Saturday, June 15, 2024

ಸತ್ಯ | ನ್ಯಾಯ |ಧರ್ಮ

ಭಜರಂಗದಳ ನಿಷೇಧ | ಸಂಘಟನೆಯ ಇತಿಹಾಸದತ್ತ ಇಣುಕು ನೋಟ

ʼಸಂವಿಧಾನ ವಿರೋಧೀ ಚಟುವಟಿಕೆಗಳನ್ನು ನಡೆಸಿದರೆ ಭಜರಂಗ ದಳ ಇತ್ಯಾದಿ ಸಂಘಟನೆಗಳನ್ನು ನಿಷೇಧಿಸಲಾಗುವುದುʼ ಎಂಬ ಕಾಂಗ್ರೆಸ್‌ ಪ್ರಣಾಳಿಕೆಯ ಮಾತನ್ನು ಹಿಡಿದುಕೊಂಡು ʼಇದರಿಂದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಯಿತುʼ ಎಂದು ವಿಶ್ಲೇಷಿಸುವವರು ಯಾರೊಬ್ಬರು ಕೂಡಾ ಕಾಂಗ್ರೆಸ್ಸಿನ ಮತದಾರರಲ್ಲ. ವಿಶ್ಲೇಷಿಸುವವರಲ್ಲಿ ಹೆಚ್ಚಿನವರು ಕಾಂಗ್ರೆಸ್‌ ವಿರೋಧಿಗಳು, ಗುಪ್ತ ಸಂಘಿಗಳು ಅಥವಾ ಭಜರಂಗ ದಳದ ಬಗ್ಗೆ ಸಹಾನುಭೂತಿ ಉಳ್ಳವರು. ಹೀಗಾಗಿ ಇಲ್ಲಿ ನಷ್ಟವೆಲ್ಲಿ ಬಂತು? ಭಜರಂಗದಳ ನಿಷೇಧ ಪ್ರಸ್ತಾವವನ್ನು ಕಾಂಗ್ರೆಸ್‌ ಹಿಂತೆಗೆದುಕೊಂಡರೆ ಇವರಲ್ಲಿ ಎಷ್ಟು ಜನ ಕಾಂಗ್ರೆಸ್ಸಿಗೆ ಓಟು ಹಾಕುತ್ತಾರೆ? ಇಂಥ ಪ್ರಶ್ನೆಗಳ ಜೊತೆಗೆ ಭಜರಂಗದ ದಳದ ಇತಿಹಾಸದತ್ತ ಒಮ್ಮೆ ಇಣುಕಿ ನೋಡೋಣ – ಪುರುಷೋತ್ತಮ ಬಿಳಿಮಲೆ

ವಿಶ್ವ ಹಿಂದೂ ಪರಿಷತ್ತಿನ ಯುವ ತಂಡವಾದ ಭಜರಂಗದಳವು 1984 ಅಕ್ಟೋಬರ ಒಂದರಂದು ಉತ್ತರ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂತು. ಆ ಕಾಲದಲ್ಲಿ ಉತ್ತರ ಪ್ರದೇಶದಾದ್ಯಂತ ನಡೆಯುತ್ತಿದ್ದ ʼರಾಮ್-ಜಾನಕಿ ರಥಯಾತ್ರಾʼ ದಲ್ಲಿ   ಕೆಲಸ ಮಾಡಲು ವಿ ಎಚ್ ಪಿಗೆ ಹುಡುಗರ ತಂಡವೊಂದು ಬೇಕಾಗಿತ್ತು. ಅದರ ಪರಿಣಾಮವಾಗಿಯೇ ಭಜರಂಗ ದಳವು ಹುಟ್ಟಿಕೊಂಡಿತು. ರಾಮನ ಸೇವೆ ಮಾಡಲು ಹುಟ್ಟಿಕೊಂಡ ಹನುಮಂತನ ಹೆಸರಿನ ಸಂಘಟನೆಯದು. ಈ ಸಂಘಟನೆ ಹುಟ್ಟಿಕೊಂಡು ಕೆಲಸ ಮಾಡಲು ಆರಂಭಿಸಿದ ಆನಂತರ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಮತೀಯ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿತ್ತು. ನಿಧಾನವಾಗಿ ಭಜರಂಗ ದಳವು ತನ್ನ ಕಾರ್ಯ ಚಟುವಟಿಕೆಗಳನ್ನು ಬೇರೆ ರಾಜ್ಯಗಳಿಗೆ ವಿಸ್ತರಿಸಿಕೊಂಡಿತು.

ಇವತ್ತು ಹಿಂದುತ್ವ ರಕ್ಷಣೆಯ ಹೆಸರಲ್ಲಿ ಕೆಲಸ ಮಾಡುತ್ತಿರುವ ಈ ಸಂಘಟನೆಯಲ್ಲಿ ಸುಮಾರು 13 ಲಕ್ಷ ಜನರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಊಹಿಸಲಾಗಿದೆ. ಆರ್‌ ಎಸ್‌ ಎಸ್‌ ಮಾದರಿಯಲ್ಲಿ ಇದೂ ಕೆಲಸ ಮಾಡುತ್ತಿದೆ. ʼಸೇವೆ, ಸುರಕ್ಷೆ, ಸಂಸ್ಕೃತಿʼ ಇದರ ಘೋಷವಾಕ್ಯ. ಗೋ ರಕ್ಷಣೆಯನ್ನು ಮುಖ್ಯವಾದ ಚಟುವಟಿಕೆಯನ್ನಾಗಿಸಿಕೊಂಡು ಸಂಘಟನೆ ಬೆಳೆದಿದೆ. ಅಯೋಧ್ಯೆಯಲ್ಲಿ  ರಾಮ ದೇವಸ್ಥಾನ, ಮಥುರಾದಲ್ಲಿ ಕೃಷ್ಣ ದೇವಸ್ಥಾನ ಮತ್ತು ಕಾಶಿಯಲ್ಲಿ ವಿಶ್ವನಾಥ ದೇವಸ್ಥಾನಗಳನ್ನು ರಕ್ಷಿಸುವ ಹೊಣೆಗಾರಿಕೆಯನ್ನು ದಳವು ತಾನೇ ಹೊತ್ತುಕೊಂಡಿದೆ. ಈ ನಿಟ್ಟಿನಲ್ಲಿ ಅದು ವಿ ಎಚ್‌ ಪಿ, ಆರ್‌ ಎಸ್‌ ಎಸ್‌ ಗಳಿಗಿಂತ ಬೇರೆಯಲ್ಲ.  ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ದಳದ ಆಜನ್ಮ ಶತ್ರುಗಳು. ಇಷ್ಟಿದ್ದರೂ ಭಜರಂಗದಳವು ತಮ್ಮ ವೈಬ್ ಸೈಟ್ ನಲ್ಲಿ, ʼತಾನು ಕೋಮುವಾದಿ ಅಥವಾ ವಿಭಜಕ ಅಲ್ಲ ಅಂತ ಹೇಳಿಕೊಂಡಿದೆ.

ಪತ್ರಿಕೆಗಳಲ್ಲಿ ವರದಿಯಾದ ಪ್ರಕಾರ, ಭಜರಂಗದಳವು ೨೦೦೨ರಲ್ಲಿ ಗುಜರಾತ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗವಹಿಸಿತ್ತು.  2003ರ ಪರ್ಬಾನಿ ಸ್ಫೋಟ ಪ್ರಕರಣದಲ್ಲಿಯೂ  ಭಜರಂಗದಳ ಭಾಗಿಯಾಗಿತ್ತು ಎಂದು ಶಂಕಿಸಲಾಗಿದೆ. ಆ ಕುರಿತು ನಡೆದ ವಿಚಾರಣೆ ವೇಳೆ ಇಂತಹ ಹಲವಾರು ಸ್ಫೋಟಗಳನ್ನು ದೇಶದಾದ್ಯಂತ ನಡೆಸಿರುವುದಾಗಿ ಅದರ ಕೆಲವು ಸದಸ್ಯರು ಹೇಳಿದ್ದರು.  ಏಪ್ರಿಲ್ 2006ರಲ್ಲಿ, ಭಜರಂಗದಳದ ಕಾರ್ಯಕರ್ತರು ನಾಂಧೆಡ್‌ ಸಮೀಪ  ಬಾಂಬ್ ತಯಾರಿಸುವಾಗ  ಸ್ಫೋಟಗೊಂಡು ಸತ್ತಿದ್ದರು. 2008 ಆಗಸ್ಟ್ 24ರಂದು ಕಾನ್ಪುರದಲ್ಲಿ ನಡೆದ ಸ್ಫೋಟ  ಪ್ರಕರಣದಲ್ಲಿಯೂ ಭಜರಂಗದಳ ಭಾಗಿಯಾಗಿತ್ತು ಎಂದು ಹೇಳಲಾಗಿದೆ. ವಿ ಎಚ್ ಪಿ ನಾಯಕ ಪ್ರವೀಣ್ ತೊಗಾಡಿಯಾ ಅವರನ್ನು ಏಪ್ರಿಲ್ 2003ರಲ್ಲಿ ಭಜರಂಗದಳ ಕಾರ್ಯಚಟುವಟಿಕೆಗೆ ತ್ರಿಶೂಲವನ್ನು ವಿತರಿಸುತ್ತಿದ್ದರು ಎಂಬ ಆರೋಪದ ಮೇಲೆ ಅಜ್ಮೀರ್‌ನಲ್ಲಿ ಬಂಧಿಸಲಾಗಿತ್ತು. ಭಜರಂಗ ದಳದ ನೈತಿಕ ಪೋಲಿಸ್‌ ಗಿರಿ ನಮಗೆಲ್ಲ ಗೊತ್ತೇ ಇದೆ. ಸೆಪ್ಟೆಂಬರ್ 2008ರಲ್ಲಿ ಕರ್ನಾಟಕದಲ್ಲಿ ನಡೆದ ಕ್ರಿಶ್ಟಿಯನ್ ಚರ್ಚ್‌ಗಳ ವಿರುದ್ಧ  ನಡೆದ ಧಾಳಿಗಳಲ್ಲಿ ಭಜರಂಗದಳದ ಹೆಸರು ಕೇಳಿಬಂದಿತ್ತು.  ವಿದೇಶೀ ವಿದ್ವಾಂಸರುಗಳು ಮತ್ತು ಸಂಘಟನೆಗಳು  ಭಜರಂಗ ದಳವನ್ನು ʼಹಿಂದೂ ಉಗ್ರವಾದಿ ಸಂಘಟನೆʼ ಎಂದು ಕರೆದಿವೆ. ವಾಷಿಂಗ್ಟನ್ ವಿವಿಯ ಪೌಲ್ ಆರ್. ಬ್ರಾಸ್ ಪ್ರಕಾರ, ಭಜರಂಗದಳವು ಜರ್ಮನಿಯ ನಾಜಿ ಸಂಘಟನೆಗೆ ಸಮನಾದುದು. ವಾಜಪೇಯಿಯವರು ಒಮ್ಮೆ ʼಭಜರಂಗದಳವು ಬಿಜೆಪಿಗೆ ನಾಚಿಕೆ ತರುವ ಕೆಲಸ ಮಾಡುತ್ತಿದೆ ಮತ್ತು ಸಂಘಪರಿವಾರವು ಅದನ್ನು ತನ್ನ ಹತೋಟಿಗೆ ತರಬೇಕು ಎಂದು ಹೇಳಿದ್ದರು. ಓರಿಸ್ಸಾದಲ್ಲಿ ನಡೆದ ಕೋಮು ಹಿಂಸಾಚಾರದ ನಂತರ ಎಲ್.ಕೆ. ಅಡ್ವಾಣಿಯವರು, ʼಭಜರಂಗದಳವು ಹಿಂಸೆಯನ್ನು ಬಿಟ್ಟು ಬಿಡಬೇಕುʼ  ಎಂದು ಹೇಳಿದ್ದರು. ಆದರೆ ಈಗಣ ಬಿಜೆಪಿಯ ಕೆಲವರು ಭಜರಂಗ ದಳವನ್ನು ಸಾಂಸ್ಕೃತಿಕ ಸಂಘಟನೆ ಎಂದೇ ಕರೆಯುತ್ತಾರೆ.

ಕಾಂಗ್ರೆಸ್‌ ಪ್ರಣಾಳಿಕೆ ಸುಟ್ಟು ಪ್ರತಿಭಟನೆ

ಕವಿ ವಾಲ್ಮೀಕಿಯ ಮಹಾ ಕಾವ್ಯ ರಾಮಾಯಣದ ಶ್ರೀರಾಮನ ಹೆಸರಲ್ಲಿ ಹುಟ್ಟಿಕೊಂಡ ʼಶ್ರೀರಾಮ ಸೇನೆ ʼ ಮತ್ತು ಹನುಂತನ ಹೆಸರಲ್ಲಿ ಹುಟ್ಟಿಕೊಂಡ ʼಭಜರಂಗದಳ ʼ ಆ ಮಹಾಕಾವ್ಯದ ಹೆಸರುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಹಿಂದುತ್ವದ ಗುತ್ತಿಗೆ ಹಿಡಿದುಕೊಂಡವರು ನೋಡಿಯೂ ಸುಮ್ಮನಿರುವುದು ಅವರ ಹಿಂದುತ್ವದ ನಕಲಿತನದ ಸಂಕೇತ. ರಾಮಾಯಣದ ಕಿಷ್ಕಿಂದಾ ಕಾಂಡದ ಆರಂಭದ ಭಾಗದಲ್ಲಿ ರಾಮ ಲಕ್ಷ್ಮಣರನ್ನು ಹನುಮಂತ ಮೊದಲ ಬಾರಿಗೆ ಭೇಟಿಯಾಗುತ್ತೇನೆ. ಹನುಮಂತನು ಅತ್ಯಂತ ವಿನಯದಿಂದ ತನ್ನನ್ನು ಎಷ್ಟು ಬೇಕೋ ಅಷ್ಟೇ ಮಾತುಗಳಿಂದ ಪರಿಚಯಿಸಿಕೊಂಡು ಸುಮ್ಮನಾದಾಗ ರಾಮನು ಲಕ್ಷ್ಮಣನೊಡನೆ ಈ ಮುಂದಿನಂತೆ ಹೇಳುತ್ತಾನೆ-

ʼ ವತ್ಸಾ, ಸುಗ್ರೀವನ ಮಂತ್ರಿಯಾದ ಇವನು ಮಾತಿನಲ್ಲಿ ಬಹಳ ನಿಪುಣ. ಈತನು ಭಾವಜ್ಞ ನಾದುದರಿಂದ ನೀನು ಇವನೊಡನೆ ಸ್ನೇಹಯುಕ್ತವಾದ ಮೃದು ವಾಕ್ಯಗಳನ್ನು ಆಡಿ ಸಂತೋಷ ಪಡಿಸು. ಋಗ್ವೇದದಲ್ಲಿ ಶಿಕ್ಷಿತನಲ್ಲದೇ ಹೋದರೆ, ಯಜುರ್ವೇದಗಳನ್ನು ಓದಿಲ್ಲವಾದರೆ, ಸಾಮವೇದವನ್ನು ತಿಳಿಯಲಿಲ್ಲವಾದರೆ ಹೀಗೆ ಮಾತಾಡುವುದು ಎಂದಿಗೂ ಸಾಧ್ಯವಿಲ್ಲ. ಈತನು ವ್ಯಾಕರಣ ಶಾಸ್ತ್ರವನ್ನು ಅನೇಕ ಸಲ ಅಭ್ಯಾಸ ಮಾಡಿದಂತೆ ತೋರುತ್ತದೆ. ಇವನು ವೇದ ವೇದಾಂಗಗಳೆಲ್ಲವನ್ನೂ ಸಂಪೂರ್ಣವಾಗಿ ತಿಳಿದವನೆಂಬುದರಲ್ಲಿ ಸಂದೇಹವೇ ಇಲ್ಲ. ಇವನು ಈವರೆಗೆ ನಮ್ಮೊಡನೆ ಇಷ್ಟು ಮಾತುಗಳನ್ನು ಆಡಿದರೂ ಅವುಗಳಲ್ಲಿ ಸ್ವಲ್ಪವಾದರೂ ಅಪಶಬ್ದವು ಕಾಣಲಿಲ್ಲ. ಇವನು ಮಾತಾಡುವಾಗ ಇವನ ಮುಖದಲ್ಲಾಗಲೀ, ಹಣೆಯಲ್ಲಾಗಲೀ, ಕಣ್ಣುಗಳಲ್ಲಾಗಲೀ ಅಥವಾ ಬೇರೆ ಯಾವ ಅವಯವಗಳಲ್ಲಾಗಲೀ ಯಾವುದೇ ವಿಕಾರ ಮತ್ತು ಚೇಷ್ಟೆಗಳು ಕಾಣಲಿಲ್ಲ. ಈತನ ಮಾತುಗಳು ವಿಶೇಷ ಶಬ್ದಾಡಂಬರಗಳಿಲ್ಲದೆ ಪದವರ್ಣಗಳಿಲ್ಲದೆ, ಸ್ವಲ್ಪವೂ ಸಂದೇಹವೂ ತೋರಲಿಲ್ಲ. ಇವನು ಆಡಿದ ಮಾತುಗಳು ಅತಿ ನಿಧಾನವೂ ಆಗಿರಲಿಲ್ಲ, ವೇಗವಾಗಿಯೂ ಇರಲಿಲ್ಲ. ಬದಲು ಗಂಭೀರವಾಗಿದ್ದುವು. ಈತನ ಮಾತುಗಳು ಎದೆಯಿಂದ ಹೊರಟು ಬರುವಾಗಲೂ, ಕಂಠದಲ್ಲಿ ಇರುವಾಗಲೂ ಮಧ್ಯಮ ಸ್ಥಾಯಿಯಿಂದ ಬರುತ್ತವೆ. ಇವನ ವಾಕ್ಯಗಳಲ್ಲಿ ಪದಗಳು ವ್ಯಕ್ತವಾಗಿಯೂ ವರ್ಣಗಳು ಸ್ಫುಟವಾಗಿಯೂ ಇವೆ. ಇವನ ಮಾತುಗಳು ಕೇಳುವವರ ಮನಸ್ಸನ್ನು ಆಕರ್ಷಿಸುವಂತೆ ಅತಿ ಮಧುರʼ

ಈ ಮಾತುಗಳ ಮೂಲಕ ವಾಲ್ಮೀಕಿಯು ಸುಸಂಸ್ಕೃತ ವ್ಯಕ್ತಿತ್ವ ಮತ್ತು ಭಾಷೆಯನ್ನು ಓದುಗರಿಗೆ ಪರಿಚಯಿಸುತ್ತಾನೆ. ಆದರೆ ಶ್ರೀರಾಮನ ಮತ್ತು ಹನುಮಂತನ ಹೆಸರು ಹೊತ್ತವರ ಭಾಷೆ ಮತ್ತು ನಡತೆಗಳು ಇವತ್ತು ಹೇಗಿವೆ ಎಂಬುದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಮಾನ್ಯ ಪ್ರಧಾನಿಗಳೂ ಇದಕ್ಕೆ ತಮ್ಮ ಸಮರ್ಥನೆಯ ಮುದ್ರೆ ಒತ್ತಿದ್ದಾರೆ. ಅವರ ಪ್ರಕಾರ ಭಜರಂಗ ದಳ ನಿಷೇಧ ಮಾಡಿದರೆ ಹನುಮಂತನ ಗುಡಿಗೆ ಬೀಗ ಹಾಕಿದಂತೆ!

ನಾಗರಿಕತೆ ಆಳವಾಗಿ ಘಾಸಿಗೊಂಡಾಗ ಇಂಥ ಮಾತುಗಳನ್ನು ನಾವು ಆಗಾಗ ಕೇಳುತ್ತಲೇ ಇರಬೇಕಾಗುತ್ತದೆ.

ಪುರುಷೋತ್ತಮ ಬಿಳಿಮಲೆ

ಸಂಸ್ಕೃತಿ ಚಿಂತಕರು

ಇದನ್ನೂ ಓದಿ-https://peepalmedia.com/congress-7-guarantees-and-releases-manifesto-for-karnataka-election/ http://ಕಾಂಗ್ರೆಸ್‌ನ 7 ಜನಪ್ರಿಯ ಗ್ಯಾರಂಟಿಗಳ ಬಗ್ಗೆ ನಿಮಗೆಷ್ಟು ಗೊತ್ತು?

Related Articles

ಇತ್ತೀಚಿನ ಸುದ್ದಿಗಳು