Home ಅಪಘಾತ K R ಸರ್ಕಲ್​​ನಲ್ಲಿ ಭೀಕರ ಅಪಘಾತ, ಬಿಎಂಟಿಸಿಗೆ ಆಟೋ ಚಾಲಕ ಬಲಿ

K R ಸರ್ಕಲ್​​ನಲ್ಲಿ ಭೀಕರ ಅಪಘಾತ, ಬಿಎಂಟಿಸಿಗೆ ಆಟೋ ಚಾಲಕ ಬಲಿ

ಬೆಂಗಳೂರು : ಇತ್ತೀಚಿಗೆ ಶಕ್ತಿ ಕೇಂದ್ರ ವಿಧಾನಸೌಧ ಬಳಿ ಕೆಆರ್ ಸರ್ಕಲ್​​ನಲ್ಲಿ ಎರಡು ಬಿಎಂಟಿಸಿ ಬಸ್ ಗಳ ಮಧ್ಯ ಸಂಭವಿಸಿದ್ದ ಭೀಕರ ಅಪಘಾತ ಮಾಸುವ ಮುನ್ನವೇ ಶನಿವಾರ ಅದೇ ಸ್ಥಳದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, 60 ವರ್ಷದ ಆಟೋ ಚಾಲಕ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಕೆಆರ್ ಸರ್ಕಲ್ ಬಳಿ ಬಿಎಂಟಿಸಿ ಎಲೆಕ್ಟ್ರಿಕಲ್ ಬಸ್​ವೊಂದು ಮುಂದೆ ಹೋಗುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್​​ಗೆ ಗುದ್ದಿದ ಪರಿಣಾಮ ಚಾಲಕ ಸೇರಿದಂತೆ ಐದಾರು ಪ್ರಯಾಣಿಕರು ಗಾಯಗೊಂಡಿದ್ದರು. ಇದೀಗ ಅದೇ ಸ್ಥಳದಲ್ಲಿ ಬಿಎಂಟಿಸಿ ಬಸ್​​ನಿಂದ ಮತ್ತೊಂದು ಅವಘಡ ಸಂಭವಿಸಿದೆ.

ಇಂದು ಮಧ್ಯಾಹ್ನ ಕೆಆರ್ ಸರ್ಕಲ್​​ನಲ್ಲಿ ಎಲೆಕ್ಟ್ರಿಕ್ ಬಿಎಂಟಿಸಿ ಬಸ್, ಆಟೋಗೆ ಡಿಕ್ಕಿ ಹೊಡೆದಿದ್ದು, ಬೀಕರ ಅಪಘಾತದಲ್ಲಿ ಕೆ ಆರ್ ಪುರಂ ನಿವಾಸಿ ಕೃಷ್ಣಮೂರ್ತಿ ಎಂಬುವವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶೇಷಾದ್ರಿ ರಸ್ತೆಯಿಂದ ಕೆ.ಆರ್. ವೃತ್ತಕ್ಕೆ ಬರುತ್ತಿದ್ದ KA51 AJ6648 ನೋಂದಣಿ ಸಂಖ್ಯೆಯ ವಿದ್ಯುತ್ ಚಾಲಿತ ಬಸ್, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋಗೆ ರಭಸದಿಂದ ಡಿಕ್ಕಿ ಹೊಡೆದು ಮುಂದಿದ್ದ ವಿದ್ಯುತ್ ಕಂಬಕ್ಕೆ ಗುದ್ದಿದೆ. ಈ ಸಂದರ್ಭ ಆಟೋದಲ್ಲಿ ಕುಳಿತಿದ್ದ ಚಾಲಕ ಕೃಷ್ಣಮೂರ್ತಿ (60) ಎಂಬುವರು ಗಂಭೀರ ಗಾಯಗೊಂಡಿದ್ದರು. ಸ್ಥಳೀಯರ ನೆರವಿನಿಂದ ಅವರನ್ನು ಸಮೀಪದ ಸೇಂಟ್ ಮಾರ್ಥಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುರೆಳೆದಿದ್ದಾರೆ. ಕೆ. ಆರ್. ಪುರ ನಿವಾಸಿಯಾಗಿರುವ ಕೃಷ್ಣಮೂರ್ತಿ ಅವರ ಬಗ್ಗೆ ಮನೆಯವರಿಗೆ ತಿಳಿಸಲಾಗಿದೆ. ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬ್ರೇಕ್ ಫೆಲ್ಯೂರ್​​ನಿಂದಾಗಿ ಅಪಘಾತ ಸಂಭವಿಸಿರುವುದಾಗಿ ಬಸ್ ಚಾಲಕ ಪ್ರಾಥಮಿಕ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾರೆ‌. ಈ ಬಗ್ಗೆ ಖಚಿತ ಪಡಿಸಿಕೊಳ್ಳಲು ಆರ್​​ಟಿಐ ಅಧಿಕಾರಿಗಳನ್ನು ಕರೆಯಿಸಿ ಪರಿಶೀಲಿಸಲಾಗುವುದು. ಸದ್ಯ ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ‌ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

You cannot copy content of this page

Exit mobile version