Saturday, December 20, 2025

ಸತ್ಯ | ನ್ಯಾಯ |ಧರ್ಮ

ಬಂಧನದ ಭೀತಿ; ಬಿಜೆಪಿ ಶಾಸಕ ಬೈರತಿ ಬಸವರಾಜು ಮೊಬೈಲ್ ಸ್ವಿಚ್ ಆಫ್ – ಸಿಐಡಿ ತೀವ್ರ ಶೋಧ

ಬೆಂಗಳೂರು: ರೌಡಿಶೀಟರ್ ‘ಬಿಕ್ಲುಶಿವ’ (ಶಿವಪ್ರಕಾಶ್) ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಭೈರತಿ ಬಸವರಾಜ್‌ಗೆ ಸಂಕಷ್ಟ ತೀವ್ರಗೊಂಡಿದ್ದು, ಬಂಧನ ಭೀತಿ ಎದುರಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿರುವ ಬೆನ್ನಲ್ಲೇ, ಸಿಐಡಿ ಪೊಲೀಸರು ಭೈರತಿ ಬಸವರಾಜ್ ಬಂಧನಕ್ಕಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಹೈಕೋರ್ಟ್ ತನ್ನ ಆದೇಶದಲ್ಲಿ, ಈ ಪ್ರಕರಣಕ್ಕೆ ಕೋಕಾ ಕಾಯಿದೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ವಿಚಾರಣಾ ನ್ಯಾಯಾಲಯದಲ್ಲೇ ಸೂಕ್ತ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೆ, ಭೈರತಿ ಬಸವರಾಜ್‌ಗೆ ಬಂಧನದಿಂದ ಯಾವುದೇ ರಕ್ಷಣೆಯನ್ನು ನೀಡಲು ಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ಅವರ ಮೇಲೆ ಬಂಧನದ ತೂಗುಗತ್ತಿ ಇನ್ನಷ್ಟು ಗಟ್ಟಿ ಆಗಿದೆ.

ಈ ನಡುವೆ, ನಿನ್ನೆಯಿಂದ ಭೈರತಿ ಬಸವರಾಜ್ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ಪೊಲೀಸರ ಅನುಮಾನವನ್ನು ಮತ್ತಷ್ಟು ಗಟ್ಟಿಮಾಡಿದೆ. ಅವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಬೆಂಗಳೂರು ಮಾತ್ರವಲ್ಲದೆ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೂಡ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಸಿಐಡಿ ಕಚೇರಿ ಎದುರು ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟುನಿಟ್ಟಿನ ಭದ್ರತೆ ಒದಗಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಈಗಾಗಲೇ ಭೈರತಿ ಬಸವರಾಜ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಆ ಪ್ರಯತ್ನಕ್ಕೂ ಹಿನ್ನಡೆಯಾಗಿದೆ.

ರೌಡಿಶೀಟರ್ ಶಿವಪ್ರಕಾಶ್ ಹತ್ಯೆ ಪ್ರಕರಣದಲ್ಲಿ ಭೈರತಿ ಬಸವರಾಜ್ ಹೆಸರು ತಳುಕು ಹಾಕಿಕೊಂಡಿದ್ದು, ಭಾರತಿನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಭೈರತಿ ಬಸವರಾಜ್ ಎ5 ಆರೋಪಿಯಾಗಿದ್ದಾರೆ. ಜಗದೀಶ್ (ಎ1), ಕಿರಣ್ (ಎ2), ವಿಮಲ್ (ಎ3), ಅನಿಲ್ (ಎ4) ಇತರ ಆರೋಪಿಗಳಾಗಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಕಿತ್ತನೂರು ಜಾಗದ ವಿವಾದವೇ ಈ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದ್ದು, ಅದೇ ಹಿನ್ನೆಲೆಯಲ್ಲೇ ರೌಡಿಶೀಟರ್ ಶಿವಪ್ರಕಾಶ್ ಹತ್ಯೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಒಟ್ಟಿನಲ್ಲಿ, ಹೈಕೋರ್ಟ್ ಆದೇಶದ ಬಳಿಕ ಭೈರತಿ ಬಸವರಾಜ್ ವಿರುದ್ಧ ಕಾನೂನು ಸುತ್ತು ಬಿಗಿಯಾಗುತ್ತಿದ್ದು, ಸಿಐಡಿ ಪೊಲೀಸರು ಯಾವುದೇ ಕ್ಷಣದಲ್ಲಾದರೂ ಬಂಧನ ನಡೆಸುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page