ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಬದಲಾವಣೆ ಬಗ್ಗೆ ಮತ್ತೆ ಗುಡುಗಿದ ಬಸನಗೌಡ ಪಾಟೀಲ್ ಯತ್ನಾಳ್

“ಡಿಕೆ ಶಿವಕುಮಾರ್ ಮತ್ತು ವಿಜಯೇಂದ್ರ ಇಬ್ಬರೂ ಜೊತೆಗೂಡಿ ರಮೇಶ್ ಜಾರಕಿಹೊಳಿ ರಾಜಕೀಯ ಜೀವನ ಹಾಳು ಮಾಡಿದ್ದಾರೆ. ಬಿವೈ ವಿಜಯೇಂದ್ರ ಇಂತಹ ಹಲ್ಕಾ ಕೆಲ್ಸ ಯಾರಾದರೂ ಮಾಡುತ್ತಾರಾ” ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ತಿರುಗಿಬಿದ್ದಿದ್ದಾರೆ.

ಬಿವೈ ವಿಜಯೇಂದ್ರನಿಂದ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದೆ ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿಗೆ ಬಾರಿ ಹೊಡೆತ ಬಿದ್ದಿದೆ. ವಿಜಯೇಂದ್ರ ಕಾಂಗ್ರೆಸ್ ಜೊತೆಗಿನ ಹೊಂದಾಣಿಕೆ ರಾಜಕಾರಣದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಾರಿ ಹಿನ್ನಡೆಯಾಗಿದೆ ಎಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಚಾಮರಾಜನಗರ, ತುಮಕೂರು,ಚಿಕ್ಕಬಳ್ಳಾಪುರ, ಕಲಬುರ್ಗಿ, ಬೀದರ್, ರಾಯಚೂರು, ಕೊಪ್ಪಳ ದಾವಣಗೆರೆ ಸೇರಿದಂತೆ 10 ಜಿಲ್ಲೆಗಳಲ್ಲಿ ಸೋತಿದ್ದೇವೆ. ಕೊಪ್ಪಳದಲ್ಲಿ ಬಿವೈ ವಿಜಯೇಂದ್ರ ಒಬ್ಬ ಚೇಲಾ ಇದ್ದಾನೆ. ಆತ ರಾಘವೇಂದ್ರ ಹಿಟ್ನಾಳರ ತಮ್ಮ ರಾಜಶೇಖರ ಹಿಟ್ನಾಳ ಆರಿಸಿ ಬರಲಿ ಎಂದು ವಿಜಯೇಂದ್ರ ಜೊತೆಗೆ ಡೀಲ್ ಮಾಡಿಕೊಂಡಿದ್ದಾನೆ. ಇದರ ಪರಿಣಾಮ ಹಿಂದೆ ಇದ್ದ ಬಿಜೆಪಿ ಸ್ಥಾನ ಕಳೆದುಕೊಂಡು, ಕಾಂಗ್ರೆಸ್ ಬಂದಿದೆ ಎಂದು ವಿಜಯೇಂದ್ರ ವಿರುದ್ಧ ಆರೋಪ ಮಾಡಿದ್ದಾರೆ

ಹಾಗೆಯೇ ಬೀದರ್ ನಲ್ಲಿ ಈಶ್ವರ್ ಖಂಡ್ರೆ ಅವರ ಮನೆಯಲ್ಲೇ ಒಬ್ಬ ವಿಜಯೇಂದ್ರ ಆಪ್ತ ಇದ್ದಾನೆ. ಬೆಳಿಗ್ಗೆ ಹೋದರೆ ಹಣೆಗೆ ವಿಭೂತಿ ಬಳಿದುಕೊಂಡು ಕುಳಿತಿರುತ್ತಾನೆ. ಆತನೂ ಸಹ ಕಳೆದ ಬಾರಿ ಬೀದರ್ ನಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಯತ್ನಾಳ್ ಆರೋಪಿಸಿದ್ದಾರೆ.

ಇನ್ನು ದಾವಣಗೆರೆಯಲ್ಲಿ ಒಂದು ಕಡೆ ಜೀವಂತ ಸಾಕ್ಷಿಯಾಗಿದ್ದು, ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರೇ ಬಹಿರಂಗವಾಗಿ ಈ ಕುರಿತು ಹೇಳಿಕೆ ನೀಡಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಬಿವೈ ವಿಜಯೇಂದ್ರ ಬದಲಾವಣೆ ಅವಶ್ಯಕತೆ ಇದೆ ಎಂದು ಕಿಡಿಕಾರಿದರು.

Related Articles

ಇತ್ತೀಚಿನ ಸುದ್ದಿಗಳು