Home ರಾಜ್ಯ ಧಾರವಾಡ ಸಮುದಾಯ ಸಂಘಟನೆ ಮೇಲಿನ ದಾಳಿ ಪ್ರಜಾಪ್ರಭುತ್ವ ವಿರೋಧಿ, ಸರ್ಕಾರದ ಸೂಕ್ತ ಕ್ರಮಕ್ಕೆ ನಾಡಿನ ಗಣ್ಯರ ಆಗ್ರಹ

ಸಮುದಾಯ ಸಂಘಟನೆ ಮೇಲಿನ ದಾಳಿ ಪ್ರಜಾಪ್ರಭುತ್ವ ವಿರೋಧಿ, ಸರ್ಕಾರದ ಸೂಕ್ತ ಕ್ರಮಕ್ಕೆ ನಾಡಿನ ಗಣ್ಯರ ಆಗ್ರಹ

ಧಾರವಾಡ / ಬೆಂಗಳೂರು : ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧ ಸಾಂಸ್ಕೃತಿಕ ಹೋರಾಟ ಕಟ್ಟಿಕೊಂಡು ಬಂದಿರುವ ‘ಸಮುದಾಯ ಕರ್ನಾಟಕ’ ಸಂಘಟನೆಯ ಮೇಲೆ ನಡೆದ ದಾಳಿಯನ್ನು ನಾಡಿನ ಸಾಹಿತಿಗಳು, ರಂಗಕರ್ಮಿಗಳು ಹಾಗೂ ಪ್ರಗತಿಪರ ಚಿಂತಕರು ತೀವ್ರವಾಗಿ ಖಂಡಿಸಿದ್ದಾರೆ. ದಾಳಿಗೆ ಕಾರಣರಾದ ಕಿಡಿಗೇಡಿಗಳು ಹಾಗೂ ಅವರ ಹಿಂದಿರುವ ಸೂತ್ರಧಾರರ ವಿರುದ್ಧ ಸರ್ಕಾರ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಂಟಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಅಸ್ಪೃಶ್ಯತೆ, ನಿರುದ್ಯೋಗ, ಕೋಮುವಾದ ಮತ್ತು ಬರಗಾಲದಂತಹ ಕಠಿಣ ಸಂದರ್ಭಗಳಲ್ಲಿ ರೈತರ ಹೋರಾಟಗಳ ಜೊತೆ ನಿಂತು ಜಾಗೃತಿ ಮೂಡಿಸಿದ ಇತಿಹಾಸ ‘ಸಮುದಾಯ’ಕ್ಕಿದೆ. ಶರಣರ ನಾಡಿನಲ್ಲಿ ಸಾಂಸ್ಕೃತಿಕ ಪ್ರಜ್ಞೆಯಾಗಿ ಬೆಳೆದ ಇಂತಹ ಜನಚಳುವಳಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆದಿರುವುದು ಖಂಡನೀಯ. ಘಟನೆಯ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ವ್ಯವಸ್ಥೆಯು ತನ್ನ ಅಸಮರ್ಥತೆಯನ್ನು ಪ್ರದರ್ಶಿಸಿ, ದಾಳಿಕೋರರಿಗೆ ಪೂರಕವಾಗಿ ವರ್ತಿಸಿದೆ ಎಂದು ಗಣ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಅರವಿಂದ ಬೆಲ್ಲದ ನಡೆಗೆ ಖಂಡನೆ:
ಧಾರವಾಡ ಶಾಸಕರಾದ ಅರವಿಂದ ಬೆಲ್ಲದ ಅವರು ದಾಳಿ ನಡೆಸಿದ ಕಿಡಿಗೇಡಿಗಳ ಪರವಾಗಿ ನಿಂತು ಪೊಲೀಸ್ ಠಾಣೆಗೆ ಪ್ರವೇಶಿಸಿದ್ದಾರೆ. ಅಲ್ಲದೆ, ಸಮುದಾಯ ಸಂಘಟನೆಯ ವಿರುದ್ಧವೇ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಈ ಸಂದರ್ಭದಲ್ಲಿ “ಇಂಕ್ವಿಲಾಬ್ ಜಿಂದಾಬಾದ್” ಘೋಷಣೆಯನ್ನು ‘ರಾಷ್ಟ್ರವಿರೋಧಿ’ ಎಂದು ಕರೆದಿರುವ ಶಾಸಕರ ಹೇಳಿಕೆಯು ಪ್ರಜಾಪ್ರಭುತ್ವ ವಿರೋಧಿಯಾದುದು ಎಂದು ಜಂಟಿ ಹೇಳಿಕೆಯಲ್ಲಿ ಕಿಡಿಕಾರಲಾಗಿದೆ.

ಈ ಪ್ರಜಾಪ್ರಭುತ್ವ ವಿರೋಧಿ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಸಮುದಾಯ ಸಂಘಟನೆಯ ಪದಾಧಿಕಾರಿಗಳು ಹಾಗೂ ನಾಡಿನ ಸಾಂಸ್ಕೃತಿಕ ವಲಯದ ಪ್ರಮುಖರು, ದಾಳಿಕೋರರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಮನವಿಗೆ ಬೆಂಬಲ ಸೂಚಿಸಿದ ಗಣ್ಯರು ಸಮುದಾಯ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮನೋಜ್ ವಾಮಂಜೂರು, ಕಾರ್ಯಾಧ್ಯಕ್ಷ ಶಶಿಧರ ಕುಮಾರ್ ಜೆ. ಸಿ., ಹಿರಿಯ ಸಾಹಿತಿಗಳಾದ ಡಾ. ಕೆ. ಮರುಳಸಿದ್ದಪ್ಪ, ಡಾ. ಎಲ್. ಹನುಮಂತಯ್ಯ, ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಡಾ. ಬಂಜಗೆರೆ ಜಯಪ್ರಕಾಶ್, ರಂಗ ನಿರ್ದೇಶಕರಾದ ಸಿ. ಬಸವಲಿಂಗಯ್ಯ, ಡಾ. ಹೆಚ್. ಜನಾರ್ಧನ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಎಲ್. ಎನ್. ಮುಕುಂದರಾಜ್, ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ. ವಿ. ನಾಗರಾಜ ಮೂರ್ತಿ, ಲೇಖಕಿಯರಾದ ಡಾ. ವಸುಂಧರಾ ಭೂಪತಿ, ಡಾ. ಎನ್. ಗಾಯತ್ರಿ ಹಾಗೂ ಮಹಿಳಾ ಹಕ್ಕು ಹೋರಾಟಗಾರ್ತಿಯರಾದ ಕೆ. ನೀಲಾ, ಕೆ. ಎಸ್. ವಿಮಲ, ದಸಂಸ ನಾಯಕ ಮಾವಳ್ಳಿ ಶಂಕರ್ ಸೇರಿದಂತೆ ಹಲವು ಗಣ್ಯರು ಈ ಖಂಡನಾ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version