ದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವು ಅನುಸರಿಸುತ್ತಿರುವ ಪಕ್ಷಪಾತದ ಧೋರಣೆ ಮತ್ತು ನಿಯಂತ್ರಣ ವ್ಯವಸ್ಥೆಗಳ ದುರುಪಯೋಗದಂತಹ ನೀತಿಗಳು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ಪರಿಣಾಮವಾಗಿ ಕಿರಿಯ ಉದ್ಯೋಗಿಗಳು ಕೆಲಸದ ಒತ್ತಡ ಮತ್ತು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬಂದಿದೆ ಎಂದು ಅವರು ತಿಳಿಸಿದರು. ತನ್ನ ‘ಶತಕೋಟ್ಯಾಧಿಪತಿ ಸ್ನೇಹಿತರ’ ಒಡನಾಟಕ್ಕಾಗಿ ಕೇಂದ್ರ ಸರ್ಕಾರವು 16 ಲಕ್ಷ ಕೋಟಿ ರೂಪಾಯಿಗಳ ಸಾಲಗಳನ್ನು ಮನ್ನಾ ಮಾಡಿರುವಂತಹ ಆರ್ಥಿಕ ಅಸಮರ್ಥ ನಿರ್ಧಾರಗಳಿಂದ ನಿಯತ್ತಿನಿಂದ ಕೆಲಸ ಮಾಡುವ ಸಾವಿರಾರು ವೃತ್ತಿಪರರು ತೊಂದರೆಗೀಡಾಗಿದ್ದಾರೆ ಎಂದು ಅವರು ಹೇಳಿದರು.
ಐಸಿಸಿಐ ಬ್ಯಾಂಕ್‌ನ ಮಾಜಿ ಉದ್ಯೋಗಿಗಳ ಪ್ರತಿನಿಧಿ ತಂಡವು ಶುಕ್ರವಾರ ತನ್ನನ್ನು ಭೇಟಿಯಾದ ವಿಡಿಯೊವನ್ನು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್ಥಿಕ ನೀತಿಗಳ ದುರುಪಯೋಗದಿಂದ ತೊಂದರೆಗೀಡಾಗಿರುವ ಇಂತಹ ಶ್ರಮಿಕ ವರ್ಗದ ವೃತ್ತಿಪರರಿಗಾಗಿ ಕಾಂಗ್ರೆಸ್ ಪಕ್ಷವು ಹೋರಾಡುತ್ತದೆ ಎಂದು ಅವರು ಬರೆದಿದ್ದಾರೆ. ಕೆಲಸದ ಸ್ಥಳದಲ್ಲಿ ಕಿರುಕುಳ ಮತ್ತು ಶೋಷಣೆಯನ್ನು ತೊಡೆದುಹಾಕುವುದಾಗಿ ಭರವಸೆ ನೀಡಿದ್ದಾರೆ. ಖಾಸಗಿ ವಲಯದ ಬ್ಯಾಂಕುಗಳಲ್ಲಿ ಇಂತಹ ಅನ್ಯಾಯವನ್ನು ಎದುರಿಸುತ್ತಿರುವ ಇತರ ಉದ್ಯೋಗಿಗಳೂ ತನ್ನನ್ನು ಸಂಪರ್ಕಿಸಬೇಕೆಂದು ರಾಹುಲ್ ಮನವಿ ಮಾಡಿದ್ದಾರೆ.