Tuesday, July 29, 2025

ಸತ್ಯ | ನ್ಯಾಯ |ಧರ್ಮ

ಚುನಾವಣಾ ಖರ್ಚಿಗಾಗಿ ಬಿಬಿಎಂಪಿ ಬಜೆಟ್ ಮಂಡನೆ ಮಾಡಲಾಗಿದೆ: ಮೋಹನ್ ದಾಸರಿ

ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿ ಸದಸ್ಯರಿಲ್ಲದೇ ಅಧಿಕಾರಿಗಳೇ ಬಜೆಟ್ ಮಂಡನೆ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಜನಪ್ರತಿನಿಧಿಗಳು ಇಲ್ಲದಿದ್ದರೂ ಚುನಾವಣಾ ಖರ್ಚಿಗಾಗಿ ಅಧಿಕಾರಿಗಳಿಂದ ಬಜೆಟ್ ಮಂಡನೆ ಮಾಡಿಸಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆರೋಪಿಸಿದ್ದಾರೆ.

ಬಿಬಿಎಂಪಿ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋಹನ್ ದಾಸರಿ ಅವರು, ಇದು ಯಾವುದೇ ಅಭಿವೃದ್ಧಿಗಾಗಿ ಮಾಡುತ್ತಿರುವ ಬಜೆಟ್ ಅಲ್ಲ, ಕೇವಲ ಚುನಾವಣಾ ಖರ್ಚಿಗಾಗಿ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಾರಿ ₹ 12,369.46 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ. ಬ್ರ್ಯಾಂಡ್ ಬೆಂಗಳೂರಿಗೆ ₹ 1,580 ಕೋಟಿ ಮೀಸಲಿಡಲಾಗಿದೆ. ನಗರದಲ್ಲಿ ವೈಟ್ ಟಾಪಿಂಗ್ ರಸ್ತೆಗೆ ₹ 800 ಕೋಟಿ ನೀಡಲಾಗಿದೆ. ವೈಟ್ ಟಾಪಿಂಗ್ ರಸ್ತೆಗಳ ಕಾಮಗಾರಿ ಕಳಪೆಯಾಗಿದೆ ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಆದರೆ, ಹಣ ಕೊಳ್ಳೆಹೊಡೆಯಲೆಂದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ದುಬಾರಿ ವೆಚ್ಚದ ವೈಟ್ ಟಾಪಿಂಗ್ ರಸ್ತೆಗಳಿಗೆ ನೂರಾರು ಕೋಟಿ ವೆಚ್ಚ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಬಿಎಂಪಿ ಬಜೆಟ್‌ನಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಖಾಸಗಿ ಶಾಲೆಗಳ ಮಾಫಿಯಾಗೆ ಅಧಿಕಾರಿಗಳು, ರಾಜಕಾರಣಿಗಳು ಬೆಂಬಲವಾಗಿ ನಿಂತಿದ್ದು, ಸರ್ಕಾರಿ ಶಾಲೆಗಳನ್ನು ಮುಗಿಸುವ ಹುನ್ನಾರ ಇದಾಗಿದೆ ಎಂದು ಹೇಳಿದರು.

ಆರೋಗ್ಯ ಕ್ಷೇತ್ರವನ್ನು ಕೂಡ ಬಿಬಿಎಂಪಿ ಕಡೆಗಣಿಸಿದೆ. ಬಡ, ಮಧ್ಯಮ ವರ್ಗದವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಸೌಲಭ್ಯ ಹೆಚ್ಚಿಸಬೇಕಿದ್ದ ಬಿಬಿಎಂಪಿ ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿದೆ ಎಂದು ಹೇಳಿದರು.

ಆದಾಯ ಹೆಚ್ಚಿಸಲು ಆಸ್ತಿ ತೆರಿಗೆಯನ್ನು ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ಕುಡಿಯಲು ಸಮರ್ಪಕವಾಗಿ ನೀರಿಲ್ಲ, ರಸ್ತೆಗಳ ಗುಂಡಿ ಮುಚ್ಚಿಲ್ಲ, ಅಭಿವೃದ್ಧಿ ಮಾಡಲು ಆಗದಿದ್ದರೂ, ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಲಾಗಿದೆ ಎಂದರು.

ನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ಹೆಚ್ಚಾಗುತ್ತಿದೆ. ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಬಜೆಟ್‌ನಲ್ಲಿ ಯಾವುದೇ ಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇವರಿಗೆ ಜನರ ಸಮಸ್ಯೆ ಬಗೆಹರಿಸುವುದು ಬೇಕಾಗಿಲ್ಲ, ಕೇವಲ ಭ್ರಷ್ಟಾಚಾರ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page