ರಿಪಬ್ಲಿಕನ್ ಸೇನೆಯ ಮುಖಂಡ ಮತ್ತು ಬಿಆರ್ ಅಂಬೇಡ್ಕರ್ ಅವರ ಮೊಮ್ಮಗ ಆನಂದರಾಜ್ ಅಂಬೇಡ್ಕರ್ ಅವರು ಸೋಮವಾರ ಮನುಸ್ಮೃತಿ ಪ್ರತಿಯನ್ನು ಸುಟ್ಟು ಪ್ರತಿಭಟಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಶಾಲಾ ಪಠ್ಯಕ್ರಮದಲ್ಲಿ ಈ ಗ್ರಂಥದ ಸಾಲುಗಳನ್ನು ಸೇರಿಸುವ ಯೋಜನೆಯ ವರದಿಯ ಹಿನ್ನೆಲೆಯಲ್ಲಿ ಅವರು ಇದನ್ನು ಮಾಡಿದ್ದಾರೆ.
ಅಂಬೇಡ್ಕರ್ ಮತ್ತು ಅವರ ಬೆಂಬಲಿಗರು ರಾಯಗಢ ಜಿಲ್ಲೆಯ ಮಹಾಡ್‌ನಲ್ಲಿರುವ ಕ್ರಾಂತಿ ಸ್ತಂಭದ ಬಳಿ ಜಮಾಯಿಸಿ ರಾಜ್ಯ ಶಿಕ್ಷಣ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಾಲಾ ಪಠ್ಯಕ್ರಮದಲ್ಲಿ ಧಾರ್ಮಿಕ ಪಠ್ಯದ ಸಾಲುಗಳನ್ನು ಪರಿಚಯಿಸುವ ಸರ್ಕಾರದ ಪ್ರಯತ್ನವನ್ನು ಅವರು ವಿರೋಧಿಸಿದರು ಎಂದು ಪಿಟಿಐ ವರದಿ ಮಾಡಿದೆ.
ವರದಿಯ ಪ್ರಕಾರ, ಮನುಸ್ಮೃತಿಯನ್ನು ಸುಡುವ ಸಾಂಕೇತಿಕ ಕ್ರಿಯೆಯ ನಂತರ, ಪ್ರತಿಭಟನಾಕಾರರು ಚದುರಿದರು. ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಕ್ರಾಂತಿ ಸ್ತಂಭ್ ಮತ್ತು ಚಾವ್ದಾರ್ ಟೇಲ್ ಪ್ರದೇಶಗಳ ಬಳಿ ಬಲವಾದ ಪೊಲೀಸ್ ಕಾವಲು ಹಾಕಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವರದಿ ಮಾಡಿದ್ದಾರೆ.
ರಿಪಬ್ಲಿಕನ್ ಸೇನೆಯ ಅಧ್ಯಕ್ಷರಾಗಿರು ಆನಂದರಾಜ್ ವೈ ಅಂಬೇಡ್ಕರ್ ಅಮರಾವತಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಇಲ್ಲಿ ಬಿಜೆಪಿಯಿಂದ ಮಾಜಿ ಸಂಸದೆ, ನಟಿ-ರಾಜಕಾರಣಿ ನವನೀತ್ ಕೌರ್-ರಾಣಾ ಅವರು ಸ್ಪರ್ಧಿಸಿದ್ದರು. ಮತ್ತು ಮಾಜಿ ಶಾಸಕ ಬಲವಂತ ಬಿ ವಾಂಖಡೆ ಅವರು ಮಹಾ ವಿಕಾಸ್ ಅಘಾಡಿಯಿಂದ ಕಾಂಗ್ರೆಸ್ ಪಕ್ಷದಿಂದ ನಿಂತು ಈ ಕ್ಷೇತ್ರವನ್ನು ಗೆದ್ದಿದ್ದಾರೆ.
ರಿಪಬ್ಲಿಕನ್ ಸೇನಾ ಪ್ರತಿಷ್ಠಾನ
ಆನಂದರಾಜ್ ಅಂಬೇಡ್ಕರ್ ಅವರು ನವೆಂಬರ್ 21, 1998ರಂದು ರಿಪಬ್ಲಿಕನ್ ಸೇನೆಯನ್ನು ಪ್ರಾರಂಭಿಸಿದರು. ಈ ಪಕ್ಷವು ಅಂಬೇಡ್ಕರ್ ಸಿದ್ಧಾಂತದಡಿಯಲ್ಲಿ ಕಟ್ಟಲ್ಪಟ್ಟಿದೆ. ಮಹಾರಾಷ್ಟ್ರದಲ್ಲಿ ನೆಲೆಗೊಂಡಿರುವ ಪಕ್ಷವು ಪ್ರಕಾಶ್ ಯಶ್ವಂತ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಆಘಾಡಿಯೊಂದಿಗೆ ಸಹ ಮೈತ್ರಿಯನ್ನು ಹೊಂದಿದೆ.