Monday, June 17, 2024

ಸತ್ಯ | ನ್ಯಾಯ |ಧರ್ಮ

ಬಹುತ್ವ ಭಾರತಕ್ಕೆ ಬೇಕಿದೆ ತೆರೇಸಾರ ಬಾಹುಗಳು

ಜಗತ್ತು ಮಹಾನ್‌ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಕಾಲ ಘಟ್ಟದಲ್ಲಿ ಪ್ರೀತಿ ವಾತ್ಸಲ್ಯದ ಮೂಲಕ ಇಡಿ ಜಗತ್ತನ್ನು ಗೆದ್ದ ಮಾನವತಾವಾದಿ ಮಹಾ ಮಾತೆ ಮದರ್‌ ತೆರೇಸಾರವರು ಇಂದು ಹಿಂದೆಂದಿಗಿಂತಲೂ ಹೆಚ್ಚು ನೆನಪಾಗುತ್ತಿದ್ದಾರೆ. ಅವರ ೨೫ ನೇ ಸಂಸ್ಮರಣೆಯ (ಸೆ.೫) ಪ್ರಯುಕ್ತ ಸಮಾಜದಲ್ಲಿ ಸೌಹಾರ್ದದ ಕೊಂಡಿ ಬೆಸೆಯಬೇಕಾದ ಅಗತ್ಯವನ್ನು ಶ್ರೀನಿವಾಸ ಕಾರ್ಕಳ ತೆರೆದಿಟ್ಟಿದ್ದಾರೆ.

ಜಗತ್ತು ಈಗ ಹಿಂದೆಂದಿಗಿಂತಲೂ ಹೆಚ್ಚು ಬಿಕ್ಕಟ್ಟನ್ನು ಎದುರಿಸುತ್ತಿದೆ; ತಲ್ಲಣ ಗೊಂಡಿದೆ. ಎರಡು ವರ್ಷಗಳ ಹಿಂದೆ ಜಗತ್ತನ್ನು ಕಾಡಿದ ಕೋವಿಡ್ ಆರ್ಥಿಕವಾಗಿ, ಸಾಮಾಜಿಕವಾಗಿ ಊಹನಾತೀತ ಸಮಸ್ಯೆಗಳನ್ನು ಉಂಟು ಮಾಡಿದೆ. ಕೋವಿಡ್ ಮಹಾ ಕಾಯಿಲೆಯ ಜತೆಗೆ ಇದಕ್ಕೆ ಸರಕಾರಗಳು ಪ್ರತಿಕ್ರಿಯಿಸಿದ ಅತಾರ್ಕಿಕ, ಅವೈಜ್ಞಾನಿಕ, ಅತಿರೇಕದ ಕ್ರಮಗಳು ಉಂಟು ಮಾಡಿದ ಆರ್ಥಿಕ ಸಮಸ್ಯೆಗಳಿಂದ ಜನರು ಬದುಕಿ ಉಳಿಯುವುದೇ ಕಷ್ಟವಾಗಿದೆ. ಒಂದೆಡೆಯಲ್ಲಿ ಕೋವಿಡ್ ಕಾರಣದ ಆರೋಗ್ಯ ಏರುಪೇರುಗಳಿಂದ ಮತ್ತು ಬದುಕುಳಿಯುವ ಲೌಕಿಕ ಚಿಂತೆಗಳ ಉದ್ವಿಗ್ನತೆಯಿಂದ ಹೃದಯಾಘಾತಗಳು ಹೆಚ್ಚಿ ಸಣ್ಣ ಹರೆಯದವರೂ ಅಕಾಲ ಸಾವಿಗೀಡಾಗುತ್ತಿದ್ದರೆ, ಇನ್ನೊಂದೆಡೆ ಘನತೆಯ ಬದುಕನ್ನು ಬದುಕುವುದು ಸಾಧ್ಯವಾಗದೆ ಜನರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ.

ಇದು ಒಂದು ತೆರನ ನೈಸರ್ಗಿಕ ವಿದ್ಯಮಾನಗಳೆಂದು ಭಾವಿಸೋಣವೇ? ಕೋವಿಡ್ ಇರಲಿ, ಇನ್ನೊಂದಿರಲಿ ಜಗತ್ತು ಬದಲಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಕೋವಿಡ್ ಮಹಾ ಕಾಯಿಲೆ ಜನತೆಗೆ ಒಂದು ಪಾಠವಾಗಬೇಕಿತ್ತು. ಈ ದ್ವೇಷ, ಅಹಂಕಾರ, ಸ್ವಾರ್ಥ ಎಲ್ಲವೂ ನಿರುಪಯುಕ್ತ, ನಾವೆಲ್ಲರೂ ಪ್ರೀತಿ ಸೌಹಾರ್ದದಿಂದ ಬದುಕಬೇಕು ಎಂದು ಅರ್ಥವಾಗಬೇಕಿತ್ತು. ಆದರೆ ಕೋವಿಡ್ ಅಪಾಯದಿಂದ ಇನ್ನೂ ಪೂರ್ತಿಯಾಗಿ ಪಾರಾಗಿಲ್ಲ ಎನ್ನುವಾಗಲೇ ನಾವು ಮತ್ತೆ ನಮ್ಮ ಹಿಂದಿನ ಚಾಳಿಗೆ ಮರಳಿಯಾಗಿದೆ. ದೇಶ ದೇಶಗಳ ನಡುವೆ ಜಗಳ ನಡೆಯುತ್ತಿದೆ, ರಶ್ಯಾ ಉಕ್ರೇನ್ ನಡುವೆ ತಿಂಗಳುಗಳಿಂದ ಕದನ ನಡೆಯುತ್ತಿದೆ, ತೈವಾನ್ ವಿಷಯ ಕೇಂದ್ರವಾಗಿರಿಸಿಕೊಂಡು ಚೀನಾ ಅಮೆರಿಕಾ ನಡುವೆ ಹೊಸ ಕದನಕ್ಕೆ ವೇದಿಕೆ ಸಿದ್ಧವಾಗುತ್ತಿದೆ.


ಜಗತ್ತಿನ ಕತೆ ಹೀಗಾದರೆ, ಭಾರತದಲ್ಲಿ ಜನಾಂಗ ದ್ವೇಷ ಮಿತಿ ಮೀರುತ್ತಿದೆ. ದಿನ ಬೆಳಗಾದರೆ ಹಿಂದೂ ಮುಸ್ಲಿಂ ವಿಷಯ ಎತ್ತಿಕೊಂಡು ಸಮಾಜ ವಿಭಜನೆಯ ಕೆಲಸವು ಪ್ರಭುತ್ವದ ಬೆಂಬಲದೊಂದಿಗೆ ರಾಜಾರೋಷವಾಗಿ ನಡೆಯುತ್ತಿದೆ. ‘ನಾವು ಇಲ್ಲಿ ಇದ್ದವರು, ನೀವು ಬಂದವರು’ ಎಂಬ ವಾದ ಬಲಗೊಳ್ಳುತ್ತಿದೆ. ಈ ದೇಶದ ಪ್ರಜೆಗಳನ್ನೇ ಅನ್ಯರನ್ನಾಗಿಸುವ ಕೆಲಸ ತೀವ್ರತೆ ಪಡೆಯುತ್ತಿದೆ. ಮುಸ್ಲಿಂ ಸಹೋದರರನ್ನು ಮಾತು ಮಾತಿಗೂ ಪಾಕಿಸ್ತಾನಕ್ಕೆ ಹೋಗಿ ಎನ್ನಲಾಗುತ್ತಿದೆ, ಅವರಿಗೆ ಮತದಾನದ ಹಕ್ಕು ನಿರಾಕರಿಸಬೇಕು ಎಂದು ಬಹಿರಂಗವಾಗಿಯೇ ಕರೆ ಕೊಡಲಾಗುತ್ತಿದೆ, ಅವರ ಹಿಜಾಬ್, ಅಜಾನ್ ಹಲಾಲ್, ಮಸೀದಿ, ಎಲ್ಲವೂ ಸಮಸ್ಯೆಯಾಗುತ್ತಿದೆ, ಅವರ ವ್ಯಾಪಾರ ವಹಿವಾಟಿಗೆ ಅಡ್ಡಿಪಡಿಸಲಾಗುತ್ತಿದೆ, ಇನ್ನೊಂದೆಡೆಯಲ್ಲಿ ರೋಹಿಂಗ್ಯಾಗಳನ್ನು ಹೊರ ಹಾಕಿ ಎಂಬ ಕೂಗು ಬಲಗೊಳ್ಳುತ್ತಿದೆ.

ಮನುಷ್ಯತ್ವ, ಪ್ರೀತಿಯ ತೀವ್ರ ಕೊರತೆ ಉಂಟಾಗಿ, ಎಲ್ಲೆಲ್ಲಿಯೂ ಸ್ವಾರ್ಥ, ದ್ವೇಷ, ಹಿಂಸೆ ಹೆಚ್ಚಿರುವ ಮತ್ತು ಒಂದು ಕಿಡಿ ಹಾರಿದರೆ ಸಾಕು ಜಗತ್ತು ಮತ್ತು ದೇಶ ಬೂದಿಯಾಗುವ ಹಂತವನ್ನು ತಲಪಿರುವ ಹೊತ್ತಿನಲ್ಲಿ ಜಗತ್ತನ್ನು ದೇಶವನ್ನು ಉಳಿಸಲು ಸಾಧ್ಯವಾಗುವುದಿದ್ದರೆ ಅದು ಪ್ರೀತಿ ಮತ್ತು ಪ್ರೀತಿಯಿಂದ ಮಾತ್ರ. ಆದ್ದರಿಂದಲೇ ನಮಗೆ ಇಂದು ಪ್ರೀತಿ ಮತ್ತು ಸೇವೆಯ ಪ್ರತಿರೂಪವಾದ ಮದರ್ ತೆರೇಸಾರಂಥವರು ಹಿಂದೆಂದಿಗಿಂತಲೂ ಹೆಚ್ಚು ನೆನಪಾಗುತ್ತಿದ್ದಾರೆ. ದ್ವೇಷದ ಗಾಯಕ್ಕೆ ಪ್ರೀತಿಯ ಮದ್ದು ಹಚ್ಚುವ ಸಾವಿರ ಸಾವಿರ ತೆರೇಸಾರ ಅಗತ್ಯವಿದೆ ಈಗಿನ ಜಗತ್ತಿಗೆ.

ಮದರ್ ತೆರೇಸಾ ಅವರು ಅನಾಥರು, ರೋಗಗ್ರಸ್ತರ ಸೇವೆಯನ್ನು ಮಾಡುವಾಗ ಅವರು ಯಾವ ಮತಧರ್ಮಕ್ಕೆ ಸೇರಿದವರು, ಯಾವ ಜಾತಿಯವರು, ಯಾವ ವರ್ಗಕ್ಕೆ ಸೇರಿದವರು, ಯಾವ ದೇಶಕ್ಕೆ ಸೇರಿದವರು ಎಂದು ನೋಡಲಿಲ್ಲ. ಅವರಿಗೆ ಎಲ್ಲರೂ ಪ್ರೀತಿಯನ್ನು, ಸೇವೆಯನ್ನು ಬಯಸುವ ದೀನರಾಗಿಯೇ ಕಂಡರು. ಅವರ ಸೇವೆಯನ್ನು ಮಾಡಿದರು. ರೋಗಿಗಳ ರೋಗವನ್ನು ಗುಣಪಡಿಸಿದರು. ಸಾವಿನಂಚಿನಲ್ಲಿರುವವರನ್ನು ನೆಮ್ಮದಿಯಿಂದ ಸಾಯುವಂತೆ ಮಾಡಿದರು, ಅನಾಥರಿಗೆ ಆಶ್ರಯ ನೀಡಿ ಅವರಿಗೆ ಬದುಕು ನೀಡಿದರು. ಇಂದು ಜಗತ್ತಿಗೆ ಬೇಕಿರುವುದು ಜಗತ್ತನ್ನು ಪೊರೆಯುವ ಈ ಗುಣ.

ಮದರ್ ಎಂಬ ಮಮತೆಯ ದೇವತೆ

ಈಗಿನ ಮೆಸಿಡೋನಿಯಾದ ರಾಜಧಾನಿಯಲ್ಲಿ 1910 ಆಗಸ್ಟ್ 26 ರಂದು ಜನಿಸಿದ ತೆರೇಸಾ ಸೇವಾ ಕಾರ್ಯಕ್ಕೆ ಆರಿಸಿಕೊಂಡದ್ದು ಭಾರತವನ್ನು. 1929 ರಲ್ಲಿ ಭಾರತಕ್ಕೆ ಬಂದ ಅವರು ಬಂಗಾಳಿ ಕಲಿತು ಹಿಮಾಲಯದ ತಪ್ಪಲಿನ ಡಾರ್ಜಿಲಿಂಗ್ ನಲ್ಲಿ ಸೈಂಟ್ ತೆರೇಸಾ ಶಾಲೆಯಲ್ಲಿ ಪಾಠ ಹೇಳಲಾರಂಭಿಸಿದರು. ಬಳಿಕ ಪೂರ್ವ ಕೊಲ್ಕತ್ತಾದ ಲೊರೆಟೋ ಕಾನ್ವೆಂಟ್ ನಲ್ಲಿ ಕೆಲಸ ಮಾಡುವಾಗ ಧಾರ್ಮಿಕ ವಿಧಿಯನ್ನು ಸ್ವೀಕರಿಸಿದರು; ಮದರ್ ಆದರು. ಅಲ್ಲಿ ಸುಮಾರು 20 ವರ್ಷ ಕೆಲಸ ಮಾಡಿದ ಬಳಿಕ 1944 ರಲ್ಲಿ ಮುಖ್ಯ ಶಿಕ್ಷಕಿ ಆದರು. ಶಾಲೆಯಲ್ಲಿ ಕಲಿಸುವುದು ಅವರಿಗೆ ಇಷ್ಟದ ಕೆಲಸವಾದರೂ ಕೊಲ್ಕತ್ತಾದ ಸುತ್ತಲ ಕಡುಬಡತನ ಅವರನ್ನು ಚಿಂತೆಗೀಡು ಮಾಡಿತು. 1943 ರ ಕ್ಷಾಮ ನಗರಕ್ಕೆ ಸಂಕಟ ಮತ್ತು ಸಾವನ್ನು ತಂದಿತು. ಸಾಲದೆಂಬಂತೆ 1946 ರ ಮುಸ್ಲಿಂ ಹಿಂದೂ ಗಲಭೆ. 1946 ಕ್ಕಾಗುವಾಗ ಶಾಲೆ ತೊರೆದು ಭಾರತದ ಬಡವರಿಗಾಗಿ ಕೆಲಸ ಮಾಡುವ ಅವರ ಬಯಕೆ ತೀವ್ರವಾಯಿತು. ಶಾಲೆ ತೊರೆದ ತೆರೆಸಾ ಅವರು ಅಕ್ಟೋಬರ್ 7, 1950 ರಲ್ಲಿ ʼಮಿಷನರಿ ಅಫ್ ಚಾರಿಟಿʼ ಶುರು ಮಾಡಿದರು. ನೀಲಿ ಅಂಚಿನ ಬಿಳಿಯ ಸೀರೆ ಅವರ ಶಾಶ್ವತ ದಿರಿಸಾಯಿತು. ತಮ್ಮ ಉಳಿದ ಜೀವಿತಾವಧಿಯನ್ನು ದೀನರ ಸೇವೆ ಮಾಡುತ್ತಾ ಇಲ್ಲೇ ಕಳೆದರು.

ಮಿಷನರೀಸ್ ಆಫ್ ಚಾರಿಟಿ

ಹಸಿದವರು, ಉಡಲು ವಸ್ತ್ರವಿಲ್ಲದವರು, ನಿರಾಶ್ರಿತರು, ಅಂಗವಿಕಲರು, ಕುರುಡರು, ಕುಷ್ಠರೋಗಿಗಳು, ಸಮಾಜದಿಂದ ತಿರಸ್ಕೃತರು, ಒಂದು ಹಿಡಿ ಪ್ರೀತಿಗಾಗಿ ತಹತಹಿಸುವವರು ಇವರೆಲ್ಲರ ಕಣ್ಣೀರು ಒರೆಸುವ ಏಕೈಕ ಗುರಿಯೊಂದಿಗೆ ಈ ಮಿಷನರೀಸ್ ಆಫ್ ಚಾರಿಟಿಯು ಮುಂದುವರೆಯಿತು.

1952 ರಲ್ಲಿ ಕೊಲ್ಕತ್ತಾದ ಕಾಳಿಘಾಟನ್ ನಲ್ಲಿ ‘ನಿರ್ಮಲ್ ಹೃದಯ’ವನ್ನು ತೆರೆದರು, ಇದು ಸಾಯುತ್ತಿರುವವರ ಧರ್ಮಶಾಲೆ ಎಂದು ಹೆಸರಾಗಿದೆ. ಇವರು ಸ್ಥಾಪಿಸಿದ ‘ಶಾಂತಿ ನಗರ’ವು ಕುಷ್ಠರೋಗದಿಂದ ಬಳಲುತ್ತಿರುವವರಿಗೆ ಸೇವೆ ಒದಗಿಸಿತು ಮತ್ತು ಸಮಾಜದಿಂದ ಪರಿತ್ಯಕ್ತರಾದವರಿಗೆ, ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಕೆಲಸ ಮಾಡಿತು. ‘ನಿರ್ಮಲ್ ಶಿಶು ಭವನ್’ ಅಥವಾ ʼಚಿಲ್ಡ್ರನ್ಸ್ ಹೋಮ್ ಆಫ್ ದಿ ಇಮ್ಯಾಕ್ಯುಲೇಟ್ ಹಾರ್ಟ್ʼ ನ್ನು ಮಕ್ಕಳಿಗಾಗಿ 1955 ರಲ್ಲಿ ಸ್ಥಾಪಿಸಲಾಯಿತು. ಕೊಲ್ಕತ್ತಾದಲ್ಲಿ ಬೀದಿ ಮಕ್ಕಳ ಶಾಲೆಯನ್ನೂ ತೆರೆಯಲಾಯಿತು.

1960 ರ ಹೊತ್ತಿಗೆ ಮಿಷನರೀಸ್ ಆಫ್ ಚಾರಿಟಿಯು ದೇಶದಾದ್ಯಂತ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿತು. 1965 ರಲ್ಲಿ ಪೋಪ್ ಪಾಲ್ VI ಅವರು ಮದರ್ ಅವರ ಕೆಲಸವನ್ನು ಮೆಚ್ಚಿ ಅವರ ಕಾರ್ಯವನ್ನು ಇತರ ದೇಶಗಳಿಗೆ ವಿಸ್ತರಿಸಲು ಅವಕಾಶ ನೀಡಿದರು. ಬಳಿಕ ಈ ಸಂಸ್ಥೆಯು ವೆನೆಜುವೆಲಾದಿಂದ ಆರಂಭಿಸಿ ಪ್ರಪಂಚದಾದ್ಯಂತ ಅನೇಕ ದೇಶಗಳಿಗೆ ತಮ್ಮ ಕೆಲಸವನ್ನು ವಿಸ್ತರಿಸಿತು. ಇದರಲ್ಲಿ ಪೂರ್ವ ಆಫ್ರಿಕಾ, ಉತ್ತರ ಯುರೋಪ್ ಮತ್ತು ದಕ್ಷಿಣ ಅಮೆರಿಕಾದ ಹಲವಾರು ದೇಶಗಳನ್ನು ಒಳಗೊಂಡಿತ್ತು. ಇಂದು ಮಿಷನರೀಸ್ ಆಫ್ ಚಾರಿಟಿಯು 4000 ಕ್ಕಿಂತ ಹೆಚ್ಚು ಸನ್ಯಾಸಿಗಳನ್ನು ಒಳಗೊಂಡಿದೆ. ಸಂಸ್ಥೆಯು ಇಲ್ಲಿಯವರೆಗೆ 100 ಕ್ಕೂ ಹೆಚ್ಚು ದೇಶಗಳಿಗೆ ತನ್ನ ಶಾಖೆಗಳನ್ನು ವಿಸ್ತರಿಸಿದೆ.

ಮದರ್ ತೆರೇಸಾರ ಅಪ್ಪುಗೆಯ ಬಾಹುಗಳು ನಮ್ಮೆಲ್ಲರದಾಗಲಿ

ಕನ್ನಡದ ಹಿರಿಯ ಚಿಂತಕ ಪುರುಷೋತ್ತಮ ಬಿಳಿಮಲೆಯವರು ಒಂದೆಡೆಯಲ್ಲಿ ಹೀಗೆ ಹೇಳುತ್ತಾರೆ- ‘ಮದರ್ ತೆರೇಸಾರ ಅಪ್ಪುಗೆಯ ಬಾಹುಗಳು ನಮ್ಮೆಲ್ಲರದಾಗಲಿ. ಸಮಾಜದಲ್ಲಿ ಹೊಸ ಬಗೆಯ ದಮನಿತರನ್ನು ಸೃಷ್ಟಿಸಲಾಗುತ್ತಿರುವ ಕಾಲಘಟ್ಟದಲ್ಲಿ ಅದರ ವಿರುದ್ಧ ಹೋರಾಟಕ್ಕೆ ಪ್ರೇಮದಿಂದ, ಸಮಾನತೆಯಿಂದ ಎಲ್ಲರನ್ನೂ ಪ್ರೀತಿಸಿದ ಮದರ್ ತೆರೇಸಾರ ಸೇವೆಯೆಂಬ ಕ್ರಿಯೆಯು ನಮಗೆಲ್ಲ ಪ್ರೇರಣೆಯಾಗಬೇಕಿದೆ.

ತೆರೇಸಾರವರು ಕ್ರಿಯೆಯನ್ನು ಸೇವೆ ಎಂದು ಹೇಳಿಕೊಂಡಿದ್ದರಿಂದಾಗಿ ಕೊಲ್ಕತ್ತಾದ ಸಾವುಗಳನ್ನು, ವಿಯೆಟ್ನಾಂನ ಗಾಯಾಳುಗಳನ್ನು ತಬ್ಬಿಕೊಳ್ಳಲು, ಇಥಿಯೋಫಿಯಾದ ಹಸಿವಿನ ಬಗ್ಗೆ ಮಾತನಾಡಲು, ಅಮೆರಿಕದ ಒಂಟಿತನವನ್ನು ಬಯಲಿಗೆಳೆಯಲು, ಐರ್ಲೆಂಡ್ ನ ಅನಾಥ ಪ್ರಜ್ಞೆಯ ಬಗ್ಗೆ ಮಾತನಾಡಲು, ಆಸ್ಟ್ರೇಲಿಯಾದ ಅಂಗವಿಕಲತೆಯ ಬಗ್ಗೆ ಮಾತನಾಡುವ ಮೂಲಕ ತೆರೇಸಾರ ಎರಡು ಬಾಹುಗಳು ಇಡೀ ಜಗತ್ತನ್ನೇ ತಬ್ಬಿಕೊಳ್ಳಲು ಸಾಧ್ಯವಾಯಿತು. ಯುಗೋಸ್ಲಾವಿಯಾದಲ್ಲಿ ಹುಟ್ಟಿದ ಮದರ್ ತೆರೆಸಾ, ಭಾರತಕ್ಕೆ ಬಂದು 1943 ರಲ್ಲಿ ಬಂಗಾಳದಲ್ಲಿ ನಡೆದ ಕ್ಷಾಮ ಹಾಗೂ 1946 ರಲ್ಲಿ ನಡೆದ ಕೋಮು ಗಲಭೆಯನ್ನು ಕಣ್ಣಾರೆ ಕಂಡವರು. ಈ ಎರಡು ಘಟನೆಗಳನ್ನು ನೋಡಿದ ತೆರೇಸಾರವರು ಪ್ರೀತಿ ಮತ್ತು ಪ್ರೇಮ ಎಂಬುದು ಭಾವನೆ ಅಲ್ಲ, ಅದು ಕ್ರಿಯೆ. ಹಾಗಾಗಿ ಸೇವೆ ಮಾಡಿ ಎಂದು ಹೇಳಿದರಲ್ಲದೆ, ಅದರಂತೆ ನಡೆದು ಕೊಂಡರು. ಅವರ ಸೇವೆಯ ಕ್ರಿಯೆಯನ್ನು ಅಂದಿನ ಕಾಲಘಟ್ಟಕ್ಕೆ ಸೀಮಿತಗೊಳಿಸದೆ, ಇಂದಿಗೆ ಪ್ರಸ್ತುತ ಪಡಿಸಬೇಕಾಗಿದೆ.

ಜಾಗತೀಕರಣದ ಕಾಲಘಟ್ಟದಲ್ಲಿ ನಾವು ಎದುರಿಸುತ್ತಿರುವ ಬಡತನ, ರೋಗ ಮತ್ತು ತುಳಿತಕ್ಕೊಳಗಾದವರನ್ನು ತೆರೇಸಾರ ಬಾಹುಗಳು ನಮ್ಮೆಲ್ಲರ ಬಾಹುಗಳಾಗಿ ತಬ್ಬಿಕೊಳ್ಳಬೇಕಾಗಿದೆ. ಇತ್ತೀಚೆಗೆ ರೋಹಿಂಗ್ಯಾ ಶಿಬಿರಕ್ಕೆ ನಾನು ಭೇಟಿ ನೀಡಿದ್ದೆ. ಅಲ್ಲಿ ಅಳುತ್ತಿರುವ ಮಕ್ಕಳು, ಮಹಿಳೆಯರನ್ನು ನೋಡಿ ಮನಸು ಕಿತ್ತು ಬರುವಂತಾಯಿತು. ಅವರಿಗೆ ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಲಾಗಿದೆ. ಯಾರೋ ಒಂದಿಬ್ಬರು ಆ ಸಮುದಾಯದಿಂದ ಭಯೋತ್ಪಾದಕರಾಗಿರಬಹುದು. ಆದರೆ ಅದಕ್ಕಾಗಿ ಇಡೀ ಸಮುದಾಯವನ್ನು ಬಲಿ ಕೊಡುವುದು ತಪ್ಪು. ಬದಲಾಗುತ್ತಿರುವ ಸಾಮಾಜಿಕ ರಾಜಕೀಯ ಸಂದರ್ಭದಲ್ಲಿ ಹುಟ್ಟುತ್ತಿರುವ ರೋಹಿಂಗ್ಯಾಗಳ ಕಣ್ಣ ನೀರು ಒರೆಸಲು ಮದರ್ ತೆರೆಸಾ ನಮಗೆ ಸ್ಫೂರ್ತಿಯಾಗಬೇಕು. ಅಂತಾರಾಷ್ಟ್ರೀಯ ಸಂಬಂಧಗಳ ನಡುವೆ ದಮನಿತರನ್ನು ಮಾರಣ ಹೋಮ ಮಾಡುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರ ವಿರುದ್ಧ ಹೊಸ ಬಗೆಯ ಹೋರಾಟಕ್ಕೆ ಮದರ್ ತೆರೇಸಾ ಪ್ರೇರಣೆಯಾಗಬೇಕು.

ಚರಿತ್ರೆಯ ಅನ್ಯಾಯಗಳ ವಿಜೃಂಭಣೆಗೆ ತೆರೇಸಾರ ಪ್ರೀತಿ, ಸೇವೆಯು ಉತ್ತರವಾಗಲಿ. ಇಂದು ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ತೀವ್ರತೆಯನ್ನು ಗ್ರಹಿಸಲು ಸಾಧ್ಯವಿಲ್ಲದಂತಾಗಿದೆ. ಚರಿತ್ರೆಯ ಕುರೂಪಗಳು, ಅನ್ಯಾಯಗಳಿಗೆ ಗೌರವ ಕೊಡುವ ಇಂದಿನ ಕಾಲಘಟ್ಟದಲ್ಲಿ ನಾವಿಂದು ತೆರೇಸಾರ ಪ್ರೀತಿಯ ಸೇವೆಯ ಕ್ರಿಯೆಗಳ ಮೂಲಕ ಉತ್ತರ ನೀಡಬೇಕಾಗಿದೆ’.

ನಿಂದಕರಿರಬೇಕಯ್ಯಾ…

ಇಂತಹ ಕರುಣಾಮಯಿಯನ್ನು ನೊಂದವರ ಸೇವೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟವರನ್ನು ಈಗ ದ್ವೇಷಿಸುವ, ನಿಂದಿಸುವ, ಕೃತಘ್ನರೇ ತುಂಬಿರುವ ಹೊಸ ಕಾಲದಲ್ಲಿ ನಾವು ಇದ್ದೇವೆ. ಆಕೆ ಮಾಡಿದ್ದು ಸೇವೆಯಲ್ಲ, ಮತಾಂತರ ಎಂದು ಯಾರೋ ಹೇಳಿದ್ದನ್ನು ಕೇಳಿ ನಿಂದಿಸುವ ದೊಡ್ಡ ತಲೆಮಾರು ನಿರ್ಮಾಣವಾಗಿದೆ. ಗೋಡ್ಸೆಯನ್ನು ಆರಾಧಿಸುವ ಈ ವರ್ಗದಿಂದ ತೆರೇಸಾ ನಿಂದನೆ ಕೇಳುವುದು ಅಚ್ಚರಿಯೇನೂ ಇಲ್ಲ. ಆದರೆ ಸತ್ಯ ಯಾವತ್ತೂ ಸತ್ಯವೇ ಆಗಿರುತ್ತದೆ. ಅದು ಇತಿಹಾಸದಲ್ಲಿ ಉಳಿದುಕೊಳ್ಳುತ್ತದೆ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತ ಬೀದಿಯಲ್ಲಿ ಬಿದ್ದವರನ್ನು, ಅಂಗ ಊನಗೊಂಡಿರುವ ಕುಷ್ಠರೋಗಿಗಳನ್ನು, ವಯೋವೃದ್ಧರನ್ನು, ಅನಾಥರನ್ನು ಮತಾಂತರ ಮಾಡಿ ಯಾವುದೇ ಧರ್ಮಕ್ಕೆ ಆಗಬೇಕಾದುದಾರೂ ಏನು? ತೆರೇಸಾ ಮತಾಂತರ ಮಾಡಿದರು ಎಂದು ಹಗುರವಾಗಿ ಮಾತನಾಡುವವರು ತಾವೂ ಆಶ‍್ರಮ ತೆರೆದು ಶುಶ್ರೂಷೆ ಮಾಡಿ ಆ ಕಡೆಯಿಂದ ಈ ಕಡೆಗೆ ಮತಾಂತರ ಮಾಡಬಹುದಲ್ಲಾ? ಆದರೆ ಸತ್ಯೋತ್ತರ ಯುಗದಲ್ಲಿ ತರ್ಕಕ್ಕೆ, ವಿವೇಕದ ಮಾತುಗಳಿಗೆ ಜಾಗವಾದರೂ ಎಲ್ಲಿದೆ?

ಒಬ್ಬ ಶಾಂತಿಯ ದೂತ ಗಾಂಧಿ, ಒಬ್ಬಳು ಪ್ರೀತಿ ಮತ್ತು ಸೇವೆಯ ಪ್ರತಿರೂಪ ಮದರ್ ತೆರೆಸಾ ಯುಗಕ್ಕೊಮ್ಮೆ ಜನಿಸುವವರು. ಆದರೆ ಅವರು ದೇವತೆಗಳಲ್ಲ. ಅವರೂ ಮನುಷ್ಯರು. ಆದರೆ, ತಮ್ಮ ಮಾನವೀಯ ಚಿಂತನೆಗಳಿಂದ ತಮ್ಮ ಮಾದರಿ ಕೆಲಸಗಳಿಂದ ಅವರು ದೇವತೆಗಳಾದರು. ನಾವೂ ಅವರಂತಾಗುವುದು ಕಷ್ಟ ನಿಜ. ಆದರೆ, ಅವರ ಹಾದಿಯಲ್ಲಿ ನಡೆಯಬಲ್ಲೆವು. ಇದಕ್ಕೆ ಮನಸು ಬೇಕು ಅಷ್ಟೇ. ಗಾಂಧಿ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ನಾವು ಅವರ ಹಾದಿಯಲ್ಲಿ ಖಂಡಿತಾ ಸಾಗಬಲ್ಲೆವು ಮತ್ತು ಹಾಗೆ ಸಾಗುವತ್ತ ನಮ್ಮ ಯತ್ನ ನಿರಂತರವಾಗಿರಲಿ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಶ್ರೀನಿವಾಸ ಕಾರ್ಕಳ
ಚಿಂತಕ, ಲೇಖಕ

Related Articles

ಇತ್ತೀಚಿನ ಸುದ್ದಿಗಳು