Wednesday, June 19, 2024

ಸತ್ಯ | ನ್ಯಾಯ |ಧರ್ಮ

ಬ್ಯಾಟ್ಸ್ ಮನ್ ಗಳ ಅಬ್ಬರ, ರಾಹುಲ್ ಪಂದ್ಯಶ್ರೇಷ್ಠ: ಭಾರತಕ್ಕೆ ಟಿ 20 ಸರಣಿ

ಮೊಟ್ಟ ಮೊದಲ ಬಾರಿಗೆ ಭಾರತ ತನ್ನ ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಕ್ರಿಕೆಟ್ ಸರಣಿ ಜಯಿಸಿದೆ. ನಿನ್ನೆ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ 1-0 ಪಂದ್ಯಗಳ ಮುನ್ನಡೆಯೊಂದಿಗೆ ಆತ್ಮವಿಶ್ವಾಸದಿಂದ ಕಣಕ್ಕಿಳಿದ ಭಾರತ ತಂಡ ಬ್ಯಾಟ್ಸ್ ಮನ್ ಗಳ ಅಬ್ಬರದ ಆಟದಿಂದಾಗಿ ಸರಣಿಯನ್ನು 2-0 ಯಿಂದ ಗೆದ್ದುಕೊಂಡಿದೆ. ಸರಣಿಯ ಕೊನೆಯ ಪಂದ್ಯ ಅಕ್ಟೋಬರ್ 4 ರಂದು ಇಂದೋರ್ ನಲ್ಲಿ ನಡೆಯಲಿದೆ.

ಟಾಸ್ ಗೆದ್ದು ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ ದಕ್ಷಿಣ ಆಫ್ರಿಕಾದ ನಾಯಕ ಬವುಮಾ ಅವರ ಲೆಕ್ಕಾಚಾರಗಳನ್ನು ಉಲ್ಟಾ ಪಲ್ಟಾ ಮಾಡಿದ್ದು ಭಾರತದ ಬ್ಯಾಟಿಂಗ್.
ಕೆ.ಎಲ್. ರಾಹುಲ್ ಅವರ 28 ಬಾಲ್ ಗಳಲ್ಲಿ 57, ಸೂರ್ಯಕುಮಾರ್ ಯಾದವ್ ಅವರ ಸಿಡಿಲಬ್ಬರದ 22 ಬಾಲ್ ಗಳಲ್ಲಿ 61, ವಿರಾಟ್ ಕೊಹ್ಲಿ ಅವರ 28 ಬಾಲ್ ಗಳಲ್ಲಿ ಅಜೇಯ 49 ಮತ್ತು ಕೊನೆಯಲ್ಲಿ ದಿನೇಶ್ ಕಾರ್ತಿಕ್ ಅವರ 7 ಬಾಲ್ ಗಳಲ್ಲಿ 17 ರನ್ ಗಳ ನೆರವಿನಿಂದ ಭಾರತ ನಿಗದಿತ 20 ಓವರ್ ಗಳಲ್ಲಿ 237 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.

ಈ ಮೊತ್ತ ಆರಂಭದಿಂದಲೂ ದಕ್ಷಿಣ ಆಫ್ರಿಕಾಕ್ಕೆ ಸವಾಲಿನ ಮೊತ್ತವಾಗಿತ್ತು. ಆರಂಭದಲ್ಲೇ ಅತಿ ಬೇಗನೇ 2 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾತಂಡದ ಮೊತ್ತ 1 ರನ್ ಆಗುವಷ್ಟರಲ್ಲಿ ನಾಯಕ ಬವುಮಾ ಮತ್ತು ರೊಸ್ಸೋ ಪೆವಿಲಿಯನ್ ಸೇರಿಕೊಂಡರು. ಆನಂತರ ಮಾರ್ಕ್ ರಮ್ ಕೊಂಚ ಪ್ರತಿರೋಧ ತೋರಿದರು. ಆದರೆ ಮೂರು ವಿಕೆಟ್ ಪತನದ ನಂತರ ಬಂದ ಡೇವಿಡ್ ಮಿಲ್ಲರ್ ಮತ್ತು ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಡಿಕಾಕ್ ಇಬ್ಬರೂ ಕ್ರಮೇಣ ರನ್ ಗಳಿಸಲು ಶುರು ಮಾಡಿದರು. ಆದರೆ ಅದು ತೀರಾ ತಡವಾಗಿತ್ತು. ಹಾಗಾಗಿ 47 ಬಾಲ್ ಗಳಲ್ಲಿ 106 ರನ್ ಗಳಿಸಿದ ಮಿಲ್ಲರ್ ಅವರ ಅಬ್ಬರದ ಆಟದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ 16 ರನ್ ಗಳಿಂದ ಸೊಲೊಪ್ಪಿಕೊಂಡಿತು.

ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ ಡಿಕಾಕ್ ಕೊನೆಯವರೆಗೂ ಅಜೇಯವಾಗಿ ಉಳಿದು 48 ಬಾಲ್ ಗಳಲ್ಲಿ 69 ರನ್ ಗಳಿಸಿದರು. ಭಾರತ 238 ರನ್ ಗುರಿ ನೀಡಿದಾಗ ಪಂದ್ಯ ಗೆಲ್ಲುವುದು ಬಹುತೇಕ ನಿಶ್ಚಿತವಾಗಿತ್ತು. ಆದರೆ ನೀರಸವಾಗಿ ಸಾಗಿದ್ದ ಪಂದ್ಯಕ್ಕೆ ಕಳೆ ತಂದಿದ್ದು ಮಿಲ್ಲರ್ ಅವರ ಆಟ. ಆದರೆ ಅವರಿಂದ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. ಹಾಗಾಗಿ ಭಾರತಕ್ಕೆ ಸರಣಿ ಜಯ ಒಲಿದು ಬಂತು .

ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು 200 ಗಡಿ ದಾಟಿ ಕ್ರಮವಾಗಿ 237 ಮತ್ತು 221 ರನ್ ಗಳಿಸಿದ್ದು, ಎರಡೂ ತಂಡಗಳು ತಲಾ ಕೇವಲ 3 ವಿಕೆಟ್ ಕಳೆದುಕೊಂಡಿದ್ದು ಪಿಚ್ ಬ್ಯಾಟ್ಸ್ ಮನ್ ಗಳಿಗೆ ಸಹಕಾರಿ ಆಗಿತ್ತು ಅನ್ನೋದನ್ನು ನಿರೂಪಿಸಿತು. ಭಾರತದ ಪರ ಅರ್ಶ್ ದೀಪ್ ಸಿಂಗ್ ಆರಂಭದ ಒಂದೇ ಓವರ್ನಲ್ಲಿ ಎರಡು ವಿಕೆಟ್ ಪಡೆದರಾದರೂ 4 ಓವರ್ ಗಳಲ್ಲಿ 62 ರನ್ ಕೊಟ್ಟು ದುಬಾರಿ ಆದರು. ಮಿಲ್ಲರ್ ಅವರ ಸಾಹಸದ ಶತಕ, ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಆಟದ ನಡುವೂ ಪಂದ್ಯಶ್ರೇಷ್ಠ ಪ್ರಶಸ್ತಿ ಕೆ.ಎಲ್ ರಾಹುಲ್ ಅವರ ಪಾಲಾಯಿತು.

ಚಿತ್ರಕೃಪೆ: ಬಿಸಿಸಿಐ

Related Articles

ಇತ್ತೀಚಿನ ಸುದ್ದಿಗಳು