Monday, June 17, 2024

ಸತ್ಯ | ನ್ಯಾಯ |ಧರ್ಮ

 ಅವಳ ಸೋಲು ಅವಳ ಸೋಲಲ್ಲ!

ಪ್ರತಿ ವರ್ಷ ಆಗಸ್ಟ್‌ ೨೬ ರಂದು ವಿಶ್ವದಾದ್ಯಂತ ಮಹಿಳಾ ಸಮಾನತೆ ದಿನವನ್ನು ಆಚರಿಸಲಾಗುತ್ತಿದೆ. ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ಚುನಾವಣೆಯಲ್ಲಿ ಸಮಾನ ಅಧಿಕಾರ ನೀಡುವ ಕಾಯ್ದೆಯನ್ನು ಅಮೇರಿಕವು ೧೯೨೦ ರಲ್ಲಿ ಜಾರಿಗೆ ತಂದಿತ್ತು. ಅದರ ನೆನಪಿಗಾಗಿ ಅಂದೇ ಮಹಿಳಾ ಸಮಾನತೆ ದಿನವನ್ನಾಗಿ ಆಚರಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಮಹಿಳಾ ಸಾಧನೆಯ ಏಳು ಬೀಳುಗಳನ್ನು ಅವಲೋಕಿಸುವುದು, ಮಹಿಳಾ ಸಮಾನತೆ, ಲಿಂಗತ್ವ ತಾರತಮ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ದಿನದ ವಿಶೇಷವಾಗಿದೆ. ಈ ವಿಶೇಷ ದಿನದಂದು, ಮಹಿಳಾ ಸಮಾನತೆ ಎತ್ತ ಸಾಗಿದೆ ಎಂಬುದನ್ನು ಅವಲೋಕಿಸುತ್ತಾ ಆಧುನಿಕ ಜಗತ್ತಿಗೆ ಪಿತೃ ಪ್ರಧಾನ ವ್ಯವಸ್ಥೆ ಸಮಂಜಸ ಅಲ್ಲ ಎಂದು ಸಮಾಜದ ಗಮನ ಸೆಳೆದಿದ್ದಾರೆ ದೇವಿಕಾ ನಾಗೇಶ್‌

‘ನಿನ್ನೊಳಗಿನ ಶಾಂತಿ ನೀನು ಕಂಡುಕೊಳ್ಳುವುದೆಂದರೆ ನಿನ್ನ ಭಾವನೆಗಳನ್ನು ಇತರರು ನಿಯಂತ್ರಿಸಲು ಆಸ್ಪದ ಕೊಡದಿರುವುದು’ ಮಹಿಳೆ ತನ್ನೊಳಗೆ ಗಟ್ಟಿಗಿತ್ತಿ. ಎಂತಹುದೇ ಅಗ್ನಿದಿವ್ಯಗಳನ್ನು ದಾಟಿ ಮುನ್ನಡೆಯುವ ಶಕ್ತಿ ಅವಳಿಗೆ ಪ್ರಕೃತಿಯಿಂದ ಸಹಜವಾಗಿಯೇ ದಕ್ಕಿದೆ. ಸುಸ್ಥಿರ ಅಭಿವೃದ್ಧಿ ಎಂದರೆ ಸಮಾಜದ ಒಟ್ಟು ಅಭಿವೃದ್ಧಿ. ಇಲ್ಲಿ ಮಹಿಳೆಯರನ್ನು ಹಾಗೂ ಮಕ್ಕಳನ್ನು ಪರಿಗಣಿಸ ಬೇಕಾಗುತ್ತದೆ. ಅಭಿವೃದ್ಧಿಯ ಮಾನದಂಡಗಳೆಂದರೆ ಆರೋಗ್ಯ, ಶಿಕ್ಷಣ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಲಿಂಗ ಸಮಾನತೆ ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.

ಅವಳ ಅಭಿವೃದ್ಧಿಯ ಕಥನವೆಂದರೆ…

ವಿಶ್ವ ಆರ್ಥಿಕ ವರದಿ ಸೂಚಿಸುವ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶ ಲಿಂಗ ಸಮಾನತೆಯಲ್ಲಿ 135 ನೇ ಸಾಲಿನಲ್ಲಿದೆ. ಇದು ತೀರ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಸೊನ್ನೆಯಿಂದ 18 ವಯಸ್ಸಿನ ಗಂಡು-ಹೆಣ್ಣು ಮಕ್ಕಳ ಲಿಂಗಾನುಪಾತ ಸಾವಿರ ಗಂಡಿಗೆ 929 ಹೆಣ್ಣು ಇದ್ದರೆ ಪಟ್ಟಣಕ್ಕೆ ತಾಕಿಕೊಂಡಿರುವ ಗ್ರಾಮೀಣ ಪ್ರದೇಶದಲ್ಲಿ ಇದು ಸಾವಿರ ಗಂಡಿಗೆ 943 ಇದೆ. ಹೆಣ್ಣು ಹುಟ್ಟೋದು ಎಂದರೆ ಖರ್ಚಿನ ಬಾಬತ್ತು ಎಂದು ಭಾವಿಸುವ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣು ಶಿಶು ಭ್ರೂಣ ಹತ್ಯೆ ಎಗ್ಗಿಲ್ಲದೆ ನಡೆಯುತ್ತದೆ. “ಈ ಬೆಲ್ಲ ತಿನ್ನು ಸ್ವರ್ಗಕ್ಕೆ ಹೋಗು ವಾಪಾಸು ಬರಬೇಡ ಅಲ್ಲಿಂದ ತಮ್ಮನನ್ನು ಕಳುಹಿಸು”. ಹೆಣ್ಣು ಮಗುವಿಗಾಗಿ ಅವ್ವನೇ ಹೇಳುವ ಜೋಗುಳದ ಹಾಡೊಂದು ಈ ರೀತಿ ಇದೆ ಎಂದರೆ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಎಂತಹುದೆಂದು ಯಾರಾದರೂ ಊಹಿಸಬಹುದು. ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಅತ್ಯಾಚಾರ, ಅಪೌಷ್ಟಿಕತೆ ಹೀಗೆ ಬೆಳೆಯುತ್ತ ಸಾಗುವ ಅವಳ ಅಧ:ಪತನದ ಈ ಅಂಕಪಟ್ಟಿ ಯಲ್ಲಿ ಅಭಿವೃದ್ಧಿಯ ಕಥನವೆಂದರೆ ಅವಳೇ ಹೊತ್ತ ಶಿಲುಬೆ. ಮೊಳೆ ಜಡಿಯುವವರು ಇನ್ನಾರೋ?

ಆಧುನಿಕ ಜಗತ್ತಿಗೆ ಪಿತೃ ಪ್ರಧಾನ ವ್ಯವಸ್ಥೆ ಸಮಂಜಸ ಅಲ್ಲ

ಲಿಂಗ ಸಮಾನತೆಗೆ ಮಹತ್ವ ಇಲ್ಲದ ದೇಶಗಳಲ್ಲಿ ಜನನ ಪ್ರಮಾಣ ಕುಸಿದಿದೆ ಎಂಬ ಒಂದು ಹೇಳಿಕೆ ಇದೆ. ಇದು ನಿಜ ಕೂಡ! ಕೆಲವು ಹೆತ್ತವರು ಗಂಡಾಗಲಿ ಹೆಣ್ಣಾಗಲಿ ಒಂದು ಮಗು ಸಾಕು ಎಂದು ನಿರ್ಧರಿಸುವುದು ಕೂಡ ಲಿಂಗಾನುಪಾತದ ಕುಸಿತಕ್ಕೆ ಒಂದು ಕಾರಣ ಇರಬಹುದು. ಆದರೆ ಬಯಸಿದಷ್ಟು ಜೀವಗಳನ್ನು ಸೃಷ್ಟಿಸಲು ನಮ್ಮ ಸಂಸ್ಕೃತಿಯು ಮಹಿಳೆಗೆ ಬೆಂಬಲ ನೀಡುತ್ತಿಲ್ಲ ಎಂದು ಇದರ ಅರ್ಥವಲ್ಲವೇ? ಗಂಡು ಹೆಣ್ಣಿನ ಅನುಪಾತದಲ್ಲಿರುವ ಈ ದೊಡ್ಡ ವ್ಯತ್ಯಾಸ ಇಡೀ ಜೀವ ಸಂಕುಲಕ್ಕೆ ದೊಡ್ಡ ಬೆದರಿಕೆಯ ಗಂಟೆಯಾಗಿದೆ. ಆಧುನಿಕ ಜಗತ್ತಿಗೆ ಪಿತೃ ಪ್ರಧಾನ ವ್ಯವಸ್ಥೆ ಸಮಂಜಸ ಅಲ್ಲ ಎಂಬ ಪಾಠವನ್ನು ಫಲವತ್ತತೆಯ ಈ ಕೊರತೆಯಿಂದ ನಾವು ಕಲಿಯಬೇಕು.

ಮಹಿಳಾಪರ ನೀತಿ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯದ ಹೆಚ್ಚಳದ ನಡುವೆ ಸಂಬಂಧ ಇದೆ. ಗಂಡು-ಹೆಣ್ಣು ಇಬ್ಬರು ವ್ಯಕ್ತಿಗಳಿರುವ ಕುಟುಂಬಗಳಲ್ಲಿ ಮನೆ ಕೆಲಸವನ್ನು ದಂಪತಿಗಳು ಹಂಚಿಕೊಂಡು ಹೋಗುವ ಸಂಪ್ರದಾಯವಿದ್ದಲ್ಲಿ ಎರಡನೇ ಮಗುವನ್ನು ಪಡೆಯುವ ಸಾಧ್ಯತೆಗಳು ಹೆಚ್ಚು .ಆದರೆ ಸದ್ಯದ ವರ್ತಮಾನ ಮಹಿಳೆಗೆ ಹಿತಕಾರಿಯಾಗಿಲ್ಲ. ಕೃಷಿ, ಮನೆ ವಾರ್ತೆ, ಸ್ವಚ್ಛತೆಯಿಂದ ತೊಡಗಿ 66% ದಿನನಿತ್ಯದ ಕೆಲಸಗಳನ್ನು ಮಹಿಳೆ ನಿರ್ವಹಿಸುತ್ತಾಳೆ. ಆಹಾರ ಉತ್ಪಾದನೆಯ 50% ಅವಳದೇ ಪಾಲಿದೆ. ಶ್ರಮ ವಿಭಜನೆಯಲ್ಲಿ 60% ದಿಂದ 70% ಅವಳದೇ ಮೇಲುಗೈ. ಆದರೆ ಒಟ್ಟಾರೆ ಅವಳ ಸಂಪಾದನೆ 10% ಮಾತ್ರ. ಆಸ್ತಿ ಹಕ್ಕನ್ನು ಪರಿಗಣಿಸಿದರೆ ಅವಳು ಹೊಂದಿರುವ ಆಸ್ತಿ ಒಂದು ಶೇಕಡ ಮಾತ್ರ.
ಮುಂದಿನ ದಿನಗಳಲ್ಲಿ ಈ ಅಂಕಿ ಅಂಶಗಳು ಬದಲಾಗಬಹುದು. ಅವಕಾಶ ಸಿಕ್ಕಿದರೆ ಮಹಿಳೆ ಪುರುಷರಿಗಿಂತ ಹೆಚ್ಚಿನದನ್ನು ಸಾಧಿಸಬಹುದು. ಅನುನಯದ, ಸಹಬಾಳ್ವೆಯ, ಸಾಮರಸ್ಯದ ಈ ಬದುಕಿನಲ್ಲಿ ಸಂಗಾತಿಗಳು ಅವರು. ಸಮಾನತೆ ಎಂದರೆ ಹಂಚಿ ತಿನ್ನುವ ಒಡನಾಡುವ ಪ್ರೀತಿಯ ಪಯಣವೇ ಹೊರತು ಪೈಪೋಟಿ ಅಲ್ಲ.

ಸಮಾನ ಅವಕಾಶಗಳೆಂಬ ಮರೀಚಿಕೆ

ನಮ್ಮ ಸಂವಿಧಾನದ 16ನೇ ವಿಧಿಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಬೇಕು ಎಂಬ ಉಲ್ಲೇಖವಿದೆ. ಮಹಿಳೆ ಘನತೆಯಿಂದ ಆತ್ಮ ಗೌರವ ಉಳ್ಳವಳಾಗಿ ಬದುಕುವ ಹಕ್ಕು ಅವಳಿಗೆ ಇದೆ. ಇದಕ್ಕೆ ಪೂರಕವೆನ್ನುವಂತೆ ಅವಳ ಶ್ರಮಕ್ಕೆ ಸಮಾನ ಕೂಲಿ, ಉಚಿತ ಕಾನೂನು ನೆರವು ಪಡೆಯುವುದು ಅವಳ ಹಕ್ಕು. ಆದರೆ ನಮ್ಮ ದೇಶದಲ್ಲಿ ಬಹುತೇಕ ಮಹಿಳೆಯರಿಗೆ ತಮ್ಮ ಹಕ್ಕಿನ ಅರಿವೇ ಇರುವುದಿಲ್ಲ. ಕಾನೂನು ಹೊತ್ತಿಗೆಯಲ್ಲಿದ್ದರೆ ಅವರು ಏಳು ಸುತ್ತಿನ ಕೋಟೆಯೊಳಗೆ ಎನ್ನುವಂತೆ ತಾವೇ ಸುತ್ತಿಕೊಂಡ ಬಲೆಯೊಳಗೆ ಮೋಹಕ ಬಂಧಿ ಆಗಿರುತ್ತಾರೆ. ಅವರನ್ನು ಇವತ್ತಿಗೂ ಕತ್ತಲಿನಲ್ಲಿ ಇಟ್ಟಿರುವುದು ಈ ನಿರ್ಲಿಪ್ತತೆಯೋ ಮರೆಗುಳಿಯೋ.. ಉದ್ಯೋಗಾವಕಾಶಗಳಲ್ಲಿ ಮಹಿಳೆಯರ ಪಾಲುಗೊಳ್ಳುವಿಕೆ ಹೆಚ್ಚುತ್ತಿದೆ. ತಾಂತ್ರಿಕ ಹುದ್ದೆಗಳಲ್ಲಿ ಅವರು ಪುರುಷರಿಗಿಂತ ಮೇಲುಗೈ ಸಾಧಿಸುತ್ತಿದ್ದಾರೆ. ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನದಲ್ಲಿ ಅವರ ಸಂಖ್ಯೆ ೭% ಮಾತ್ರ. ವಿಶ್ವ ಆರ್ಥಿಕ ವರದಿಯ ಪ್ರಕಾರ ಆರ್ಥಿಕ ಚಟುವಟಿಕೆಗಳಲ್ಲಿ ಸ್ತ್ರೀಯರ ಭಾಗೀದಾರಿಕೆ ಫುರುಷರಿಗೆ ಹೋಲಿಸಿದರೆ 143 ನೇ ಸ್ಥಾನದಲ್ಲಿದೆ. ಶಿಕ್ಷಣದಲ್ಲಿ ಮಹಿಳೆ ಮತ್ತು ಪುರುಷರ ನಡುವಿನ ಈ ಅಂತರದಲ್ಲಿ 107ನೇ ಸ್ಥಾನ ಪಡೆದಿದೆ. ವಿಶ್ವದ 146 ದೇಶಗಳು ಈ ಪಟ್ಟಿಯಲ್ಲಿದ್ದು ರಾಜಕೀಯ ಕ್ಷೇತ್ರದಲ್ಲಿ ಮಹಿಳೆ ಮತ್ತು ಪುರುಷರಿಗೆ ಇರುವ ಅವಕಾಶಗಳ ನಡುವಿನ ಅಂತರ 48 ಇದೆ.

ಲಿಂಗ ಸಮಾನತೆ ಎಂದರೆ…

imege-the hans india

ಮಹಿಳೆ ತನ್ನ ವೃತ್ತಿ ಕೌಶಲ್ಯ ,ನೈತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಈ ಜಗತ್ತಿನಲ್ಲಿ ಭಯಗಳನ್ನು ಮೀರಿ ಬದುಕಬಲ್ಲಳು. ಆಕೆ ಪ್ರತಿ ಸಲ ನಡೆದ ನಡೆಯುತ್ತಿರುವ ತನಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾಳೆ ಎಂದರೆ ಅಲ್ಲಿರುವ ಪ್ರತಿರೋಧದ ಧ್ವನಿ ಅವಳದು ಮಾತ್ರವಲ್ಲ, ಇಡೀ ಮಹಿಳಾ ಸಮೂಹದ್ದು ಎಂದು ಅರ್ಥ ಮಾಡಿಕೊಳ್ಳಬೇಕು. ಲಿಂಗತ್ವ ಸಮನ್ಯಾಯವೆನ್ನುವುದು ಮಹಿಳೆಗೆ ಇವತ್ತಿಗೂ ಬಿಡಿಸಲಾಗದ ಕಗ್ಗಂಟು. ಸಮಾಜೋ ಸಾಂಸ್ಕೃತಿಕ ಸಂಬಂಧಗಳು ಇಲ್ಲಿ ಜಟಿಲವಾಗಿ ಸುರಳಿ ಸುತ್ತಿಕೊಂಡಿರುವ ಕಾರಣಕ್ಕೆ ಇದು ಬಾಯಿ ಮಾತಿನಲ್ಲಿ, ಅರಿವು ಜಾಗೃತಿಯಲ್ಲಿ ಪರಿಹಾರವಾಗುವ ಸಮಸ್ಯೆ ಅಲ್ಲ. ಸಮಸ್ಯೆಯನ್ನು ಸಮಸ್ಯೆ ಎಂದು ಗುರುತಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಆಕೆ ಇರುವಾಗ, ಪುರುಷ ತಾನಿರುವ ಸ್ಥಿತಿಯಲ್ಲಿ ಆರಾಮ ಇದ್ದೇನೆ ಎಂದು ಭಾವಿಸಿರುವಷ್ಟು ಕಾಲ ಲಿಂಗ ಅಸಮಾನತೆಯ ಈ ಜಾಲವನ್ನು ಛೇಧಿಸುವುದು ಹೇಗೆ?. ಸಮಾನತೆ ಎಂದರೆ ಸರ್ವರಿಗೂ ಸಮಪಾಲು ಸಮ ಬಾಳು ಎಂಬ ಪರಿಕಲ್ಪನೆ. ಇಲ್ಲಿ ಶ್ರೇಷ್ಠ, ಕನಿಷ್ಠ, ಬಡವ, ಶ್ರೀಮಂತ ಎಂಬ ಬೇಧ ಇರುವುದಿಲ್ಲ. ಗಂಡ ಹೆಂಡತಿ ಕೂಡಿ ಬಾಳುವಾಗ ಒಂದು ಚಪಾತಿ ನೀನು ಮಾಡು ಒಂದು ಚಪಾತಿ ನಾನು ಮಾಡುತ್ತೇನೆ ಎಂಬ ಮಾದರಿಯದ್ದು ಅಲ್ಲ. ಈ ಲಿಂಗ ಸಮಾನತೆ ಅಂದರೆ ಸುಸ್ಥಿರ ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ಸಮಾನ, ಆರೋಗ್ಯಕರ ಭಾಗೀದಾರಿಕೆ. ಸಮಷ್ಟಿ ಹಿತವೇ ಮೂಲ ಮಂತ್ರವಾಗಿರಿಸಿಕೊಂಡ ಈ ಶ್ರಮ ವಿಭಜನೆಯಲ್ಲಿ ಕುಟುಂಬ, ಶಾಲೆ, ಸಂಘ, ಸಂಸ್ಥೆ, ಸಮಾಜ ಹೀಗೆ- ಹುಟ್ಟಿನಿಂದ ತೊಡಗಿ ಸಾವಿನವರೆಗಿನ ಪ್ರತಿಯೊಂದು ಸಂಗತಿಯೂ ಮುಖ್ಯವಾಗುತ್ತವೆ. ಕಟ್ಟುವ ಈ ಕ್ರಿಯೆಯಲ್ಲಿ ಬದುಕಿನ ಅತಿ ಸೂಕ್ಷ್ಮ ವಿಚಾರಗಳಿಂದ ತೊಡಗಿ ಮಕ್ಕಳ ಪಾಲನೆ ಪೋಷಣೆಯು ಸೇರಿಕೊಂಡಂತೆ ಹತ್ತು ಹಲವು ಸಂಗತಿಗಳು ಇರುತ್ತವೆ. ಜವಾಬ್ದಾರಿಗಳು ಇರುತ್ತವೆ. ಸುಸ್ಥಿರ ಅಭಿವೃದ್ಧಿಯ ವಿವಿಧ ರಂಗಗಳನ್ನು ತೆಗೆದುಕೊಂಡಾಗ ಅಲ್ಲಿ ಮಹಿಳೆಯರು ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರಬೇಕು ಮತ್ತು ಅವರ ಧ್ವನಿ ಮಹಿಳಾಪರ ಜೀವಪರ ಆಗಿರಬೇಕು ಎನ್ನುವ ಕಾಳಜಿ ಇಂದು ನಿನ್ನೆಯದಲ್ಲ.

ಸೋಲು ಅವಳ ಸೋಲಲ್ಲ..

ಮಹಿಳಾಪರ ಎಂದ ಕೂಡಲೇ ಎಲ್ಲಾ ಸೌಕರ್ಯಗಳು ಮಹಿಳೆಯರಿಗೆ, ಪುರುಷರು ನಿರ್ಲಕ್ಷಿತರು ಎಂಬ ಕೂಗು ಮನೆಯೊಳಗಿನಿಂದ ತೊಡಗಿ ಅಭಿವೃದ್ಧಿಯ ವಿವಿಧ ರಂಗಗಳಲ್ಲಿ ವ್ಯಾಪಿಸಿದ್ದರ ಪರಿಣಾಮ ಲಿಂಗ ಸಮಾನತೆಯನ್ನು ಸಾಧಿಸುವುದರಲ್ಲಿ ನಾವು ಹಿಂದೆ ಉಳಿದಿದ್ದೇವೆ. ತಯಾರಿಕೆ, ಮೂಲ ಸೌಕರ್ಯದಂತಹ ಕ್ಷೇತ್ರಗಳಲ್ಲಿ ಮಹಿಳೆಯರು ನಾಯಕತ್ವದಲ್ಲಿ ಜಾಗತಿಕವಾಗಿ ಗಣನೀಯವಾಗಿ ಹಿಂದೆ ಇದ್ದಾರೆ ಎಂದರೆ ಈ ಸೋಲು ಅವಳದ್ದೇ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೂ ಇದು ಅವಳ ಸೋಲಲ್ಲ. ಮಹಿಳೆ ಸ್ವತಂತ್ರವಾಗಿ ಬದುಕುವ ಗಡಸುತನ ತೋರುವ ನಿಟ್ಟಿನಲ್ಲಿ ಅವಳ ಸಹಚರಿಗಳು ಅವಳಿಗೆ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಇದನ್ನು ಅರ್ಥೈಸಿಕೊಳ್ಳಬೇಕಲ್ಲವೇ? ಸಮಾಜ ಯಾವತ್ತೂ ಚಲನಶೀಲವಾಗಿರುವಂತಹದ್ದು.ಇದಕ್ಕೆ ಬೆಂಕಿಯ ತೀವ್ರತೆ ಇರುತ್ತದೆ. ಈ ಉರಿಯಲ್ಲಿ ಸುಟ್ಟು ಬೂದಿಯಾಗುವವರು, ಹೇಳ ಹೆಸರಿಲ್ಲದಂತೆ ನಾಶವಾಗುವವರು ಅದೆಷ್ಟೋ ಮಂದಿ. ಅಂತಹವರ ಸಾಲಿನಲ್ಲಿ ಮಹಿಳೆಯರ ಸಂಖ್ಯೆ ಸಹಜವಾಗಿಯೇ ಹೆಚ್ಚಿರುತ್ತದೆ. ಆದರೆ ಧೀ ಶಕ್ತಿ ಇರುವ ದೃಢತೆ ಇರುವ ಕೆಲವಷ್ಟೇ ಮಹಿಳೆಯರು ಈ ಬೂದಿಯಿಂದ ಫಿನಿಕ್ಸ್ ನಂತೆ ಎದ್ದು ಬಂದು ಇಡೀ ಸಮುದಾಯದ ಧ್ವನಿಯಾಗಿ ಇತಿಹಾಸ ಬರೆಯುತ್ತಾರೆ. ಇಂತಹ ಮಹಿಳೆಯರು ಹಿಂದೆಯೂ ಇದ್ದರು. ಇವತ್ತೂ ಇದ್ದಾರೆ. ನಾಳೆಯೂ ಇರುತ್ತಾರೆ. ಇವರ ಸಂಖ್ಯೆ ಹೆಚ್ಚಾಗಲಿ.

ಪ್ರೀತಿ ಸಾಮರಸ್ಯದ ಧ್ವನಿ ಮೊಳಗಲಿ

ಸಮ ಸಮಾಜದ ಅಭಿವೃದ್ಧಿಯ ಮಾನದಂಡದಲ್ಲಿ ಪ್ರೀತಿ ಸಾಮರಸ್ಯದ ಧ್ವನಿ ಮೊಳಗಲಿ ಎಂಬ ಕಾಳಜಿ ನಮ್ಮೆಲ್ಲರದು. ಸ್ತ್ರೀವಾದ ಎಂದರೆ ಮಾನವತಾ ವಾದ. ಇದು ಮಹಿಳೆಯರಿಗೆ ಮಾತ್ರ ಸೀಮಿತವಾದದ್ದಲ್ಲ. ಪ್ರಕೃತಿ ಸಹಜವಾಗಿಯೇ ಅವಳಿಗೆ ದಕ್ಕಿದೆ. ಸಮಾಜದಲ್ಲಿರುವ ಹಿಂಸೆ ದೌರ್ಜನ್ಯ ಕಡಿಮೆಯಾಗುವುದಕ್ಕೆ, ಅಧ:ಪತನದತ್ತ ಸಾಗುತ್ತಿರುವ ಸಮಾಜವನ್ನು ಬಡಿದೆಚ್ಚರಿಸುವುದಕ್ಕೆ ಅರಿವೆಂಬ ಮಹಾ ಜಾಗೃತಿಯನ್ನು ಮುನ್ನಡೆಸುವುದಕ್ಕೆ, ಸರ್ವರ ಏಳ್ಗೆಯತ್ತ ಜಗತ್ತನ್ನು ಮುನ್ನಡೆಸುವುದಕ್ಕೆ ಮಾನವತಾವಾದ ನಮಗೆ ಬೇಕು. ಇದು ಪ್ರೀತಿಯ ಗಾಳಿಯಾಗಿ ಬೀಸುತ್ತಿರಬೇಕು. ನಮ್ಮೆಲ್ಲರ ಉಸಿರಿನೊಂದಿಗೆ ಸೇರಿರಬೇಕು ಎಂಬ ಆಶಯವೇ ನಮ್ಮ ಅನುದಿನದ ಕ್ರಿಯಾಶೀಲತೆಯ ಗುಟ್ಟು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ದೇವಿಕಾ ನಾಗೇಶ್‌
ಬರಹಗಾರ್ತಿ, ಸಾಮಾಜಿಕ ಹೋರಾಟಗಾರ್ತಿ, ಮಂಗಳೂರು.

Related Articles

ಇತ್ತೀಚಿನ ಸುದ್ದಿಗಳು