Monday, April 14, 2025

ಸತ್ಯ | ನ್ಯಾಯ |ಧರ್ಮ

ಬಾಬಾಸಾಹೇಬ್ ಅಂಬೇಡ್ಕರ್: ಯುವಶಕ್ತಿಯ ನವ ಐಕಾನ್

ಈಗ ಮತ್ತೊಮ್ಮೆ ದೇಶದಲ್ಲಿನ ತಾರತಮ್ಯದ ವಿರುದ್ಧ, ಅಸಮಾನತೆಯ ವಿರುದ್ದ, ದೇಶದಲ್ಲಿನ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಮಟ್ಟಿಗೆ ವಿದ್ಯಾರ್ಥಿ ಸಮೂಹವೊಂದು ಪ್ರಬುದ್ಧವಾಗಿರುವುದು ಅಚ್ಚರಿ ಮೂಡಿಸುತ್ತಿದೆ. ಅದಕ್ಕೆ ಕಾರಣಗಳನ್ನು ತಿಳಿಯುವ ಮೊದಲು ನಮ್ಮ ದೇಶದ ಯುವ ಸಮೂಹದ ಆದರ್ಶಗಳನ್ನು ತಿಳಿಯಬೇಕಿದೆ... ವಿಕಾಸ್ ಆರ್ ಮೌರ್ಯ ಅವರ ಬರಹದಲ್ಲಿ

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನಡೆದ ಜಾತಿ ತಾರತಮ್ಯ ಮತ್ತು ಅದರ ವಿರುದ್ಧ ಹೋರಾಡಿ ಆತ್ಮ ಬಲಿದಾನ ನೀಡಿದ ರೋಹಿತ್ ವೇಮುಲನ ಪರವಾಗಿ ಹುಟ್ಟಿಕೊಂಡ ಯುವಶಕ್ತಿ ಹೋರಾಟ ಇಡೀ ದೇಶದ ಗಮನ ಸೆಳೆದಿದೆ. ಕೇಂದ್ರ ಸರ್ಕಾರ ಸತತವಾಗಿ ಸಂಸತ್ತಿನಲ್ಲಿ ತನ್ನನ್ನು ಸಮರ್ಥಿಸಿಕೊಳ್ಳಲು ಹೆಣಗಾಡಿ ಸೋತಿದೆ. ಸುಳ್ಳಿನ ಮೇಲೆ ಸುಳ್ಳು ಹೇಳಿ ಸ್ಮೃತಿ ಇರಾನಿಯವರು ಸಿಕ್ಕಿ ಹಾಕಿಕೊಂಡಿದ್ದಾರೆ. ಆತುರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸತ್ಯಮೇವ ಜಯತೆ ಎಂದು ಟ್ವೀಟ್ ಮಾಡಿಬಿಟ್ಟಿದ್ದಾರೆ. ಹೀಗಿರುವಾಗ ರೋಹಿತ್ ವೇಮುಲ ಹಚ್ಚಿದ ಕಿಡಿ ದೇಶಾದ್ಯಂತ ಆವರಿಸಿದೆ. ಇದೇ ಕಿಡಿ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೂ ಆವರಿಸಿ ಆಜಾದಿಗಾಗಿ ಘೋಷಣೆ ಕೂಗುತ್ತಿದೆ. ದೇಶದಲ್ಲಿನ ಅನಿಷ್ಟಗಳಿಂದ ಆಜಾದಿಗಾಗಿ ಘೋಷಣೆ ಕೂಗಿದ ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರನನ್ನೂ ಸಹ ದೇಶದ್ರೋಹಿ ಆರೋಪದಲ್ಲಿ ಜೈಲು ಸೇರಿಸಿದ್ದರು. ದೆಹಲಿ ಪೋಲೀಸರು ದಿನಕ್ಕೊಂದು ಗೊಂದಲದ ಹೇಳಿಕೆಗಳನ್ನು ನೀಡುತ್ತಾ, ಕೆಲವು ವಕೀಲರು ಸಂವಿಧಾನವನ್ನೇ ಉಲ್ಲಂಘಿಸಿ ನ್ಯಾಯಾಲಯದಲ್ಲಿಯೇ ಕನ್ಹಯ್ಯಾಗೆ ಥಳಿಸಿದ್ದು ಸುದ್ದಿಯಾಗಿತ್ತು. ಕೊನೆಗೆ ಕನ್ಹಯ್ಯಾನ ದೇಶದ್ರೋಹ ಸಾಬೀತು ಮಾಡಲಾಗದೆ ಜಾಮೀನಿನ ಮೇಲೆ ಕನ್ಹಯ್ಯಾನನ್ನು ಬಿಡಲಾಯಿತು.

ಇಷ್ಟು ದಿನ ಭಯೋತ್ಪಾದನೆ, ದೇಶದ್ರೋಹದ ಹೆಸರಿನಲ್ಲಿ ಮುಸ್ಲಿಮರಲ್ಲಿನ ಅಮಾಯಕರನ್ನು ಅವಮಾನಿಸುತ್ತಿದ್ದ ಆಳುವ ಸರ್ಕಾರಗಳು ಈ ಮೇಲಿನ ಎರಡು ಪ್ರಕರಣಗಳಲ್ಲಿ ಅದನ್ನು ದಲಿತ ಮತ್ತು ಹಿಂದುಳಿದ ವರ್ಗದವರೆಗೂ ವಿಸ್ತರಿಸಿಕೊಂಡಿವೆ. ಆಳುವ ಸರ್ಕಾರದ ವಿರುದ್ಧ ಮಾತನಾಡುವ, ಆಳುವ ಸರ್ಕಾರದ ಸಿದ್ಧಾಂತಗಳಿಗೆ ಗೌರವ ಕೊಡದವರನ್ನು ಜೈಲಿಗಟ್ಟುವ ಕಾರ್ಯಕ್ರಮವನ್ನು ಈ ಸರ್ಕಾರ ಹಮ್ಮಿಕೊಂಡಿದೆ. ಆದರೆ ಅದಕ್ಕೆ ಸರಿಯಾಗಿಯೇ ನಮ್ಮ ದೇಶದ ಯುವ ಸಮೂಹ ಪಾಠ ಕಲಿಸಿದೆ. ನಮಗೆ ಭಾರತದ ಸಂವಿಧಾನದ ಮೇಲೆ ವಿಶ್ವಾಸವಿದೆ. ಬಾಬಾಸಾಹೇಬ್ ಅಂಬೇಡ್ಕರರ ಮೇಲೆ ವಿಶ್ವಾಸವಿದೆ ಎಂದು ಸರಿಯಾಗಿ ತಿರುಗೇಟು ನೀಡಿದೆ. ಹೀಗಾಗಿ ರೋಹಿತ್ ವೇಮುಲ ಮತ್ತು ಜೆಎನ್ಯೂ ಪರವಾಗಿ ಹುಟ್ಟಿಕೊಂಡಿರುವ ಹೋರಾಟ ತನ್ನ ಪ್ರಬುದ್ಧತೆಯನ್ನು ಮೆರೆದಿದೆ.

ಭಾರತದ ಇತಿಹಾಸವನ್ನು ಗಮನಿಸಿದಾಗ ಬ್ರಿಟಿಷರ ವಿರುದ್ಧವಾಗಿ ಇಂತಹ ಯುವಪಡೆಯ ಹೋರಾಟವೊಂದು ನಡೆದಿತ್ತು. ಅದು ಅಹಿಂಸಾತ್ಮಕವಾಗಿಯೇ ಆರಂಭವಾಯಿತಾದರೂ ಬ್ರಿಟಿಷರ ಧಬ್ಬಾಳಿಕೆಯ ವಿರುದ್ಧ ಉಗ್ರರೂಪ ತಾಳಬೇಕಾಯಿತು. ಆದರೆ ಅದನ್ನೂ ಹತ್ತಿಕ್ಕಲಾಯಿತು. ಸ್ವಾತಂತ್ರö್ಯ ನಂತರದಲ್ಲಿ ದೇಶದ ಯುವ ಸಮೂಹ ಸಿಡಿದೆದ್ದು ೬೦ ರ ದಶಕದಲ್ಲಿ ಕಾಂಗ್ರೆಸ್ ವಿರೋಧಿ ಚಳುವಳಿಯನ್ನು ಕಟ್ಟಿತ್ತು. ಬಿಹಾರದಲ್ಲಿ ಇಂಗ್ಲಿಷ್ ವಿರೋಧಿ ಚಳುವಳಿ ಹುಟ್ಟಿತ್ತು. ಕರ್ನಾಟಕದಲ್ಲಿ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿ ಹೋರಾಟ ರೂಪುಗೊಂಡಿತ್ತು. ತಮಿಳುನಾಡಿನಲ್ಲಿ ಹಿಂದುತ್ವ ವಿರೋಧಿ ಹೋರಾಟ ರೂಪುಗೊಂಡಿತ್ತು. ತುರ್ತುಪರಿಸ್ಥಿತಿಯ ಕಾಲದಲ್ಲಿ ಜಯಪ್ರಕಾಶ್ ನಾರಾಯಣ್ರವರ ನೇತೃತ್ವದಲ್ಲಿ ದೇಶದ ಎಲ್ಲಾ ಸಿದ್ಧಾಂತಗಳೂ ಇಂದಿರಾಗಾAಧಿಯವರು ಹೇರಿದ್ದ ಅಮಾನವೀಯ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಕ್ಕೆ ಇಳಿದಿದ್ದವು. ಅದರಲ್ಲಿ ಯುವಕರ ಕಾಣಿಕೆ ಬಹು ದೊಡ್ಡದು. ಎಂಬತ್ತರ ದಶಕದಲ್ಲಿ ನಕ್ಸಲೈಟ್ ಚಳುವಳಿ ಮತ್ತು ದಲಿತ ಚಳುವಳಿಗಳಲ್ಲಿ ಈ ದೇಶದಲ್ಲಿನ ತಾರತಮ್ಯದ ವಿರುದ್ಧ ಯುವ ಜನತೆ ಸಿಡಿದೆದ್ದಿತ್ತು. ಕರ್ನಾಟಕದ ದಲಿತ ಸಂಘರ್ಷ ಸಮಿತಿ ಹುಟ್ಟಿಕೊಂಡದ್ದೇ ಹಾಸ್ಟೆಲ್ಲುಗಳಲ್ಲಿ ಕುದಿಯುತ್ತಿದ್ದ ವಿದ್ಯಾರ್ಥಿಗಳಿಂದ ಎಂಬುದನ್ನಿಲ್ಲಿ ಸ್ಮರಿಸಬಹುದು.

ಈಗ ಮತ್ತೊಮ್ಮೆ ದೇಶದಲ್ಲಿನ ತಾರತಮ್ಯದ ವಿರುದ್ಧ, ಅಸಮಾನತೆಯ ವಿರುದ್ದ, ದೇಶದಲ್ಲಿನ ಸ್ವಾತಂತ್ರö್ಯವನ್ನು ಪ್ರಶ್ನಿಸುವ ಮಟ್ಟಿಗೆ ವಿದ್ಯಾರ್ಥಿ ಸಮೂಹವೊಂದು ಪ್ರಬುದ್ಧವಾಗಿರುವುದು ಅಚ್ಚರಿ ಮೂಡಿಸುತ್ತಿದೆ. ಅದಕ್ಕೆ ಕಾರಣಗಳನ್ನು ತಿಳಿಯುವ ಮೊದಲು ನಮ್ಮ ದೇಶದ ಯುವ ಸಮೂಹದ ಆದರ್ಶಗಳನ್ನು ತಿಳಿಯಬೇಕಿದೆ.

ಸ್ವಾತಂತ್ರö್ಯ ನಂತರದಲ್ಲಿ ನಮ್ಮ ದೇಶದ ಯುವ ಸಮೂಹ ಬಲಪಂಥೀಯ ಮತ್ತು ಎಡಪಂಥೀಯ ವಿಚಾರಧಾರೆಗಳಾಗಿ ಒಡೆದು ಹೋದವು. ಬಲಪಂಥೀಯ ವಿದ್ಯಾರ್ಥಿಗಳು ನಮ್ಮ ದೇಶದ ಪ್ರಾಚೀನತೆಯನ್ನು ಕೊಂಡಾಡುವ, ಜಾತೀಯತೆಯನ್ನು ಸಮರ್ಥಿಸಿಕೊಳ್ಳುವ, ವೇದಗಳಿಗೆ ಮರಳುವ, ಸನಾತನ ಪರಂಪರೆಯಲ್ಲಿ ನಂಬಿಕೆ ಇಟ್ಟು ಹಿಂದೂ ರಾಷ್ಟçದ ಕನಸು ಕಾಣುವ ಸಿದ್ಧಾಂತವನ್ನು ಪ್ರತಿಪಾಧಿಸುತ್ತ ಬಂದರು. ಎಡಪಂಥೀಯ ವಿದ್ಯಾರ್ಥಿಗಳು ಬ್ರಿಟಿಷರಿಂದ ಸ್ವಾತಂತ್ರö್ಯವಾದ ನಂತರವೂ ಮುಂದುವರೆದ ಅಸಮಾನತೆ ಪ್ರಶ್ನಿಸುವ, ಬಂಡವಾಳಶಾಹಿಯನ್ನು ಧಿಕ್ಕರಿಸುವ, ಲಿಂಗ ತಾರತಮ್ಯವನ್ನು ಪ್ರಶ್ನಿಸುವ, ಧರ್ಮವನ್ನು ಅಫೀಮೆನ್ನುವ ಭೌತವಾದಿ ಸಿದ್ಧಾಂತವನ್ನು ಪ್ರತಿಪಾಧಿಸುತ್ತಾ ಬಂದರು. ಬಲ ಪಂಥೀಯರಿಗೆ ಸ್ವಾಮಿ ವಿವೇಕಾನಂದರು ಐಕಾನ್ ಆದರೆ ಎಡಪಂಥೀಯರಿಗೆ ಭಗತ್ ಸಿಂಗ್ ಐಕಾನ್ ಆದರು. ಬಲ ಪಂಥೀಯರಿಗೆ ಹಿಟ್ಲರ್, ಮುಸೊಲಿನಿ ಆದರ್ಶ ಪ್ರಾಯರಾದರೆ ಎಡಪಂಥೀಯರಿಗೆ ಮಾರ್ಕ್ಸ್, ಲೆನಿನ್ ಆದರ್ಶಪ್ರಾಯರಾದರು. ‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ವಿವೇಕಾನಂದರ ವಾಣಿ ಬಲಪಂಥೀಯ ವಿದ್ಯಾರ್ಥಿಗಳದಾದರೆ, ‘ಕ್ರಾಂತಿ ಚಿರಾಯುವಾಗಲಿ’ ಎಂಬ ಭಗತ್ ಸಿಂಗ್ ವಾಣಿ ಎಡಪಂಥೀಯ ವಿದ್ಯಾರ್ಥಿಗಳದ್ದಾಯಿತು. ಆದರೆ ಇವೆರಡನ್ನೂ ಹೊರತುಪಡಿಸಿ ದೇಶಾದ್ಯಂತ ಅಸ್ಪೃಶ್ಯತೆ ಮತ್ತು ಜಾತೀಯತೆಯಿಂದ ನಲುಗಿಹೋಗಿದ್ದ ದಲಿತ ವಿದ್ಯಾರ್ಥಿ ಸಮೂಹ  ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ ಎಂಬ ಅಂಬೇಡ್ಕರ್ ವಾಣಿಯೊಂದಿಗೆ ಮುಂದುವರೆಯಿತು. ಅಂಬೇಡ್ಕರ್ ವಾದವೇ ನಮ್ಮ ವಿಮೋಚನೆಯ ದಾರಿ ಎಂದು ಮನಗಾಣಿದರು. ಬಲಪಂಥೀಯ ಮತ್ತು ಎಡಪಂಥೀಯ ವಿದ್ಯಾರ್ಥಿ ಸಮೂಹ ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲವೋ ಅದರ ಬಗ್ಗೆಯೇ ಇವರು ಹೆಚ್ಚು ಮಾತನಾಡತೊಡಗಿದರು. ಬುದ್ಧನ ಧಮ್ಮ, ಮತಾಂತರ, ಜಾತಿ ವಿನಾಶ, ಅಸ್ಪೃಶ್ಯತೆ, ಬ್ರಾಹ್ಮಣ್ಯದ ಬಗ್ಗೆ ಮಾತನಾಡಿದರು. ಅವುಗಳಿಗೇ ಹೆಚ್ಚು ಒತ್ತು ಕೊಟ್ಟು ದಲಿತ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸಿದರು. ಆದ್ದರಿಂದ ದಲಿತ ವಿದ್ಯಾರ್ಥಿಗಳೊಳಗೆ ಭಗತ್ ಸಿಂಗ್ ಮತ್ತು ವಿವೇಕಾನಂದರಿಗಿAತ ಅಂಬೇಡ್ಕರ್ ಸರಾಗವಾಗಿ ಇಳಿಯುತ್ತಾ ಹೋದರು. ಇನ್ನೊಂದು ಕಡೆ ಬಲ ಮತ್ತು ಎಡ ಪಂಥೀಯ ವಿದ್ಯಾರ್ಥಿಗಳು ಅಂಬೇಡ್ಕರರನ್ನು ದೂರವೇ ಇಟ್ಟರು. ಇಂದು ಒಂದು ರೀತಿಯಲ್ಲಿ ಅಂಬೇಡ್ಕರರನ್ನು ದಲಿತರು ಗುತ್ತಿಗೆಗೆ ಇಟ್ಟುಕೊಂಡರೇನೋ ಎಂಬ ಭಾವನೆ ದಲಿತೇತರ ವಿದ್ಯಾರ್ಥಿಗಳಲ್ಲಿ ಮೂಡಿದೆಯಾದರೂ ಅಂಬೇಡ್ಕರರನ್ನು ದಲಿತ ವಿದ್ಯಾರ್ಥಿಗಳು ಅಪ್ಪಿಕೊಂಡAತೆ ಯಾವುದೇ ಇನ್ನಿತರ ವಿದ್ಯಾರ್ಥಿಗಳು ಅಪ್ಪಿಕೊಳ್ಳಲಿಲ್ಲ ಮತ್ತು ಒಪ್ಪಿಕೊಳ್ಳಲಿಲ್ಲ. ಆ ಕಾರಣಕ್ಕಾಗಿ ಅಂಬೇಡ್ಕರರನ್ನು ಅನಿವಾರ್ಯವಾಗಿ ದಲಿತರೇ ಅಪ್ಪಿಕೊಳ್ಳುವಂತಾಯಿತು. ಹೀಗೆ ಬಲಪಂಥೀಯ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದ ಜಯಂತಿ ಶ್ರೇಷ್ಟವಾದರೆ ಎಡಪಂಥೀಯ ವಿದ್ಯಾರ್ಥಿಗಳಿಗೆ ಭಗತ್ ಸಿಂಗ್ ಜಯಂತಿ ಶ್ರೇಷ್ಟವಾಯಿತು. ಹಾಗೆಯೇ ದಲಿತ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಜಯಂತಿ.

ನಾನೇಕೆ ಇಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆಂದರೆ, ಇಂದು ಜೆಎನ್ಯೂನ ಪ್ರಗತಿಪರ ವಿದ್ಯಾರ್ಥಿಗಳು ‘ಅಂಬೇಡ್ಕರ್ ಜಿಂದಾಬಾದ್’ ಎನ್ನುತ್ತಿದ್ದಾರೆ. ಬಲಪಂಥೀಯ ವಿದ್ಯಾರ್ಥಿಗಳು ಅಂಬೇಡ್ಕರರನ್ನು ‘ಹಿಂದೂ ರಾಷ್ಟçದ ನೇತಾರ’ ಎನ್ನುತ್ತಿದ್ದಾರೆ. ಈ ಹಿಂದೆ ದೇಶದ ಎಡಪಂಥೀಯ ವಿದ್ಯಾರ್ಥಿಗಳು ಅಂಬೇಡ್ಕರರನ್ನು ‘ಬೂರ್ಷ್ವಾಯಿಸ್ಟ್’ ಎಂದಿದ್ದರು. ಇದೇ ಬಲಪಂಥೀಯರು ಅಂಬೇಡ್ಕರರನ್ನು ‘ಸುಳ್ಳು ದೇವರು’ ಎಂದಿದ್ದರು. ಆದರೆ ಈಗ ಇವೆರಡೂ ಸಿದ್ಧಾಂತಗಳೂ ಅಂಬೇಡ್ಕರರನ್ನು ಒಳಗೊಳ್ಳುವ ಪ್ರಯತ್ನ ಮಾಡುತ್ತಿರುವುದು ಸ್ವಾಗತಾರ್ಹವಾದರೂ ಅದು ಅಂಬೇಡ್ಕರರು ಕಂಡ ಕನಸಿನ ಭಾರತದ ಕಡೆ ಹೆಜ್ಜೆ ಹಾಕಬಲ್ಲದೇ? ಇವೆರಡರಲ್ಲಿ ಯಾವುದು ಅಂಬೇಡ್ಕರರ ಪ್ರಬುದ್ಧ ಭಾರತವನ್ನು ಕಟ್ಟಲು ಪ್ರಾಮಾಣಿಕ ಪ್ರಯತ್ನ ಹಾಕಬಹುದು? ಎಂಬ ಪ್ರಶ್ನೆಗಳು ಅತಿ ಮುಖ್ಯವಾಗುತ್ತದೆ. ಜೊತೆಗೆ ದಲಿತ ಚಳುವಳಿಯು ಈ ಹಿಂದಿನ ತನ್ನ ಶಕ್ತಿಯನ್ನು ಕಳೆದುಕೊಂಡು ಬಿಡಿ ಬಿಡಿಯಾಗಿದೆ. ಅದು ಇಡಿಯಾಗುವ ಸಾಧ್ಯತೆಗಳೂ ಕಡಿಮೆ ಇದೆ. ಅದಲ್ಲದೆ ರಾಜೀ ರಾಜಕಾರಣವನ್ನೂ ತನ್ನೊಳಗೆ ಬೆಳೆಸಿಕೊಳ್ಳುತ್ತಾ ಅಂಬೇಡ್ಕರರ ಹೋರಾಟದ ರಥವನ್ನು ಸ್ಥಗಿತಗೊಳಿಸಿಬಿಟ್ಟಿವೆ. ಬಹುಜನ ಚಳುವಳಿ ಅಂಬೇಡ್ಕರರನ್ನು ಯುವಜನತೆಯಲ್ಲಿ ಭಿತ್ತುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ. ಆದರೆ ರಾಜಕೀಯದ ಹೊರತಾಗಿ ಅದಕ್ಕೆ ಹೋರಾಟಗಳಲ್ಲಿ ನಂಬಿಕೆ ಇಲ್ಲ. ಓಟಿನಿಂದಲೇ ಎಲ್ಲಾ ಬದಲಾವಣೆಯನ್ನು ಬಯಸುತ್ತಿದೆ.  ಆದ್ದರಿಂದ ಅಂಬೇಡ್ಕರರ ಆಶಯಗಳನ್ನು ಕಾರ್ಯಗತಗೊಳಿಸುವವರಾರು? ಇದಕ್ಕೆ ಉತ್ತರ ಹುಡುಕಲು ನಾವು ಅಂಬೇಡ್ಕರರು ಕನಸಿದ ಭಾರತವನ್ನು ಕಲ್ಪಿಸಿಕೊಳ್ಳಬೇಕಾಗಿದೆ.

ಅಂಬೇಡ್ಕರರ ಕನಸಿನ ಭಾರತ
ಒಂದೇ ಮಾತಲ್ಲಿ ಹೇಳುವುದಾದರೆ, ಸ್ವಾತಂತ್ರö್ಯ, ಸಮಾನತೆ ಮತ್ತು ಸಹೋದರತೆಯನ್ನು ಒಳಗೊಂಡಿರುವ ಜನರ ದೇಶ ಭಾರತವಾಗಬೇಕೆಂಬುದು ಅಂಬೇಡ್ಕರರ ಕನಸಾಗಿತ್ತು. ಅದನ್ನವರು ಪ್ರಜಾಪ್ರಭುತ್ವದಲ್ಲಿ ಕಂಡಿದ್ದರು. ಆದರೆ ಅದು ನಾವೀಗ ಅನುಭವಿಸುತ್ತಿರುವ ಪ್ರಜಾಪ್ರಭುತ್ವವಲ್ಲ. ಅವರ ಪ್ರಕಾರ. ಒಂದು ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಆ ದೇಶದ ಜನತೆ ಪ್ರಜಾಸತ್ತಾತ್ಮಕರಾಗಿರಬೇಕು. ಅಂದರೆ ಸಹೋದರತೆಯನ್ನು ಮೈಗೂಡಿಸಿಕೊಂಡು ಸ್ವಾತಂತ್ರö್ಯ, ಸಮಾನತೆಯನ್ನು ಉಳಿಸಿಕೊಳ್ಳಬೇಕು. ಆದರೆ ಇಂದಿಗೂ ಪ್ರಜಾಪ್ರಭುತ್ವ ನಮ್ಮ ದೇಶದಲ್ಲಿ ಚುನಾವಣೆಗೆ ಮೀಸಲಾಗಿದೆಯೇ ಹೊರತು ಜನತೆಯಲ್ಲಿ ಹಾಸು ಹೊಕ್ಕಾಗಿಲ್ಲ. ಆದ್ದರಿಂದ ಅಂಬೇಡ್ಕರರ ಕನಸಿನ ಭಾರತದಲ್ಲಿ ಜನರು ಪ್ರಜಾತಂತ್ರದ ಲಕ್ಷಣಗಳನ್ನು ಮೈಗೂಡಿಸಿಕೊಳ್ಳಬೇಕು. ಹಾಗಾದರೆ ಅಂಬೇಡ್ಕರರ ಪ್ರಜಾಪ್ರಭುತ್ವ ಕಲ್ಪನೆ ಏನು ಹೇಳುತ್ತದೆ? ೧೯೫೦, ಜನವರಿ ೨೬ ರಂದು ಸಂವಿಧಾನ ಜಾರಿಗೆ ಬಂದ ದಿನ ಅಂಬೇಡ್ಕರರು ಆಡಿದ ಮಾತುಗಳನ್ನೊಮ್ಮೆ ಗಮನಿಸಿ.

“೧೯೫೦ ನೇ ಇಸವಿ ಜನವರಿ ೨೬ ರ ಈ ದಿನ ನಾವು ವಿರೋಧಾಭಾಸಗಳ ಜೀವನಕ್ಕೆ ಕಾಲಿಡುತ್ತಿದ್ದೇವೆ. ನಾವು ಗಳಿಸಿರುವ ಸಮಾನತೆಯೂ ರಾಜಕೀಯವಾದದ್ದೇ ಹೊರತು ಆರ್ಥಿಕವಾದದ್ದಲ್ಲ, ಸಾಮಾಜಿಕವಾದದ್ದಲ್ಲ. ಒಬ್ಬನಿಗೊಂದು ಮತ ಮತ್ತು ಮತಕ್ಕೊಂದು ಮೌಲ್ಯ ಎಂಬ ತತ್ವವನ್ನು ನಾವು ರಾಜಕೀಯವಾಗಿ ಅಂಗೀಕರಿಸಿದ್ದೇವೆ. ನಮ್ಮ ಸಾಮಾಜಿಕ ಮತ್ತು ಆರ್ಥಿಕತೆಯ ಸಂದರ್ಭದಲ್ಲಿ ಸಮಾನತಾ ತತ್ವಕ್ಕೆ ಪ್ರತಿರೋದವು ಮುಂದುವರೆಯುವAತಹ ಪರಿಸ್ಥಿತಿ ಇದೆ. ಎಷ್ಟು ಕಾಲದವರೆಗೆ ನಾವು ಈ ವೈರುದ್ಯಗಳ ಬದುಕಿನಲ್ಲಿ ಸಾಗಬಲ್ಲೆವು? ಎಷ್ಟು ಕಾಲದವರೆಗೆ ನಮ್ಮ ಸಾಮಾಜಿಕ ಆರ್ಥಿಕ ಬದುಕಿನಲ್ಲಿ ಸಮಾನತೆಯನ್ನು ಅಲ್ಲಗೆಳೆಯಲು ಸಾಧ್ಯ? ಒಂದು ವೇಳೆ ನಾವು ಸಮಾನತೆಯನ್ನು ಬಹಳ ಕಾಲದವರೆಗೆ ಅಲ್ಲಗೆಳೆದಿದ್ದೇ ಆದರೆ ರಾಜಕೀಯವಾಗಿ ನಮಗೆ ದೊರಕಿರುವ ಪ್ರಜಾಪ್ರಭುತ್ವದ ನಾಶಕ್ಕೆ ನಾವೇ ಕಾರಣರಾಗುತ್ತೇವೆ. ಆದಷ್ಠೂ ಶೀಘ್ರಗತಿಯಲ್ಲಿ ಈ ವೈರುದ್ಯಗಳನ್ನು ನಿವಾರಿಸಬೇಕು. ಇಲ್ಲವಾದರೆ ಈ ಶಾಸನ ಸಭೆಯು ಅತ್ಯಂತ ಪರಿಶ್ರಮದಿಂದ ನಿರ್ಮಿಸಿದ ರಾಜಕೀಯ ಪ್ರಜಾಪ್ರಭುತ್ವದ ಚೌಕಟ್ಟನ್ನು ಅಸಮಾನತೆಯಿಂದ ಬಳಲುತ್ತಿರುವ ಶೋಷಿತರು ಧ್ವಂಸ ಮಾಡಿಬಿಟ್ಟಾರು”

ಅಂಬೇಡ್ಕರರು ಈ ಮೇಲಿನ ಹೇಳಿಕೆಯ ಮೂಲಕ ನಮ್ಮ ದೇಶಕ್ಕೆ ಒದಗಬಹುದಾದ ಆಪತ್ತನ್ನು ಗುರುತಿಸಿ ನಮ್ಮೆಲ್ಲರನ್ನು ಎಚ್ಚರಿಸಿದ್ದಾರೆ. ಅಂದರೆ ನಮಗೆ ದೊರಕಿರುವ ಸ್ವಾತಂತ್ರö್ಯ ಕೇವಲ ರಾಜಕೀಯದ್ದಾಗಿದ್ದು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಮಗೆ ಸ್ವಾತಂತ್ರö್ಯ ಸಿಕ್ಕಿಲ್ಲ. ಈಗಂತು ಅಂಬೇಡ್ಕರರ ಹೇಳಿಕೆಯನ್ನು ಧೃಡೀಕರಿಸುವ ಸಾಕ್ಷಿಗಳು ನಮಗೆ ಹೇರಳವಾಗಿ ಸಿಗುತ್ತವೆ. ಆದ್ದರಿಂದ ಅಂಬೇಡ್ಕರರ ಕನಸಿನ ಭಾರತದ ಪ್ರಜಾಫ್ರಭುತ್ವದಲ್ಲಿ ಬಹುಮುಖ್ಯವಾಗಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಇರಬೇಕು. ಅದನ್ನವರು ಕೇವಲ ಬಾಯಿ ಮಾತಿಗೆ ಹೇಳಲಿಲ್ಲ. ಅವರ ಬಳಿ ಕಾರ್ಯಕ್ರಮಗಳಿದ್ದವು. ಆ ಕಾರ್ಯಕ್ರಮಗಳು ಸಾಮಾಜಿಕ ಸುಧಾರಣೆಯಿಂದ ಆರಂಭವಾಗಿದ್ದವು. ಜಾತಿ ವಿನಾಶ ಕೃತಿಯಲ್ಲಿ ಅವರೇ ದಾಖಲಿಸಿರುವಂತೆ ಡಬ್ಲೂ.ಸಿ ಬ್ಯಾನರ್ಜಿಯವರ ಪ್ರಶ್ನೆಗಳಿಗೆ ಪ್ರಶ್ನೆಗಳ ಮೂಲಕವೇ ಅಂಬೇಡ್ಕರರು ಉತ್ತರಿಸುತ್ತಾರೆ. ಅದನ್ನಿಲ್ಲಿ ತಿಳಿಯುವುದು ಸೂಕ್ತ. ಬ್ಯಾನರ್ಜಿಯವರು ಸಮಾಜ ಸುಧಾರಕರನ್ನು ಪ್ರಶ್ನಿಸುತ್ತಾ
“ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಸುಧಾರಿಸುವವರೆಗೂ ನಾವು ರಾಜಕೀಯ ಸುಧಾರಣೆಗಳಿಗೆ ಒಂದಿಷ್ಟೂ ಅರ್ಹವಾಗುವುದಿಲ್ಲ ಎಂದು ವಾದಿಸುವವರ ಬಗ್ಗೆ ನನಗೆ ಸಹನೆ ಇಲ್ಲ. ಇವೆರಡರ ನಡುವಿನ ಸಂಬಂಧ ಎಂಥದ್ದೋ ನನಗಂತೂ ಅರ್ಥವಾಗುತ್ತಿಲ್ಲ. ನಮ್ಮ ವಿಧವೆಯರು ಪುನರ್ವಿವಾಹವಾಗುತ್ತಿಲ್ಲ.. ಮತ್ತು ಬೇರೆ ದೇಶಗಳಲ್ಲಿಕ್ಕಿಂತ ನಮ್ಮ ಹುಡುಗಿಯರು ಬಹು ಚಿಕ್ಕಂದಿನಲ್ಲಿಯೇ ಮದುವೆಯಾಗುತ್ತಾರೆ ಎಂಬ ಕಾರಣಕ್ಕಾಗಿಯೇ ನಾವು ರಾಜಕೀಯ ಸುಧಾರಣೆಗೆ ಅನರ್ಹರೇ? ನಮ್ಮ ಹೆಂಡಂದಿರು, ಹೆಣ್ಣು ಮಕ್ಕಳು ನಮ್ಮೊಂದಿಗೆ ಎಲ್ಲೆಲ್ಲೂ ಸುತ್ತುವುದಿಲ್ಲ, ನಾವು ನಮ್ಮ ಗೆಳೆಯರನ್ನು ಕಾಣಲು ಹೋಗುವಾಗ ನಮ್ಮ ಜೊತೆಗೆ ಬರುವುದಿಲ್ಲ ಎಂಬ ಕಾರಣಕ್ಕಾಗಿಯೇ ನಾವು ರಾಜಕೀಯ ಸುಧಾರಣೆಗೆ ಯೋಗ್ಯರಲ್ಲವೆ? ನಾವು ನಮ್ಮ ಹೆಣ್ಣು ಮಕ್ಕಳನ್ನು ಆಕ್ಸ್ಫರ್ಡ್ ಮತ್ತು ಕೇಂಬ್ರಿಜ್ ಗಳಿಗೆ ಕಳಿಸುವುದಿಲ್ಲ ಎಂಬ ಕಾರಣಕ್ಕಾಗಿಯೇ ರಾಜಕೀಯ ಸುಧಾರಣೆಗೆ ತಕ್ಕವರಲ್ಲವೆ?”

ಈ ರೀತಿಯ ಬ್ಯಾನರ್ಜಿ ಪ್ರಶ್ನೆಗೆ ಅಂಬೇಡ್ಕರರು ಭಾರತ ದೇಶದ ಬೇರೆಯದೇ ಮಗ್ಗುಲನ್ನು ಪರಿಚಯಿಸುತ್ತಾ, ಅಸ್ಪೃಶ್ಯರ ಸ್ಥಿತಿಯನ್ನು ಹಲವಾರು ಉದಾಹರಣೆಗಳ ಮೂಲಕ ತಿಳಿಸಿ ಪ್ರಶ್ನೆಗಳ ಮೂಲಕವೇ ಬ್ಯಾನರ್ಜಿಗೆ ಉತ್ತರಿಸುತ್ತಾರೆ.

“ನೀವು ಸ್ವಂತ ದೇಶ ಭಾಂದವರೇ ಆದ ಅಸ್ಪೃಶ್ಯರ ಒಂದು ದೊಡ್ಡ ವರ್ಗಕ್ಕೆ ಸಾರ್ವಜನಿಕ ಶಾಲೆಗಳಲ್ಲಿ ಪ್ರವೇಶ ನಿರಾಕರಿಸುತ್ತಿರುವ, ಅವರನ್ನು ಅಕ್ಷರಾಭ್ಯಾಸದಿಂದ ದೂರವಿಡುತ್ತಿರುವ ನೀವು ರಾಜಕೀಯ ಅಧಿಕಾರಕ್ಕೆ ಅರ್ಹರಾಗಿದ್ದೀರಾ? ಸಾರ್ವಜನಿಕ ರಸ್ತೆಗಳನ್ನು, ಬಾವಿಗಳನ್ನು ಸಹ ಬಳಸಲು ಅಸ್ಪೃಶ್ಯರಿಗೆ ಅವಕಾಶ ಕೊಡದ ನೀವು ರಾಜಕೀಯ ಅಧಿಕಾರಕ್ಕೆ ಯೋಗ್ಯರಾಗಿದ್ದೀರಾ? ಅಸ್ಪೃಶ್ಯರು ತಮಗೆ ಪ್ರಿಯವಾದ ಬಟ್ಟೆ ಒಡವೆ-ವಸ್ತುಗಳನ್ನು ಧರಿಸುವುದಕ್ಕೆ ಅವಕಾಶ ಕೊಡದ ನೀವು ರಾಜಕೀಯ ಅಧಿಕಾರಕ್ಕೆ ಸಮರ್ಥರಾಗಿದ್ದೀರಾ? ಅಸ್ಪೃಶ್ಯರು ಬಯಸಿದ್ದನ್ನು ತಿನ್ನುವುದಕ್ಕೂ ಅಡ್ಡಿಯುಂಟು ಮಾಡುವ, ಅವರ ಅನ್ನದ ಸ್ವಾತಂತ್ರö್ಯವನ್ನು ಕಸಿಯುವ ನೀವು, ರಾಜಕೀಯ ಅಧಿಕಾರ ಹೊಂದುವಷ್ಟು ಪ್ರಬುದ್ಧರಾಗಿದ್ದೀರಾ?”
ಈ ಮೇಲಿನ ಅಂಬೇಡ್ಕರರ ಪ್ರಶ್ನೆಗಳು ಅಸ್ಪೃಶ್ಯರ ವಿಷಯದಲ್ಲಿ ಇಂದಿಗೂ ನಿಜವಾಗುತ್ತಿವೆ. ಉನ್ನತ ಶಿಕ್ಷಣದಲ್ಲಿ ದಲಿತರಿಗೆ ಇಂದಿಗೂ ಪ್ರವೇಶ ದುಸ್ತರವೇ ಆಗಿದೆ. ಶಿಕ್ಷಣವೀಗ ಖಾಸಗೀಕರಣಗೊಳ್ಳುತ್ತಾ ದುಡ್ಡಿದ್ದವರಿಗೆ ಉತ್ತಮ ಶಿಕ್ಷಣ ಸಿಗುತ್ತಿದ್ದು, ದಲಿತರು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಳ್ಳಿಗಳಲ್ಲಿ ಸಾರ್ವಜನಿಕ ನಲ್ಲಿಗಳಿಗೆ, ದೇವಸ್ತಾನಗಳಿಗೆ, ಹೋಟೆಲ್ಲು, ಕ್ಷೌರ ಅಂಗಡಿಗಳಿಗೆ ದಲಿತರ ಪ್ರವೇಶವಿಲ್ಲ. ತಮಿಳುನಾಡಿನಲ್ಲಿ ವಾಚ್ ಕಟ್ಟಿದ್ದಕ್ಕೆ ಕೈ ಕಡಿಯಲಾಗಿದೆ. ಪುಣೆಯಲ್ಲಿ ಅಂಬೇಡ್ಕರ್ ರಿಂಗ್ ಟೋನ್ ಹಾಕಿಕೊಂಡದ್ದಕ್ಕೆ ಕೊಲ್ಲಲಾಗಿದೆ. ಗೋ ಮಾಂಸ ತಿಂದರೆ ಕೊಲ್ಲಲಾಗುತ್ತಿದೆ. ಹೀಗೆ ಅಸ್ಪೃಶ್ಯತೆ ಭಾರತದಲ್ಲಿ ತಲೆ ಎತ್ತಿ ಮೆರೆಯುತ್ತಿದೆ.
ಕೇವಲ ದಲಿತರ ವಿಚಾರಕ್ಕಷ್ಟೇ ಅಲ್ಲ, ಅಂಬೇಡ್ಕರರ ಪ್ರಶ್ನೆಗಳನ್ನು ವಿಸ್ತರಿಸುವುದಾದರೆ ಭಾರತೀಯರೇ ಆದ ಗಂಡು ಹೆಣ್ಣು ಪ್ರೀತಿಸಿ ಮದುವೆಯಾದರೇ ಅವರನ್ನು ಜಾತಿಯ ಕಾರಣಕ್ಕಾಗಿ ಮರ್ಯಾದಾ ಹತ್ಯೆ ಎಂಬ ಹೆಸರಿನಲ್ಲಿ ಕೊಲ್ಲುವ ನೀವು ರಾಜಕೀಯ ಅಧಿಕಾರಕ್ಕೆ ಅರ್ಹರಾಗಿದ್ದೀರಾ? ಹಿಂದೂ ನಾವೆಲ್ಲಾ ಒಂದೂ ಎಂದು ಮಠಗಳಲ್ಲಿ ಪಂಕ್ತಿಭೇದ ಮಾಡಲು ಬಿಟ್ಟಿದ್ದೀರಲ್ಲಾ ನೀವು ರಾಜಕೀಯ ಅಧಿಕಾರಕ್ಕೆ ಯೋಗ್ಯರಾಗಿದ್ದೀರಾ? ಹೆಣ್ಣು ಮುಟ್ಟಾಗುತ್ತಾಳೆ ಎಂಬ ಕಾರಣಕ್ಕಾಗಿ ದೇವಸ್ತಾನ, ಮಸೀದಿಗಳ ಪ್ರವೇಶವನ್ನೇ ನಿಷೇಧಿಸಿದ್ದೀರಲ್ಲ ನೀವು ರಾಜಕೀಯ ಅಧಿಕಾರಕ್ಕೆ ಸಮರ್ಥರಾಗಿದ್ದೀರಾ? ಹೀಗೆ ಅಂಬೇಡ್ಕರರು ಅಂದು ಕೇಳಿದ ಪ್ರಶ್ನೆಗಳು ಇಂದಿಗೂ ಪ್ರಸ್ತುತವಾಗಿವೆ. ಆದ್ದರಿಂದ ಅಂಬೇಡ್ಕರರು ಪ್ರತಿಪಾದಿಸಿದಂತೆ ರಾಜಕೀಯ ಕ್ರಾಂತಿಗೆ ಮೊದಲು  ಸಾಮಾಜಿಕ ಕ್ರಾಂತಿಯಾಗಬೇಕು. ಭಾರತದಲ್ಲಿ ಸಾಮಾಜಿಕ ಕ್ರಾಂತಿಯಾಗಬೇಕಾದರೆ ಜಾತಿ ವಿನಾಶವಾಗಬೇಕು. ಏಕೆಂದರೆ ‘ಸಿರಿವಂತರ ಸಿರಿತನ ಬಡವರ ದರಿದ್ರತನದಲ್ಲಿದೆ’ ಹಾಗಾದರೆ ಇದಕ್ಕೆ ಪರಿಹಾರ  ‘ದುಡಿಯುವವರೆಲ್ಲರೂ ಸಂಘಟಿತರಾಗಬೇಕು’ ಈ ರೀತಿ ಸಂಘಟಿತರಾಗಲು ಜಾತಿ ವಿನಾಶವಾಗಬೇಕು. ಏಕೆಂದರೆ ಜಾತಿಪದ್ಧತಿ ‘ಶ್ರಮದ ವಿಭಜನೆಯಲ್ಲ, ಶ್ರಮಿಕರ ವಿಭಜನೆ’ ಕೇವಲ ಇಷ್ಟೇ ಅಲ್ಲ. ಇಲ್ಲಿ ಪ್ರತಿಯೊಂದು ಜಾತಿಯೂ ಉಚ್ಛ ನೀಚ ಎಂಬ ಶ್ರೇಣಿಯಲ್ಲಿ ಒಂದರ ಕೆಳಗೊಂದು ಪೇರಿಸಿದೆ. ಮೇಲಿನಿಂದ ಕೆಳಗೆ ಬಂದAತೆ ಹಕ್ಕು ಹಾಗೂ ಘನತೆ ಕಡಿಮೆಯಾಗುತ್ತದೆ. ಕೆಳಗಿನಿಂದ ಮೇಲೆ ಹೋದಂತೆ ಹಕ್ಕು ಹಾಗೂ ಘನತೆ ಹೆಚ್ಚಾಗುತ್ತಾ ಹೋಗುತ್ತದೆ. ಆ ಕಾರಣಕ್ಕೆ ಈ ದೇಶದಲ್ಲಿ ಸಾಮಾಜಿಕ ಕ್ರಾಂತಿ ಜಾತಿ ವಿನಾಶವನ್ನು ಪ್ರಮುಖ ಗುರಿಯನ್ನಾಗಿಸಿಕೊಳ್ಳಬೇಕಿದೆ. ಹಾಗಾಗಿ ಜಾತಿ ವಿನಾಶ ಅಂಬೇಡ್ಕರರ ಕನಸಿನ ಭಾರತದ ಮೊದಲ ಪ್ರಮುಖ ಅಂಶ.

ಸಾಮಾಜಿಕ ಸಮಾನತೆಯ ಮೇಲೆ ಆರ್ಥಿಕತೆಯ ಪ್ರಭಾವವನ್ನು ಮನಗಂಡಿದ್ದ ಬಾಬಾಸಾಹೇಬ್ ಅಂಬೇಡ್ಕರರ ಎರಡನೆಯ ಪ್ರಮುಖ ಅಂಶ ಆರ್ಥಿಕ ಸಮಾನತೆ. ಅಂಬೇಡ್ಕರರ ಪ್ರಕಾರ ಆರ್ಥಿಕ ಸಮಾನತೆಯು ಈ ಕೆಳಗಿನ ಅಂಶಗಳಿAದ ಸಾಧಿಸಬಹುದಾಗಿದೆ.
ಕೃಷಿ, ಸರ್ಕಾರದ ಕೈಗಾರಿಕೆ ಆಗಬೇಕು. ಸಾಮುದಾಯಿಕ ಬೇಸಾಯ ಜಾರಿಯಾಗಬೇಕು.

ವಿಮೆ ಸಂಪೂರ್ಣ ಸರ್ಕಾರದ ಸ್ವಾಮ್ಯದಲ್ಲಿರಬೇಕು.
ಬೃಹತ್ ಕೈಗಾರಿಕೆಗಳು ಸರ್ಕಾರಿ ಸ್ವಾಮ್ಯದಲ್ಲಿದ್ದು, ಸಣ್ಣ ಕೈಗಾರಿಕೆಗಳು ಸರ್ಕಾರ ಮತ್ತು ಖಾಸಗಿಯ ಜಂಟಿ ಸಹಭಾಗಿತ್ವದಲ್ಲಿರಬೇಕು.
ಇವಿಷ್ಟು ಅಂಬೇಡ್ಕರರ ಪ್ರಮುಖ ಆರ್ಥಿಕ ಸುಧಾರಣೆಗಳು. ಇವು ಇಂದಿಗೂ ಪ್ರಸ್ತುತವಾಗಿವೆ. ೧೯೯೦ ರ ನಂತರ ದೇಶಕ್ಕೆ ಲಗ್ಗೆ ಇಟ್ಟ ಜಾಗತೀಕರಣ, ಉದಾರಿಕರಣ ಮತ್ತು ಖಾಸಗೀಕರಣಗಳು ಭಾರತದಲ್ಲಿನ ಅಸಮಾನತೆಯನ್ನು ಇನ್ನೂ ಹೆಚ್ಚಾಗಿಸಿವೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಹೆಚ್ಚು ಮಾಡಿವೆ. ಆಳುವ ಸರ್ಕಾರಗಳು ಬಂಡವಾಳಶಾಹಿಗಳ ಕೈಗೊಂಬೆಗಳAತೆ ವರ್ತಿಸುತ್ತಿದ್ದಾರೆ. ಬಂಡವಾಳಶಾಹಿಗಳಿಲ್ಲದೆ ದೇಶದ ಅಭಿವೃದ್ಧಿಯೇ ಇಲ್ಲವೆನ್ನುವ ಸ್ಥಿತಿ ನಿರ್ಮಾಣವಾಗಿರುವ ಈ ಕಾಲದಲ್ಲಿ ಅಂಬೇಡ್ಕರರ ಆರ್ಥಿಕ ನೀತಿ ನಮ್ಮನ್ನು ಸ್ವಾವಲಂಬಿ ರಾಷ್ಟçವಾಗಲು ಹೊಸಬೆಳಕನ್ನು ನೀಡುತ್ತದೆ. ಕೃಷಿಯ ಬಗ್ಗೆ ಅಂಬೇಡ್ಕರರಿಗೆ ಇದ್ದ ಮುಂದಾಲೋಚನೆ ಇಂದಿಗೂ ಪ್ರಸ್ತುತವಾಗಿದ್ದು, ರೈತರ ಆತ್ಮಹತ್ಯೆಗೆ ಪರಿಣಾಮಕಾರಿ ಪರಿಹಾರವಾಗಿದೆ. ಆದ್ದರಿಂದ ಆರ್ಥಿಕ ಸುಧಾರಣೆ ಅಂಬೇಡ್ಕರರ ಕನಸಿನ ಭಾರತದ ಎರಡನೆಯ ಪ್ರಮುಖ ಅಂಶ.

ಮೂರನೆಯದಾಗಿ ಸ್ತ್ರೀ ಸಬಲೀಕರಣ. ಅಂಬೇಡ್ಕರರಿಗೆ ಭಾರತದ ಪುರುಷಾಧಿಪತ್ಯದ ಅರಿವಿತ್ತು. ಆ ಕಾರಣಕ್ಕಾಗಿಯೇ ಹೆಣ್ಣು ಮಕ್ಕಳಿಗೆ ಆಸ್ತಿ ನೀಡುವ, ಮಕ್ಕಳನ್ನು ದತ್ತು ಸ್ವೀಕರಿಸುವ ಹಕ್ಕು ಪಡೆಯುವ ಕಾನೂನುಗಳನ್ನು ಒಳಗೊಂಡAತೆ ಹಿಂದೂ ಕೋಡ್ ಬಿಲ್ ಕಾಯ್ದೆಯನ್ನು ರಚಿಸಿದ್ದರು. ಅಂದು ಆ ಕಾಯ್ದೆಯನ್ನು ಫಟ್ಟಭದ್ರರು ತಡೆಯುವಲ್ಲಿ ಸಫಲರಾದರು. ಆದರೆ ಇಂದು ಹಿಂದೂ ಕೋಡ್ ಬಿಲ್ಲಿನ ಎಲ್ಲಾ ಅಂಶಗಳೂ ಕಾನೂನಾಗಿ ಹೆಣ್ಣನ್ನು ರಕ್ಷಿಸುತ್ತಿವೆ. ಆದರೂ ಸ್ತಿçÃಗೆ ಸಂಪೂರ್ಣವಾಗಿ ಸ್ವಾತಂತ್ರö್ಯ ಸಿಕ್ಕಿಲ್ಲ ಎಂಬುದನ್ನು ಶಬರಿಮಲೆ, ಶನಿ ಮಹಾತ್ಮ ಪ್ರಕರಣಗಳು ಮತ್ತು ಜಾರಿಯಾಗದ ಮಹಿಳಾ ಮೀಸಲಾತಿ ಕಾಯ್ದೆ ನಮಗೆ ತಿಳಿಸುತ್ತಿದೆ. ಆದ್ದರಿಂದ ಸ್ತಿçà ವಿಮೋಚನೆಯೂ ಅಂಬೇಡ್ಕರರ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಯಲ್ಲಿಯೇ ಅಡಗಿದೆ.

ಅಂಬೇಡ್ಕರರ ಕನಸು ಮತ್ತು ಯುವಶಕ್ತಿ
ಅಂಬೇಡ್ಕರರ ಕನಸಿನ ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಯೇ ಪ್ರಮುಖವಾದವು. ಇದನ್ನು ನಾವು ಮನದಲ್ಲಿಟ್ಟು ಯೋಚಿಸಿದಾಗ ನಮಗೆ ಇಂದು ನಡೆಯುತ್ತಿರುವ ರೋಹಿತ್ ವೇಮುಲ ಮತ್ತು ಜೆಎನ್ಯೂ ಹೋರಾಟಗಳಲ್ಲಿ ಹಲವು ಸಾಮ್ಯ ಮತ್ತು ವ್ಯತ್ಯಾಸಗಳು ಕಾಣಿಸುತ್ತಿವೆ. ರೋಹಿತ್ ವೇಮುಲ ತನ್ನ ಪತ್ರದಲ್ಲಿ ಭಾರತೀಯರ ಭೇದಗಳನ್ನು ಸರಿಯಾಗಿಯೇ ಗುರುತಿಸಿದ್ದ. ಕನ್ಹಯ್ಯ ಕುಮಾರ್ ಕೂಡ ತನ್ನ ಭಾಷಣದಲ್ಲಿ ನಮಗೆ ದೇಶದಿಂದ ಸ್ವಾತಂತ್ರö್ಯ ಬೇಡ, ದೇಶದೊಳಗೆ ಸ್ವಾತಂತ್ರö್ಯ ಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದ. ಹಾಗಾಗಿ ಇವರಿಬ್ಬರೂ ಮತ್ತು ಇವರಿಬ್ಬರನ್ನು ಬೆಂಬಲಿಸುತ್ತಿರುವ ಯುವ ಸಮೂಹ ಅಂಬೇಡ್ಕರರು ಬಯಸಿದ್ದ ಸಾಮಾಜಿಕ ಸ್ವಾತಂತ್ರö್ಯ ಹಾಗೂ ಆರ್ಥಿಕ ಸ್ವಾತಂತ್ರö್ಯವನ್ನೇ ಬಯಸುತ್ತಿವೆ ಎಂಬುದರಲ್ಲಿ ಸಂಶಯವಿಲ್ಲ. ಈ ಯುವ ಪಡೆ ಜಾತಿ ವಿನಾಶವನ್ನು, ಬ್ರಾಹ್ಮಣ್ಯ-ಬಂಡವಾಳಶಾಹಿಗಳ ನಾಶವನ್ನು ಬಯಸುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ಸಾಧಿಸಲು ಈ ಯುವಪಡೆಯ ಬತ್ತಳಿಕೆಯಲ್ಲಿ ಯಾವ ಬಾಣಗಳಿವೆ ಎಂಬುದೇ ಈಗಿನ ಬಹುದೊಡ್ಡ ಪ್ರಶ್ನೆಯಾಗಿದೆ.

ಅಂಬೇಡ್ಕರರು ಈ ವಿಚಾರದಲ್ಲಿ ಸ್ಪಷ್ಟವಾಗಿದ್ದರು. ಜಾತಿಯೆಂಬ ಪೆಡಂಭೂತವನ್ನು ನಿರ್ನಾಮ ಮಾಡಲು ಒಂದೋ ‘ಪೋಷಕರೇ ತಮ್ಮ ಮಕ್ಕಳನ್ನು ಅಂತರ್ಜಾತಿ ವಿವಾಹ ಮಾಡಿಸುವಂತಾಗಬೇಕು’. ಆ ರೀತಿಯ ಬೌದ್ಧಿಕ ಮಟ್ಟ ತಲುಪಲು ‘ಜನತೆ, ಜಾತಿಯನ್ನು ಸಲಹುತ್ತಿರುವ ಧಾರ್ಮಿಕ ನಂಬಿಕೆಗಳನ್ನು, ಶಾಸ್ತç ಸ್ಮೃತಿಗಳನ್ನು ಧಿಕ್ಕರಿಸುವಂತಾಗಬೇಕು’. ಇಲ್ಲವೆ ‘ಬುದ್ಧನು ತಾಳಿದ ನಿಲುವನ್ನು ತಾಳಬೇಕು, ನಾನಕರು ತಾಳಿದ ನಿಲುವನ್ನು ತಾಳಬೇಕು’. ಆದ್ದರಿಂದ ಅಂಬೇಡ್ಕರರು ಜಾತಿ ಪೆಡಂಭೂತವನ್ನು ಕೊಲ್ಲಲು ಬೌದ್ಧ ಧರ್ಮವನ್ನು ಅಪ್ಪಿಕೊಂಡರು. ಹಾಗೂ ತಮ್ಮ ಅನುಯಾಯಿಗಳಿಗೆ ಅದನ್ನೇ ಪಾಲಿಸಲು ಸೂಚಿಸಿದರು. ಈ ವಿಷಯದಲ್ಲಿ ರೋಹಿತ್ ವೇಮುಲ ಮತ್ತು ಜೆ ಎನ್ಯು ಪರ ಹೋರಾಡುತ್ತಿರುವ ಯುವಪಡೆಯ ನಿಲುವೇನು? ಕನ್ಹಯ್ಯಾ ದೇವರ ಬಗ್ಗೆ ಗೊತ್ತಿಲ್ಲವೆಂದು ಹೇಳಲಿ. ಆದರೆ ಧರ್ಮವನ್ನು ಅಫೀಮೆಂದು ಹೊರಟರೆ ಅವನನ್ನು ಅನುಮಾನಿಸುವ ಪಡೆ ಹುಟ್ಟಿಕೊಳ್ಳುವುದಿಲ್ಲವೇ? ಧಾರ್ಮಿಕತೆಯಲ್ಲಿ ಬಹಳ ನಂಬಿಕೆ ಇಟ್ಟಿರುವ ಭಾರತೀಯರನ್ನು ಕನ್ಹಯ್ಯಾ ಪರ ಯುವ ಪಡೆ ಹೇಗೆ ಸಂಬಾಳಿಸುತ್ತದೆ? ಇದರ ಬಗ್ಗೆ ಸ್ಪಷ್ಟ ನಿಲುವು ತಾಳಲೇಬೇಕಾಗಿದೆ. ಇಲ್ಲವೆ ಜಾತಿ ವಿನಾಶದ ಮತ್ತೊಂದು ಹಾದಿಯನ್ನು ತುಳಿಯಬೇಕಿದೆ.

ಬಂಡವಾಳಶಾಹಿಗಳ ಬಗ್ಗೆ ಅಂಬೇಡ್ಕರ್ ವಾದಿಗಳಿಗಿಂತ ಎಡಪಂಥೀಯರಿಗೆ ಹೆಚ್ಚು ಸ್ಪಷ್ಟತೆ ಇದೆ. ಇಷ್ಟೇ ಸ್ಪಷ್ಟತೆಯನ್ನು ಅವರು ಅಂಬೇಡ್ಕರರಲ್ಲಿಯೇ ಕಾಣುವುದನ್ನು ಇಲ್ಲಿಯವರೆಗೆ ನಿರಾಕರಿಸಿದ್ದರು. ಅಂಬೇಡ್ಕರರು ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಯನ್ನು ಈ ದೇಶದ ಬಹುದೊಡ್ಡ ಮಾರಕ ಶಕ್ತಿಗಳೆಂದೇ ಗ್ರಹಿಸಿದ್ದರು. ಆದರೆ ಅಂಬೇಡ್ಕರರನ್ನು ಐಕಾನಾಗಿ ಮೊದಲು ಸ್ವೀಕರಿಸಿದ ದಲಿತರಿಗೆ ಇಂದಿಗೂ ಬಂಡವಾಳಶಾಹಿಯ ಬಗ್ಗೆ ಸ್ಪಷ್ಟತೆ ಉಂಟಾಗಿಲ್ಲ. ದಲಿತ ಬಂಡವಾಳಶಾಹಿ ದಲಿತರನ್ನು ಉದ್ಧಾರ ಮಾಡುತ್ತದೆ ಎಂದೇ ಭಾವಿಸುವವರು ದಲಿತರಲ್ಲಿ ಬಹಳಷ್ಟು ಮಂದಿ ಇದ್ದಾರೆ. ಈಗದು ಚಿಗುರುತ್ತಿರುವ ಗಿಡವಾಗಿರುವುದರಿಂದ ಅದರ ದುಷ್ಪರಿಣಾಮಗಳು ಕೆಲವೇ ವರ್ಷಗಳಲ್ಲಿ ತಿಳಿಯಲಿದೆ. ಆದರೆ ಅಂಬೇಡ್ಕರ್ ವಾದಿಗಳು ಖಾಸಗಿ ಕ್ಷೇತ್ರದಲ್ಲಿನ ಮೀಸಲಾತಿ ಕೇಳುತ್ತಿರುವ ಕಾಲಘಟ್ಟದಲ್ಲಿ ಅವರೊಂದಿಗೆ ಎಡಪಂಥೀಯರೂ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ತಾತ್ಕಾಲಿಕವಾಗಿ ಸಧ್ಯಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ. ಆದರೆ ಅಂಬೇಡ್ಕರರು ವಿರೋಧಿಸಿದ ಬಂಡವಾಳಶಾಹಿಯನ್ನು ನಾಶ ಮಾಡುವ ಕಾರ್ಯಕ್ರಮವೇ ಮುಖ್ಯವಾಗಬೇಕಿದೆ.  ಈ ನಿಟ್ಟಿನಲ್ಲಿ ದೇಶಾದ್ಯಂತ ಸದ್ದು ಮಾಡಿರುವ ಯುವ ಸಮೂಹದ ನಿಲುವೇನು ಎಂಬುದು ಸ್ಪಷ್ಟಗೊಳ್ಳಬೇಕಿದೆ.

ಒಂದಂತೂ ನಿಜ. ಬಲಪಂಥೀಯ ವಿಚಾರಧಾರೆಯು ಅಂಬೇಡ್ಕರರನ್ನು ತನ್ನ ಓಟ್ ಬ್ಯಾಂಕಿಗಾಗಿ ಮಾತ್ರ ಮೀಸಲಾಗಿಸಿಕೊಳ್ಳುತ್ತದೆ. ಏಕೆಂದರೆ ಅದರ ಇತಿಹಾಸ ಪುಟಗಳಲ್ಲಿ ಸಮಾನತೆಗಾಗಿ ಒಂದೂ ಹೋರಾಟಗಳು ನಡೆದಿಲ್ಲ. ಕನಿಷ್ಟ ಪಕ್ಷ ತುಟಿ ಬಿಚ್ಚಿ ಅಸಮಾನತೆ ವಿರುದ್ಧ ಮಾತನಾಡಿಲ್ಲ. ಜಾತಿ ವಿನಾಶವನ್ನು ಬಯಸಲ್ಲ. ಸ್ತಿçÃಯರಿಗೆ ಸಮಾನ ಸ್ಥಾನ ಮಾನ ನೀಡಲು ಮುಂದಾಗಿಲ್ಲ. ಆರ್ಥಿಕ ಸಮಾನತೆಯ ಚಕಾರವೆತ್ತುವುದಿಲ್ಲ. ಈಗಲೂ ಅದು ತನ್ನ ಸನಾತನತೆಯನ್ನೇ ಮೆಲುಕು ಹಾಕುತ್ತಾ ಹಿಂದೂ ರಾಷ್ಟçದ ಕನಸು ಕಾಣುತ್ತಿರುವುದು ಸಂವಿಧಾನ ವಿರೋಧಿತನವೇ ಆಗಿದೆ. ಸಹೋದರತೆಯನ್ನು ಅಲ್ಲಗೆಳೆಯುತ್ತದೆ. ಬಹುತ್ವವನ್ನು ಬುಡಮೇಲಾಗಿಸುತ್ತದೆ. ಬಲಪಂಥೀಯರ ಏಕ ಸಂಸ್ಕೃತಿ, ಏಕ ಭಾಷೆ ಮತ್ತು ಏಕ ಜನಾಂಗ ಎಂಬ ಮಂತ್ರವನ್ನು ನಮ್ಮ ಸಂವಿಧಾನವೂ ಒಪ್ಪುವುದಿಲ್ಲ. ಬಾಬಾಸಾಹೇಬ್ ಅಂಬೇಡ್ಕರರೂ ಒಪ್ಪುವುದಿಲ್ಲ. ಅಂಬೇಡ್ಕರ್ ರವರು ಸ್ಥಾಪಿಸಿದ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ ಪ್ರಣಾಳಿಕೆಯಲ್ಲಿ “ಹಿಂದೂ ಮಹಾಸಭಾ ಅಥವಾ ಆರೆಸ್ಸೆಸ್ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ” ಎಂದು ದಲಿತರಿಗೆ ಎಚ್ಚರಿಕೆ ನೀಡಿದ್ದಾರೆ.
ಎಡಪಂಥೀಯ ವಿಚಾರಧಾರೆ ಆರಂಭದಲ್ಲಿ ಅಂಬೇಡ್ಕರರ ತತ್ವಗಳಿಗೆ ವಿರುದ್ಧವಾಗಿ ವರ್ತಿಸಿತ್ತು. ಅಂಬೇಡ್ಕರರ ವಿಚಾರಗಳನ್ನು ಒಳಬಿಟ್ಟುಕೊಳ್ಳಲೂ ತಯಾರಿರಲಿಲ್ಲ. ಸಂವಿಧಾನದ ಬಗ್ಗೆ ವ್ಯಂಗ್ಯವಾಡಿತ್ತು. ಆದರೆ ಇಂದು ಅಂಬೇಡ್ಕರರನ್ನು ಬಹಳ ಗಂಭೀರವಾಗಿ ಓದಿಕೊಳ್ಳುತ್ತಿದೆ. ಅಂಬೇಡ್ಕರ್ರವರ ಸಾಮಾಜಿಕ ಸುಧಾರಣೆ ಮತ್ತು ಆರ್ಥಿಕ ಸುಧಾರಣೆ ಬಗ್ಗೆ ತಿಳಿದುಕೊಂಡು ಅದನ್ನು ಪ್ರಚಾರ ಮಾಡುತ್ತಿದೆ.

ಭಾರತ ದೇಶದಲ್ಲಿ ಜಾತಿ ನಾಶವಾದರೆ ಮಾತ್ರ ಬದಲಾವಣೆ ಸಾಧ್ಯ ಎಂಬುದನ್ನು ಮನಗಂಡಿದೆ. ಇದೆಲ್ಲಕ್ಕೂ ಮಿಗಿಲಾಗಿ ದಲಿತರ ಪರ, ಮಹಿಳೆಯರ ಪರ ಹೋರಾಡುತ್ತಾ ಅವುಗಳೊಂದಿಗಿನ ಜಾತಿ ಪದ್ಧತಿಯ ಪರಿಣಾಮಗಳನ್ನು ಅಧ್ಯಯನ ಮಾಡುವಲ್ಲಿ ನಿರತವಾಗಿದೆ. ಹಿಂದೆ ಯಾವ ಜಾತಿಯನ್ನು ನಿರಾಕರಿಸಿ ಕೇವಲ ವರ್ಗ ಹೋರಾಟ ಎನ್ನುತ್ತಿತ್ತೋ ಅದೇ ಜಾತಿಯ ಬಗ್ಗೆ ಇಂದು ಮಾತನಾಡುತ್ತಿದೆ. ಅದರ ನಾಶವನ್ನು ಬಯಸುತ್ತಿದೆ. ಆದರೆ ಎಡಪಂಥೀಯ ಪಕ್ಷಗಳು ಮಾತ್ರ ತಮ್ಮ ನಾಯಕತ್ವದಲ್ಲಿ ಅಂಬೇಡ್ಕರರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯವನ್ನು ಅಲ್ಲಗೆಳೆಯುತ್ತಲೇ ಬಂದಿದ್ದಾರೆ. ದಶಕಗಟ್ಟಲೆ ಆಳುವ ಸರ್ಕಾರವಾಗಿದ್ದ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿಯೂ ದಲಿತರ ಸ್ಥಿತಿ ಅಷ್ಟೇನು ಬದಲಾವಣೆ ಆಗಿಲ್ಲ. ಅಂಬೇಡ್ಕರರ ಕನಸಿನ ಭಾರತಕ್ಕೆ ಈ ಎಡ ಪಕ್ಷಗಳ ಕಾಣಿಕೆ ಇಲ್ಲಿಯವರೆಗೂ ಸಮಾಧಾನಕರವಾಗಿಲ್ಲ. ಇವುಗಳೆಲ್ಲವನ್ನೂ ಅಂಬೇಡ್ಕರ್ವಾದಿಗಳು ಪ್ರಶ್ನಿಸಿಯೇ ಪ್ರಶ್ನಿಸುತ್ತಾರೆ. ಆ ಪ್ರಶ್ನೆಗಳಿಗೆ ಉತ್ತರ ನೀಡಿಯೇ ಎಡಪಂಥೀಯರು ತಮ್ಮ ಇತಿಹಾಸದ ಪುಟಗಳಿಗಂಟಿಕೊಂಡಿರುವ ಕಳಂಕವನ್ನು ತೊಳೆದುಕೊಳ್ಳಬೇಕಿದೆ. ಹಾಗೆಯೇ ಇಂದು ದಲಿತ ಚಳುವಳಿಯ ಹೆಸರಿನಲ್ಲಿ ದುಂಡಗಾಗಿರುವ, ಸ್ವಾಭಿಮಾನವನ್ನು ಕಳೆದುಕೊಂಡು ಫಟ್ಟಭದ್ರರೊಂದಿಗೆ ಕೈಜೋಡಿಸಿರುವ ದಲಿತ ನಾಯಕರನ್ನು ಎಡಪಂಥೀಯರು ಪ್ರಶ್ನಿಸಿಯೇ ಪ್ರಶ್ನಿಸುತ್ತಾರೆ. ಅದಕ್ಕೆ ಅಂಬೇಡ್ಕರ್ವಾದಿಗಳು ಉತ್ತರಿಸಿ ಮುನ್ನಡೆಯಬೇಕಿದೆ. ವರ್ಗ ಪ್ರಜ್ಞೆ ಹೊಂದಿರುವವರು ಜಾತಿಪ್ರಜ್ಞೆಯನ್ನೂ ಗ್ರಹಿಸಬೇಕಿದೆ. ಜಾತಿ ಪ್ರಜ್ಞೆಯನ್ನು ಗ್ರಹಿಸುವವರು ಜಾತಿಗಳೊಳಗಿನ ವರ್ಗವನ್ನೂ ಗ್ರಹಿಸಬೇಕಿದೆ. ಇಲ್ಲಿ ಸಹನೆ ಮತ್ತು ಬದ್ಧತೆಯಿಂದ ವ್ಯವಹರಿಸಿಬಿಟ್ಟರೆ ನೀಲಿ ಬಾನಲಿ ಕೆಂಪು ಸೂರ್ಯನನ್ನು ನೋಡಬಹುದಾಗಿದೆ.

ಒಟ್ಟಾರೆ ವರ್ಗದ ಅವಮಾನವನ್ನು ಅರ್ಥ ಮಾಡಿಕೊಳ್ಳುವವರು ಜಾತಿ ಅವಮಾನವನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಜಾತಿ ಅವಮಾನವನ್ನು ಅನುಭವಿಸುವವರು ವರ್ಗದ ಅವಮಾನವನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಇವರಿಬ್ಬರೂ ಹೆಣ್ಣಿನ ಅವಮಾನವನ್ನು ಅರ್ಥಮಾಡಿಕೊಳ್ಳಬೇಕಿದೆ. ಇಲ್ಲಿಯವರೆಗೆ ಬಿಡಿ ಬಿಡಿಯಾಗಿ ಹೋರಾಟಕ್ಕಿಳಿದ ವಿಚಾರಧಾರೆಗಳು ಅಂಬೇಡ್ಕರರ ಕನಸಿನ ಭಾರತ ನಿರ್ಮಾಣಕ್ಕೆ ಇಡಿಯಾಗಬೇಕಿದೆ. ಅದಕ್ಕಾಗಿಯೇ ಎಡಪಂಥೀಯ ವಿಚಾರಧಾರೆ ಮತ್ತು ಅಂಬೇಡ್ಕರ್ ವಿಚಾರಧಾರೆಗಳು ಕೊಡುಕೊಳ್ಳುವಿಕೆ ಬಯಸಿ ಜಂಟಿಯಾಗಿ ಮುನ್ನಡೆಯಲು ಮುನ್ನುಡಿ ಬರೆಯಬೇಕಿದೆ. ಈ ಸ್ಪಷ್ಟತೆಯನ್ನು ನಾವು ಕನ್ಹಯ್ಯಾ ಕುಮಾರನಲ್ಲಿಯೂ ಕಾಣಬಹುದು. ಕನ್ಹಯ್ಯಾ ತನ್ನ ಭಾಷಣದಲ್ಲಿ ಹೇಳುವಂತೆ  “ಜೈಲಿನಲ್ಲಿರುವಾಗ ನನಗೆ ಇನ್ನೊಂದು ಅನುಭವವಾಯಿತು. ಅಲ್ಲಿ ಊಟದ ತಟ್ಟೆಯಲ್ಲಿ ಎರಡು ಕಟೋರಿಗಳನ್ನು ಇಡುತ್ತಿದ್ದರು. ಒಂದರ ಬಣ್ಣ ನೀಲಿ, ಒಂದರ ಬಣ್ಣ ಕೆಂಪು. ನನಗೆ ಅದೃಷ್ಟದ ಮೇಲೆ ನಂಬಿಕೆ ಇಲ್ಲ. ದೇವರ ವಿಷಯ ನನಗೆ ಗೊತ್ತಿಲ್ಲ. ಆದರೆ ಆ ತಟ್ಟೆ ಮತ್ತು ಬಟ್ಟಲುಗಳನ್ನ ನೊಡಿ ನನಗೆ ಮತ್ತೆ ಮತ್ತೆ ಅನ್ನಿಸ್ತಾ ಇತ್ತು. ಈ ತಟ್ಟೆ-ಬಟ್ಟಲುಗಳು ಭಾರತದ ಒಳಿತನ್ನು ಸೂಚಿಸ್ತಿವೆಯೇನೋ ಅನಿಸುತ್ತಿತ್ತು. ನನಗೆ ತಟ್ಟೆ ಭಾರತದಂತೆಯೂ ನೀಲಿ ಬಟ್ಟಲು ಅಂಬೇಡ್ಕರ್ ಸೇನೆಯಂತೆಯೂ ಕೆಂಪು ಬಟ್ಟಲು ಕಮ್ಯುನಿಸ್ಟರಂತೆಯೂ ಕಾಣಿಸುತ್ತಿತ್ತು. ಈ ಎರಡು ಶಕ್ತಿಗಳು ಈ ದೇಶÀದಲ್ಲಿ ಒಗ್ಗೂಡಿಬಿಟ್ಟರೆ ಅದರ ಕಥೆಯೇ ಬೇರೆ. ನಮ್ಮ ದೇಶಕ್ಕೆ ಮಾರಾಟ ಮಾಡುವವರು ಬೇಡ. ಮಾರಾಟಗಾರರನ್ನು ಕಳಿಸಿಬಿಡೋಣ. ಕೊಡುಕೊಳ್ಳುವಿಕೆಯ ಸೌಹಾರ್ದವನ್ನು ಮೂಡಿಸೋಣ. ಅಂಥ ಸರಕಾರವನ್ನ ರಚಿಸೋಣ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನುವ ಮಾತನ್ನ ನಾವು ವಾಸ್ತವದಲ್ಲೂ ನಿಜವಾಗಿಸೋಣ. ನನಗೆ ಬಲವಾಗಿ ಅನಿಸ್ತಿದೆ, ನಾವಿದನ್ನ ಸಾಧಿಸ್ತೀವಿ. ಖಂಡಿತಾ ಮಾಡಿಯೇ ಮಾಡ್ತೀವಿ.”
ಇಂತಹ ಸ್ಪಷ್ಟತೆಯನ್ನು ನಮ್ಮ ದೇಶದ ನೈಜ ಆಜಾ಼ದಿ ಬಯಸುವ ಎಲ್ಲಾ ಯುವ ಮನಸುಗಳು ಹೊಂದಬೇಕಿದೆ. ಕನ್ಹಯ್ಯಾನ ಮಾತುಗಳನ್ನು ಕೇಳುವಾಗ ನನಗೆ ಅಂಬೇಡ್ಕರರು ಈ ದೇಶದ ಯುವಶಕ್ತಿಗೆ ನೀಡಿದ ಸಂದೇಶ ನೆನಪಾಗುತ್ತದೆ. “ಶಿಕ್ಷಿತರಾಗಿ ಸಂಘಟಿತರಾಗಿ ಹೋರಾಡಿ. ನಿಮ್ಮಲ್ಲಿ ನಿಮಗೆ ವಿಶ್ವಾಸವಿರಲಿ. ನ್ಯಾಯ ನಮ್ಮ ಕಡೆ ಇರುವಾಗ ಸೋಲು ಸಾಧ್ಯವಿಲ್ಲ. ಹೋರಾಟವೆಂಬುದು ನಮಗೆ ಆಹ್ಲಾದಕರ ವಿಷಯ. ಏಕೆಂದರೆ ನಮ್ಮ ಹೋರಾಟ ಅದರ ಪರಮಾರ್ಥದಲ್ಲಿ ಸಂಪೂರ್ಣ ಅಲೌಖಿಕವಾದದ್ದು. ಏಕೆಂದರೆ ಅದು ಸ್ವಲ್ಪ ಮಾತ್ರವೂ ಭೌತಿಕ ಅಥವಾ ಸಾಮಾಜಿಕವಲ್ಲ. ಏಕೆಂದರೆ ನಮ್ಮ ಹೋರಾಟ ಆಸ್ತಿಗಾಗಿಯೋ, ಅಧಿಕಾರಕ್ಕಗಿಯೋ ಅಲ್ಲ. ನಮ್ಮ ಹೋರಾಟ ಸ್ವಾತಂತ್ರö್ಯಕ್ಕಾಗಿ. ಮನುಷ್ಯತ್ವದ ಘನತೆಯನ್ನು ಮರಳಿ ಪಡೆಯುವುದಕ್ಕಾಗಿ”

ಹಾಗಾಗಿ ಇಂದು ದಲಿತರಲ್ಲದೇ ಸಹಸ್ರಾರು ದಲಿತೇತರ ಯುವಕ ಯುವತಿಯರು ಅಂಬೇಡ್ಕರರು ಕನಸಿದ ಭಾರತಕ್ಕಾಗಿ, ಅಂಬೇಡ್ಕರರು ಬಯಸಿದ ನೈಜ ಸ್ವಾತಂತ್ರö್ಯಕ್ಕಾಗಿ ತಮ್ಮ ಧನಿಯನ್ನು ಎತ್ತಿದ್ದಾರೆ. ಅದು ಮದ್ರಾಸಿನ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ ನಿಂದ ಆರಂಭವಾಗಿ, ಹೈದರಾಬಾದ್ ವಿಶ್ವವಿಧ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲನ ಶಾಕ್ ಟ್ರೀಟ್ ಮೆಂಟ್ ಪಡೆದು, ಜೆ ಎನ್ಯೂ ವಿದ್ಯಾರ್ಥಿಗಳ ಆಜಾ಼ದಿ ಘೋಷಣೆಗಳ ಮೂಲಕ ದೇಶದ ರಾಜಧಾನಿಯವರೆಗೂ ಹಬ್ಬಿದೆ. ಎಡಪಂಥೀಯರು, ಅಂಬೇಡ್ಕರ್ವಾದಿಗಳು ಪರಸ್ಪರ ಧನಾತ್ಮಕ ಅಂಶಗಳನ್ನು ವಿನಿಮಯ ಮಾಡಿಕೊಂಡು ನಂತರ ನಕಾರಾತ್ಮಕ ಅಂಶಗಳಿಗೆ ಹೊರಳಲಿ. ನಕಾರಾತ್ಮಕ ಅಂಶಗಳನ್ನೇ ಮುಂದು ಮಾಡಿಕೊಂಡು ನಡುವೆ ಗೋಡೆ ನಿರ್ಮಿಸಿಕೊಂಡು ಮೂರನೆಯವರಿಗೆ ದಾರಿ ಮಾಡಿಕೊಡದಿರಲಿ. ಆದಷ್ಟು ಬೇಗ ಈ ಯುವ ಶಕ್ತಿ ತಮ್ಮಲ್ಲಿನ ಎಲ್ಲಾ ಪೂರ್ವಾಗ್ರಹಗಳನ್ನು ಸರಿಸಿ ನೀಲಿ ಬಾನಲಿ ಕೆಂಪು ಸೂರ್ಯ ಉದಯಿಸುವಂತೆ ಮಾಡಲಿ. ಕಾರಣಗಳನ್ನು ಹೇಳುತ್ತಲೇ ಉಳಿದುಹೋಗಿರುವ ಹಿರಿಯ ಜೀವಿಗಳಲ್ಲಿ ನವಚೈತನ್ಯ ತುಂಬಲಿ. ಎರಡನೇ ಸ್ವಾತಂತ್ರö್ಯ ಸಂಗ್ರಾಮಕ್ಕೆ ಮುನ್ನುಡಿಯನ್ನು ಬರೆಯಲಿ.

ಕೊನೆಯದಾಗಿ, ಅಂಬೇಡ್ಕರರ ವಿಚಾರವನ್ನು ಇಷ್ಟರ ಮಟ್ಟಿಗೆ ದೇಶಕ್ಕೆ ಪರಿಚಯಿಸಿದ ದಲಿತ ಚಳುವಳಿ ಮತ್ತು ಬಹುಜನ ಚಳುವಳಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು. ಅವರು ಅಂಬೇಡ್ಕರರ ವಿಚಾರಗಳನ್ನು ಪ್ರಚಾರ ಮಾಡಿದ್ದಕ್ಕಾಗಿಯೇ ಇಂದು ಎಡಪಂಥೀಯರಾದಿಯಾಗಿ ಎಲ್ಲರೂ ಅಂಬೇಡ್ಕರರನ್ನು ಓದಿಕೊಳ್ಳುವಂತಾಯಿತು. ಅಂಬೇಡ್ಕರರ ಕನಸಿನ ಭಾರತವನ್ನು ಪ್ರಗತಿಪರರು ಕಾಣುವಂತಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page