ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಮೈಸೂರು ರಾಜವಂಶಸ್ಥರಿಗೆ ಟಿಡಿಆರ್ ನೀಡಬೇಕೆಂದಿದ್ದ ತನ್ನ ಹಿಂದಿನ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಮುಂದಿನ ವಿಚಾರಣೆಗೆ ಜುಲೈ 21 ಕ್ಕೆ ಮುಂದೂಡುವ ಮೂಲಕ ಕರ್ನಾಟಕ ಸರ್ಕಾರ ಸಣ್ಣ ರಿಲೀಫ್ ನೀಡಿದೆ.
ಬೆಂಗಳೂರಿನ ಬಳ್ಳಾರಿ ಮತ್ತು ಜಯಮಹಲ್ ರಸ್ತೆ ವಿಸ್ತರಣೆ ಭಾಗವಾಗಿ ಕರ್ನಾಟಕ ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದ 15 ಎಕರೆಗೂ ಹೆಚ್ಚಿನ ಭೂಮಿಗೆ ಪರಿಹಾರವಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕಾನೂನು ಉತ್ತರಾಧಿಕಾರಿ ಹಾಗೂ ಇತರರಿಗೆ 3,400 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಟಿಡಿಆರ್ ಪ್ರಮಾಣಪತ್ರಗಳನ್ನು ಹಸ್ತಾಂತರಿಸುವಂತೆ ಸುಪ್ರೀಂಕೋರ್ಟ್ ಮೇ 22ರಂದು ಆದೇಶಿಸಿತ್ತು.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು ಎಲ್ಲ ಟಿಡಿಆರ್ ಪ್ರಮಾಣಪತ್ರಗಳನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯಲ್ಲಿ ಠೇವಣಿ ಇಡಬೇಕು. ಒಂದು ವೇಳೆ ಅದನ್ನು ಬಿಡುಗಡೆ ಮಾಡಿದ್ದರೆ ಯಾರೂ ಅದನ್ನು ಬಳಸುವಂತಿಲ್ಲ ಅಥವಾ ಯಾವುದೇ ಮೂರನೇ ವ್ಯಕ್ತಿ ಹಕ್ಕು ಪ್ರತಿಪಾದಿಸುವಂತಿಲ್ಲ ಎಂದು ಸೂಚಿಸಿದೆ.
ಪ್ರಕರಣದ ಹಿನ್ನೆಲೆ
ಬೆಂಗಳೂರು ಅರಮನೆ ಮೈದಾನದ ಬಳಿ ರಸ್ತೆ ಅಗಲೀಕರಣಕ್ಕಾಗಿ ಒಟ್ಟು 15.36 ಎಕರೆ ಜಮೀನು ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಉದ್ದೇಶಿಸಿತ್ತು. ಇದರ ವಿರುದ್ಧ ರಾಜಮನೆತನದವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಎಕರೆಗೆ 200 ಕೋಟಿ ರೂಪಾಯಿಯಂತೆ 3,400 ಕೋಟಿ ರೂ. ಟಿಡಿಆರ್ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ ಟಿಡಿಆರ್ ನೀಡಲು ಒಪ್ಪದ ಸರ್ಕಾರ ಸುಗ್ರೀವಾಜ್ಞೆ ಅಸ್ತ್ರ ಹೂಡಿತ್ತು. ಹೀಗಾಗಿ ಸುಗ್ರೀವಾಜ್ಞೆ ಮತ್ತು ಪರಿಹಾರ ನೀಡದ್ದಕ್ಕೆ ರಾಜಮನೆತನ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮೇ 22 ರಂದು ಟಿಡಿಆರ್ ಪಾವತಿ ಮಾಡುವಂತೆ ಆದೇಶ ನೀಡಿತ್ತು. ಆ ಆದೇಶವನ್ನು ಮರುಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಮನವಿ ಮಾಡಿತ್ತು.