Monday, August 26, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರು ಶಾರ್ಟ್ ಫಿಲ್ಮ್ ಫೆಸ್ಟಿವಲ್: ಕಾಣೆಯಾದ ಸಾಮಾಜಿಕ ಕಳಕಳಿ (ಅಂಕಣ ಬರಹ)

ಎಂ ನಾಗರಾಜ ಶೆಟ್ಟಿ

ʼ ದಿನಕ್ಕೆ ಏಳು ಸರ್ತಿ ನಮಾಜು ಮಾಡ್ತಾರೆ, ಕೇಳಿ ಕೇಳಿ ಸಾಕಾಗಿ ಹೋಗಿದೆ ʼ
ʼ ಏಳಲ್ಲ, ಐದು ಸಲ ʼ
ʼ ಸಾಕು, ಬಾಯ್ಮುಚ್ಚು. ನಂಗೆ ಗೊತ್ತಿಲ್ವಾ, ಏಳು ಸಲ ಮಾಡ್ತಾರೆ ʼ

ಆಯೇಷಾ ಮನೆ ಕೆಲಸ ಮಾಡಿ, ಅಡುಗೆ ಸಿದ್ಧ ಪಡಿಸಿ, ಊಟ ಬಡಿಸಿದಾಗ ವೃದ್ಧೆಯಿಂದ ಕೇಳಿಸಿಕೊಳ್ಳುವ ಮಾತುಗಳಿವು. ಆಯೇಷಾ ತನ್ನ ಹೆಸರನ್ನು ಸರಿಯಾಗಿ ಹೇಳಿದ್ದರೂ ಮನೆಯೊಡತಿ ಕೇಳಿಸಿಕೊಳ್ಳದೆ ಆಕೆಯನ್ನು ಆಶಾ ಎಂದೇ ಕರೆಯುತ್ತಾರೆ. ಆಯೇಷಾ ತನ್ನತನವನ್ನು ಹೇಗೆ ಬಹಿರಂಗ ಪಡಿಸುತ್ತಾಳೆ ? ಕ್ಷಣ ಕ್ಷಣಕ್ಕೂ ನೊಂದುಕೊಳ್ಳುವ ಆಕೆಯ ನೋವಿಗೆ ಪರಿಹಾರ ಎಂತು ? ಇತ್ತೀಚೆಗೆ ಮುಕ್ತಾಯವಾದ ʼಬೆಂಗಳೂರು ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ ʼ ದಲ್ಲಿ ಪ್ರದರ್ಶನಗೊಂಡ ಚಿತ್ರಗಳಲ್ಲಿ ʼ ಆಯೇಷಾ ʼ ಕಿರು ಚಿತ್ರವೂ ಒಂದು.

ಬೆಂಗಳೂರು ಶಾರ್ಟ್‌ ಫಿಲಂ ಫೆಸ್ಟಿವಲ್‌ಗೆ 14 ವರ್ಷಗಳ ಹಿನ್ನೆಲೆ ಇದೆ. 40 ಚಿತ್ರಗಳಿಂದ ಪ್ರಾರಂಭವಾದ ಶಾರ್ಟ್‌ ಫಿಲ್ಮ್ ಫೆಸ್ಟಿವಲ್‌ಗೆ 3000 ಕ್ಕಿಂತಲೂ ಅಧಿಕ‌ ಕಿರು ಚಿತ್ರಗಳು ಆಯ್ಕೆಗಾಗಿ ಬರುತ್ತವೆ. ಪ್ರದರ್ಶಿತವಾಗುವ ಚಿತ್ರಗಳಲ್ಲಿ ಭಾರತೀಯ, ಅಂತರಾಷ್ಟ್ರೀಯ, ಮಹಿಳಾ, ಕ್ವೀರ್‌, ಆನಿಮೇಷನ್‌ ಮುಂತಾದ ವಿಭಾಗಗಳಿದ್ದು ಈ ಬಾರಿ 240 ಕ್ಕಿಂತಲೂ ಹೆಚ್ಚು ಚಿತ್ರಗಳು ಪ್ರದರ್ಶಿತವಾದವು.

ಆಯ್ಕೆಗಾಗಿ ಬರುವ ಚಿತ್ರಗಳನ್ನು ಜರಡಿ ಹಾಕಿ ಉತ್ತಮ ಚಿತ್ರಗಳ ಪ್ರದರ್ಶನಕ್ಕೆ ಅನುವು ಮಾಡಿ ಕೊಡುವುದು ಸುಲಭದ ಕೆಲಸವಲ್ಲ. ಪ್ರದರ್ಶಿತವಾದ ಚಿತ್ರಗಳಲ್ಲಿ ಅತ್ಯುತ್ತಮ ಚಿತ್ರಗಳು ಇರುವಂತೆ ಕಳಪೆ ಚಿತ್ರಗಳೂ ಇರುತ್ತವೆ. ಇದಕ್ಕೆ ಆಯ್ಕೆ ಮಾಡುವವರ ಮನಸ್ಥಿತಿ, ಅಭಿರುಚಿ, ಪೂರ್ವಗ್ರಹ, ವಶೀಲಿಬಾಜಿ, ರಾಜಕೀಯ ಇತ್ಯಾದಿ ಅಂಶಗಳು ಕಾರಣವಾಗಿರುತ್ತವೆ.

ಕಿರು ಚಿತ್ರಗಳ ನಿರ್ಮಾಣದಲ್ಲಿ ಯುವಜನರು ಅತ್ಯುತ್ಸಾಹದಿಂದ ತೊಡಗಿಕೊಂಡಿದ್ದಾರೆ. ಕಿರು ಚಿತ್ರಗಳನ್ನು ಹೇಗಾದರೂ ನಿರ್ಮಿಸಬಹುದೆಂಬ ಭಾವವಿಲ್ಲದೆ ತೀವ್ರ ಆಸಕ್ತಿ, ಶ್ರದ್ಧೆ, ಹುಮ್ಮಸ್ಸುಗಳಿಂದ ಚಿತ್ರ ನಿರ್ಮಿತಿಯಲ್ಲಿ ತೊಡಗಿಕೊಳ್ಳುವುದನ್ನು ಹಲವು ಚಿತ್ರಗಳಲ್ಲಿ ಕಾಣಬಹುದು. ವಿವಿಧ ಕ್ಷೇತ್ರಗಳಲ್ಲಿ, ಮುಖ್ಯವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಯುವಕರು ಹುಮ್ಮಸ್ಸಿನಿಂದ, ಸಂತೆಯ ಹೊತ್ತಿಗೆ ಮೂರು ಮೊಳ ನೇಯದೆ, ಸಾಕಷ್ಟು ಸಿದ್ಧತೆ ಮತ್ತು ಪರಿಶ್ರಮಗಳಿಂದ ಕಿರು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

ಈ ಅಂಶ ಕರ್ನಾಟಕ ಸ್ಪರ್ಧಾ ವಿಭಾಗದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ʼ ಮೇಕೆ ಆನೆಯನ್ನು ನುಂಗಿದಾಗ ʼ ನಾನು ಒಳಗೆ ಬರಬಹುದೇ? ʼ ವಾಟರ್‌ ಮ್ಯಾನ್‌ ʼ ‌ʼಲೌವ್‌ ಎಂಡ್‌ ಲೆಟ್‌ ಲೌವ್ ʼ ʼದಳಗಳು ʼ ʼ ನಿಮ್ಮನ್ನು ಭೇಟಿಯಾಗಲು ಸಂತೋಷವಾಯಿತು ʼ ʼ ಕಾಗೆಬಿಂದು ʼ ʼ ಕದಂಬ ಗೆಳೆಯರ ಬಳಗ ʼ ʼ ನೀನೊಂದು ಶಾಯರಿ ʼ ಮುಂತಾದ ಕಿರು ಚಿತ್ರಗಳಲ್ಲಿ ಚಿತ್ರ ಮಾಧ್ಯಮದ ಹಿಡಿತ, ವಿಷಯ ಗ್ರಹಿಕೆ ಮತ್ತು ಅದನ್ನು ದಾಟಿಸುವ ಕಾಳಜಿಯನ್ನು ಗಮನಿಸಿಬಹುದು. ನಿರ್ದೇಶಕನ ಸ್ವಾತಂತ್ರ್ಯವನ್ನು ಗಮನದಲ್ಲಿರಿಸಿ ನೋಡಿದಾಗ ʼ ಮೇಕೆ ಆನೆಯನ್ನು ನುಂಗಿದಾಗ ʼ ಉತ್ತಮ ಚಿತ್ರ. ಉಪಕಾರಿ ಮನೋಭಾವವನ್ನು ಚಿತ್ರ ಸೊಗಸಾಗಿ ಕಟ್ಟಿಕೊಡುತ್ತದೆ. ʼ ನಾನು ಒಳಗೆ ಬರಬಹುದೇ ʼ ಮನೆಯ ಬಾಗಿಲು ತೆರೆದಂತೆ ಮನದ ಬಾಗಿಲು ತೆರೆಯಲಾರದು ಎನ್ನುವುದನ್ನು ವಿಷಾದದ ಛಾಯೆಯಲ್ಲಿ ಅನಾವರಣಗೊಳಿಸುತ್ತದೆ. ಪಾ. ರಂಜಿತ್‌ ತಯಾರಿಕೆಯ ಮಹಿಳಾ ನಿರ್ದೇಶಕಿಯ ʼಲೌವ್‌ ಎಂಡ್‌ ಲೆಟ್‌ ಲೌವ್‌ ʼ ಚೊಕ್ಕವಾಗಿ ಪ್ರೀತಿಯ ಸ್ವೀಕಾರಾರ್ಹತೆಯನ್ನು ಮನ ಮುಟ್ಟಿಸುತ್ತದೆ. ʼ ದಳಗಳು ʼ ʼ ನಿನ್ನ ಭೇಟಿ ಸಂತೋಷದಾಯಕ ʼ ಕಿರು ಚಿತ್ರಗಳು ನಿರ್ದೇಶಕರಿಗೆ ಕ್ರಾಫ್ಟ್‌ ಗೊತ್ತಿದೆ ಎನ್ನುವುದನ್ನು ರುಜುವಾತು ಪಡಿಸುತ್ತವೆ. ಇದೇ ಮಾತು ಕರ್ನಾಟಕ ಸ್ಫರ್ಧಾ ವಿಭಾಗದ ಎಲ್ಲಾ ಚಿತ್ರಗಳ ಬಗೆಗೂ ಹೇಳುವಂತಿಲ್ಲವಾದರೂ ನಿರ್ದೇಶಕರುಗಳ ಪ್ರಯತ್ನ ಭರವಸೆ ಮೂಡಿಸುವಂತಿದೆ.

ಭಾರತೀಯ ವಿಭಾಗದಲ್ಲೂ ಅತ್ಯುತ್ತಮವಾದ ಕಿರು ಚಿತ್ರಗಳಿದ್ದವು. ʼ ಸನ್‌ ಫ್ಲವರ್ಸ್‌ ವೆರ್‌ ದಿ ಫಸ್ಟ್‌ ಟು ನೋ ʼ ʼ ದಿ ಫೀಸ್ಟ್‌ ʼ ʼ ತರ್ಸ್‌ಡೇ ಸ್ಪಷಲ್‌ ʼ ʼ ಆಯೇಷಾ ʼ ʼ ಧ್ವನಿ ʼ ʼ ಮೈ ಫಾದರ್‌ ಈಸ್‌ ಅಫ್ರೈಡ್‌ ಆಫ್‌ ವಾಟರ್‌ ʼ ʼ ಲಾಸ್ಟ್‌ ಇನ್‌ ಟ್ರಾನ್ಸ್‌ಪೋರ್ಟೇಶನ್‌ ʼ ಇವು ನಾನು ನೋಡಿದ್ದರಲ್ಲಿ ಹೆಸರಿಸಬಹುದಾದ ಚಿತ್ರಗಳು. ʼ ಸನ್‌ ಫ್ಲವರ್ಸ್‌ ವೆರ್‌ ದಿ ಫಸ್ಟ್‌ ಟು ನೋ ʼ ಕನ್ನಡಿಗ ನಿರ್ದೇಶಕನ ದೃಶ್ಯ ಕಾವ್ಯ. ಕೋಳಿ ಕೂಗದಿದ್ದರೆ ಬೆಳಗಾಗುವುದಿಲ್ಲ ಎನ್ನುವುದನ್ನು ತಾಯಿ- ಮಗನ ಸಂಬಂಧದಲ್ಲಿ ಮನೋಜ್ಞವಾಗಿ ದೃಶ್ಯೀಕರಿಸಿದ್ದಾರೆ. ʼ ದಿ ಫೀಸ್ಟ್‌ ʼ ಅನನ್ಯ ರೀತಿಯಲ್ಲಿ ಪರಿಸರದ ಬಗ್ಗೆ ಎಚ್ಚರ ಮೂಡಿಸುವ ಕಿರು ಚಿತ್ರ . ʼ ಆಯೇಷಾ ʼ ದಲ್ಲಿ ಮುಸ್ಲಿಂ ಯುವತಿಯ ತೊಳಲಾಟ ಮನ ಮುಟ್ಟುತ್ತದೆ. ಹಿರಿಯ ಮರಾಠಿ ನಟ ಮೋಹನ್‌ ಅಗಾಸೆ ನಟಿಸಿದ ʼ ಮೈ ಫಾದರ್‌ ಈಸ್‌ ಅಫ್ರೈಡ್‌ ಆಫ್‌ ವಾಟರ್‌ ʼ ಆಲ್ಜಮೀರ್ಸ್‌ ರೋಗಿಗಳ ಬವಣೆ ಮತ್ತು ಶುಶ್ರೂಷೆ ಮಾಡುವವರ ತಾಳ್ಮೆಯನ್ನು ಹೃದಯಂಗಮವಾಗಿ ಸೆರೆ ಹಿಡಿಯುತ್ತದೆ.

ʼ ಅಯ್ಯಮ್ ನಾಟ್‌ ಎ ರೊಬೋಟ್‌ ʼ ಅಂತಾರಾಷ್ಟ್ರೀಯ ವಿಭಾಗದಲ್ಲಿ ಪ್ರದರ್ಶಿತವಾದ ಕಿರು ಚಿತ್ರ. ಮನುಷ್ಯ ಹೌದೋ ಎನ್ನುವುದನ್ನು ನಿರ್ಧರಿಸುವ ಕ್ಯಾಪ್ಚಾ (CAPTCHA ) ಗೆ ಸರಿಯಾದ ಮಾಹಿತಿ ಕೊಡಲಾರದೆ, ಅಸ್ತಿತ್ವವನ್ನೇ ಗೊಂದಲಕ್ಕೆ ದೂಡುವ ಈ ಕಿರು ಚಿತ್ರ ತಾಂತ್ರಿಕ ಮೇಲ್ಮೆಯ ಕಾಲದಲ್ಲಿ ಮಾನವನ ಅಸ್ತಿತ್ವದ ಪ್ರಶ್ನೆಯಂತೆಯೇ ತೋರುತ್ತದೆ. ವೈಜ್ಞಾನಿಕ ಸಿನಿಮಾವಾದರೂ ರಚನೆ ಮತ್ತು ಕಲಾವಂತಿಕೆಯಲ್ಲಿ ಚಿತ್ರ ಮೇಲ್ಗೈ ಸಾಧಿಸುತ್ತದೆ. ʼ ದಿ ಫೋರ್ತ್ ಮ್ಯಾನ್‌ ʼ ಸಂಕಷ್ಟಗಳ ನಡುವೆಯೂ ಬದುಕು ನಡೆಸುವ ಛಲ; ಕಪ್ಪುಜನರನ್ನು ಒಳಗೊಳ್ಳದ ಬಿಳಿಯರ ಮನಸ್ಥಿತಿ ಮತ್ತು ಅವರ ಬವಣೆಯನ್ನು ಹೇಳುವ ʼ ದಿ ಹ್ಯಾಪಿ ಎಂಡಿಂಗ್‌ ʼ ಮತ್ತು ʼ ಮಾಸ್ಟರ್‌ ಪೀಸ್‌ ʼ , ಭಾರತದ ಹಳ್ಳಿಗಾಡಿನ ಹೆಣ್ಣುಮಗಳ ಹೃದಯವಂತಿಕೆಯನ್ನು ಹೇಳುವ ʼ ಮೆಡಿಸಿನ್‌ ʼ 1962 ರ ದಕ್ಷಿಣ ಕೊರಿಯಾದ ಬಾಲಕರ ದೌರ್ಜನ್ಯದ ಕತೆ ಹೇಳುವ ʼ ಚಿಲ್ಡ್ರನ್‌ ಆಫ್‌ ಲೈಟ್ ʼ ʼ ಆಟಮ್ ʼ, ʼ ಸಂಡೇ ಇನ್‌ ರೀಗಲ್‌ ಕೆಂಟ್‌ʼ ʼ ಹ್ಯಾಪಿ ಇಂಡಿಪೆಂಡೆಂಟ್‌ ಡೇ ʼ ʼ ಬುರುಲ್‌ ʼ ʼ ಗುಗುಟೋ, ಮೆಮೆಟೋ ʼ ʼ ಎಮರ್ಜೆನ್ಸಿ ಕಾಲ್‌ ʼ ವ್ಯಾಲೆಟ್‌ ʼ ಮುಂತಾದ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದ ಕಿರು ಚಿತ್ರಗಳು ಗಮನ ಸೆಳೆದವು.

ಕಿರು ಚಿತ್ರಗಳ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮತ್ತು ಭಾರತೀಯ , ಮಹಿಳಾ‌ ಸಿನಿಮಾ ಕಲೆಕ್ಟಿವ್ , ಕ್ವೀರ್‌ ಕಾರ್ನರ್ ,‌ ಅನಿಮೇಷನ್‌ (ಭಾರತೀಯ ಮತ್ತು ಅಂತರಾಷ್ಟ್ರೀಯ)‌ , ಸೇರಿಸೋಣ ವಿಭಾಗಗಳು ಇದ್ದುವಲ್ಲದೆ ಸ್ಪರ್ಧೆಗೆ ಹೊರತಾಗಿ 85 ಕಿರು ಚಿತ್ರಗಳು ಪ್ರದರ್ಶಿತಗೊಂಡವು. ಇವುಗಳಲ್ಲಿ ಎರಡು ನಿಮಿಷಗಳ ಕಿರು ಚಿತ್ರಗಳಿಂದ ಸುಮಾರು ಮೂವತ್ತು ನಿಮಿಷಗಳ ವರೆಗೆ ವಿವಿಧ ಅವಧಿಯ ಚಿತ್ರಗಳಿದ್ದವು.

ಕಿರು ಚಿತ್ರಗಳು ಸಂಗ್ರಹವಾಗಿ ಕಟ್ಟಿಕೊಡುವ ಅನುಭವ ಪೂರ್ಣಾವಧಿಯ ಚಿತ್ರಗಳಿಂದ ಭಿನ್ನವಾದುದು. ಇವು ಮಿತ ಅವಧಿಯಲ್ಲಿ, ನಟನೆ, ಸಂಗೀತ, ಫೋಟೋಗ್ರಫಿ ಮುಂತಾದ ಚಿತ್ರ ನಿರ್ಮಿತಿಯ ಸಲಕರಣೆಗಳನ್ನು ಬಳಸಿ ಪುನಾರವರ್ತನೆಗೆ ಅವಕಾಶ ನೀಡದೆ ಪ್ರೇಕ್ಷಕನಿಗೆ ರಸಾನುಭವ ನೀಡುತ್ತವೆ. ಯುವ ಚಿತ್ರಾಸಕ್ತರ ಕ್ರಿಯಾಶೀಲತೆಗೆ ಸವಾಲಾಗುವ ಇಂತಹ ರಚನೆಗಳು ಪೂರ್ಣಾವಧಿಯ ಚಿತ್ರ ತಯಾರಿಗೆ ಚಿಮ್ಮು ಹಲಗೆಯೂ ಆಗಬಹುದು. ಗಿರೀಶ್‌ ಕಾಸರವಳ್ಳಿಯವರೂ ಸೇರಿದಂತೆ ಹಲವು ಪ್ರಸಿದ್ಧ ನಿರ್ದೇಶಕರು ತಮ್ಮ ಸಿನಿ ಪಯಣವನ್ನು ಕಿರು ಚಿತ್ರಗಳಿಂದ ಆರಂಭಿಸಿದ್ದನ್ನು ನೆನೆಯಬಹುದು.

ಬೆಂಗಳೂರು ಅಂತರಾಷ್ಟ್ರೀಯ ಕಿರು ಚಿತ್ರೋತ್ಸವ ರಾಜ್ಯದ, ದೇಶ ವಿದೇಶದ ಉತ್ಸಾಹಿಗಳಿಗೆ ತಮ್ಮ ಪ್ರತಿಭೆಯನ್ನು ಸಾದರ ಪಡಿಸಲು ಅವಕಾಶ ದೊರಕಿಸುವಂತೆ, ಕಿರು ಚಿತ್ರಗಳನ್ನು ಆಸ್ವಾದಿಸುವ ಚಿತ್ರ ಪ್ರೇಮಿಗಳಿಗೆ ರಸದೌತಣ ನೀಡುತ್ತದೆ. ಸುಲಭದಲ್ಲಿ ನೋಡಲು ಸಿಗದ ಕಿರು ಚಿತ್ರಗಳನ್ನು ಈ ಸಂದರ್ಭದಲ್ಲಿ ನೋಡಿ ಆನಂದಿಸಬಹುದು. ಪ್ರಶಸ್ತಿ ವಿಜೇತ ಚಿತ್ರಗಳಾದ ʼ ಸನ್‌ ಫ್ಲವರ್ಸ್‌ ವೆರ್‌ ದಿ ಫಸ್ಟ್‌ ಟು ನೋ ʼ ʼ ದಿ ಫೀಸ್ಟ್‌ ʼ ನಂತಹ ಸಿನಿಮಾಗಳು ಸಾಮಾಜಿಕ ಮಾಧ್ಯಮಗಳಲ್ಲು ನೋಡಲು ಸಿಗುವುದು ಕಷ್ಟ. ಕಿರು ಚಿತ್ರೋತ್ಸವದ ಚಿತ್ರಗಳನ್ನು ಆಯೋಜಿತ ಪ್ರದರ್ಶನ ಮಂದಿರಗಳಲ್ಲದೆ ಬಾಹ್ಯ ಮಾಧ್ಯಮಗಳಲ್ಲೂ ಒದಗಿಸುವುದರಿಂದ ವೀಕ್ಷಣೆಗೂ ಅನುಕೂಲ.

ಈ ಎಲ್ಲಾ ಅನುಕೂಲಗಳ ನಡುವೆಯೂ ಬೆಂಗಳೂರು ಕಿರು ಚಿತ್ರೋತ್ಸವದಲ್ಲಿ ಸಾಕಷ್ಟು ಕೊರತೆಗಳೂ ಇವೆ. ಇಲ್ಲಿ ಪ್ರದರ್ಶನಗೊಂಡ ಕಿರು ಚಿತ್ರಗಳನ್ನು ವೀಕ್ಷಿಸಿದಾಗ ಈ ದೇಶದಲ್ಲಿ ಎಲ್ಲವೂ ಚೆನ್ನಾಗಿದೆ, ಜನರು ಬಹಳ ಸುಖಿಗಳಾಗಿದ್ದಾರೆ ಎನ್ನುವ ಭಾವನೆ ಉಂಟಾಗುವಂತಿದೆ. ದಿನನಿತ್ಯದ ತರಲೆ ತಾಪತ್ರಯಗಳು, ಅಸಹನೆ, ಜಾತಿ-ಧರ್ಮಗಳ ಜಟಾಪಟಿ, ಅಧಿಕಾರಸ್ಥರ ಅಹಂಕಾರ, ಪ್ರಭುತ್ವದ ನಿರಂಕುಶ ಧೋರಣೆ ಇವು ಯಾವುವೂ ಈ ಕಿರು ಚಿತ್ರಗಳಲ್ಲಿ ಇಲ್ಲ. ಹೆಚ್ಚಿನ ಕಿರು ಚಿತ್ರಗಳು ಸಮಸ್ಯೆಗಳ ಆಳಕ್ಕಿಳಿಯದೆ, ಮೇಲ್ಪದರದಲ್ಲೇ ಜನಪ್ರಿಯ ಸಿನಿಮಾಗಳ ಮಾದರಿಯಲ್ಲಿವೆ. ʼ ದಿ ಫೀಸ್ಟ್‌ ʼ ಒಂದು ಅಪವಾದವಾದರೆ, ಹಿಂದಿಯ ʼಆಯೇಷಾ ʼ ದಲ್ಲಿ ಸಣ್ಣ ಮಟ್ಟಿನ ಸ್ಪಂದನೆ ಇದೆ. ಉಳಿದ ದೇಶೀಯ ಕಿರು ಚಿತ್ರಗಳಲ್ಲಿ ಆ ಮಟ್ಟಿನ ಸಾಮಾಜಿಕ ಕಾಳಜಿ, ಕಳಕಳಿ ಕಾಣಿಸುವುದಿಲ್ಲ. ʼ ಸಂಡೆ ಇನ್‌ ರೀಗಲ್‌ ಕೌಂಟ್‌ ʼ ಎನ್ನುವ ವಿದೇಶಿ ಸಿನಿಮಾ ವ್ಯಕ್ತ ಪಡಿಸುವ ನಿರಂಕುಶ ಪ್ರಭುತ್ವದ ಅಣಕ ಭಾರತೀಯ, ಕರ್ನಾಟಕ ವಿಭಾಗದ ಯಾವ ಸಿನಿಮಾದಲ್ಲೂ ಇಲ್ಲ.

ಕಿರು ಚಿತ್ರಗಳನ್ನು ಬಗ್ಗೆ ಆಯ್ಕೆ ಮಾಡಿವರಿಗೆ, ತೀರ್ಪುಗಾರರಿಗೆ ದಲಿತ, ತಳ ಸಮುದಾಯದ ಚಿತ್ರಗಳ ಬಗ್ಗೆ ಅಲರ್ಜಿ ಇರುವಂತಿದೆ. ನನಗೆ ತಿಳಿದಂತೆ ತಳ ಸುಮದಾಯದ ಸಮಸ್ಯೆಗಳ ಕೆಲವು ಚಿತ್ರಗಳು ಆಯ್ಕೆಗೆ ಬಂದಿದ್ದವು. ಅವನ್ನೆಲ್ಲಾ ನಿರಾಕರಿಸಿ ಕಾಟಾಚಾರಕ್ಕೆ ʼ ನಾನು ಒಳಗೆ ಬರಬಹುದೇ ʼ ಎನ್ನುವ ಒಂದೇ ಒಂದು ಕಿರು ಚಿತ್ರಕ್ಕೆ ಅವಕಾಶ ಕೊಡಲಾಗಿದೆ. ಈ ಚಿತ್ರಕ್ಕೆ ಪ್ರಶಸ್ತಿ ಪಡೆಯುವ ಎಲ್ಲಾ ಅರ್ಹತೆಗಳಿದ್ದವು. ಅದನ್ನು ನಿರಾಕರಿಸಿ ಅದಕ್ಕಿಂತ ಉತ್ತಮವಲ್ಲದ ಕಿರು ಚಿತ್ರವನ್ನು ಆರಿಸಲಾಗಿದೆ. ಇದು ಆಯೋಜಕರ ಪೂರ್ವಗ್ರಹವೇ, ಉದ್ದೇಶಪೂರ್ವಕ ಅವಗಣನೆಯೇ ತಿಳಿಯದು!

2010 ರಿಂದ ಬೆಂಗಳೂರು ಕಿರು ಚಿತ್ರೋತ್ಸವವನ್ನು ನಡೆಸುತ್ತಾ ಬರುತ್ತಿರುವ ಆಯೋಜಕರ ಪ್ರಯತ್ನ ಅಭಿನಂದನೆಗೆ ಅರ್ಹವಾದುದು. ಆದರೆ ಕಿರು ಚಿತ್ರೋತ್ಸವ ಕೆಲವೇ ಜನರ ಸ್ವತ್ತಾಗಬಾರದು. ಅವರವರೇ ನೋಡುವುದು, ಅವರವರೇ ಮೆಚ್ಚುವುದು, ಅವರಿಗಿಷ್ಟವಿಲ್ಲದವರನ್ನು ಪಕ್ಕಕ್ಕೆ ಸರಿಸುವುದು ಸರಿಯಲ್ಲ. ಒಳಗೊಳ್ಳುವಿಕೆ, ವಿಶಾಲ ಮನಸ್ಸುಗಳಿದ್ದರೆ ಕಿರು ಚಿತ್ರೋತ್ಸವಗಳು ಇನ್ನಷ್ಟು ಅರ್ಥಪೂರ್ಣವಾಗುತ್ತವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page