Home ರಾಜಕೀಯ ಮತ್ತೆ ಭುಗಿಲೆದ್ದ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ: ಡಿ.ವಿ. ಸದಾನಂದಗೌಡರ ಹೆಸರಿನ ಆಡಿಯೋ ವೈರಲ್

ಮತ್ತೆ ಭುಗಿಲೆದ್ದ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ: ಡಿ.ವಿ. ಸದಾನಂದಗೌಡರ ಹೆಸರಿನ ಆಡಿಯೋ ವೈರಲ್

0

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ತೀವ್ರಗೊಂಡಿರುವ ನಡುವೆಯೇ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರದ್ದೆನ್ನಲಾದ ಆಡಿಯೋ ಈಗ ಮತ್ತೆ ರಾಜ್ಯಾಧ್ಯಕ್ಷ ಬದಲಾವಣೆಯ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಹುದ್ದೆಯಿಂದ ತೆರವುಗೊಳಿಸುವ ಕುರಿತು ಕೇಂದ್ರ ನಾಯಕತ್ವದೊಂದಿಗೆ ಮಾತುಕತೆ ನಡೆಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಈ ಆಡಿಯೋದಲ್ಲಿ ವಿಜಯೇಂದ್ರ ಅವರನ್ನು ತಕ್ಷಣವೇ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಬಾರದು, ಆಗಸ್ಟ್–ಅಕ್ಟೋಬರ್ ವೇಳೆಯವರೆಗೆ ಮುಂದುವರೆಯಲು ಅವಕಾಶ ನೀಡಿ ಬಳಿಕ ಬದಲಾವಣೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.

ಆಡಿಯೋದಲ್ಲಿರುವ ಧ್ವನಿ ಮಾಜಿ ಸಿಎಂ ಸದಾನಂದಗೌಡರದ್ದೇ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ. ಆದರೆ, ಅದರಲ್ಲಿನ ಹೇಳಿಕೆಗಳು ರಾಜ್ಯ ಬಿಜೆಪಿಯೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ಹೊಸ ಚರ್ಚೆಗೆ ವೇದಿಕೆ ಕಲ್ಪಿಸಿವೆ. ವಿಶೇಷವಾಗಿ, ವಿಜಯೇಂದ್ರ ಅವರನ್ನು ಈಗಲೇ ಹುದ್ದೆಯಿಂದ ಕೆಳಗಿಳಿಸಿದರೆ ಪಕ್ಷದ ಮೇಲೆ “ಲಿಂಗಾಯತ ವಿರೋಧಿ” ಎಂಬ ಆರೋಪ ಬರುವ ಸಾಧ್ಯತೆ ಇದೆ ಎಂಬ ಮಾತುಗಳೂ ಆಡಿಯೋದಲ್ಲಿ ಕೇಳಿಬಂದಿವೆ.

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿಯ ಕೆಲವು ಹಿರಿಯ ನಾಯಕರು ರಾಜ್ಯ ಘಟಕದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಬಹಿರಂಗವಾಗಿ ಟೀಕಿಸಿದ್ದರು. ಈ ಬೆಳವಣಿಗೆಗಳ ನಡುವೆಯೇ ಸದಾನಂದಗೌಡರ ಹೆಸರಿನಲ್ಲಿ ವೈರಲ್ ಆಗಿರುವ ಆಡಿಯೋ ಪಕ್ಷದೊಳಗಿನ ಅಸಮಾಧಾನದ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಆದರೆ, ಆಡಿಯೋದ ಸತ್ಯಾಸತ್ಯತೆ ಕುರಿತು ಬಿಜೆಪಿ ನಾಯಕತ್ವದಿಂದ ಅಥವಾ ಸದಾನಂದಗೌಡರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ. ಈ ಹಿನ್ನೆಲೆಯಲ್ಲಿ ವೈರಲ್ ಆಗಿರುವ ಆಡಿಯೋ ಕುರಿತು ಸ್ಪಷ್ಟನೆ ಹಾಗೂ ಅಧಿಕೃತ ದೃಢೀಕರಣಕ್ಕಾಗಿ ರಾಜಕೀಯ ವಲಯ ಕಾದು ನೋಡುತ್ತಿದೆ.

ರಾಜ್ಯ ಬಿಜೆಪಿಯಲ್ಲಿ ಈಗಾಗಲೇ ನಾಯಕತ್ವ, ಸಂಘಟನೆ ಮತ್ತು ಮುಂದಿನ ರಾಜಕೀಯ ತಂತ್ರಗಳ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಆಡಿಯೋ ಹೊರಬಿದ್ದಿರುವುದು ಪಕ್ಷದ ಒಳರಾಜಕೀಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿವೆ.

You cannot copy content of this page

Exit mobile version