Home ಜನ-ಗಣ-ಮನ ಕ್ಯಾಂಪಸ್ ಕನ್ನಡಿ ಬಹುತ್ವವೇ ಭಾರತದ ಮಹತ್ವ

ಬಹುತ್ವವೇ ಭಾರತದ ಮಹತ್ವ

0

ಭಾರತದ ಯಾವುದೇ ಮೂಲೆಯಲ್ಲಿ ಹೋಗಿ ನೋಡಿದರು ಅಲ್ಲಿ ಇರುವುದು ಬಹುಜನರ ಸಂಸ್ಕøತಿ, ಬಹುಜನರ ಆಚಾರ ವಿಚಾರಗಳು. ಎಲ್ಲಾ ಜಾತಿ, ಮತ, ಪಂಥ, ಇವೆಲ್ಲದರ ಗಟ್ಟಿ ನೆಲೆ ಇರುವುದು ಬಂಧುತ್ವದಲ್ಲಿ ಎನ್ನುವ ಲೋಕೇಶ್‌ ಕುಂಚಡ್ಕ ಮಂಗಳೂರು ವಿ.ವಿ. ಯಲ್ಲಿಒಬ್ಬ ಸಂಶೋಧನಾ ವಿದ್ಯಾರ್ಥಿ

ಈ ಜಗತ್ತು ನಿಂತಿರುವುದು ಬಹುತ್ವ ಎನ್ನುವ ಪರಿಸರದ ಮೇಲೆ, ಅದರಲ್ಲಿ ಇರುವ ಎಲ್ಲಾ ಚರಾಚರಗಳು ಕೂಡ ಅನ್ಯೋನ್ಯವಾಗಿ, ಸಾಮರಸ್ಯದಿಂದ ಕೂಡಿ ಬಾಳುತ್ತವೆ, ಆದರೆ ಮನುಷ್ಯರು ಮಾತ್ರ ಹಾಗಲ್ಲ. ಅವುಗಳಿಗಿಂತ ಭಿನ್ನವಾಗಿ ಯೋಚಿಸಿ, ತಮ್ಮ ಅಸ್ತಿತ್ವಕ್ಕಾಗಿ ಹೋರಾಟವನ್ನು ನಡೆಸುತ್ತಲೆ ಇದ್ದಾರೆ. ಅದರಲ್ಲಿ ಕೂಡ ಅನುಕರಣೆ ಮಾಡುವ ಮೂಲಕ ಅಸ್ಮಿತೆಯನ್ನು ಕಳಕೊಂಡು, ಎರವಲಿಗೆ ಮಾರು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ತಾಯಿ ಮಗುವಿಗೆ ಮಾತನ್ನು ಕಲಿಸುವ ಸಂದರ್ಭದಲ್ಲಿ ತಾಯಿ  ಹೇಳುವ ಮಾತಿದು ‘ನಾವು ಪಕ್ಕದ ಮನೆಗೆ ಹೋಗುವ’ ಎಂದು ಹೇಳುವಾಗ, ತಾಯಿ ಮತ್ತು ಮಗು ಇಬ್ಬರು ಕೂಡ ಪಕ್ಕದ ಮನೆಗೆ ಹೋಗುತ್ತಾರೆ ಎನ್ನುವುದನ್ನು ಗಮನಿಸಿದರೆ, ಇಲ್ಲಿ ‘ಏಕ’ ಎನ್ನುವುದು ಇಲ್ಲ. ಹಾಗೆಯೇ ನೋಡುವಾಗ, ʼನಾವುʼ ಎನ್ನುವ ಬಹುವಚನದಲ್ಲಿ ಹಲವರು ಇರುವುದನ್ನು ಧ್ವನಿಸುತ್ತಾ, ಎರಡಕ್ಕಿಂತ ಜಾಸ್ತಿ ಇದೆ ಎನ್ನುವ ಅಂಶವನ್ನು ಗುರುತಿಸಬಹುದು. ‘ನಾವು’ ಎನ್ನುವುದರ ಒಳಗೆ ನಮ್ಮದು, ನಮ್ಮವರು, ನಮ್ಮೆಲ್ಲರದು, ನಮಗೆ ಸೇರಿದ್ದು, ಹೀಗೆಲ್ಲಾ ಬಳಸುವ ಪದಗಳಲ್ಲಿ ಎಲ್ಲಿಯೂ ನನ್ನದು ಅಥವಾ ತಾನು ಎಂದು ಎಲ್ಲಿಯೂ ಸ್ವಾರ್ಥದಿಂದ ಹೇಳುವುದು ಇಲ್ಲ. ಎಲ್ಲಾ ಕಡೆಯು ನಿಸ್ವಾರ್ಥ ಮನೋಭಾವದಿಂದ, ಎಲ್ಲರನ್ನು ಒಳಗೊಳ್ಳುವುದನ್ನು ನಾವಿಲ್ಲಿ ಕಾಣಬಹುದು.

  ಬಹುತ್ವ ಅಂದರೆ ಏನು?

ಬಹುತ್ವ ಎನ್ನುವುದು  ಏನು? ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು, ಅದು ಕೊಡುವ ಅರ್ಥ, ಬಹುತ್ವ ಕೊಡುವ ನೋಟವನ್ನು ಇಲ್ಲಿ ಚರ್ಚಿಸುವ ಒಂದು ಪ್ರಯತ್ನವನ್ನು ಮಾಡಿದ್ದೇನೆ. ʼಬಹು’ ಮತ್ತು ‘ತ್ವ’ ದ ನಡುವಿನ ಕೊಂಡಿ ಎಂತಹದ್ದು ಎನ್ನುವುದನ್ನು ನಾವು ಗಮನಿಸಬೇಕು. ಬಹುತ್ವಕ್ಕೆ ‘ಅನೇಕಾಂತವಾದ’ ಎನ್ನುವ ಅರ್ಥ ಕೂಡ ಇದೆ. ವೈವಿಧ್ಯತೆಯನ್ನು ಸಾರುವ ಗುಣಗಳಿವೆ. ಆದರೆ plurarity  ಎನ್ನುವುದು ಆಂಗ್ಲಪದ. ಬಹು ಎನ್ನುವುದು ʼಒಂದಕ್ಕಿಂತ ಹೆಚ್ಚಿಗೆ’ ಇದೆ ಎನ್ನುವುದನ್ನು ಹೇಳುತ್ತಲೆ, ‘ಇವನಾರವ ಇವನಾರವ ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯಾ’ ಎಂದು ಬಸವಣ್ಣ ವಚನದಲ್ಲಿ ಹೇಳಿರುವುದನ್ನು ಗಮನಿಸುತ್ತಲೆ, ಬಹುತ್ವದ ಇತಿಹಾಸವನ್ನು ಒಮ್ಮೆ ತಿರುವಿ ಹಾಕಲೇ ಬೇಕು.

ಬಹುತ್ವದ ಉಗಮ

ಬಹುತ್ವ ಎನ್ನುವುದು ಮೊದಲು ಹುಟ್ಟಿಕೊಂಡದ್ದು ಅಮೇರಿಕ ಮತ್ತು ಇಂಗ್ಲೆಂಡ್‍ಗಳಲ್ಲಿ. ಆದರೆ ಅಲ್ಲಿ ಇದು ಎಲ್ಲಿಯೂ ಬಹುತ್ವ ಎನ್ನುವ ಹೆಸರಿನಿಂದ ಗುರುತಿಸಿಕೊಳ್ಳುವುದಿಲ್ಲ. ರಾಜಕೀಯ ಶಾಸ್ತ್ರದೊಳಗೆ ಅದು ತಳಕು ಹಾಕಿಕೊಂಡಿದೆ. ಅಮೇರಿಕದಲ್ಲಿ 1787 ರಲ್ಲಿ ಅದು ಆರಂಭಗೊಂಡಿತು. ಜೇಮ್ಸ ಮ್ಯಾಡಿಸನ್ ಅವರು ‘ಅನೇಕ ಸ್ಪರ್ಧಾತ್ಮಕ ಬಣಗಳು ಸರ್ಕಾರದಲ್ಲಿ ಸಮಾನವಾಗಿ ಭಾಗವಹಿಸುವುದರ ಮೂಲಕ ವಿರುದ್ಧ ಪರಿಣಾಮವನ್ನು ತಪ್ಪಿಸಬಹುದು ಎಂದು ಹೇಳುತ್ತಾರೆ”. ಹೀಗೆ ಹೇಳುವಾಗ ಎಲ್ಲಿಯೂ ಬಹುತ್ವ ಎನ್ನುವ ಪದವನ್ನು ಬಳಸುವುದಿಲ್ಲ. ಅದರ ಬದಲಿಗೆ ಅನೇಕ, ಒಳಗೊಳ್ಳುವಿಕೆ ಈ ರೀತಿಯ ಪದಗಳನ್ನು ಬಳಸುತ್ತಾರೆ. ಇಂಗ್ಲೆಂಡ್ ಮತ್ತು ದಕ್ಷಿಣ ಅಫ್ರಿಕಾದಲ್ಲಿ ನಡೆದ ವರ್ಣಭೇದ ಚಳುವಳಿಗಳನ್ನು ಗಮನಿಸಿದರೆ ಬಹುತ್ವದ ಕುರಿತು ಇನ್ನಷ್ಟು ಸ್ಪಷ್ಟತೆಯನ್ನು ಪಡೆದುಕೊಳ್ಳಬಹುದು. ಇಂಗ್ಲೆಂಡ್ ನಲ್ಲಿ ನಡೆದ ಕಾರ್ಮಿಕರ ಕ್ರಾಂತಿಯ ಸಮಯದಲ್ಲಿ ಹುಟ್ಟಿಕೊಂಡ ಚಳುವಳಿಯು ಪ್ರತ್ಯೇಕಗೊಳ್ಳುವ ವ್ಯಕ್ತಿಗಳ ಬೆಳವಣಿಗೆಯನ್ನು ಆಕ್ಷೇಪಿಸಿತು ಜೊತೆಗೆ ವೈವಿಧ್ಯಮಯವಾದ ಬೆಳವಣಿಗೆ ಹಾಗೂ ಮಧ್ಯಕಾಲಿನ ರಚನೆಗಳ ಸಾಮಾಜಿಕ ಗುಣಗಳನ್ನು ಉಲ್ಲೇಖಿಸಿ, ಬಹುತ್ವವು, ಅದರ ಅರ್ಥಿಕ ಮತ್ತು ಆಡಳಿತಾತ್ಮಕ ವಿಕೇಂದ್ರೀಕರಣದ ಮೂಲಕ ಆಧುನಿಕ ಕೈಗಾರಿಕೀರಣವು ಸಮಾಜದ ಋಣಾತ್ಮಕ ಆಂಶಗಳನ್ನು ಜಯಿಸಬಹುದು ಎಂದು ವಾದವನ್ನು ಮಾಡಿತು. ಹಾಗೆಯೇ ಆಫ್ರಿಕಾದ ವರ್ಣಬೇಧ ನೀತಿಯ ಹೋರಾಟವನ್ನು ಸಹ ಗಮನಿಸಬಹುದು. ಅಲ್ಲಿ ಮುನ್ನೆಲೆಗೆ ನಿಂತ ವರ್ಣ ಸಂಘರ್ಷದ ಜೊತೆಗೆ ಕಾದಾಡುತ್ತಲೆ ತನ್ನ ಅಸ್ತಿತ್ವಕ್ಕಾಗಿ ನಡೆದ ಹೋರಾಟ ಅದು ಎನ್ನುವುದು ಸ್ಪಷ್ಟ. ಇನ್ನಿತರ ದೇಶಗಳಲ್ಲಿ ಕೂಡ ಬೇರೆ ಬೇರೆ ರೀತಿಯ ಹೋರಾಟ, ಚಳುವಳಿ, ಸಂಘರ್ಷಗಳು ನಡೆದಿವೆ ಆದರೆ ಅವು ಎಲ್ಲಿಯೂ ಬಹುತ್ವ ಎನ್ನುವ ವ್ಯಾಖ್ಯಾನವನ್ನು ನೀಡುವುದಿಲ್ಲ, ಬದಲಿಗೆ ಅದು ಒಳಗೊಳ್ಳುವ ಪ್ರಕ್ರಿಯೆಯಲ್ಲಿನ ತುಡಿತವನ್ನು ಪ್ರತಿನಿಧಿಸುತ್ತಲೆ ಬಂದಿದೆ. 

 ಭಾರತದಲ್ಲಿ ಬಹುತ್ವದ ಪರಿಕಲ್ಪನೆ ..

ನಮ್ಮ ಭಾರತದಲ್ಲಿ ಬಹುತ್ವದ ಪರಿಕಲ್ಪನೆ ಕಾಣಿಸಿಕೊಂಡದ್ದು ಯಾವಾಗ ಎನ್ನವುದು ಬಹಳ ಕುತೂಹಲದ ವಿಷಯ. ಭಾರತ ವಸಾಹತುಶಾಹಿತ್ವದಿಂದ ಬಿಡುಗಡೆಗೊಂಡು ಸ್ವತಂತ್ರವಾದ ಸಮಯದಿಂದ ಬಹುತ್ವವನ್ನು ಸ್ಪಷ್ಟವಾಗಿ ಗುರುತಿಸಬಹುದು. ಅಂದ ಮಾತ್ರಕೆ ಬಹುತ್ವ ಎನ್ನುವುದು ಈ ನಾಡಿನಲ್ಲಿ ಬದುಕಿರಲಿಲ್ಲ ಎಂದು ಅರ್ಥವಲ್ಲ. ಸಮನ್ವಯ ದೃಷ್ಟಿ ಭಾರತದ ಬಹುತೇಕ ಕಡೆಗಳಲ್ಲಿ ಇತ್ತು. ರಾಜ ಪರಂಪರೆಯಲ್ಲಿ ಕೂಡ ಇತ್ತು, ಆದರೆ ಅವುಗಳು ಅಷ್ಟು ಅನ್ಯೋನ್ಯತೆಯಿಂದ ಇದ್ದವು ಎಂದು ಹೇಳಲು ಬರುವುದಿಲ್ಲ. ದರಿದ್ರ ಪದ್ಧತಿಗಳು (ಮಲ ಹೊರುವ ಪದ್ಧತಿ, ಸತಿ ಸಹಗಮನ ಪದ್ಧತಿ, ಅಸ್ಪøಶ್ಯತೆ, ಇತ್ಯಾದಿಗಳು) ಇದ್ದವು. ಕೆಲವು ಸಮುದಾಯಗಳನ್ನು ಶೋಷಣೆಗೆ ಗುರಿಪಡಿಸುತ್ತಿದ್ದರು. ಆದರೆ ಭಾರತದಲ್ಲಿ ಬಹುತ್ವಕ್ಕೆ ಗಟ್ಟಿ ನೆಲೆ ಕಂಡುಕೊಂಡದ್ದು ಸಂವಿಧಾನ ರಚನೆಯ ಬಳಿಕ. ನಮ್ಮ ಸಂವಿಧಾನ ಬಹುತ್ವಕ್ಕೆ ಮಹತ್ವದ ಸ್ಥಾನವನ್ನು ಕೊಟ್ಟಿರುವುದನ್ನು ಗಮನಿಸಿದರೆ, ನಮ್ಮ ದೇಶದ ಸಂವಿಧಾನ, ಧರ್ಮ ಗ್ರಂಥಕ್ಕಿಂತಲೂ ಶ್ರೇಷ್ಠ. ‘ನಾವು ಭಾರತೀಯರು” ಎನ್ನುವ  ಪದವನ್ನೆ ಗಮನಿಸಿದರೆ ಸಾಕು- ನಮ್ಮ ದೇಶದ ಘನತೆ ಮತ್ತು ಸೌಹಾರ್ದ ಬದುಕಿನ ನೆಲೆಬೀಡು ಎನ್ನವುದನ್ನು ಇದು ಸಾರುತ್ತದೆ. ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ನಮ್ಮ ಬಹುತ್ವ ಭಾರತಕ್ಕೆ ಮಹಾನ್ ಮೆಟ್ಟಿಲುಗಳು. ಎಲ್ಲಿಯೂ ಒಂದೇ ಸಂಸ್ಕøತಿ ಇದೆ ಎನ್ನುವುದನ್ನು ಭಾರತ ಕಂಡಿಲ್ಲ, ಹೇಳಿಲ್ಲ ಕೂಡ. ಯಾಕೆಂದರೆ ರಾಷ್ಟ್ರಗೀತೆಯಲ್ಲಿಯೂ ಕೂಡ ಬಹುತ್ವದ ಕುರುಹುಗಳು ಮುನ್ನೆಲೆಯಲ್ಲಿ ಇರುವುದನ್ನು ನಾವು ಕಾಣಬಹುದು. ಭಾರತದ ಯಾವುದೇ ಮೂಲೆಯಲ್ಲಿ ಹೋಗಿ ನೋಡಿದರು ಅಲ್ಲಿ ಇರುವುದು ಬಹುಜನರ ಸಂಸ್ಕøತಿ, ಬಹುಜನರ ಆಚಾರ ವಿಚಾರಗಳು. ಭಾರತದ ಉಸಿರು ‘ಬಂಧುತ್ವ’ ಎನ್ನುವುದು ಬಹಳ ಮುಖ್ಯವಾಗುತ್ತದೆ. ಹಾಗೇನೆ ಭರತ ಖಂಡದಲ್ಲಿ ಎಲ್ಲಾ ಜಾತಿ, ಮತ, ಪಂಥ, ಇವೆಲ್ಲದರ ಗಟ್ಟಿ ನೆಲೆ ಇರುವುದು ಬಂಧುತ್ವದಲ್ಲಿ ಎನ್ನುವುದನ್ನು ನಾವು ಗಮನಿಸಬಹುದು.

  ಬಂಧುತ್ವದ ನೆಲೆಯಲ್ಲಿ…

ಇಂದು ಗುಲಾಬಿ ಗಿಡದಲ್ಲಿ ಚೆಂದದ ಒಂದು ಹೂವಿದೆ, ಆ ಹೂವಿಗೆ ಬರುವ ಕೀಟಗಳು ಯಾವ ಯಾವ ಪ್ರಬೇಧ ಎಂಬುದು ಯಾರಿಗೂ ಹೇಳಲು ಸಾಧ್ಯವೇ ಇಲ್ಲ. ಆದರೆ, ಅದೇ ಹೂವು ಎಲ್ಲಿಯೂ, ನೀನು ಆ ಮತ, ಆ ಪಂಥ, ಅದಕ್ಕೆ ಸೇರಿದವನು/ಳು ಎನ್ನುವುದೇ ಇಲ್ಲ. ನೀನು ಬರಬೇಡ ಎನ್ನುವುದೂ ಇಲ್ಲ. ಯಾರೂ ಬೇಕಾದರೂ ಅದರಿಂದ ಮಕರಂದವನ್ನು ಸ್ವೀಕರಿಸಬಹುದು. ಆದರೆ ಹೂವು ನೋಡಿದ ತಕ್ಷಣ ಅದನ್ನು ಕೊಯ್ಯಲು ನೋಡುವವರು ಇರುತ್ತಾರೆ. ಅದನ್ನು ತಿನ್ನಲು ಬಯಸುವವರು ಇರುತ್ತಾರೆ, ಅದು ಯಾವುದನ್ನು ಬೇಡ ಅನ್ನುವುದಿಲ್ಲ. ಅವರವರ ಭಾವಕ್ಕೆ, ನೋಟಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ದೃಷ್ಟಿಯಲ್ಲಿ ಅದನ್ನು ವ್ಯಾಖ್ಯಾನಿಸಬಹುದು.  ಭಾರತದಲ್ಲಿ ‘ವಿವಿಧತೆಯಲ್ಲಿ ಏಕತೆ’ ಎನ್ನುವ ಮಾತು ಬಹಳ ಹಿಂದಿನಿಂದಲೇ ಜನಜನಿತವಾಗಿದೆ.  ಹಾಗೆ ನೋಡುವಾಗ ಭಾರತದಲ್ಲಿ ಇರುವಷ್ಟು ಸಾಮರಸ್ಯ, ಸಹಬಾಳ್ವೆ ಸಮನ್ವಯತೆ ಎಲ್ಲೂ ಗಟ್ಟಿಯಾಗಿ ಬೇರೂರಿದ್ದು ಕಂಡುಬರುವುದಿಲ್ಲ. ಹೀಗಿರುವಾಗ ಪ್ರತಿಯೊಂದು ಹಳ್ಳಿಯೂ ತನ್ನದೇ ಆದ ಅಸ್ಮಿತೆಯನ್ನು ಇಂದು ಕೂಡ ಕಾಪಾಡಿಕೊಂಡು ಬಂದಿದೆ. ತುಳುನಾಡು ಎನ್ನುವ ವ್ಯಾಪ್ತಿಯ ಒಳಗೆ ಈಗಲೂ ಅನ್ಯೋನ್ಯವಾಗಿ ಇರುವುದನ್ನು, ಸ್ನೇಹದಿಂದ ಕೂಡಿ ಬಾಳುವುದನ್ನು, ಸೌಹಾರ್ದವನ್ನು ಕಾಪಾಡಿಕೊಂಡು ಬಂದಿರುವುದನ್ನು ದೈವಾರಾಧನೆಯಲ್ಲಿ ಕಾಣಬಹುದು. ಇಲ್ಲಿ ಇರುವ ಎಲ್ಲಾ ಸಮುದಾಯಗಳು ಐಕ್ಯತೆಯ ಮಂತ್ರದೊಂದಿಗೆ ಜೀವನ ಸಾಗಿಸುತ್ತಿರುವುದನ್ನು ಕಾಣಬಹುದು. ಕರಾವಳಿಯ ದೈವಾರಾಧನೆ,  ಹುಟ್ಟಿನಿಂದ ಸಾವಿನವರೆಗೆ ನಡೆಯುವ ವಿವಿಧ ರೀತಿಯ ಆಚರಣೆಗಳು ಇವೆಲ್ಲವೂ ಬಂಧುತ್ವದ ನೆಲೆಯಲ್ಲಿಯೇ ಇವೆ. ಪ್ರತಿಯೊಂದನ್ನೂ ಪರಸ್ಪರ ಕೊಡು ಕೊಳ್ಳುವಿಕೆಯೊಂದಿಗೆ ಸಂಯೋಜಿಸುವ ಅಥವಾ ಜೋಡಿಸಲ್ಪಡುವುದನ್ನು ಕರಾವಳಿಯ ಪ್ರದೇಶದಲ್ಲಿ ಕಾಣಬಹುದು ಮಾತ್ರವಲ್ಲ ಹೀಗೊಂದು ಇದೆ ಎನ್ನುವುದನ್ನು ಅಧ್ಯಯನಕ್ಕೆ ಒಳಪಡಿಸಬಹುದು.

ಕರಾವಳಿ ಎಂದಾಕ್ಷಣ ಕೆಲವರಿಗೆ ಕರಾಳ ಮುಖದ ದರ್ಶನ ಆಗಬಹುದು, ಆದರೆ, ಅದರಿಂದಾಚೆಗೆ ಸೌಹಾರ್ದತೆಯ ಬದುಕು ಇದೆ ಎನ್ನುವುದನ್ನು ಬಹುತೇಕರು ಗಮನಿಸದೆ ಹೋಗಿರಬಹುದು. ಕೋಮು ದಳ್ಳುರಿಗೆ ಸದಾ ತಪ್ಪ ಸುರಿಯುವುದು, ಒಂದು ಕಡೆಯಾದರೆ ಮತ್ತೊಂದು ಕಡೆ ಸಾಮರಸ್ಯದ ಬಂಧ ಕೂಡ ಗಟ್ಟಿಯಾಗಿ ಬೇರೂರಿರುವುದನ್ನು ತುಳುವ ನೆಲದಲ್ಲಿ ನಿಚ್ಚಳವಾಗಿ ಕಾಣಬಹುದು.

ಲೋಕೇಶ್‌ ಕುಂಚಡ್ಕ
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ

You cannot copy content of this page

Exit mobile version