Saturday, June 15, 2024

ಸತ್ಯ | ನ್ಯಾಯ |ಧರ್ಮ

ನ್ಯೂಸ್ ಕ್ಲಿಕ್ ಮೇಲಣ ದಾಳಿ | ಸ್ವತಂತ್ರ ಮಾಧ್ಯಮಗಳಿಗೆ ಮೋದಿ ಸರಕಾರ ಕಳುಹಿಸಿದ ಸಂದೇಶ

ನಿನ್ನೆ ‘ನ್ಯೂಸ್ ಕ್ಲಿಕ್’ ಮೇಲೆ ನಡೆದ ದಾಳಿಗೆ ದೇಶ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಎಡಿಟರ್ಸ್ ಗಿಲ್ಡ್, ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡನೆಯ ಹೇಳಿಕೆ ಬಿಡುಗಡೆ ಮಾಡಿವೆ. ದಾಳಿಯ ನೆಪದಲ್ಲಿ ಪತ್ರಕರ್ತರ ಮೊಬೈಲ್, ಲ್ಯಾಪ್ ಟಾಪ್ ಜಪ್ತಿ ಮಾಡುತ್ತಿರುವುದನ್ನು ಆಕ್ಷೇಪಿಸಿ ಅನೇಕ ಮಾಧ್ಯಮ ಸಂಘಟನೆಗಳು ಭಾರತದ ಸುಪ್ರೀಂ ಕೋರ್ಟ್ ನ ಸಿಜೆಐ ಅವರಿಗೇ ಪತ್ರ ಬರೆದಿವೆ

2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ನರೇಂದ್ರ ದಾಮೋದರ ದಾಸ್ ಮೋದಿಯವರಿಗೆ ಒಂದು ವಿಷಯದಲ್ಲಿ ಬಹಳ ಬೇಸರವಿದೆ. ಗಲಭೆ ನಡೆದುದಕ್ಕಲ್ಲ, ಗಲಭೆ ನಿಯಂತ್ರಿಸಲು ಸಾಧ್ಯವಾಗದ ಬಗ್ಗೆಯೂ ಅಲ್ಲ. ಆ ಗಲಭೆಯ ಮಾಹಿತಿಯು ಮಾಧ್ಯಮಗಳ ಮೂಲಕ ಜಗತ್ತನ್ನು ತಲಪುವುದನ್ನು ನಿಯಂತ್ರಿಸಲು ಸಾಧ್ಯವಾಗದ ಬಗ್ಗೆ; ಸತ್ಯವು ಜಗತ್ತಿಗೆ ತಿಳಿಯುವುದನ್ನು ತಡೆಯಲು ಸಾಧ್ಯವಾಗದ ಬಗ್ಗೆ.

ಇದನ್ನು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅವರು ಸ್ವತಃ ಹೇಳಿದ್ದಾರೆ. ಸರಕಾರದ ಕೆಂಗಣ್ಣಿಗೆ ಗುರಿಯಾಗಿ ನಿಷೇಧದ ಶಿಕ್ಷೆಗೊಳಗಾದ ಆ ಬಿಬಿಸಿ ಸಂದರ್ಶನದಲ್ಲಿ ಸಂದರ್ಶಕಿಯು ಮೋದಿಯವರಿಗೆ ‘ಆ ಗಲಭೆಗೆ ಸಂಬಂಧಿಸಿದಂತೆ ನಿಮ್ಮ ಕೆಲಸದಲ್ಲಿ ಏನಾದರೂ ಲೋಪವಾಯಿತು ಎಂದು ನಿಮಗೆ ಅನಿಸಿದ್ದಿದೆಯೇ?’ ಎಂದು ಕೇಳುತ್ತಾಳೆ. ಅದಕ್ಕೆ ಮೋದಿಯವರು ‘ಹೌದು. ಒಂದು ವಿಷಯದಲ್ಲಿ ನಾನು ವಿಫಲನಾದೆ. ನಾನು ಮೀಡಿಯಾವನ್ನು ಇನ್ನೂ ಚೆನ್ನಾಗಿ ಮ್ಯಾನೇಜ್ ಮಾಡಬೇಕಿತ್ತು’ ಎನ್ನುತ್ತಾರೆ!

2014 ರಲ್ಲಿ ಪ್ರಧಾನಿಯಾದ ಮೇಲೆ ಮೋದಿಯವರು ಮೊದಲು ಮಾಡಿದ್ದು ಮೀಡಿಯಾವನ್ನು ‘ಮ್ಯಾನೇಜ್’ ಮಾಡುವ ಕೆಲಸ. ಅದಕ್ಕೆ ಅವರು ಎರಡು ತಂತ್ರಗಳನ್ನು ಬಳಸಿದರು.

ಜಂತರ್ ಮಂತರ್ ನಲ್ಲಿ ಪ್ರತಿಭಟನೆ

ಮೊದಲನೆಯ ತಂತ್ರ ಆಮಿಷಗಳ ಮೂಲಕ ಮಾಧ್ಯಮಗಳು ಮಂಡಿಯೂರುವಂತೆ ಮಾಡುವುದು. ಉದಾರವಾಗಿ ಜಾಹೀರಾತುಗಳು, ಪತ್ರಕರ್ತರಿಗೆ ಸರಕಾರಿ ಪ್ರಶಸ್ತಿಗಳು, ರಾಜ್ಯಸಭಾ ಸದಸ್ಯತ್ವ.. ಹೀಗೆ. ತೆವಳಲು ಹೇಳುವ ಮುನ್ನವೇ ಮಂಡಿಯೂರಿದ ಇಂತಹ ಮಾಧ್ಯಮಗಳನ್ನು ಖ್ಯಾತ ಪತ್ರಕರ್ತ ರವೀಶ್ ಕುಮಾರ್ ‘ಗೋದಿ ಮೀಡಿಯಾ’ ಎಂದು ಹೆಸರಿಸಿದ್ದಾರೆ.

ಎರಡನೆಯ ತಂತ್ರ– ಬೆದರಿಕೆ ಹಾಕುವುದು. ಮಂಡಿಯೂರಲು ಒಪ್ಪದ ಮಾಧ್ಯಮಗಳಿಗೆ ಜಾಹೀರಾತು ಸಿಗದಂತೆ ಮಾಡುವುದು, ಅವುಗಳ ಮೇಲೆ ಸಿಬಿಐ, ಐಟಿ, ಈಡಿ ದಾಳಿ ನಡೆಸುವುದು, ತಮ್ಮ ಗೆಳೆಯ ಉದ್ಯಮಿಗಳ ಮೂಲಕ ಇಡೀ ಮಾಧ್ಯಮವನ್ನು ಖರೀದಿ ಮಾಡುವುದು ಹೀಗೆ.

ಇದರ ಭಾಗವಾಗಿಯೇ, ದಿಟ್ಟವಾಗಿ ಮಾ‍ಧ್ಯಮವೃತ್ತಿ ನಡೆಸುತ್ತಿದ್ದ ಎನ್ ಡಿ ಟಿ ವಿಯ ಮೇಲೆ ದಾಳಿ ನಡೆಯಿತು. ನ್ಯಾಯಾಲಯದಲ್ಲಿ ಸರಕಾರಕ್ಕೆ ಅನುಕೂಲವಾಗದಿದ್ದಾಗ ಇಡೀ ಎನ್ ಡಿ ಟಿವಿಯನ್ನು ಅದಾನಿಯ ಮೂಲಕ ಖರೀದಿಸಲಾಯಿತು. ಅಲ್ಲಿದ್ದ ಖ್ಯಾತ ಪತ್ರಕರ್ತರಾದ ರವೀಶ್ ಕುಮಾರ್, ಶ್ರೀನಿವಾಸನ್ ಜೈನ್, ನಿಧಿ ರಾಜಧಾನ್, ಸಾರಾ ಜೇಕಬ್ ಮೊದಲಾದವರು ಹೊರಹೋಗುವಂತೆ ಮಾಡಲಾಯಿತು. ಎನ್ ಡಿ ಟಿವಿಯ ಬಳಿಕ, ತಮಗೆ ಅನುಕೂಲವಾಗುವಂತೆ ನಡೆದುಕೊಳ್ಳದ ಟ್ವಿಟರ್ ಕಚೇರಿಯ ಮೇಲೆ ಐಟಿ ದಾಳಿ ನಡೆಸಲಾಯಿತು. ಆನಂತರ ಬಿಬಿಸಿ ಕಚೇರಿ, ನ್ಯೂಸ್ ಲಾಂಡ್ರಿ, ದಿ ವೈರ್. ಈಗ ನ್ಯೂಸ್ ಕ್ಲಿಕ್.

ನ್ಯೂಸ್ ಕ್ಲಿಕ್’ ಮೇಲಣ ಧಾಳಿ

‘ನ್ಯೂಸ್ ಕ್ಲಿಕ್’ ಮೇಲಣ ದಾಳಿಯಂತೂ ಮೋದಿ ಸರಕಾರ ಯಾವ ಮಟ್ಟಕ್ಕೆ ಹೋಗಬಲ್ಲುದು ಎಂಬುದನ್ನು ತೋರಿಸಿಕೊಟ್ಟಿದೆ. ಸುಮಾರು 46 ಪತ್ರಕರ್ತರು, ಉದ್ಯೋಗಿಗಳು, ಆ ಮಾಧ್ಯಮಕ್ಕೆ ಬರೆಯುತ್ತಿದ್ದ ಲೇಖಕರು ಎಲ್ಲರ ಮನೆಗೂ ದಾಳಿ ಮಾಡಿ ಅವರ ಮೊಬೈಲ್ ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ. ಇಬ್ಬರ ಮೇಲೆ ಯುಎಪಿಎ ಕೇಸು ದಾಖಲಿಸಿ ಬಂಧಿಸಲಾಗಿದೆ!

ಯುಎಪಿಎ ಕೇಸು ದಾಖಲಿಸುವುದು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣದಲ್ಲಿ. ಆದರೆ ಇದೀಗ ಅದನ್ನು ಮಾಧ್ಯಮಗಳ ಮೇಲೂ ದಾಖಲಿಸಲಾರಂಭಿಸಲಾಗಿದೆ. ನ್ಯೂಸ್ ಕ್ಲಿಕ್ ಮೇಲೆ ಹೆಚ್ಚೆಂದರೆ ಎಫ್ ಸಿ ಆರ್ ಐ ಅಡಿಯಲ್ಲಿ ಕೇಸು ದಾಖಲಿಸಬಹುದು. ಆದರೆ, ಭಯೋತ್ಪಾದನೆಗೆ ಸಂಬಂಧಿಸಿದ ಏನು ಅಪರಾಧ ಮಾಡಿದೆ ಅದು? ಈ ಬಗ್ಗೆ ಅಲ್ಲಿ ಪ್ರಕಟವಾದ ಯಾವುದಾದರೂ ಒಂದು ಲೇಖನ ಅಥವಾ ವೀಡಿಯೋ ಸಾಕ್ಷ್ಯ ಕೊಡಬೇಕಲ್ಲವೇ ಸರಕಾರ? ಎರಡು ವರ್ಷ ಹಿಂದೆ ನ್ಯೂಸ್ ಕ್ಲಿಕ್ ಮೇಲೆ ಕೇಸು ದಾಖಲಿಸಿದಾಗ ಇದೇ ನೆಲೆಯಲ್ಲಿ ದೆಹಲಿ ಕೋರ್ಟ್ ‍ನ್ಯೂಸ್ ಕ್ಲಿಕ್ ಸಂಪಾದಕರಿಗೆ ರಕ್ಷಣೆ ಒದಗಿಸಿತ್ತು. ಆದರೆ ಈಗ ನ್ಯೂಯಾರ್ಕ್ ಟೈಮ್ಸ್ ನ ಒಂದು ವರದಿಯ ಪಿಳ್ಳೆ ನೆವ ಹಿಡಿದುಕೊಂಡು ನ್ಯೂಸ್ ಕ್ಲಿಕ್ ಗೆ ಸಂಬಂಧಿಸಿದ ಎಲ್ಲರ ಮೇಲೂ ದಾಳಿ ನಡೆಸಲಾಗಿದೆ.

ದಾಳಿಯೇನೋ ನ್ಯೂಸ್ ಕ್ಲಿಕ್ ಮೇಲೆ. ಆದರೆ ಸಂದೇಶ ಕಳುಹಿಸುತ್ತಿರುವುದು ದಿಟ್ಟ ಪತ್ರಿಕಾವೃತ್ತಿ ನಡೆಸುತ್ತ ಸರಕಾರವನ್ನು ಪ್ರಶ್ನಿಸುತ್ತಿರುವ ಮಾ‍ಧ್ಯಮಗಳ ಪ್ರತಿಯೊಬ್ಬ ಮಂದಿಗೆ. ‘ನೀವು ನಮ್ಮ ಭಜನೆ ಮಾಡದಿದ್ದರೆ ನ್ಯೂಸ್ ಕ್ಲಿಕ್ ಗೆ ಆದ ಗತಿ  ನಿಮಗೂ ಆಗಲಿದೆ’ ಎಂಬುದೇ ಆ ಸಂದೇಶ. ಸರಕಾರಗಳು ತಮ್ಮನ್ನು ತಾವು ಎಷ್ಟೇ ಪ್ರಜಾಸತ್ತಾತ್ಮಕ ಎಂದು ಕರೆದುಕೊಳ್ಳಲಿ, ಬಹುವಾಗಿ ಅವು ಟೀಕೆಯನ್ನು ಸಹಿಸುವುದಿಲ್ಲ. ಅದರಲ್ಲೂ ಮೋದಿ ಸರಕಾರ ಈ ಅಸಹನೆಯನ್ನು ದ್ವೇಷವಾಗಿಸಿ ಇನ್ನೊಂದು ಮಟ್ಟಕ್ಕೆ ಒಯ್ದಿದೆ.

ದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರಿಂದ ಪ್ರತಿಭಟನೆ

ತಿರುಗುಬಾಣವಾಗಲಿದೆ

ಆದರೆ, ಇಂತಹ ಬೆದರಿಕೆಯ ನಡೆಗಳು ತಮಗೆ ತಿರುಗುಬಾಣವಾಗಲಿದೆ ಎನ್ನುವುದು ಈ ಸರಕಾರಗಳಿಗೆ ಯಾಕೆ ಅರ್ಥವಾಗುತ್ತಿಲ್ಲವೋ ತಿಳಿಯುತ್ತಿಲ್ಲ. ನಿನ್ನೆ ನ್ಯೂಸ್ ಕ್ಲಿಕ್ ಮೇಲೆ ನಡೆದ ದಾಳಿಗೆ ದೇಶ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಎಡಿಟರ್ಸ್ ಗಿಲ್ಡ್, ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡನೆಯ ಹೇಳಿಕೆ ಬಿಡುಗಡೆ ಮಾಡಿವೆ. ದಾಳಿಯ ನೆಪದಲ್ಲಿ ಪತ್ರಕರ್ತರ ಮೊಬೈಲ್, ಲ್ಯಾಪ್ ಟಾಪ್ ಜಪ್ತಿ ಮಾಡುತ್ತಿರುವುದನ್ನು ಆಕ್ಷೇಪಿಸಿ ಅನೇಕ ಮಾಧ್ಯಮ ಸಂಘಟನೆಗಳು ಭಾರತದ ಸುಪ್ರೀಂ ಕೋರ್ಟ್ ನ ಸಿಜೆಐ ಅವರಿಗೇ ಪತ್ರ ಬರೆದಿವೆ.

ಮೋದಿ ಸರಕಾರ ಮಾಧ್ಯಮಗಳ ಮೇಲೆ ನಡೆಸುತ್ತಿರುವ ಪ್ರತೀಕಾರ ದಾಳಿಯನ್ನು ಖಂಡಿಸಿ ನಿನ್ನೆ ದೆಹಲಿಯ ಜಂತರ್ ಮಂತರ್ ನಲ್ಲಿ ಭಾರೀ ಪ್ರತಿಭಟನಾ ಸಭೆ ನಡೆದಿದೆ. ಪ್ರೆಸ್ ಕ್ಲಬ್ ವತಿಯಿಂದಲೂ ನೂರಾರು ಹಿರಿಯ ಮತ್ತು ಕಿರಿಯ ಪತ್ರಕರ್ತರು ಸಭೆ ಸೇರಿ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಕಟುವಾಗಿ ಖಂಡಿಸಿದ್ದಾರೆ. ದೇಶದಾದ್ಯಂತದ ಪ್ರತಿಭಟನಾ ಪ್ರದರ್ಶನದ ಭಾಗವಾಗಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲೂ ಪ್ರತಿಭಟನಾ ಸಭೆ ನಡೆಯಲಿದೆ.

ಸರ್ವಾಧಿಕಾರಿಗಳು ಪತನಗೊಳ್ಳುವುದು ಬೇರೆಯವರ ಕಾರಣದಿಂದಲ್ಲ. ತಮ್ಮದೇ ತಪ್ಪುಗಳಿಂದ, ಅತಿರೇಕಗಳಿಂದ. ಈಗಣ ಒಕ್ಕೂಟ ಸರಕಾರವನ್ನು ನಡೆಸುತ್ತಿರುವ ಪಕ್ಷಕ್ಕೆ ಚುನಾವಣಾ ಸೋಲಿನ ಸೂಚನೆ ಸಿಕ್ಕಂತೆ ಕಾಣಿಸುತ್ತಿದೆ. ಅದರ ಪರಿಣಾಮವೇ ದೇಶದಾದ್ಯಂತ ವಿರೋಧಿಗಳ ಮೇಲೆ ನಡೆಸಲಾಗುತ್ತಿರುವ ಬಗೆ ಬಗೆಯ ದಾಳಿ. ಈ ದಿಶೆಯಲ್ಲಿ ಸರಕಾರದ ಧಾವಂತ ನೋಡುವಾಗ, ‘ವಿನಾಶ ಕಾಲೇ ವಿಪರೀತ ಬುದ್ಧಿಃ’, ‘ಪಾಪದ ಕೊಡ ತುಂಬುತ್ತಿದೆ’, ‘ಅಂತ್ಯದ ಆರಂಭ’ ಮೊದಲಾದ ನುಡಿಗಟ್ಟುಗಳು ಏಕಕಾಲಕ್ಕೆ ನೆನಪಾಗುತ್ತಿವೆ. (ಚಿತ್ರಗಳು: ಶಬನಂ ಹಶ್ಮಿ)

ಶ್ರೀನಿವಾಸ ಕಾರ್ಕಳ

ಮಂಗಳೂರು

ಇದನ್ನೂ ಓದಿ – ಪತ್ರಿಕಾರಂಗ ಭಯೋತ್ಪಾದನೆಯಲ್ಲ: ಮಾಧ್ಯಮ ಸಂಸ್ಥೆಗಳಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ

Related Articles

ಇತ್ತೀಚಿನ ಸುದ್ದಿಗಳು