Wednesday, October 1, 2025

ಸತ್ಯ | ನ್ಯಾಯ |ಧರ್ಮ

ಮೀಸಲು ಅರಣ್ಯ ಉಳಿಸಲು ಅಧಿಕಾರಿಗಳ ನಿರ್ಲಕ್ಷ್ಯ – B.ಶಿವರಾಂ ಅಸಮಾಧಾನ

ಹಾಸನ : ಜಿಲ್ಲೆಯಲ್ಲಿ ಸುಮಾರು 36ಪ್ರದೇಶಗಳು ಮೀಸಲು ಅರಣ್ಯ ರಕ್ಷಣೆ ವ್ಯಾಪ್ತಿಗೆ ಒಳಪಡುತ್ತವೆ ಎಂಬ ದಾಖಲೆ ಇದ್ದರೂ, ದಶಕಗಳಿಂದ ಯಾವುದೇ ಕ್ರಮ ಕೈಗೊಳ್ಳದಿರುವುದು ದಿವ್ಯ ನಿರ್ಲಕ್ಷ್ಯಕ್ಕೆ ದಾರಿಯಾಗಿದೆ ಎಂದು ಮಾಜಿ ಸಚಿವ ಬಿ. ಶಿವರಾಂ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.31, 1928ರ ರಾಜ್ಯ ಪತ್ರದ ಅನ್ವಯ ಮೀಸಲು ಅರಣ್ಯ ಪ್ರದೇಶ ಘೋಷಣೆ ಮಾಡಲಾಗಿತ್ತು. ನೂರಾರು ವರ್ಷ ಕಳೆದರೂ ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಿಲ್ಲ. 2022ಡಿ.3೦ರಂದು ಕರ್ನಾಟಕ ಅರಣ್ಯ ಅಧಿನಿಯಮ 1963ರ 5ನೇ ಪ್ರಕರಣದಡಿ ಅರಣ್ಯ ಇಲಾಖೆ ಹೊಸ ಘೋಷಣೆ ಹೊರಡಿಸಿತು.

ಅರಣ್ಯ ವ್ಯವಸ್ಥಾಪನಾಧಿಕಾರಿಗೆ ಸರ್ವೆ ನಡೆಸಿ ಭೂಮಿ ವಶಕ್ಕೆ ಪಡೆಯಲು ಸೂಚನೆ ನೀಡಲಾಗಿದ್ದರೂ, ಇದು ಇನ್ನೂ ಜಾರಿಯಾಗಿಲ್ಲ ಎಂದರು. ಅರಸೀಕೆರೆ ತಾಲೂಕಿನ ಅತ್ತಿಗುಡ್ಡ ಮತ್ತು ನೀಲಗಿರಿ ಕಾವಲು ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಉದ್ಘೋಷಣೆ ಪ್ರಕಟಿಸಿದರೂ, ಅತ್ತಿಗುಡ್ಡ ಕಾವಲ್‌ನಲ್ಲಿ ಮಾತ್ರ 3೦೦ಕ್ಕೂ ಹೆಚ್ಚು ರೈತರು ಮತ್ತು 1,6೦೦ ಕ್ಕೂ ಹೆಚ್ಚು ರೈತರು ಅತಿಕ್ರಮಣ ಮಾಡಿರುವ ಮಾಹಿತಿ ಇದೆ.

ಆದರೆ ವ್ಯವಸ್ಥಾಪನಾಧಿಕಾರಿ ಕೇವಲ ನೋಟಿಸ್ ನೀಡಿ ಸುಮ್ಮನಾಗಿದ್ದಾರೆ. ಸ್ಥಳ ಪರಿಶೀಲನೆ, ವಸ್ತುಸ್ಥಿತಿ ವರದಿ ಮುಂತಾದ ಕ್ರಮ ಕೈಗೊಳ್ಳದೆ ಅರಣ್ಯ ರಕ್ಷಣೆ, ಸಾರ್ವಜನಿಕರ ಹಿತಕ್ಕೂ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 26 ಪ್ರದೇಶಗಳಲ್ಲಿ50 ಸಾವಿರ ಎಕರೆ ಭೂಮಿ ಮೀಸಲು ಅರಣ್ಯ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ 4೦,೦೦೦ಕ್ಕೂ ಹೆಚ್ಚು ಕುಟುಂಬ ಒತ್ತುವರಿ ಮಾಡಿರುವ ಅಂದಾಜಿದೆ. ಇಷ್ಟು ದೊಡ್ಡ ವಿಷಯವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು ಚರ್ಚಿಸದಿರುವುದು ದೂರದೃಷ್ಟಿ ಕೊರತೆ ತೋರಿಸುತ್ತದೆ ಎಂದು ಟೀಕಿಸಿದರು.

1928 ರಿಂದ ಇಂದಿನವರೆಗೆ ಮೀಸಲು ಅರಣ್ಯ ಘೋಷಣೆ ದಾಖಲೆಗಳಲ್ಲಿ ಮಾತ್ರ ಉಳಿದಿದೆ. ಕಂದಾಯ ಇಲಾಖೆ ದಾಖಲೆಗಳಲ್ಲೂ ಪರಿಷ್ಕರಣೆ ನಡೆದಿಲ್ಲ. ಇದರಿಂದ ಗೊಂದಲ ಮುಂದುವರಿದಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಅರಣ್ಯ ಇಲಾಖೆ ಮೂಲಕ ಸಮಗ್ರ ಸರ್ವೆ ಕಾರ್ಯ ನಡೆಸಬೇಕು. ಅರಣ್ಯ ಸಂರಕ್ಷಣೆ ಜೊತೆಗೆ ಈಗಾಗಲೇ ಭೂಮಿ ಬಳಸಿಕೊಂಡು ಬದುಕುತ್ತಿರುವ ರೈತರಿಗೆ ಸಹ ಪರಿಹಾರ ಒದಗಿಸುವುದು ಅಗತ್ಯ ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಹಲವು ದಶಕಗಳಿಂದ ಮುಂದುವರೆದಿರುವ ಮೀಸಲು ಅರಣ್ಯ ಭೂಮಿ ಗೊಂದಲ ಕುರಿತು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನವನ್ನು ಶಿವರಾಂ ಟೀಕಿಸಿದರು. ರೈತರು ಸಂಕಷ್ಟದಲ್ಲಿದ್ದರೂ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ  ಹಾಗೂ ಜನಪ್ರತಿನಿಧಿಗಳ ಮೌನದಿಂದ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಆರೋಪಿಸಿದರು.

ಅರಣ್ಯ ಇಲಾಖೆ ದಾಖಲೆ ಸ್ಪಷ್ಟವಾಗಿದ್ದರೂ, ಜಿಲ್ಲೆಯಾದ್ಯಂತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಸಮಸ್ಯೆಗೆ ಗಮನ ಹರಿಸದಿರುವುದು ಸರ್ಕಾರದ ನಡೆ ಬಗ್ಗೆ ಅನುಮಾನ ಹುಟ್ಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page