Friday, December 26, 2025

ಸತ್ಯ | ನ್ಯಾಯ |ಧರ್ಮ

ಹದ್ದುಮೀರಿದ ಹಿಂದುತ್ವ ಶಕ್ತಿಗಳು: ಕ್ರಿಸ್‌ಮಸ್ ವೇಳೆ ಕ್ರೈಸ್ತರ ಮೇಲೆ ದಾಳಿ, ಅಲಂಕಾರಗಳ ಧ್ವಂಸ

ವಿಶ್ವದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಗುತ್ತಿದ್ದರೆ, ಭಾರತದ ಹಲವು ಭಾಗಗಳಲ್ಲಿ ಸಂಘ ಪರಿವಾರದ ಶಕ್ತಿಗಳು ಅಶಾಂತಿ ಸೃಷ್ಟಿಸಿವೆ. ವಿವಿಧ ಪ್ರದೇಶಗಳಲ್ಲಿ ಕ್ರೈಸ್ತರು ಮತ್ತು ಕ್ರಿಸ್‌ಮಸ್ ಕಾರ್ಯಕ್ರಮಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ.

ಹಬ್ಬದ ಆಚರಣೆಗಳಿಗೆ ಅಡ್ಡಿಪಡಿಸಿ, ಹಿಂಸಾತ್ಮಕ ವಾತಾವರಣ ನಿರ್ಮಿಸುವ ಮೂಲಕ ಸಂಘಟಕರು ಮತ್ತು ಭಕ್ತರನ್ನು ಬೆದರಿಸಲಾಗಿದೆ. ವರದಿಗಳ ಪ್ರಕಾರ, ಇಂತಹ ಘಟನೆಗಳು ಹೆಚ್ಚಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ದಾಖಲಾಗಿವೆ.

ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಮ್ಯಾಗ್ನೆಟೋ ಮಾಲ್‌ನಲ್ಲಿ ಬಜರಂಗದಳದ ಕಾರ್ಯಕರ್ತರು ಕ್ರಿಸ್‌ಮಸ್ ಅಲಂಕಾರಗಳನ್ನು ಧ್ವಂಸಗೊಳಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಕಾರ್ಯಕರ್ತರು ಮಾಲ್‌ನೊಳಗೆ ನುಗ್ಗಿ ದ್ವೇಷಪೂರಿತ ಘೋಷಣೆಗಳನ್ನು ಕೂಗಿದ್ದಲ್ಲದೆ, ಅಲ್ಲಿ ಸ್ಥಾಪಿಸಲಾಗಿದ್ದ ಸ್ಯಾಂಟಾ ಕ್ಲಾಸ್ ಪ್ರತಿಮೆಯನ್ನು ಪುಡಿಮಾಡಿದ್ದಾರೆ. ಈ ಘಟನೆಯಿಂದ ಅಲ್ಲಿ ನೆರೆದಿದ್ದ ಮಹಿಳೆಯರು ಮತ್ತು ಮಕ್ಕಳು ತೀವ್ರ ಭಯಭೀತರಾಗಿದ್ದಾರೆ.

ಉತ್ತರ ಪ್ರದೇಶದ ಬರೇಲಿ ಪಟ್ಟಣದ ಪ್ರಸಿದ್ಧ ಚರ್ಚ್ ಒಂದರ ಎದುರು ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸುವ ಮೂಲಕ ಪ್ರಚೋದನೆ ನೀಡಿದ್ದಾರೆ. ವಿಶೇಷವೆಂದರೆ, ಪೊಲೀಸರ ಸಮ್ಮುಖದಲ್ಲಿಯೇ ಈ ಘಟನೆ ನಡೆದಿದೆ. ಸುಮಾರು 20ಕ್ಕೂ ಹೆಚ್ಚು ಮಂದಿ ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗುತ್ತಾ ಆಚರಣೆಗೆ ಅಡ್ಡಿಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯೋಗಿ ಸರ್ಕಾರದ ವೈಫಲ್ಯದ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನ ನಲ್ಬರಿ ಜಿಲ್ಲೆಯ ಸೇಂಟ್ ಮೇರಿಸ್ ಶಾಲೆಯಲ್ಲಿ ಕ್ರಿಸ್‌ಮಸ್ ಆಚರಣೆ ನಡೆಯುತ್ತಿದ್ದಾಗ ವಿಎಚ್‌ಪಿ ಮತ್ತು ಬಜರಂಗದಳದ ಕಾರ್ಯಕರ್ತರು ಶಾಲೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲಿ ಹಬ್ಬಕ್ಕಾಗಿ ಮಾಡಲಾಗಿದ್ದ ಅಲಂಕಾರಗಳನ್ನು ಕಿತ್ತುಹಾಕಿ ಅವುಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರದ ಬೆಂಬಲದೊಂದಿಗೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಹಲವು ಕ್ರೈಸ್ತ ಸಂಘಟನೆಗಳು ಮತ್ತು ಸಾರ್ವಜನಿಕರು ಆರೋಪಿಸಿದ್ದಾರೆ. ಮಧ್ಯಪ್ರದೇಶದ ಚರ್ಚ್ ಒಂದರಲ್ಲಿ ದೃಷ್ಟಿಹೀನ ಯುವತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಅಂಜು ಭಾರ್ಗವ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಕ್ರೈಸ್ತ ಸಮುದಾಯ ಖಂಡಿಸಿದೆ. ಅಲ್ಪಸಂಖ್ಯಾತರ ಹಿತರಕ್ಷಣೆ ಮಾಡಬೇಕಾದ ಸರ್ಕಾರಗಳೇ ಇಂತಹ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page