Wednesday, January 29, 2025

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು-49 : ಬಾಣಂತಿ, ಮುಟ್ಟಾದವರನ್ನು ಊರಾಚೆ ತಳ್ಳುವುದೂ ಒಂದು ನಂಬಿಕೆಯಂತೆ!

“…ಮಹಿಳೆಯರು ಹೆರುವ ಸಂದರ್ಭದಲ್ಲಿ ಅವರನ್ನು ಊರಿಂದ ಹೊರಗೆಕಳಿಸುವ, ಮುಟ್ಟಾದ ಹೆಣ್ಣುಮಕ್ಕಳನ್ನು ಊರಿಂದ ಹೊರಗೆ, ಕೊಂಬೆ, ಹುಲ್ಲುಗಳಿಂದ ಮಾಡಿದ ಡೇರೆಯಂತ ಗುಡಿಸಲುಗಳಲ್ಲಿ ವಾಸಿಸುವಂತೆ ಮಾಡುವ ಹಳೆ ಮೈಸೂರಿನಲ್ಲಿ ವ್ಯಾಪಕವಾಗಿದ್ದ ಕಾಡುಗೊಲ್ಲರ ಆಚರಣೆಯನ್ನು ನಂಬಿಕೆ, ಸಂಪ್ರದಾಯ ಎಂದು ಸುಮ್ಮನಿರಲು ಸಾಧ್ಯವಿಲ್ಲ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ



ಬೊಗಸೆಗೆ ದಕ್ಕಿದ್ದು-48ರಲ್ಲಿ ‘ಮೇಲ್ಜಾತಿ’ಯವರ ಎಂಜಲು ತಿನ್ನುವ ಅಜಲು ಮುಂತಾದ ಪದ್ಧತಿಗಳ ಬಗ್ಗೆ ಬರೆಯುವಾಗ, ಗೊರವರು ನಡೆಸುತ್ತಿದ್ದ ಒಂದು ಆಚರಣೆಯನ್ನು ಕುರಿತು ಬರೆದಿರಲಿಲ್ಲ. ಕಾರಣ ಮುಂದೆ ಸ್ಪಷ್ಟವಾಗಲಿದೆ. ಅದೆಂದರೆ, ಇದು ಅಮಾನವೀಯವೋ, ಜನಪದೀಯ ಆಚರಣೆಯೋ ಎಂದು ನನಗೇ ಸ್ಪಷ್ಟವಾಗದಿರುವುದು! ಅದನ್ನು “ಬೋಪರಾಕ್” ಎಂದು ಕರೆಯುತ್ತಾರೆ. ನಾನು ಹಿಂದಿನ ಕಂತುಗಳಲ್ಲಿ ಹೇಳಿದಂತೆ, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಅಭಿವೃದ್ಧಿ ನಿಗಮಕ್ಕಾಗಿ ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರವು ನಡೆಸಿದ್ದ ಎರಡು ದಶಕಗಳ ಹಿಂದಿನ ದಾಖಲಾತಿಯ ಪ್ರಕಾರ ಇಲ್ಲಿನ ಮಾಹಿತಿಗಳಿವೆ. ನಾನು ಆಚರಣೆಗಳ ವಿಧಿವಿಧಾನಗಳ ವಿವರಣೆಗೆ ಹೋಗುವುದಿಲ್ಲ.

ಬೋಪರಾಕ್ ಆಚರಣೆಯಲ್ಲಿ ಮೈಲಾರಲಿಂಗನ ಆರಾಧನೆ ನಡೆಯುತ್ತದೆ. ಇದರಲ್ಲಿ ಮೈಲಾರಲಿಂಗನ ಮಕ್ಕಳಾದ ಚಿಕ್ಕಯ್ಯ-ಮಂಜಯ್ಯರಿಗೆ ಮಾಂಸಾಹಾರದ ಸಮಾರಾಧನೆಯಾದ ನಂತರ ಒಂದು ಕಂಬಳಿಯನ್ನು ಹಾಸಿ, ಅದರಲ್ಲಿ ಮಾಂಸಾಹಾರವನ್ನು ಬಡಿಸಲಾಗುತ್ತದೆ. ಆಚರಣೆಯಲ್ಲಿ ಭಾಗವಹಿಸುವ ಪೂಜಾರಿಗಳು ನಾಯಿಗಳಂತೆ ವರ್ತಿಸುತ್ತಾ, ಕಿತ್ತಾಡಿಕೊಳ್ಳುತ್ತಾ ಅದಕ್ಕೆ ಬಾಯಿಹಾಕಿ ತಿನ್ನುತ್ತಾರೆ. ನಂತರ ಅದನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಬೇಟೆಯ ಹಿನ್ನೆಲೆ, ಬೇಟೆ ನಾಯಿಗಳಿಗೆ ಮೊದಲು ಪಾಲು ಕೊಟ್ಟು, ನಂತರ ಎಲ್ಲರೂ ಸಾಮೂಹಿಕವಾಗಿ ಹಂಚಿ ತಿನ್ನುವ ಪುರಾತನ ಬೇಟೆಗಾರ ಬುಡಕಟ್ಟಿನ ಸಂಪ್ರದಾಯವಿದು. ಇದನ್ನು ಸಾರಾಸಗಟಾಗಿ ಅಮಾನವೀಯ ಆಚರಣೆ, ಮೂಢನಂಬಿಕೆ ಎಂದು ಕರೆಯಬಹುದೇ ಎಂಬುದು ನನ್ನ ಪ್ರಶ್ನೆ. ಕಾಲ ಕಳೆದಂತೆ ಎಲ್ಲವೂ ಪರಿಷ್ಕರಣೆಗೆ ಒಳಗಾಗುವಾಗ, ಇದನ್ನೂ ಸುಧಾರಣೆ ಮಾಡಲು ಸಾಧ್ಯವಿದೆ.

ಉದಾಹರಣೆಗೆ, ಕೇರಳದ ಪರಶ್ಶಿನ ಕಡವಿಗೆ ಹಿಂದೆ ತುಳುವರು ದೊಡ್ಡ ಸಂಖ್ಯೆಯಲ್ಲಿ ಹೋಗುತ್ತಿದ್ದರು. ನಮ್ಮ ಕಡೆ ಬಹುತೇಕ ಮನೆಗಳಲ್ಲಿ ಮುತ್ತಪ್ಪನ ಪಟ ಇರುತ್ತಿತ್ತು, ದೇವರುಗಳ ಜೊತೆಯಲ್ಲಿ. ನಾನೂ ಮೂವತ್ತೈದು ವರ್ಷಗಳ ಹಿಂದೆ ಈ ನದಿ ಬದಿಯ ಸುಂದರ ತಾಣಕ್ಕೆ ಕುತೂಹಲದಿಂದ ಹೋಗಿದ್ದೆ. ಪರಶ್ಶಿನ ಕಡವಿನ ಮುತ್ತಪ್ಪ ಬೇಟೆಗಾರನಾಗಿದ್ದು, ದೈವವಾದವನು. ಇಲ್ಲಿ ಎಡೆಯಾಗಿ ಸುಟ್ಟ ಒಣಮೀನು ಬೆರೆಸಿದ ಕಡಲೆ, ಹೆಸರು, ಹುರುಳಿ ಮುಂತಾದ ಬೇಯಿಸಿದ ದ್ವಿದಳ ಧಾನ್ಯಗಳನ್ನು ಮತ್ತು ಶೇಂದಿಯನ್ನು ಮುತ್ತಪ್ಪನಿಗೆ ಅರ್ಪಿಸಲಾಗುತ್ತದೆ. ಇಲ್ಲಿಯ ಗುಡಿಯ ಆವರಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ನಾಯಿಗಳು ತಿರುಗಾಡುತ್ತಿದ್ದು, ಅವುಗಳಿಗೇ ಮೊದಲ ಪ್ರಸಾದದ ಹಕ್ಕು. ನಂತರ ಇದೇ ಒಣಮೀನು,ಕಡಲೆ, ಹೆಸರು, ಹುರುಳಿ ಕಾಳಿನ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಶೇಂದಿಯೇ ತೀರ್ಥ. ಶುದ್ಧ ಅಬ್ರಾಹ್ಮಣ ಆಚರಣೆಯಿದು. ಹಿಂದೆ ನಾಯಿಗಳು ತಿಂದುಳಿದದ್ದನ್ನೇ ಪ್ರಸಾದವಾಗಿ ನೀಡಲಾಗುತ್ತಿತ್ತು ಎಂದು ಅಜ್ಜಿಯರು ಹೇಳುತ್ತಿದ್ದರು. ಅವರ ಪ್ರಕಾರ, ” ನಾಯಿ ಪಂಡ್ಂಡ ನಾರಾಯಣ ದೇವೆರ್!” ಅಂದರೆ, “ನಾಯಿ ಎಂದರೆ ನಾರಾಯಣ ದೇವರು”, ಪವಿತ್ರ. ನಾನು ಹೋದಾಗ ಹಾಗಿರಲಿಲ್ಲ. ನಾಯಿಗಳಿಗೆ ಮೊದಲು ಬಡಿಸಿದರೂ, ಎಂಜಲನ್ನು ಪ್ರಸಾದವಾಗಿ ನೀಡುತ್ತಿರಲಿಲ್ಲ. ಮುತ್ತಪ್ಪನಿಗೆ ಬಡಿಸಿ ಉಳಿದುದನ್ನು ನೀಡುತ್ತಿದ್ದರು. ಇದೊಂದು ಸುಧಾರಣೆ.

ಮಹಿಳೆಯರು ಹೆರುವ ಸಂದರ್ಭದಲ್ಲಿ ಅವರನ್ನು ಊರಿಂದ ಹೊರಗೆಕಳಿಸುವ, ಮುಟ್ಟಾದ ಹೆಣ್ಣುಮಕ್ಕಳನ್ನು ಊರಿಂದ ಹೊರಗೆ, ಕೊಂಬೆ, ಹುಲ್ಲುಗಳಿಂದ ಮಾಡಿದ ಡೇರೆಯಂತ ಗುಡಿಸಲುಗಳಲ್ಲಿ ವಾಸಿಸುವಂತೆ ಮಾಡುವ ಹಳೆ ಮೈಸೂರಿನಲ್ಲಿ ವ್ಯಾಪಕವಾಗಿದ್ದ ಕಾಡುಗೊಲ್ಲರ ಆಚರಣೆಯನ್ನು ನಂಬಿಕೆ, ಸಂಪ್ರದಾಯ ಎಂದು ಸುಮ್ಮನಿರಲು ಸಾಧ್ಯವಿಲ್ಲ. ನನ್ನ ಮಟ್ಟಿಗೆ ಯಾರೇನೇ ಹೇಳಲಿ, ಇದೊಂದು ಅಮಾನವೀಯ ಆಚರಣೆಯೇ. ಕಳೆದ ಬಾರಿ ಈ ಕುರಿತು ಸ್ವಲ್ಪ ವಿವರ ನೀಡಿದ್ದೆ. ಅದರ ಕುರಿತು ಸ್ವಲ್ಪ ಹೆಚ್ಚಿನ ವಿಷಯ ಮತ್ತು ಬೇರೆ ಕೆಲವು ಸಮುದಾಯಗಳಲ್ಲಿ ಇದ್ದ ಇದಕ್ಕಿಂತಲೂ ಕ್ರೂರವಾದ ಆಚರಣೆಗಳನ್ನು ಇಲ್ಲಿ ನೋಡೋಣ.

ಇವೆಲ್ಲವೂ ನಡೆಯುವುದು ಹಾಲೇವಾಡಿಯ ಜುಂಜಪ್ಪನ ಹೆಸರಿನಲ್ಲಿ. ಜುಂಜಪ್ಪ ಮಧುಗಿರಿ ತಾಲೂಕಿನ ಹಾಲೇವಾಡಿಯ ಗ್ರಾಮದೇವತೆ. ಕರಡಿಗೊಲ್ಲರು, ಕಾಡುಗೊಲ್ಲರು ದಲಿತರೇ ಮುಂತಾದವರು ಮಾತ್ರವಲ್ಲ, ಮೇಲ್ಜಾತಿ ಎಂದು ಕರೆದುಕೊಳ್ಳುವವರಿಂದಲೂ ದೂರ ಕಾಯ್ದುಕೊಳ್ಳುವುದು ಕಂಡುಬಂದಿತ್ತು. ಇವರು ದಲಿತರ ಕೇರಿಗಳತ್ತ ಸುಳಿಯುತ್ತಲೇ ಇರಲಿಲ್ಲ. ಒಂದು ವೇಳೆ ಸಂಪರ್ಕಕ್ಕೆ ಬಂದರೆ, ಸ್ನಾನ ಮಾಡಿ ಮನೆ ಹೊಕ್ಕುತ್ತಿದ್ದರು. ಮೇಲ್ಜಾತಿಯವರ ಸಮಾರಂಭಗಳಿಗೆ ಹೋದರೂ, ಮುಖ್ಯವಾಗಿ ಮಹಿಳೆಯರು ಊಟ ಬಿಡಿ, ನೀರನ್ನೂ ಕುಡಿಯುತ್ತಿರಲಿಲ್ಲ. ಬೇರೆ ಜಾತಿಯವರಷ್ಟೇ ಏಕೆ, ಹೊರಗಡೆ ಹೋದರೆ, ನೀರನ್ನೇ ಮುಟ್ಟುತ್ತಿರಲಿಲ್ಲ. ಬೆಳಿಗ್ಗೆ ಮನೆಯಲ್ಲಿ ನೀರು ಕುಡಿದು ದುಡಿಯಲು ಹೊರಟರೆ, ಸಂಜೆ ಮನೆಗೆ ಬಂದೇ ನೀರು ಕುಡಿಯುತ್ತಿದ್ದರು. ಹೆಣ್ಣುಮಕ್ಕಳು ಪೇಟೆಗೆ ಹೋಗುವಂತೆಯೇ ಇರಲಿಲ್ಲ. ವಿಧವಾ ವಿವಾಹ ದೂರದ ಮಾತು. ಹೊರಗಿನವರ ಸಂಪರ್ಕ ಇಲ್ಲದ ಮಹಿಳೆಯರು ಖಿನ್ನತೆಯಿಂದ ಬಳಲುತ್ತಿದ್ದುದೇ ಅಲ್ಲದೆ, ಅನಾರೋಗ್ಯ, ಅಪೌಷ್ಟಿಕತೆಯಿಂದಲೂ ಬಳಲುತ್ತಿದ್ದರು.

ಶ್ರೀಮಂತರೇ ಇರಲಿ, ಬಡವರೇ ಇರಲಿ, ಮಗು ಜನಿಸಿದ ತಕ್ಷಣವೇ ಹೊಕ್ಕುಳ ಬಳ್ಳಿಯನ್ನು ಕೊಯ್ಯದೆಯೇ ಶಿಶುವನ್ನು ಒಂದು ಮೊರದಲ್ಲಿ ಹಾಕಿ ಊರ ಹೊರಗೆ ನಡೆಯಬೇಕಾಗಿತ್ತು; ಅರ್ಧ, ಒಂದು ಕಿ.ಮೀ. ದೂರದ ಪುಟ್ಟ ಡೇರೆಯಲ್ಲಿ ಮಗುವಿನೊಂದಿಗೆ ಏಕಾಂಗಿಯಾಗಿ ವಾಸಿಸಬೇಕಿತ್ತು. ಬಿಸಿಲು, ಮಳೆ, ಗಾಳಿ, ಚಳಿ, ಗುಡುಗು, ಮಿಂಚು, ಅನಾರೋಗ್ಯ, ನಿತ್ರಾಣ ಇವ್ಯಾವುವೂ ಇದಕ್ಕೆ ಅಡ್ಡಿಯಾಗುತ್ತಿರಲಿಲ್ಲ. ಆಕೆ ತನ್ನ ಅಡುಗೆ ತಾನೇ ಮಾಡಬೇಕು, ಬಟ್ಟೆಗಳನ್ನು ತಾನೇ ತೊಳೆಯಬೇಕು. ದಾದಿಯರು ಅಥವಾ ನೆರವಿಗೆ ಕೂಡಾ ಯಾರನ್ನೂ ಹೋಗಲು ಬಿಡುತ್ತಿರಲಿಲ್ಲ. ಕೆಲವು ಕಡೆ ಡೇರೆಯ ಸುತ್ತಲೂ ಕಳ್ಳಿ ಬೇಲಿಯನ್ನೂ ಹಾಕಿರುತ್ತಿದ್ದರು.

ಕನಕಪುರದಂತಾ ಕೆಲವು ಕಡೆ ಅಗಸರ ಜಾತಿಯ ಸೂಲಗಿತ್ತಿಗೆ ಅವಕಾಶವಿತ್ತು. ಆಕೆಗೆ ಧಾನ್ಯ ಮತ್ತು ಒಂದು ಮೇಕೆ ಕೊಡುತ್ತಿದ್ದರು. ಕೆಲವು ಕಡೆ ಹೆರಿಗೆಯ ವೇಳೆ ಸತ್ತರೆ, ಅಥವಾ ಬಾಣಂತಿ ಸತ್ತರೂ ಇವರು ಮುಟ್ಟುತ್ತಿರಲಿಲ್ಲ. ಅಗಸರಿಂದ ಶವ ಸಂಸ್ಕಾರ ಮಾಡಿಸುತ್ತಿದ್ದರು. ಕೆಲವು ಕಡೆ ಹದಿನೈದು ದಿನ, ಕೆಲವೆಡೆ ಒಂದು ತಿಂಗಳು ಇದು ನಡೆಯುತ್ತಿತ್ತು. ಬಾಣಂತಿ ಮತ್ತು ಶಿಶುವನ್ನು ಮನೆಗೆ ಸೇರಿಸುವ ದಿನ ಕುಲದೇವರಿಗೆ ಪೂಜೆ ಮಾಡಿಸಿ, ತಾಯಿಮಗುವಿಗೆ ಗಂಜಳ ಸ್ನಾನ ಮಾಡಿಸಿ, ಕುಡಿಸಿ ಒಳಬಿಡಲಾಗುತ್ತದೆ. ಆ ದಿನವೇ ಮಗುವಿಗೆ ಹೆಸರಿಡಲಾಗುತ್ತದೆ. ಆ ಹೆಸರೇ ಶಾಶ್ವತ. ಮುಟ್ಟಾದವರಿಗೂ ಇದೇ ಗತಿ. ಹೆಣ್ಣು ಹೆತ್ತರೆ ಇಡೀ ಊರಿಗೆ (ಹಟ್ಟಿಗೆ) ಸೂತಕ. ಯಾರಾದರೂ ಇದನ್ನು ಉಲ್ಲಂಘಿಸಿದರೆ ಜಾತಿಯಿಂದ ಹೊರಹಾಕಲಾಗುತ್ತಿತ್ತು. ಇಂತದ್ದೊಂದು ಆಚರಣೆಯ ಹಿಂದಿರುವ ಜುಂಜಪ್ಪನ ಹುಟ್ಟಿನ ಕತೆಗಳು ಮೇಲೆ ಹೇಳಿದ ದಾಖಲಾತಿಯಲ್ಲಿವೆ. ಅದನ್ನಿಲ್ಲಿ ಬರೆಯಲು ಹೋಗುವುದಿಲ್ಲ. ಆಸಕ್ತರಿಗೆ ಮಾಹಿತಿ: ಹಿಂದೆ ಉಲ್ಲೇಖಿಸಿರುವ, ದಾಖಲಾತಿ ಸಮಯದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದ, ಇದೇ ಸಮುದಾಯದ ಡಾ. ಗುರುಲಿಂಗಯ್ಯ ಅವರ ಡಾಕ್ಟರೇಟ್ ಪ್ರಬಂಧವೇ “ಕಾಡುಗೊಲ್ಲರಲ್ಲಿ ಸಾಮಾಜಿಕ ಪರಿವರ್ತನೆ”.

ಆ ಹೊತ್ತಿನಲ್ಲಿ ಸರಕಾರವು ಕೆಲವು ಕಡೆ ಊರ ಹೊರಗೆ ಇದಕ್ಕಾಗಿಯೇ ಕಟ್ಟಡಗಳನ್ನು ಕಟ್ಟಿಸಿಕೊಟ್ಟು, “ಇದೊಂದು ಮಾನವೀಯ ಕ್ರಮ” ಎಂದು ಪ್ರಗತಿಪರರಿಂದ ಮೆಚ್ಚುಗೆಗೂ, “ಸರಕಾರ ಮೂಢನಂಬಿಕೆಗೆ ಬೆಂಬಲ ನೀಡುತ್ತಿದೆ” ಎಂದು “ಅತಿ ಪ್ರಗತಿಪರ”ರಿಂದ ಟೀಕೆಗೂ, ಸರಕಾರ “ಧಾರ್ಮಿಕ ಆಚರಣೆ”ಗಳಲ್ಲಿ ಮಧ್ಯಪ್ರವೇಶ ಮಾಡುತ್ತಿದೆ ಎಂದು ಕರ್ಮಠರ ಕೋಪಕ್ಕೂ ಒಳಗಾಗಿತ್ತು.

ಇದಕ್ಕಿಂತಲೂ ಕ್ರೂರವಾದ, ದಯನೀಯವಾದ ಆಚರಣೆಯು ಕರ್ನಾಟಕದ ಹಲವು ಕಡೆ ಇರುವ ಹಕ್ಕಿಪಿಕ್ಕಿ ಜನಾಂಗದಲ್ಲಿದೆ. ಈ ಜನಾಂಗದಲ್ಲಿ ಹೆರಿಗೆಯ ಸಮಯದಲ್ಲಿ ಹೆಣ್ಣು ಹಟ್ಟಿಯಿಂದ ಹೊರಗೆ ಹೋಗಬೇಕಾಗಿತ್ತು. ತನ್ನ ಹೆರಿಗೆಯನ್ನು ಒಂಟಿಯಾಗಿ ಮಾಡಬೇಕಿತ್ತು. ಹೊಕ್ಕುಳ ಬಳ್ಳಿಯನ್ನೂ ತಾನೇ ಬ್ಲೇಡು, ಬಳೆಚೂರು ಇತ್ಯಾದಿ ಹರಿತವಾದ ಸಾಧನಗಳಿಂದ ಕತ್ತರಿಸಿಕೊಳ್ಳಬೇಕಾಗಿತ್ತು. ಮಗುವಿನ ಹೊಕ್ಕುಳಿಗೆ ತಾನೇ ಸೀರೆಯ ತುಂಡಿನಿಂದ ಕಟ್ಟು ಹಾಕಬೇಕಾಗಿತ್ತು. ನಂತರ ಶಿಶುವನ್ನು ದನದ ಸೆಗಣಿ ನೀರಿನಿಂದ ಸ್ನಾನ ಮಾಡಿಸಬೇಕಿತ್ತು. ನಂತರ ನೀರು ಹುಡುಕಿಕೊಂಡು ಹೋಗಿ, ಶಿಶುವನ್ನೂ ಸ್ನಾನ ಮಾಡಿಸಿ, ತಾನೂ ಸ್ನಾನ ಮಾಡಿಕೊಳ್ಳಬೇಕಾಗಿತ್ತು. ತನ್ನ ಅಡುಗೆಯನ್ನು ತಾನೇ ಮಾಡಿಕೊಳ್ಳಬೇಕಾಗಿತ್ತು. ಮನೆಯವರು ಮಾಡುತ್ತಿದ್ದ ಒಂದೇ ನೆರವೆಂದರೆ ಮೊದಲ ದಿನ ಬೆಂಕಿ ಹಚ್ಚಿ ಕೊಡುವುದು. ತಾಯಿ ಮಗು ಒಂದು ದಿನ ಈ ಬೆಂಕಿಯ ಪಕ್ಕ ಒಂದು ದಿನ ಮಲಗಬೇಕು. ಗಂಡ ಐದು ದಿನಗಳ ಕಾಲ “ಮಿಟ್ಟುದಾನ್” ಎಂದು ಕರೆಯಲಾಗುವ ಒಂದು ರೀತಿಯ ಸಿಹಿಯಾದ ಪಾಯಸವನ್ನು ಗಂಡ, ಮುತ್ತುಗದಂತಾ ಎಲೆಯ ದೊಣ್ಣೆಯಲ್ಲಿ ಆಚರಣೆ ನಡೆಯುವ ಐದು ದಿನ ತಂದುಕೊಡುತ್ತಾನೆ. ಗಂಡ ಹೆಂಡತಿ ಮಾತನಾಡುವಂತಿಲ್ಲ. ಈ ದಿನಗಳಲ್ಲಿ ಮಗುವನ್ನು ಜೋಳಿಗೆಯಲ್ಲಿ ಹಾಕಿ ಊರಿಗೆ ಹೋಗಿ ಆಕೆ ಬೇಡಬೇಕು. ಆದರೆ, ಮನೆ ಕಡೆ ಸುಳಿಯುವಂತಿಲ್ಲ!

ಹಕ್ಕಿಪಿಕ್ಕಿ ಜನಾಂಗದ ಕುರಿತಾಗಿಯೇ ಹಿರಿಯ ಗೆಳೆಯ ರಾಜಪ್ಪ ದಳವಾಯಿ ಅವರು ಬರೆದಿರುವ “ಹಕ್ಕಿಪಿಕ್ಕಿಗಳ ಸಂಸ್ಕೃತಿ” ಪುಸ್ತಕವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹಳ ವರ್ಷಗಳ ಹಿಂದೆ ಪ್ರಕಟಿಸಿದ್ದು, ಈ ಅಲೆಮಾರಿ ಜನಾಂಗದ ಹಿನ್ನೆಲೆ, ಸಂಪ್ರದಾಯ, ಆಚರಣೆಗಳ ಬಗ್ಗೆ ಬಹಳಷ್ಟು ವಿವರಗಳಿವೆ. ಈ ಜನಾಂಗದಲ್ಲಿ ಇರುವ “ಮೊಟ್ಟೆಯಿಂದ ಕನ್ಯತ್ವ ಪರೀಕ್ಷೆ” ಯಂತಾ ಕೆಲವು ತಲೆತಿರುಗಿಸುವ ಅಮಾನವೀಯ ಆಚರಣೆಗಳನ್ನು ಮುಂದಿನ ಕಂತಿನಲ್ಲಿ ನೋಡೋಣ.

ಮಹಿಳೆಯರನ್ನು ಇಂತದ್ದೊಂದು ದಯನೀಯ ಸ್ಥಿತಿಗೆ ತಳ್ಳುವ ಆಚರಣೆಯು ಸಾಮಾಜಿಕ ನ್ಯಾಯದ, “ಬೇಟಿ ಬಚಾವೋ, ಬೇಟಿ ಪಡಾವೋ” ಯುಗದಲ್ಲೂ ಮುಂದುವರಿದಿದೆಯೋ ನನಗೆ ಗೊತ್ತಿಲ್ಲ. ಗೊತ್ತಿರುವುದು ಸಾಧ್ಯವೂ ಇಲ್ಲ. ಆದುದರಿಂದ, ಹಿಂದೆ ಹೇಳಿರುವಂತೆ ಇದನ್ನು ಬರೆದಿರುವ ಉದ್ದೇಶ ಎಂದರೆ, ಓದುಗರು ತಮ್ಮ ಸುತ್ತ ಇಂತದ್ದು ಇರುವುದು ಕಂಡುಬಂದರೆ, ತಮಗೆ ಸರಿಕಂಡ ಏನಾದರೂ ಮಾಡಲಿ ಎಂಬುದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page