Monday, July 28, 2025

ಸತ್ಯ | ನ್ಯಾಯ |ಧರ್ಮ

ಬೆಂಗಳೂರು | ತಡರಾತ್ರಿ ಸುರಿದ ದಾಖಲೆ ಮಳೆಗೆ ಬೆಂಗಳೂರಿನ ಹಲವು ಏರಿಯಾಗಳು ಜಲಾವೃತ, ಯಲ್ಲೋ ಅಲರ್ಟ್‌ ಘೋಷಿಸಿದ ಐಎಮ್‌ಡಿ

ಬೆಂಗಳೂರು: ಸೋಮವಾರ ಸಂಜೆ ಆರಂಭವಾದ ಭಾರಿ ಮಳೆ ಮಂಗಳವಾರ ಬೆಳಗಿನ ಜಾವದವರೆಗೂ ಮುಂದುವರಿದಿದ್ದು, ನಗರದ ಹಲವು ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಗರದ ಇತರ ಭಾಗಗಳಿಗೆ ಹೋಲಿಸಿದರೆ ಬೆಂಗಳೂರು ಉತ್ತರ ಮತ್ತು ಪಶ್ಚಿಮದಲ್ಲಿ ಗರಿಷ್ಠ ಮಳೆಯಾಗಿದೆ.

ಈಶಾನ್ಯ ಮಾನ್ಸೂನ್ ಚುರುಕುಗೊಂಡಿದ್ದರಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. 2015ರ ನಂತರ ಬೆಂಗಳೂರು ಇಂತಹದ್ದೊಂದು ಮಳೆಗೆ ಮತ್ತೆ ಸಾಕ್ಷಿಯಾಗಿದೆ.

ಮಂಗಳವಾರ ಬೆಳಗಿನ ಜಾವ 1 ಗಂಟೆಯವರೆಗೆ ಯಲಹಂಕದಲ್ಲಿ ಅತಿ ಹೆಚ್ಚು ಅಂದರೆ 147.5 ಮಿಮೀ ಮಳೆಯಾಗಿದೆ. ಪಶ್ಚಿಮ ವಲಯದ ನಾಗಾಪುರದಲ್ಲಿ 89.5 ಮಿ.ಮೀ, ಜಕ್ಕೂರಿನಲ್ಲಿ 86.5ಮಿ.ಮೀ, ನಂದಿನಿ ಲೇಔಟ್‌ನಲ್ಲಿ 85.5ಮಿ.ಮೀ ಮಳೆ ದಾಖಲಾಗಿದೆ.

ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದ್ದು, ಹಲವು ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿವೆ. 2021ರಲ್ಲಿ ನಗರವು ಭಾರೀ ಮಳೆಗೆ ಸಾಕ್ಷಿಯಾದಾಗ ಅದೇ ಅಪಾರ್ಟ್ಮೆಂಟ್ ನೀರಿನ ಅಡಿ ಸಿಲುಕಿತ್ತು. ನಿವಾಸಿಗಳನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಗರ ಜಿಲ್ಲೆಗೆ ಮಂಗಳವಾರ ಯಲ್ಲೋ ಅಲರ್ಟ್ ಘೋಷಿಸಿದೆ. ರಾಮನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ ಮತ್ತು ಕರಾವಳಿ ಕರ್ನಾಟಕದ ಎಲ್ಲಾ ಮೂರು ಜಿಲ್ಲೆಗಳಿಗೂ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ರಾತ್ರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಮಾಂಡ್ ಸೆಂಟರ್‌ಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿದರು.

ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಶಿವಕುಮಾರ್ ಅವರಿಗೆ ಕಮಾಂಡ್ ಸೆಂಟರ್‌ನಲ್ಲಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, ವಲಯ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page