Wednesday, July 17, 2024

ಸತ್ಯ | ನ್ಯಾಯ |ಧರ್ಮ

ಆಂಧ್ರ ಮಾಜಿ ಸಿಎಂ ಜಗನ್ ರೆಡ್ಡಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು: ಶಾಸಕನ ಕೊಲೆಗೆ ಸ್ಕೇಚ್‌

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಇಬ್ಬರು ಐಪಿಎಸ್‌ ಅಧಿಕಾರಿಗಳು ಸೇರಿದಂತೆ ಇತರರ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಟಿಡಿಪಿ ಪಕ್ಷದ ಶಾಸಕ ಕೆ ರಘುರಾಮ ಕೃಷ್ಣರಾಜು ದೂರು ನೀಡಿದ್ದಾರೆ.

ತಮ್ಮ ಕೊಲೆಗೆ ಜಗನ್ ಮತ್ತು ಇಬ್ಬರು ಅಧಿಕಾರಿಗಳಾದ ಪಿವಿ ಸುನೀಲ್ ಕುಮಾರ್ ಮತ್ತು ಪಿಎಸ್ ಆರ್ ಸೀತಾರಾಮಾಂಜನೇಯುಲು ಸಂಚು ರೂಪಿಸುತ್ತಿದ್ದಾರೆ ಎಂದು ಶಾಸಕ ನೀಡಿರುವ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳನ್ನು ನಿವೃತ್ತ ಪೊಲೀಸ್ ಅಧಿಕಾರಿ ಆರ್ ವಿಜಯ್ ಪಾಲ್ ಮತ್ತು ಮಾಜಿ ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆ ಅಧೀಕ್ಷಕ ಜಿ ಪ್ರಭಾವತ್ ಎಂದು ಗುರುತಿಸಲಾಗಿದೆ.

“ಇದು ಹೈ ಪ್ರೊಫೈಲ್‌ ಕೇಸ್‌, ಶಾಸಕ ರಾಜು ಅವರು ಒಂದು ತಿಂಗಳ ಹಿಂದೆ ಪೊಲೀಸರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಕಾನೂನು ಅಭಿಪ್ರಾಯವನ್ನು ಪಡೆದ ನಂತರ ನಾವು ಮಾಜಿ ಮುಖ್ಯಮಂತ್ರಿ ಮತ್ತು ಇತರರ ವಿರುದ್ಧ ಗುರುವಾರ ಸಂಜೆ ಪ್ರಕರಣ ದಾಖಲಿಸಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಪ್ರಕಟಿಸಿದೆ. ಪ್ರಕರಣದ ಎಲ್ಲ ಐವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ 2021ರಲ್ಲಿ ತಮ್ಮನ್ನು ಪೊಲೀಸರು ಬಂಧಿಸಿದ್ದರು. ಠಾಣೆಯಲ್ಲಿ ದೌರ್ಜನ್ಯ ಎಸಗಿದರು. ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಮತ್ತು ಅಧಿಕಾರಿಗಳು ನನ್ನನ್ನು ಮುಗಿಸಿಬಿಡಲು ಕ್ರಿಮಿನಲ್ ‘ಪಿತೂರಿ’ ಮಾಡಿದ್ದರು” ಎಂದು ರಾಜು ಆರೋಪಿಸಿದ್ದರು. *

“ ಆಗ ಆಂಧ್ರಪ್ರದೇಶ ಸರ್ಕಾರದ ಸಿಬಿ-ಸಿಐಡಿ ನನ್ನ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿತ್ತು. 2021ರ ಮೇ 14ರಂದು ಯಾವುದೇ ನೋಟಿಸ್‌ ನೀಡದೆ ನನ್ನನ್ನು ಬಂಧಿಸಿ, ಬೆದರಿಸಲಾಯಿತು. ಕಾನೂನುಬಾಹಿರವಾಗಿ ನನ್ನನ್ನು ಪೊಲೀಸ್ ವಾಹನದಲ್ಲಿ ಎಳೆದೊಯ್ದು, ಗುಂಟೂರಿಗೆ ಕರೆದೊಯ್ಯಲಾಯಿತು ಆಗ ಕುಮಾರ್ ಅವರು ಸಿಐಡಿ ಮುಖ್ಯಸ್ಥರಾಗಿದ್ದರು. ಸೀತಾರಾಮಾಂಜನೇಯುಲು ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದರು. ಪಾಲ್ ಅವರು ಸಿಐಡಿಯ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದರು ಮತ್ತು ರೆಡ್ಡಿ ಮುಖ್ಯಮಂತ್ರಿಯಾಗಿದ್ದರು” ಎಂದು ಶಾಸಕ ರಾಜು ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು