Thursday, June 20, 2024

ಸತ್ಯ | ನ್ಯಾಯ |ಧರ್ಮ

ಅಮೂಲ್ ಹಾಲು ಮಾರಿದರೆ ದಾಳಿ: ಕರವೇ ನಾರಾಯಣಗೌಡ ಎಚ್ಚರಿಕೆ

ಬೆಂಗಳೂರು: ಇ-ಕಾಮರ್ಸ್ ಅಡಿಯಲ್ಲಿ ಅಮೂಲ್ ಹಾಲು, ಮೊಸರು ಮಾರಾಟಕ್ಕೆ ಮುಂದಾದರೆ ಅಂಥ ಸಂಸ್ಥೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ. ಈ ಸಂಸ್ಥೆಗಳು ಅಮೂಲ್ ಮಾರಾಟ ನಿಲ್ಲಿಸಬೇಕು, ಇಲ್ಲವಾದಲ್ಲಿ ಆಗುವ ಅನಾಹುತಕ್ಕೆ ಆ ಸಂಸ್ಥೆಗಳೇ ಜವಾಬ್ದಾರಿಯಾಗುತ್ತವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದ್ದಾರೆ.

SaveNandini ಹ್ಯಾಶ್ ಟ್ಯಾಗ್ ನಡಿಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಕರ್ನಾಟಕ ರಕ್ಷಣಾ ವೇದಿಕೆ ಈ ಹಿಂದೆ ಆಂಧ್ರಪ್ರದೇಶದ ಕಲಬೆರೆಕೆ ಹಾಲಿನ ವಿರುದ್ಧ ಹೋರಾಟ ಸಂಘಟಿಸಿ ನಿಲ್ಲಿಸುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಈಗ ಅಮೂಲ್ ವಿರುದ್ಧವೂ ಚಳವಳಿ ರೂಪಿಸಲಿದೆ. ನಂದಿನಿ ವಿರುದ್ಧ ನಡೆದಿರುವ ಪಿತೂರಿಗೆ ಕರವೇ ಸಂಬಂಧಪಟ್ಟವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದ್ದಾರೆ.

ಕನ್ನಡಿಗರು ಕಷ್ಟಪಟ್ಟು ಬೆಳೆಸಿದ ನಂದಿನಿ ಬ್ರಾಂಡ್ ಅನ್ನು ಮುಗಿಸಲೆಂದೇ ಅಮೂಲ್ ಹಾಲು-ಮೊಸರನ್ನು ರಾಜ್ಯಕ್ಕೆ ತರಲಾಗುತ್ತಿದೆ. ಕರ್ನಾಟಕದ ರೈತರನ್ನು ಭಿಕ್ಷುಕರನ್ನಾಗಿಸುವ ಸಂಚು ನಡೆಯುತ್ತಿದೆ. ಕನ್ನಡಿಗರು ಸ್ವಾಭಿಮಾನಿಗಳು, ಕೆರಳಿ ನಿಂತರೆ ಇಂಥ ಸಂಚುಗಳನ್ನು ವಿಫಲಗೊಳಿಸುವುದು ಅವರಿಗೆ ಗೊತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಅಮೂಲ್ ನೊಂದಿಗೆ ನಂದಿನಿ ಸೇರಿದಂತೆ ದೇಶದ ವಿವಿಧ ಹಾಲು ಉತ್ಪಾದಕ ಸಂಸ್ಥೆಗಳನ್ನು ವಿಲೀನಗೊಳಿಸುವ ಮಾತುಗಳನ್ನು ಆಡಿದ ಬೆನ್ನಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಕೇಂದ್ರ ಸರ್ಕಾರವೇ ಪಿತೂರಿಯ ಹಿಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಗುಜರಾತಿ ಲಾಬಿಗೆ ನಾವು ಮಣಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಕಾಲ ಇದಾಗಿದೆ ನಾರಾಯಣಗೌಡ ಹೇಳಿದ್ದಾರೆ.

ಕರ್ನಾಟಕದ ಬಹುಪಾಲು ರೈತರು ಹಾಲು ಉತ್ಪಾದನೆಯನ್ನು ನೆಚ್ಚಿಕೊಂಡು ಬದುಕುತ್ತಿದ್ದಾರೆ. ಅವರನ್ನು ಗುಜರಾತಿ ವ್ಯಾಪಾರಿಗಳ ಅಡಿಯಾಳಾಗಿ ಮಾಡುವ ಹುನ್ನಾರವೇ ಅಮೂಲ್-ನಂದಿನಿ‌ ವಿಲೀನದ ಪ್ರಸ್ತಾಪ. ಅದನ್ನು ಜಾರಿಗೊಳಿಸುವ ಸಲುವಾಗಿಯೇ ಅಮೂಲ್ ಹಾಲು-ಮೊಸರು ರಾಜ್ಯವನ್ನು ಪ್ರವೇಶಿಸುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಅಮೂಲ್ ಪ್ರವೇಶಕ್ಕಾಗಿಯೇ ವೇದಿಕೆ ಸಜ್ಜುಗೊಳಿಸಲಾಗಿದೆ. ಕೃತಕವಾಗಿ ನಂದಿನ ಹಾಲಿನ ಪೂರೈಕೆ ಕುಸಿಯುವಂತೆ ಮಾಡಲಾಗಿದೆ. ಇದ್ದಕ್ಕಿದ್ದಂತೆ ನಂದಿನಿ ಹಾಲಿನ ಉತ್ಪಾದನೆ ಕುಸಿಯಲು ಕಾರಣವೇನು? ನಂದಿನಿಯನ್ನು ಮುಗಿಸಲು ಕೆಎಂಎಫ್ ಅಧಿಕಾರಿಗಳಿಗೆ ಸುಪಾರಿ ನೀಡಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಲಾಭದಲ್ಲಿದ್ದ ಕರ್ನಾಟಕದ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲಾಯಿತು. ಅದೇ ರೀತಿ ಅಮೂಲ್ ಜೊತೆಗೆ ನಂದಿನಿಯನ್ನು ವಿಲೀನಗೊಳಿಸುವ ಹುನ್ನಾರ ನಡೆದಿದೆ. ಕರ್ನಾಟಕದ ರೈತರ ಬದುಕಿಗೆ ಕೊಳ್ಳಿ ಇಡಲು ಬಂದರೆ ಕನ್ನಡಿಗರು ದಂಗೆ ಏಳುತ್ತಾರೆ ಎಂಬುದನ್ನು ಮರೆಯಬೇಡಿ ಎಂದು‌ ಅವರು ಎಚ್ಚರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು