Monday, June 17, 2024

ಸತ್ಯ | ನ್ಯಾಯ |ಧರ್ಮ

ಬಿಬಿಎಂಪಿ ಶಾಲೆಯ ಭೂ ಕಬಳಿಕೆ: ಬಿಜೆಪಿ ಶಾಸಕ ಎಂ.ಚಂದ್ರಪ್ಪ ವಿರುದ್ಧ ಲೋಕಾಯುಕ್ತಕ್ಕೆ ಎಎಪಿ ದೂರು

ಕೆಂಗೇರಿಯ ಸರ್. ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಬಿಬಿಎಂಪಿಯ ಕನ್ನಡ ಶಾಲೆಗೆ ಮಂಜೂರಾಗಿದ್ದ 20 ಕೋಟಿ ರೂ. ಮೌಲ್ಯದ ನಿವೇಶನವನ್ನು ಹೊಳಲ್ಕೆರೆಯ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಕಬಳಿಸಿದ್ದಾರೆಂದು ಆರೋಪಿಸಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ವಕ್ತಾರ ಹಾಗೂ ಮಾಜಿ ಕೆಎಎಸ್‌ ಅಧಿಕಾರಿ ಕೆ.ಮಥಾಯಿಯವರು ಲೋಕಾಯುಕ್ತರಿಗೆ ದೂರು ನೀಡಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಮಥಾಯಿ, “ಕೆಂಗೇರಿ ಉಪನಗರದದಲ್ಲಿರುವ ಸರ್. ಎಂ.ವಿಶ್ವೇಶ್ವರಯ್ಯ ಬಡಾವಣೆಯ 2ನೇ ಬ್ಲಾಕ್‌ನಲ್ಲಿರುವ ಬಿಡಿಎಗೆ ಸೇರಿದ 25,225 ಚದರ ಅಡಿ ವಿಸ್ತೀರ್ಣದ ಸಿಎ ನಿವೇಶನವನ್ನು ಫೆಬ್ರುವರಿ 2, 2010ರಂದು ಬಿಬಿಎಂಪಿಯ ಕನ್ನಡ ಶಾಲೆಗೆ ಹಂಚಿಕೆ ಮಾಡಲಾಗಿತ್ತು. ಜುಲೈ 17, 2010ರಂದು ಶಾಲೆಗೆ ಹಂಚಿಕೆ ಪತ್ರವನ್ನು ಕೂಡ ನೀಡಲಾಗಿತ್ತು. ಆದರೆ ಅಲ್ಲಿ ಶಾಲೆ ನಿರ್ಮಿಸುವುದಾಗಿ ಹೇಳಿದ್ದ ಶಾಸಕ ಎಂ.ಚಂದ್ರಪ್ಪರವರು ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪನವರ ಸಹಾಯದಿಂದ ನಿವೇಶನವನ್ನು ತಮ್ಮ ಹೆಸರಿಗೆ ಕಾನೂನುಗಳನ್ನು ಗಾಳಿಗೆ ತೂರಿ ವರ್ಗಾಯಿಸಿಕೊಂಡಿದ್ದಾರೆ” ಎಂದು ಹೇಳಿದರು.

“ಈ ನಿವೇಶನಕ್ಕೆ ಮಾರುಕಟ್ಟೆಯಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಬೆಲೆಯಿದೆ. ಆದರೆ ಡಿಸೆಂಬರ್ 27, 2021ರಂದು ಬಿಡಿಎಯು ಕೇವಲ 10 ಕೋಟಿ ರೂಪಾಯಿಗೆ ಚಂದ್ರಪ್ಪನವರಿಗೆ ಮಾರಾಟ ಮಾಡಿ, ಶುದ್ಧ ಕ್ರಯಪತ್ರ ನೀಡಲು ನಿರ್ಣಯ ಕೈಗೊಂಡಿದೆ. 2022ರ ಏಪ್ರಿಲ್ 5ರಂದು ಚಂದ್ರಪ್ಪರವರು 1 ಕೋಟಿ ರೂಪಾಯಿಯನ್ನು ಬಿಡಿಎಗೆ ಪಾವತಿಸಿದ್ದಾರೆ. ಚಂದ್ರಪ್ಪರವರಿಗೆ ಸಿಎ ನಿವೇಶನ ಮಂಜೂರಾಗದೇ ಇದ್ದರೂ ಬದಲಿ ನಿವೇಶನ ನೀಡಲಾಗಿದೆ. ಕಳೆದ 11 ವರ್ಷಗಳಿಂದ ಚಂದ್ರಪ್ಪರವರು ಈ ನಿವೇಶನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದು, ಅಲ್ಲಿ ಸಿಮೆಂಟ್‌ ಇಟ್ಟಿಗೆ ತಯಾರಿಸಲಾಗುತ್ತಿದೆ” ಎಂದು ಕೆ.ಮಥಾಯಿ ಹೇಳಿದರು.

ಸ್ಥಳೀಯ ಆಮ್‌ ಆದ್ಮಿ ಪಾರ್ಟಿ ಮುಖಂಡ ರಾಹುಲ್‌ ಧರ್ಮಸೇನಾ ಮಾತನಾಡಿ, “ಬಿಜೆಪಿ ಶಾಸಕ ಚಂದ್ರಪ್ಪರವರ ಈ ಹಗರಣದಿಂದಾಗಿ ಬಿಡಿಎ ಹಾಗೂ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಸರ್ಕಾರದ ಅಮೂಲ್ಯ ಸ್ವತ್ತು ಶಾಸಕರ ಪಾಲಾಗಿದೆ. ಶಾಸಕರನ್ನು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಶೀಘ್ರವೇ ಬಂಧಿಸಿ ವಿಚಾರಣೆ ನಡೆಸಬೇಕು. ಕನ್ನಡ ಶಾಲೆಯ ಸ್ವತ್ತಿನ ದುರ್ಬಳಕೆಗೆ ಅವಕಾಶ ನೀಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ವಿರುದ್ಧವೂ ಸೂಕ್ತ ತನಿಖೆಯಾಗಬೇಕು” ಎಂದು ಆಗ್ರಹಿಸಿದರು.

Related Articles

ಇತ್ತೀಚಿನ ಸುದ್ದಿಗಳು