Sunday, December 7, 2025

ಸತ್ಯ | ನ್ಯಾಯ |ಧರ್ಮ

ನನ್ನ ಎದೆ ಝಲ್ಲೆಂದಿತು, ದೊಡ್ಡ ಆಘಾತ ಎದುರಾಗಿತ್ತು, ಸಾಹೇಬರು ಪರಿನಿರ್ವಾಣ ಹೊಂದಿದ್ದರು!

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ಹೊಂದಿದ ದಿನವನ್ನು ಸವಿತಾ ಅಂಬೇಡ್ಕರ್ ಅವರು ಅಚ್ಚೊತ್ತಿದಂತೆ ಚಿತ್ರಿಸಿದ್ದಾರೆ. ಅವರ ಮೂಲ ಬರಹ, ಕನ್ನಡಕ್ಕೆ ಅನಿಲ್ ಹೊಸಮನೆ ಅವರ ಅನುವಾದದಲ್ಲಿ

ಸಾಹೇಬರು ಯಾವಾಗಲೂ ರಾತ್ರಿಯಲ್ಲಿ ಓದು-ಬರಹ ಮಾಡುತ್ತಿದ್ದರು. ಅಗತ್ಯಬಿದ್ದರೆ ರಾತ್ರಿಯಿಡೀ ಅದರಲ್ಲಿ ಮಗ್ನರಾಗುತ್ತಿದ್ದರು. ಆದರೆ ಡಿಸೆಂಬರ್ 5 ರ ರಾತ್ರಿ ನಾನಾಕ ಚಂದು ರತ್ತು ನಿರ್ಗಮಿಸಿದ ನಂತರ, ‘ಬುದ್ಧ ಮತ್ತು ಆತನ ಧಮ್ಮ’ ಕೃತಿಯ ಪ್ರಸ್ತಾವನೆ ತಿದ್ದುಪಡಿ ಮಾಡಿದ್ದರು. ಎಸ್‌.ಎಂ. ಜೋಶಿ, ಆಚಾರ್ಯ ಅತ್ರೆ ಮತ್ತು ಬರ್ಮಾ ಸರ್ಕಾರಕ್ಕೆ ಕಳುಹಿಸಲು ಟೈಪ್ ಮಾಡಿದ ಪತ್ರಗಳ ಅಂತಿಮ ಪರಿಶೀಲನೆ ಮಾಡಿದರು. ಆ ದಿನ ಅವರು ನಿತ್ಯಕ್ಕಿಂತ ಮೊದಲೇ ನಿದ್ರೆಗೆ ಜಾರಿದರು. ಆಗ ಸಮಯ 11.30. ದುರದೃಷ್ಟವಶಾತ್, ಡಿಸೆಂಬರ್ 5ರ ರಾತ್ರಿ ಅವರ ಜೀವನದ ಕೊನೆಯ ರಾತ್ರಿಯಾಯಿತು. ಡಿಸೆಂಬರ್ 5ನೇ ತಾರೀಖನ್ನು ಉಲ್ಲೇಖಿಸಿ, ಡಾ. ಅಂಬೇಡ್ಕರ್ ಜೀವನ ಚರಿತ್ರೆಯ ಲೇಖಕ ಖ್ಯಾತ ಚರಿತ್ರಕಾರ ಧನಂಜಯ್ ಕೀರ್ ಹೀಗೆ ಬರೆಯುತ್ತಾರೆ- “ಕಳೆದ ಐದು ವರ್ಷಗಳಿಂದ ಬಾಬಾಸಾಹೇಬರ ಜೀವನವನ್ನು ನಿಭಾಯಿಸಿದ ಅವರ ಡಾಕ್ಟರ್ ಪತ್ನಿ ಮತ್ತು ಅವರ ಸೇವಕರಿಗೆ ಬಾಬಾಸಾಹೇಬರ ಮಂಚದ ಹಿಂದೆ ಅಡಗಿ ಕುಳಿತಿದ್ದ ಮೃತ್ಯುವಿನ ಕಿಂಚಿತ್ ಕಲ್ಪನೆಯೂ ಇರಲಿಲ್ಲ”

ಡಿಸೆಂಬರ್ 6ರಂದು ನಾನು ಎಂದಿನಂತೆ ಬೆಳಿಗ್ಗೆ ಬೇಗ ಎದ್ದೆ. ಅಭ್ಯಾಸದಂತೆ ಗಾರ್ಡನ್‌ನಲ್ಲಿ ಒಂದು ಸುತ್ತುಹೊಡೆದು, ನಮ್ಮ ಮಾಲಿಯ ಮನೆಗೆ ಹೋಗಿ ಆರೋಗ್ಯ ವಿಚಾರಿಸಿದೆ. ಪ್ರಾತಃವಿಧಿಗಳನ್ನು ಪೂರೈಸಿ, ಮುಖಮಾರ್ಜನೆ ಮಾಡಿ ನಿತ್ಯಕ್ರಮದಂತೆ ಚಹಾದ ಟ್ರೇ ಹಿಡಿದು ಸಾಹೇಬರನ್ನು ಎಚ್ಚರಿಸಲು ಹೋದೆ. ಆಗ ಬೆಳಿಗಿನ 7-7.30ರ ಸಮಯ. ಸಾಹೇಬರ ಒಂದು ಕಾಲು ದಿಂಬಿನ ಮೇಲಿತ್ತು. ನಾನು 2-3 ಸಲ ಸಾಹೇಬರನ್ನು ಕರೆದೆ. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅವರು ಗಾಢ ನಿದ್ರೆಯಲ್ಲಿದ್ದಾರೆಂದು ನಾನು ಭಾವಿಸಿದೆ. ಆದ್ದರಿಂದ ಕೈಯಿಂದ ಮೇಲೆತ್ತಲು ಯತ್ನಿಸಿದೆ. ನನ್ನ ಎದೆ ಝಲ್ಲೆಂದಿತು. ದೊಡ್ಡ ಆಘಾತ ಎದುರಾಗಿತ್ತು. ಸಾಹೇಬರು ಪರಿನಿರ್ವಾಣ ಹೊಂದಿದ್ದರು. ಇಡೀ ಬಂಗ್ಲೆಯಲ್ಲಿ ಸುಧಾಮ ಮತ್ತು ನನ್ನ ಹೊರತಾಗಿ ಯಾರೂ ಇರಲಿಲ್ಲ. ನಾನು ವೈದ್ಯೆಯಾಗಿದ್ದರೂ, ನಾನೊಬ್ಬಳು ಹೆಣ್ಣು. ಅಂಥ ಸಮಯದಲ್ಲಿ ಏನು ಮಾಡಬೇಕು? ಏನೊಂದೂ ತೋಚದಾಯಿತು. ನಾನು ಜೋರಾಗಿ ಕಿರುಚಿ ಸುಧಾಮನನ್ನು ಕರೆದೆ. ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ಯಾರನ್ನು ಕರೆಯಬೇಕೆಂದು ಅರ್ಥವಾಗುತ್ತಿಲ್ಲ. ಅದೇ ಗಾಬರಿಯಲ್ಲಿ, ಮಾಳವಣಕರ್ ಅವರಿಗೆ ಕರೆ ಮಾಡಿ ಸಲಹೆ ಕೇಳಿದೆ. ಅವರೂ ಗಾಬರಿಯಾದರು. ನನಗೆ ಸಾಂತ್ವನ ಹೇಳಿ ಕೊರಮೈನ್ ಇಂಜೆಕ್ಷನ್ ಕೊಡುವಂತೆ ಸಲಹೆ ನೀಡಿದರು. ಆದರೆ ಅವರು ಮೃತಪಟ್ಟು ಹಲವು ಗಂಟೆಗಳೇ ಕಳೆದಿದ್ದವು. ಚುಚ್ಚುಮದ್ದು ಕೊಡುವುದರಲ್ಲಿ ಅರ್ಥವಿಲ್ಲವೆಂದು ರತ್ತು ಅವರನ್ನು ಕರೆತರಲು ಸುಧಾಮನನ್ನು ಕಳಿಸಿದೆ.

ಸುಧಾಮ ಕಾರು ತೆಗೆದುಕೊಂಡು ನಾನಕಚಂದ್‌ನನ್ನು ಕರೆಯಲು ಹೋದ. ಸ್ವಲ್ಪ ಹೊತ್ತಿನಲ್ಲಿ ನಾನಕ್‌ಚಂದ್ ಆತಂಕದ ಸ್ಥಿತಿಯಲ್ಲಿ ಬಂಗ್ಲೆಯನ್ನು ತಲುಪಿದರು. ಅವರನ್ನು ನೋಡಿ ನನ್ನ ಹೃದಯದ ಕಟ್ಟೆ ಒಡೆಯಿತು. ನಾನು “ಜೋರಾಗಿ ಅಳುತ್ತಾ ರತ್ತು.. ಸಾಹೇಬರು ನಮ್ಮನ್ನು ಬಿಟ್ಟು ಹೋದರು” ಎಂದು ರೋಧಿಸಿದೆ. ಅದಕ್ಕಿಂತ ಹೆಚ್ಚು ಹೇಳುವುದು ನನ್ನಿಂದಾಗಲಿಲ್ಲ. ಹಾಗೆಯೇ ಸೋಫಾ ಮೇಲೆ ಕುಸಿದುಬಿದ್ದೆ, ರತ್ತು ಜೋರಾಗಿ ರೋಧಿಸಲಾರಂಭಿಸಿದರು. ಕೆಲವು ಕ್ಷಣಗಳು ಹೀಗೇ ಕಳೆದವು. ಬಳಿಕ ಸಾಹೇಬರ ದೇಹಕ್ಕೆ ಮಸಾಜ್ ಮಾಡಿ, ಕೃತಕ ಉಸಿರಾಟ ನೀಡುವ ಪ್ರಯತ್ನ ಮಾಡಿದೆವು. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾದವು. ಸಾಹೇಬರು ನಮ್ಮನ್ನು ಶಾಶ್ವತವಾಗಿ ಅಗಲಿದ್ದರು!

ಆ ನಂತರ ನಾವು ಸಮಾಲೋಚನೆ ಮಾಡಿ, ಸಾಹೇಬರ ಪರಿನಿರ್ವಾಣದ ಸುದ್ದಿಯನ್ನು ಪ್ರಸಾರ ಮಾಡಲು ನಿರ್ಧರಿಸಿದೆವು. ಒಂದು ಹೆಣ್ಣಾಗಿ, ಆ ಸ್ಥಿತಿಯಲ್ಲಿ ಏನು ಮಾಡಬೇಕೆಂದು ತಿಳಿಯಲಿಲ್ಲ. ನಾನಕ್‌ಚಂದ್ ಅವರು ಮೊದಲು ಪ್ರಮುಖ ಪರಿಚಯಸ್ಥರಿಗೆ ತ್ವರಿತ ದೂರವಾಣಿ ಕರೆ ಮಾಡಿದರು. ಸರ್ಕಾರಿ ಇಲಾಖೆಗಳು, ಪ್ರೆಸ್‌ ಟ್ರಸ್ಟ್ ಆಫ್‌ ಇಂಡಿಯಾ, ಯು.ಎನ್.ಐ, ಆಕಾಶವಾಣಿ ಕೇಂದ್ರಕ್ಕೆ ಕರೆ ಮಾಡಿ ಈ ದುಃಖದ ಸುದ್ದಿ ತಿಳಿಸಿದೆವು.

ಸಾಹೇಬರ ನಿಧನದ ಸುದ್ದಿ ಕಾಡಿಚ್ಚಿನಂತೆ ಹಬ್ಬಿತು. ಅವರ ಲಕ್ಷಾಂತರ ಅನುಯಾಯಿಗಳು ಶೋಕಾಕುಲರಾಗಿ 26, ಅಲಿಪುರ ರಸ್ತೆಯ ನಮ್ಮ ಬಂಗ್ಲೆಯತ್ತ ಧಾವಿಸತೊಡಗಿದರು. ಅಲ್ಲಿಯವರೆಗೆ ಸುಧಾಮ ಮತ್ತು ರತ್ತು ಸಹಾಯದಿಂದ ಸಾಹೇಬರ ದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಿದೆ. ಸಾಹೇಬರ ದರ್ಶನಕ್ಕೆ ಲಕ್ಷಾಂತರ ಜನ ಜಮಾಯಿಸತೊಡಗಿದರು.

ಸಾಹೇಬರ ಅಂತಿಮ ಸಂಸ್ಕಾರವನ್ನು ಮುಂಬೈನಲ್ಲೇ ನೆರವೇರಿಸಲು ನಿರ್ಧರಿಸಲಾಯಿತು. ಅಂತಿಮ ಕ್ರಿಯೆಯನ್ನು ದೆಹಲಿ ಅಥವಾ ಸಾರನಾಥದಲ್ಲಿ ನಡೆಸಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಆದರೆ ಮುಂಬೈ ಸಾಹೇಬರ ಕರ್ಮಭೂಮಿ, ಆದ್ದರಿಂದ ಮುಂಬೈನಲ್ಲೇ ಅಂತಿಮ ಸಂಸ್ಕಾರ ನಡೆಸಬೇಕೆಂದು ನನ್ನ ಕೋರಿಕೆಯಾಗಿತ್ತು.

ಪ್ರಧಾನಿ ನೆಹರೂ, ಅವರ ಸಂಪುಟದ ಸಚಿವರು, ಸರ್ಕಾರಿ ಅಧಿಕಾರಿಗಳು, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಬಂದಿದ್ದರು. ಪ್ರಧಾನಿ ಜವಾಹರಲಾಲ್ ನೆಹರು ನನಗೆ ಸಾಂತ್ವನ ಹೇಳಿದರು. ಸಾಹೇಬರ ವಯಸ್ಸು, ಅವರು ನಿಧನದ ಸಮಯದಲ್ಲಿನ ಆರೋಗ್ಯ ಇತ್ಯಾದಿ ವಿಷಯಗಳ ಬಗ್ಗೆ ವಿಚಾರಿಸಿದರು. ನಾನು ಎಲ್ಲವನ್ನೂ ವಿವರಿಸಿದೆ. “ಡಾ. ಅಂಬೇಡ್ಕರ್ ಅವರು ಹಿಂದಿನ ರಾತ್ರಿ 10.30ರ ವರೆಗೆ ಜೈನ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ನಂತರ, ಬಹಳ ಕಡಿಮೆ ಆಹಾರವನ್ನು ಸೇವಿಸಿದರು” ಎಂದು ಹೇಳಿ, “ಬುದ್ಧ ಮತ್ತು ಅವನ ಧಮ್ಮ” ಗ್ರಂಥದ ಮುನ್ನುಡಿಯ ಸುಧಾರಿತ ಪ್ರತಿಯನ್ನು ತೋರಿಸಿದೆ. ಅವರದೇ ಹಸ್ತಾಕ್ಷರದಿಂದ ಅವರ ಪ್ರಮುಖ ಗ್ರಂಥವನ್ನು ಪೂರ್ಣಗೊಳಿಸುವ ಮೂಲಕ, ಅವರು ತಮ್ಮ ಜೀವನಕಾರ್ಯ ಕೊನೆಗೊಳಿಸಿದರು ಎಂದು ಹೇಳಿದೆ.

ಬಾಬು ಜಗಜೀವನರಾಮ್ ಕೂಡ ಅಂತಿಮ ದರ್ಶನಕ್ಕೆ ಬಂದಿದ್ದರು. ಅಂತಿಮ ಸಂಸ್ಕಾರ ಎಲ್ಲಿ ನಡೆಯುತ್ತದೆ ಎಂದೆಲ್ಲ ವಿಚಾರಿಸಿದರು. ನಂತರ ಮುಂಬೈನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದಾಗ ಅವರು ಪಾರ್ಥಿವ ಶರೀರವನ್ನು ವಿಮಾನದಲ್ಲಿ ಮುಂಬೈಗೆ ಕೊಂಡೊಯ್ಯಲು ಆದೇಶಿಸುವ ಭರವಸೆ ನೀಡಿದರು. ಅಷ್ಟೇ ಅಲ್ಲ, ಅರ್ಧ ದರಕ್ಕೆ ವಿಮಾನ ಕೊಡಿಸುವ ವ್ಯವಸ್ಥೆ ಮಾಡಿದರು. ನಾವು ವಿಮಾನದ ಅರ್ಧ ಬಾಡಿಗೆ ಕಟ್ಟಿದೆವು.

ಸಾಹೇಬರ ಪಾರ್ಥಿವ ಶರೀರವನ್ನು ಸಂಜೆ 6 ಗಂಟೆಯವರೆಗೆ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ನಂತರ ಅಲಂಕೃತ ಟ್ರಕ್‌ನಲ್ಲಿ ಸಾಹೇಬರ ಪಾರ್ಥಿವ ಶರೀರದ ಮೆರವಣಿಗೆಯು ದೆಹಲಿಯ ಪ್ರಮುಖ ರಸ್ತೆಗಳ ಮೂಲಕ ಸಫರ್‌ಜಂಗ್ ವಿಮಾನ ನಿಲ್ದಾಣದ ಕಡೆಗೆ ಸಾಗಿತು. ಸಾಹೇಬರ ಪಾರ್ಥಿವ ಶರೀರದ ಬಳಿ ಭದಂತ ಆನಂದ ಕೌಸಲ್ಯಾಯನ, ಸೋಹನಲಾಲ ಶಾಸ್ತ್ರಿ ಮೊದಲಾದವರಿದ್ದರು. ರಾತ್ರಿ 10.30ಕ್ಕೆ ವಿಮಾನ ಹೊರಡಬೇಕಿತ್ತು. ಸಂಸತ್ ಭವನದ ವರೆಗೆ ಲಕ್ಷಾಂತರ ಜನರು ಹಿಂಬಾಲಿಸುತ್ತಿದ್ದರು. ಅವರೆಲ್ಲ ಜೋರಾಗಿ ಅಳುತ್ತ ತಮ್ಮ ವಿಮೋಚಕನ ಸಾವಿನ ದುಃಖವನ್ನು ವ್ಯಕ್ತಮಾಡುತ್ತಿದ್ದರು. ಶವಯಾತ್ರೆ ಸಂಸತ್ ಭವನ ತಲುಪುವ ವೇಳೆಗೆ ರಾತ್ರಿ 10 ಗಂಟೆಯಾಗಿತ್ತು. ನಾವು ಸಾರ್ವಜನಿಕರನ್ನು ವಿನಂತಿಸಿದೆವು-“ಈಗ ಟ್ರಕ್‌ನ್ನು ವೇಗವಾಗಿ ಓಡಿಸಿ ವಿಮಾನ ಹಿಡಿಯಬೇಕು. ಆದ್ದರಿಂದ ಈಗ ನೀವು ಹಿಂತಿರುಗಿ ಹೋಗುವ ಕೃಪೆ ಮಾಡಬೇಕು”. ಅದರಂತೆ ಟ್ರಕ್‌ನ್ನು ಸಂಸತ್ ಭವನದಿಂದ ವೇಗವಾಗಿ ಓಡಿಸಿ, ಸರ್ಫಜರ್ಂಗ್ ವಿಮಾನ ನಿಲ್ದಾಣ ತಲುಪಿದ ನಂತರ ಸಾಹೇಬರ ದೇಹವನ್ನು ಟ್ರಕ್‌ನಿಂದ ಇಳಿಸಿ ವಿಮಾನದಲ್ಲಿ ಇರಿಸಲಾಯಿತು. ದುಃಖತಪ್ತ ಜನಸಮೂಹ ರೋಧಿಸುತ್ತ ಸಾಹೇಬರ ಅಂತಿಮದರ್ಶನಕ್ಕಾಗಿ ಸೇರಿತ್ತು.

ಸಾಹೇಬರು ಪರಿನಿರ್ವಾಣ ಸಮಯದಲ್ಲಿ ಭದಂತ ಆನಂದ ಕೌಸಲ್ಯಾಯನ ಅವರು ದೆಹಲಿಯಲ್ಲಿಯೇ ಇದ್ದರು. ರತ್ತು ಮೂಲಕ ಅವರನ್ನು ಕರೆಸಿಕೊಂಡಿದ್ದೆ. ಅವರು ನಮ್ಮೊಂದಿಗೇ ಇದ್ದರು. ಸಾಹೇಬರ ಪಾರ್ಥಿವಶರೀರವನ್ನು ದೆಹಲಿಯಿಂದ ಮುಂಬೈಗೆ ತರುವಾಗ, ನನ್ನ ಜೊತೆ ವಿಮಾನದಲ್ಲಿ ಭದಂತ ಆನಂದ ಕೌಸಲ್ಯಾಯನ, ಸುಧಾಮ, ಸೋಹನ್‌ಲಾಲ್ ಶಾಸ್ತ್ರಿ, ಶಂಕರಾನಂದ ಶಾಸ್ತ್ರಿ, ನಾನಕಚಂದ್ ರತ್ತು, ಭೋಸ್ಥೆ (ಇಂಜಿನಿಯ‌ರ್) ರಾಯಸಿಂಗ್, ಸ್ವಾಮಿ ತುಲಾದಾಸ್‌ ಇತ್ಯಾದಿ ಇದ್ದರು.

ನಸುಕಿನ 3 ಗಂಟೆ ಹೊತ್ತಿಗೆ ಮುಂಬೈ ಸಾಂತಾಕ್ರೂಜ್ ವಿಮಾನ ನಿಲ್ದಾಣದಲ್ಲಿ ಪಾರ್ಥಿವದೇಹವನ್ನು ಇಳಿಸಿದ ನಂತರ ನಾವು ರಾಜಗೃಹ ತಲುಪಿದೆವು. ತಮ್ಮ ಮುಕ್ತಿದಾತನ ದರ್ಶನಕ್ಕೆ ಸಹಸ್ರಾರು ಜನರು ಹಿಂದಿನ ದಿನದಿಂದಲೇ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ವಿಮಾನ ನಿಲ್ದಾಣದಿಂದ ರಾಜಗೃಹದ ದಾರಿಯ ಇಕ್ಕೆಲಗಳಲ್ಲಿ ಜನಜಂಗುಳಿ ತುಂಬಿತ್ತು. ಅವರ ದುಃಖಕ್ಕೆ ಪಾರವೇ ಇರಲಿಲ್ಲ.

ಸಾಹೇಬರ ಪಾರ್ಥಿವ ಶರೀರವನ್ನು ರಾಜಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ದರ್ಶನಕ್ಕಾಗಿ ಒಂದುದಿನ ಮುಂಚೆಯೇ ಅನ್ನ-ನೀರು ತೊರೆದ ಜನಸಂದಣಿ ಸಾಲುಗಟ್ಟಿ ಕಾಯುತ್ತಿತ್ತು. ತಮ್ಮ ನಾಯಕನ ಮೇಲಿರಿಸಿದ್ದ ಅದಮ್ಯ ನಂಬಿಕೆ ಮತ್ತು ಸಾವಿನ ವ್ಯಾಕುಲತೆ ಇತಿಹಾಸದಲ್ಲಿ ಹುಡುಕಿದರೂ ಸಿಗಲಾರದು.

ಅಸ್ತಂಗತನಾದ ಜ್ಞಾನಸೂರ್ಯ ಸಾಹೇಬರ ಪಾರ್ಥಿವ ಶರೀರವನ್ನು ಡಿಸೆಂಬ‌ರ್ 7ರಂದು ಸಂಜೆ 4 ಗಂಟೆವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಲಕ್ಷಾಂತರ ಜನರ ಶೋಕವು ಮಹಾಸಾಗರವನ್ನೇ ಅಲುಗಿಸಿತ್ತು. ಇಡೀ ಮುಂಬೈ ನಿಶ್ಚಲಗೊಂಡಿತ್ತು. ಮಧ್ಯಾಹ್ನ 2-3 ಗಂಟೆಗೆ ಸಾಹೇಬರ ಶರೀರವನ್ನು ಪುಷ್ಪಾಲಂಕೃತ ಲಾರಿಯ ಮೇಲೆ ಇರಿಸಲಾಯಿತು. ಮುಂಬೈನ ಐತಿಹಾಸಿಕ ಶವಯಾತ್ರೆ ಆರಂಭಗೊಂಡಿತು. ಹಿಂದೂ ಕಾಲೋನಿ, ವಿನ್ಸೆಂಟ್ ರಸ್ತೆ (ಈಗ ಡಾ. ಅಂಬೇಡ್ಕರ್ ರಸ್ತೆ), ಪೋಯಬವಾಡಿ, ಎಲ್ಪಿನ್‌ಸ್ಟನ್ ಸೇತುವೆ, ಸಯಾನಿ ರಸ್ತೆ, ಗೋಖಲೆ ರಸ್ತೆ ಮಾರ್ಗವಾಗಿ ದಾದರ್ ಚೌಪಾಟಿಯ ಸ್ಮಶಾನಭೂಮಿಯನ್ನು ತಲುಪಿತು.

ದಾದ‌ರ್ ಚೌಪಾಟಿಯಲ್ಲಿ ಎಷ್ಟೊಂದು ಅಪಾರ ಜನಸಾಗರ ಸೇರಿತ್ತೆಂದರೆ ಸ್ವತಃ ಸಮುದ್ರವೂ ತಲೆಬಾಗಿಸಿ, ಇಳಿಯತೊಡಗಿತ್ತು. ದುಃಖಾವೇಶದಲ್ಲಿ ಮುಳುಗಿದ್ದ ಲಕ್ಷಾವಧಿ ಜನರು ಹುಚ್ಚರಂತಾಗಿದ್ದರು. ಬೌದ್ಧ ವಿಧಿವಿಧಾನಗಳಲ್ಲಿ ಅಂತಿಮಕ್ರಿಯೆ ನಡೆಸಲು ಭದಂತ ಆನಂದ ಕೌಸಲ್ಯಾಯನರ ಜೊತೆಯಲ್ಲಿ ಅನೇಕ ಭಿಕ್ಖುಗಣ ಅಲ್ಲಿ ಉಪಸ್ಥಿತರಿದ್ದರು. ಶ್ರೀಗಂಧದ ಚಿತೆಯ ಮೇಲೆ ಸಾಹೇಬರ ದೇಹವನ್ನು ಇರಿಸಲಾಯಿತು. ಮುಂಬೈ ಪೊಲೀಸರು ಅಂತಿಮ ಗೌರವ ನಮನ ಸಲ್ಲಿಸಿದರು ಏಳು ಗಂಟೆಯ ಹೊತ್ತಿಗೆ ಯಶವಂತ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅದರೊಂದಿಗೆ ಅಲ್ಲಿ ನೆರೆದಿದ್ದ ಲಕ್ಷಾಂತರ ಹೃದಯಗಳು ಭಾರವಾದವು. ಇಡೀ ಜನಸಮೂಹ ಶೋಕಸಾಗರದಲ್ಲಿ ಮುಳುಗಿತು. ‘ಸೂರ್ಯನು ದಿಗಂತದಲ್ಲಿ ಮುಳುಗುತ್ತಿದ್ದನು. ಅದೇ ಸಮಯಕ್ಕೆ ಪೃಥ್ವಿಯ ಮೇಲೆ ಪ್ರಕಾಶಮಾನವಾಗಿದ್ದ ಜ್ಞಾನಸೂರ್ಯನು ಶ್ರೀಗಂಧದ ಚಿತೆಯಲ್ಲಿ ಅಸ್ತಮಿಸುತ್ತಿದ್ದನು’.

ಸಾಹೇಬರ ನಿಧನದಿಂದ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿತು. ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆ, ದೇಶಾದ್ಯಂತದ ಎಲ್ಲ ಸಂಘ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ನ್ಯಾಯಾಂಗ ಸಂಸ್ಥೆಗಳು, ದೇಶ-ವಿದೇಶಗಳ ಹಲವಾರು ಗಣ್ಯರು, ಮತ್ತು ದೇಶ ವಿದೇಶಗಳ ಪತ್ರಿಕೆಗಳು ಸಾಹೇಬರ ನಿಧನಕ್ಕೆ ಸಂತಾಪ ಸೂಚಿಸಿ ಸಾಹೇಬರ ಕಾರ್ಯಗಳನ್ನು ಶ್ಲಾಘಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದವು.
ಆಯಿ ಸಾಹೇಬ ಸವಿತಾ ಭೀಮರಾವ್ ಅಂಬೇಡ್ಕರ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page