ಮುಸ್ಲಿಂ ಸಿಬ್ಬಂದಿಯ ನೇಮ್ ಪ್ಲೇಟ್ ಮೇಲೆ ‘ಜಿಹಾದಿ’ ಎಂದು ಬರೆದ ಬಜರಂಗದಳ ಸಂಘಟನೆ: ದೂರು ಬಂದರೆ ಕ್ರಮ ಎಂದ ಪೊಲೀಸ್

ಡೆಹ್ರಾಡೂನ್‌ನ ರಾಜ್‌ಪುರ ರಸ್ತೆಯಲ್ಲಿರುವ ಪ್ರಸಿದ್ಧ ಪಾದರಕ್ಷೆಗಳ ಶೋರೂಮ್‌ಗೆ ನುಗ್ಗಿದ ಬಜರಂಗದಳದ ಕಾರ್ಯಕರ್ತರ ಗುಂಪೊಂದು ಅಲ್ಲಿ ಗೊಂದಲ ಸೃಷ್ಟಿಸಿದೆ. ಶೋರೂಮ್‌ನ ಇಬ್ಬರು ಮುಸ್ಲಿಂ ಮ್ಯಾನೇಜರ್‌ಗಳು ಅಲ್ಲಿನ ಹಿಂದೂ ಉದ್ಯೋಗಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು, ಆ ಇಬ್ಬರು ಮುಸ್ಲಿಂ ಸಿಬ್ಬಂದಿಯ ನೇಮ್ ಟ್ಯಾಗ್‌ಗಳ ಮೇಲೆ ‘ಜಿಹಾದಿ’ ಎಂದು ಬರೆದಿದ್ದಾರೆ. ಈ ಇಡೀ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಬಜರಂಗದಳದ ಉತ್ತರಾಖಂಡ ರಾಜ್ಯ ಸಂಚಾಲಕ ವಿಕಾಸ್ ವರ್ಮಾ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಶೋರೂಮ್‌ನ ಮ್ಯಾನೇಜರ್ ಮತ್ತು ಸಹ-ಮ್ಯಾನೇಜರ್ ಇಬ್ಬರೂ ಹಿಂದೂ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರಿನ ಆಧಾರದ ಮೇಲೆ ನಾವು ಈ ಕ್ರಮ ಕೈಗೊಂಡಿದ್ದೇವೆ ಎಂದು ವರ್ಮಾ ಹೇಳಿಕೊಂಡಿದ್ದಾರೆ.

ಆ ಇಬ್ಬರು ಮುಸ್ಲಿಂ ಮ್ಯಾನೇಜರ್‌ಗಳು ಹಿಂದೂ ಉದ್ಯೋಗಿಗಳಿಗೆ ಯಾವುದೇ ಹೆಚ್ಚುವರಿ ಹಣ ನೀಡದೆ ದಿನಕ್ಕೆ ನಾಲ್ಕು ಗಂಟೆಗಳ ಕಾಲ ಓವರ್‌ಟೈಮ್ ಕೆಲಸ ಮಾಡಿಸಿಕೊಳ್ಳುವ ಮೂಲಕ ಅವರನ್ನು ಗುರಿ ಮಾಡುತ್ತಿದ್ದರು ಹಾಗೂ ಅವರ ಸಂಬಳ ಕಡಿತಗೊಳಿಸಲು ಕಳ್ಳತನದ ಸುಳ್ಳು ಆರೋಪ ಹೊರಿಸುತ್ತಿದ್ದರು ಎಂದು ವರ್ಮಾ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ವಿಷಯವನ್ನು ಮೊದಲು ಪೊಲೀಸರಿಗೆ ಏಕೆ ವರದಿ ಮಾಡಲಿಲ್ಲ ಎಂದು ಪ್ರಶ್ನಿಸಿದಾಗ, ಹಿಂದೆ ಇಂತಹ ವಿಷಯಗಳ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ವರಿಷ್ಠಾಧಿಕಾರಿ (SP City) ಪ್ರಮೋದ್ ಕುಮಾರ್ ಅವರು, “ಈ ವಿಷಯಕ್ಕೆ ಸಂಬಂಧಿಸಿದಂತೆ ನಮಗೆ ಇದುವರೆಗೆ ಯಾವುದೇ ಅಧಿಕೃತ ದೂರು ಬಂದಿಲ್ಲ. ಯಾರಾದರೂ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದರೆ ನಾವು ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು