Sunday, July 27, 2025

ಸತ್ಯ | ನ್ಯಾಯ |ಧರ್ಮ

ಬೆಂಗಳೂರು ವಿದ್ಯುತ್‌ ಶಾಕ್ ದುರಂತ: 5 ಬೆಸ್ಕಾಂ ಅಧಿಕಾರಿಗಳ ಬಂಧನ

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿ ಭಾನುವಾರ ಪಾದಚಾರಿಗಳಿಗೆ ವಿದ್ಯುತ್ ತಂತಿ ತಗುಲಿ 23 ವರ್ಷದ ಮಹಿಳೆ ಮತ್ತು ಆಕೆಯ ಒಂಬತ್ತು ತಿಂಗಳ ಮಗು ಸಾವನ್ನಪ್ಪಿದ ನಂತರ ನಿರ್ಲಕ್ಷ್ಯದ ಆರೋಪದ ಮೇಲೆ ಕಾಡುಗೋಡಿ ಪೊಲೀಸರು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ಐವರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಮೃತದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಸೋಮವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಮೃತರನ್ನು ಸೌಂದರ್ಯ ಮತ್ತು ಅವರ ಪುತ್ರಿ ಸುವೀಕ್ಷಾ ಎಂದು ಗುರುತಿಸಲಾಗಿದೆ. ಅಸಹಾಯಕರಾಗಿ ನಿಂತಿದ್ದ ಸೌಂದರ್ಯ ಅವರ ಪತಿ ಸಂತೋಷ್ ಅವರ ಎದುರೇ ಇಬ್ಬರು ಸುಟ್ಟು ಕರಕಲಾದರು.

ಪೊಲೀಸರ ಪ್ರಕಾರ, ಮೂವರ ಕುಟುಂಬ ಭಾನುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ತಮಿಳುನಾಡಿನಿಂದ ಆಗಮಿಸಿ ಮನೆಗೆ ವಾಪಸಾಗುತ್ತಿದ್ದರು. ಕುಟುಂಬ ಹೋಪ್ ಫಾರ್ಮ್ ಜಂಕ್ಷನ್ ಸಮೀಪಿಸುತ್ತಿದ್ದಂತೆ, ಮಗುವನ್ನು ಕೈಯಲ್ಲಿ ಹಿಡಿದುಕೊಂಡ ಸೌಂದರ್ಯ ಫುಟ್ ಪಾತ್ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಿದ್ದಾರೆ. ಸ್ವಲ್ಪ ಸಮಯದಲ್ಲೇ ಇಬ್ಬರು ಬೆಂಕಿ ಹೊತ್ತಿ ಸುಟ್ಟು ಕರಕಲಾದರು. ಸೌಂದರ್ಯಾ ಅವರ ಪತಿ ಸಂತೋಷ್‌ಗೆ ಆ ಕ್ಷಣ ಏನೂ ಮಾಡಲು ಸಾಧ್ಯವಾಗಲಿಲ್ಲ, ಅವರು ಅಸಹಾಯಕನಾಗಿ ತನ್ನ ಮುಂದೆ ನಡೆದ ದುರಂತವನ್ನು ನೋಡುತ್ತಿದ್ದರು.

ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾಡುಗೋಡಿ ಪೊಲೀಸರು ಐಪಿಸಿ ಸೆಕ್ಷನ್ 304(ಎ) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಬೆಸ್ಕಾಂನ ಐವರು ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಕಾರ್ಯಪಾಲಕ ಇಂಜಿನಿಯರ್ ರಾಮ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುಬ್ರಹ್ಮಣ್ಯ, ಸಹಾಯಕ ಇಂಜಿನಿಯರ್ ಚತನ್ ಎಸ್, ಜೂನಿಯರ್ ಇಂಜಿನಿಯರ್ ರಾಜಣ್ಣ ಮತ್ತು ಪವರ್‌ಮ್ಯಾನ್ ಮಂಜುನಾಥ್ ಬಂಧಿತ ಅಧಿಕಾರಿಗಳಾಗಿದ್ದಾರೆ.

ಮಹಿಳೆ ಮತ್ತು ಆಕೆಯ ಮಗಳು 11 ಕೆವಿ ಲೈವ್ ವೈರ್ ಸಂಪರ್ಕಕ್ಕೆ ಬಂದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಬೆಸ್ಕಾಂ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕಾಡುಗೋಡಿಯ ಬಿಪಿಎಲ್ ಫೀಡರ್‌ನ ಎಫ್-9 ಲೈನನ್ನು ಮುಂಜಾನೆ 3.50ಕ್ಕೆ ಟ್ರಿಪ್ ಮಾಡಲಾಗಿದ್ದು, 3.55ಕ್ಕೆ ಚಾರ್ಜ್ ಮಾಡಲಾಗಿದೆ. ಸಂತ್ರಸ್ತರು ಹೋಪ್ ಫಾರ್ಮ್ ಸಿಗ್ನಲ್ ಬಳಿಯ ಫುಟ್‌ಪಾತ್‌ನಲ್ಲಿ 11ಕೆವಿ ಸ್ನ್ಯಾಪ್ಡ್ ಕಂಡಕ್ಟರ್‌ನೊಂದಿಗೆ ಸಂಪರ್ಕಕ್ಕೆ ಬಂದರು ಮತ್ತು ವಿದ್ಯುದಾಘಾತಕ್ಕೊಳಗಾದರು” ಎಂದು ಬೆಸ್ಕಾಂ ಹೇಳಿಕೆಯಲ್ಲಿ ತಿಳಿಸಿದೆ.

ಘಟನೆಗೆ ಬೆಸ್ಕಾಂ ತನ್ನ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿದೆ ಮತ್ತು ಕರ್ತವ್ಯಲೋಪದ ಆರೋಪದ ಅವರನ್ನು ಅಮಾನತುಗೊಳಿಸಿದೆ. ಬೆಸ್ಕಾಂ ಇಬ್ಬರು ಹಿರಿಯ ಅಧಿಕಾರಿಗಳಿಗೆ ಕೂಡ ಶೋಕಾಸ್ ನೋಟಿಸ್ ನೀಡಿದ್ದು, ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ.

ಇಂಧನ ಸಚಿವ ಕೆಜೆ ಜಾರ್ಜ್ ಮೃತರಿಗೆ ಸಂತಾಪ ಸೂಚಿಸಿದ್ದು, ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page