Tuesday, March 17, 2026

ಸತ್ಯ | ನ್ಯಾಯ |ಧರ್ಮ

‘ಕೆಡಿ’ ಸಿನಿಮಾ ಹಾಡಿನ ವಿವಾದ: ನಿರ್ದೇಶಕ ಪ್ರೇಮ್ ಅಶ್ಲೀಲ ಸಾಹಿತ್ಯಕ್ಕೆ ಪ್ರೇಕ್ಷಕರ ಆಕ್ರೋಶ

ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಕೆಡಿ’ಚಿತ್ರದಲ್ಲಿನ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಬಿಡುಗಡೆಗೊಂಡ ಬೆನ್ನಲ್ಲೇ ವಿವಾದಕ್ಕೆ ಕಾರಣವಾಗಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾದ ಹಾಡಿನಲ್ಲಿ ಅಶ್ಲೀಲ ಮತ್ತು ಡಬಲ್ ಮೀನಿಂಗ್ ಸಾಹಿತ್ಯವಿದೆ ಎಂಬ ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಈ ಹಾಡಿನಲ್ಲಿ ನೋರಾ ಫತೇಹಿ ಅವರ ನೃತ್ಯ ಪ್ರಮುಖ ಆಕರ್ಷಣೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದೊಡ್ಡ ಮಟ್ಟದ ಪ್ರಚಾರ ಪಡೆದಿದೆ. ಆದಾಗ್ಯೂ, ಹಾಡಿನ ಸಾಹಿತ್ಯದ ಬಗ್ಗೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಯೋಜನೆಯ ಈ ಹಾಡಿಗೆ ಕನ್ನಡದಲ್ಲಿ ಸ್ವತಃ ನಿರ್ದೇಶಕ ಪ್ರೇಮ್ ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯಾ ರಂಗರಾಜನ್ ಗಾಯನ ಮಾಡಿರುವ ಕನ್ನಡ ವರ್ಷನ್‌ಗೆ ಸಮಾನವಾಗಿ, ಹಿಂದಿ ರೂಪಾಂತರಕ್ಕೆ ರಖೀಬ್ ಆಲಂ ಸಾಹಿತ್ಯ ಬರೆದು, ಮಂಗ್ಲಿ ಧ್ವನಿ ನೀಡಿದ್ದಾರೆ.

ಹಾಡಿನಲ್ಲಿ ಮದ್ಯಪಾನ ಮತ್ತು ಡಬಲ್ ಮೀನಿಂಗ್ ಅಂಶಗಳಿರುವುದಾಗಿ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, “ಇಂತಹ ಕಳಪೆ ಸಾಹಿತ್ಯವನ್ನು ನಿರೀಕ್ಷಿಸಿರಲಿಲ್ಲ” ಎಂಬ ಟೀಕೆಗಳು ಕೇಳಿಬರುತ್ತಿವೆ. ನಿರ್ದೇಶಕ ಪ್ರೇಮ್ ಅವರ ಹಿಂದಿನ ಉತ್ತಮ ಸಾಹಿತ್ಯದ ಹಿನ್ನೆಲೆ, ಈ ಹಾಡು ನಿರಾಶೆ ಮೂಡಿಸಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಹಿಂದಿ ಪ್ರೇಕ್ಷಕರಿಂದಲೂ ವಿರೋಧ ವ್ಯಕ್ತವಾಗಿದ್ದು, ಖ್ಯಾತ ಗಾಯಕ ಅರ್ಮಾನ್ ಮಲಿಕ್ ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಟೀಕಿಸಿದ್ದಾರೆ.

ಇತ್ತೀಚೆಗೆ ಬಾದ್‌ಶಾ ಅವರ ‘ಟಟೀರಿ’ ಹಾಡಿನ ವಿವಾದದ ಹಿನ್ನೆಲೆ, ಈ ಹಾಡಿನ ವಿರುದ್ಧವೂ ಮಹಿಳಾ ಸಂಘಟನೆಗಳು ಧ್ವನಿ ಎತ್ತುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಈ ವಿವಾದ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page