಅವರ ಮೇಲೆ ಗೂಂಡಾ ಕಾಯ್ದೆ ಹಾಕಿ ಬಂಧಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟರೆ ನೀವೇ ಹೊಣೆ ಎಂದು ಸಚಿವ ಜಮೀರ್ ಅಹಮದ್ ಖಾನ್‌ ಬೆದರಿಕೆ ಹಾಕಿದ್ದಾರೆ. ರಾಜ್ಯಪಾಲರೇನು ಈ ರಾಜ್ಯದ ಮುಖ್ಯಮಂತ್ರಿನಾ? ಗೃಹ ಸಚಿವರಾ? ಇಡೀ ರಾಜ್ಯದಲ್ಲಿ ಗಲಭೆ ಹಬ್ಬಿಸಲು ಕಾಂಗ್ರೆಸ್ ತಯಾರಿ ಮಾಡಿಕೊಂಡಂತಿದೆ ಎಂದು ಅವರು ಕಿಡಿಕಾರಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಐವನ್‌ ಡಿಸೋಜ ಅವರು ಬಾಂಗ್ಲಾದೇಶದ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗಿ ರಾಜ್ಯಪಾಲರನ್ನು ಓಡಿಸುವುದಾಗಿ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸೇರಿ ಅಲ್ಲಿನ ಪ್ರಧಾನಿಯನ್ನು ಓಡಿಸಿದರು. ಇಲ್ಲಿ ಐವನ್‌ ಡಿಸೋಜಗೆ ಪಾಕಿಸ್ತಾನದ ಭಯೋತ್ಪಾದಕರ ನಂಟು ಇದೆಯೇ? ಉಗ್ರರ ಜೊತೆಗಿನ ನಂಟು ಮತ್ತು ರಾಜ್ಯದ ವಿರುದ್ಧ ದಂಗೆ ಎಬ್ಬಿಸುವುದು ದೇಶ ದ್ರೋಹಿ ಕೃತ್ಯ ಆಗುತ್ತದೆ. ಆದ್ದರಿಂದ, ಡಿಸೋಜ ಅವರಿಗೆ ದೇಶದ್ರೋಹಿ ಪಟ್ಟ ಕಟ್ಟಿ ವಿಧಾನಪರಿಷತ್‌ ಸದಸ್ಯತ್ವದಿಂದ ಕಿತ್ತುಹಾಕಬೇಕು ಎಂದು ಕಿಡಿ ಕಾರಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page