Monday, June 17, 2024

ಸತ್ಯ | ನ್ಯಾಯ |ಧರ್ಮ

ನಕಲಿ ಜನನ ಪ್ರಮಾಣಪತ್ರ ಪ್ರಕರಣ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ಗೆ ಏಳು ವರ್ಷ ಜೈಲು ಶಿಕ್ಷೆ

ಲಖನೌ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್, ಅವರ ಪತ್ನಿ ತಜೀನ್ ಫಾತಿಮಾ ಮತ್ತು ಪುತ್ರ ಅಬ್ದುಲ್ಲಾ ಅಜಂ ಅವರಿಗೆ ಯುಪಿಯ ರಾಂಪುರ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2019ರ ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಮೂವರಿಗೆ ಶಿಕ್ಷೆ ವಿಧಿಸಲಾಗಿದೆ. ಸಂಸದ-ಶಾಸಕ ನ್ಯಾಯಾಲಯದ ನ್ಯಾಯಾಧೀಶ ಶೋಬಿತ್ ಬನ್ಸಾಲ್ ಮೂವರು ಅಪರಾಧಿಗಳಿಗೆ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ಜನವರಿ 3, 2019ರಂದು ಬಿಜೆಪಿ ಶಾಸಕ ಆಕಾಶ್ ಸಕ್ಸೇನಾ ಅವರು ರಾಂಪುರದ ಗಂಜ್ ಪೊಲೀಸ್ ಠಾಣೆಯಲ್ಲಿ ನಕಲಿ ಪ್ರಮಾಣಪತ್ರಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಲಾಗಿದೆ. ಅಜಂ ಖಾನ್ ಮತ್ತು ಅವರ ಪತ್ನಿ ತಜೀನ್ ಫಾತಿಮಾ ಅವರು ತಮ್ಮ ಮಗ ಅಬ್ದುಲ್ಲಾ ಅಜಮ್‌ಗೆ ಎರಡು ನಕಲಿ ಜನ್ಮ ದಿನಾಂಕ ಪ್ರಮಾಣಪತ್ರಗಳನ್ನು ಪಡೆಯಲು ಸಹಾಯ ಮಾಡಿದ್ದಾರೆ ಎಂದು ಸಕ್ಸೇನಾ ದೂರಿನಲ್ಲಿ ಆರೋಪಿಸಿದ್ದಾರೆ. ಒಂದು ಸರ್ಟಿಫಿಕೇಟ್ ಲಕ್ನೋದಿಂದ ಮತ್ತೊಂದು ಸರ್ಟಿಫಿಕೇಟನ್ನು ರಾಂಪುರದಿಂದ ಪಡೆಯಲಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

ನ್ಯಾಯಾಲಯದ ತೀರ್ಪಿನ ನಂತರ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನ್ಯಾಯಾಲಯದಿಂದಲೇ ಅಪರಾಧಿಗಳನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ಪರವಾಗಿ ಹಾಜರಿದ್ದ ಜಿಲ್ಲಾ ಸರ್ಕಾರದ ಮಾಜಿ ವಕೀಲ ಅರುಣ್ ಪ್ರಕಾಶ್ ಸಕ್ಸೇನಾ ಹೇಳಿದರು.

ಚಾರ್ಟ್ ಶೀಟ್ ಪ್ರಕಾರ, ಅಬ್ದುಲ್ಲಾ ಅಜಮ್ ಜನವರಿ 1, 1993ರಂದು ಜನಿಸಿದರು ಎಂದು ಹೇಳುವ ಒಂದು ಪ್ರಮಾಣಪತ್ರವನ್ನು ರಾಂಪುರ ಪುರಸಭೆಯಿಂದ ಪಡೆಯಲಾಗಿದೆ, ಆದರೆ ಇನ್ನೊಂದು ಅವರು ಸೆಪ್ಟೆಂಬರ್ 30, 1990ರಂದು ಜನಿಸಿದರು ಎಂದು ಲಕ್ನೋದಿಂದ ಪಡೆಯಲಾಗಿದೆ. ನಾಲ್ಕು ವರ್ಷಗಳ ವಿಚಾರಣೆಯ ನಂತರ ನ್ಯಾಯಾಲಯವು ಈ ಶಿಕ್ಷೆಯನ್ನು ನಿರ್ಧರಿಸಿದೆ.

Related Articles

ಇತ್ತೀಚಿನ ಸುದ್ದಿಗಳು