Home ಬ್ರೇಕಿಂಗ್ ಸುದ್ದಿ ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ

ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ

ಹಾಸನ: ಕಾಳಸಂತೆಯಲ್ಲಿ ಮಾರಾಟ ಮಾಡಲು ಪಡಿತರ ಅಕ್ಕಿ ಹಾಗೂ ರಾಗಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದಲ್ಲದೆ, ಆಟೋದಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಹಾಸನ ನಗರದ 80 ಅಡಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಒಟ್ಟು 19 ಕ್ವಿಂಟಾಲ್ ಪಡಿತರ ಅಕ್ಕಿ, 2.50 ಕ್ವಿಂಟಾಲ್ ರಾಗಿ ಹಾಗೂ ಆಪೆ ಆಟೋವನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪುರುಷೋತ್ತಮ್ ಎಂಬುವವರು ಬಾಡಿಗೆಗೆ ನೀಡಿದ್ದ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 14 ಕ್ವಿಂಟಾಲ್ ಪಡಿತರ ಅಕ್ಕಿ ಹಾಗೂ 2 ಕ್ವಿಂಟಾಲ್ ರಾಗಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಅಕ್ಕಿಯ ಮೌಲ್ಯ ಸುಮಾರು 33 ಸಾವಿರ ರೂ. ಹಾಗೂ ರಾಗಿಯ ಮೌಲ್ಯ 10,800 ರೂ. ಎಂದು ತಿಳಿದುಬಂದಿದೆ.

ಇದೇ ವೇಳೆ, ಆಪೆ ಆಟೋದಲ್ಲಿ ಸಾಗಿಸುತ್ತಿದ್ದ 5 ಕ್ವಿಂಟಾಲ್ ಪಡಿತರ ಅಕ್ಕಿ ಹಾಗೂ 50 ಕೆಜಿ ರಾಗಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಅಕ್ರಮ ದಾಸ್ತಾನು ಮತ್ತು ಸಾಗಣೆ ಪ್ರಕರಣದಲ್ಲಿ 19 ಕ್ವಿಂಟಾಲ್ ಅಕ್ಕಿ ಹಾಗೂ 2.50 ಕ್ವಿಂಟಾಲ್ ರಾಗಿ ಪತ್ತೆಯಾಗಿದೆ.

ಆಹಾರ ಇಲಾಖೆಯ ಉಪ ನಿರ್ದೇಶಕಿ ವಸಂತಕುಮಾರಿ ಅವರ ನೇತೃತ್ವದಲ್ಲಿ ಆಹಾರ ನಿರೀಕ್ಷಕರಾದ ಜಗನ್ನಾಥ್, ಯತೀಶ್, ಪ್ರಭು ಶಂಕರ್ ಹಾಗೂ ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂಬಂಧ ಹಾಸನದ ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡಿತರ ಆಹಾರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದ ಆರೋಪದ ಕುರಿತು ಮುಂದಿನ ತನಿಖೆ ನಡೆಯಲಿದೆ.

You cannot copy content of this page

Exit mobile version